‘ಬಸವಶೈವದಲ್ಲಿ ಹಿಂದುತ್ವ’ ಪುಸ್ತಕ ಬಿಡುಗಡೆ: ಬಸವಣ್ಣ ಹಿಂದೂ, ವಚನ, ವೇದ ಒಂದೇ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ಲೇಖಕ ಡಾ.ಡಿ.ಎ.ಉಪಾಧ್ಯ ರಚಿಸಿದ ‘ಬಸವಶೈವದಲ್ಲಿ ಹಿಂದುತ್ವ’ ಪುಸ್ತಕ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಲೋಕಾರ್ಪಣೆಯಾಯಿತು.

ಹರ ಸಾಹಿತ್ಯ ಸಂಕುಲದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿ ‘ಬಸವಣ್ಣನವರನ್ನು ನಾಸ್ತಿಕ ಎಂಬಂತೆ ಬಿಂಬಿಸಲಾಗುತ್ತಿದೆ. ಬಸವತತ್ವ ಪಾಲಿಸುವವರನ್ನು ಆಸ್ತಿಕರನ್ನಾಗಿ ಮಾಡುವ ಬದಲು ನಾಸ್ತಿಕರನ್ನಾಗಿಸಲಾಗುತ್ತಿದೆ. ಬಸವಣ್ಣನವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ,’ ಎಂದು ಆರೋಪಿಸಿದರು.

‘ಬಸವಣ್ಣ ಪಾಪ–ಪುಣ್ಯ, ಸ್ವರ್ಗ–ನರಕ ಅಲ್ಲಗಳೆದರೆಂದು ನಂಬಿಸಲಾಗುತ್ತಿದೆ. ಕರ್ಮ ಸಿದ್ಧಾಂತ ಟೀಕಿಸಿದ್ದಾರೆಂಬ ತಪ್ಪು ಭಾವನೆ ಮೂಡಿಸಲಾಗುತ್ತಿದೆ. ಬಸವಣ್ಣನವರು ಹೀಗೆ ಎಲ್ಲಿ ಹೇಳಿದ್ದಾರೆ ತೋರಿಸಿ?

ವಚನಗಳನ್ನು ತಮಗೆ ಬೇಕಾದಂತೆಲ್ಲಾ ತಿರುಚುತ್ತಿದ್ದಾರೆ, ಅವುಗಳಿಗೆ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನವನ್ನೂ ನೀಡಿ, ತಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಸವಾಲು ಹಾಕಿದರು.

‘ವಚನಗಳಿಗೂ ವೇದ ಮತ್ತು ಉಪನಿಷತ್ತುಗಳಿಗೂ ದೊಡ್ಡ ವ್ಯತ್ಯಾಸವಿಲ್ಲ. ಲಭ್ಯವಿರುವ ಬಸವವಾದಿ ಶರಣರ 23 ಸಾವಿರ ವಚನಗಳಲ್ಲಿ 550 ವಚನಗಳನ್ನು ಸಂಶೋಧಕರು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಮೋಕ್ಷ, ಪುಣ್ಯ, ಪಾಪದ ಬಗ್ಗೆ ಶರಣರ ಅಭಿಪ್ರಾಯ ಏನಾಗಿತ್ತು ಎಂಬುದನ್ನು ಸಂಶೋಧನಾ ಕೃತಿಯಲ್ಲಿ ಚರ್ಚಿಸಿದ್ದಾರೆ. ಬಸವಶೈವದಲ್ಲಿ ಹಿಂದುತ್ವ ಇಲ್ಲ ಎನ್ನುವವರು ದಾಖಲೆಗಳನ್ನು ಮುಂದಿಡಬೇಕು’ ಎಂದರು.

ಲಿಂಗಾಯತರು ಹಿಂದೂಗಳಲ್ಲ ಎಂದು ಹೇಳುವವರು ಶಿವಯೋಗ ಮಾಡಿ ಚಂಚಲವಾಗಿರುವ ಮನಸ್ಸು ನಿಯಂತ್ರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಲೇಖಕ ಡಾ.ಡಿ.ಎ.ಉಪಾಧ್ಯ ಮಾತನಾಡಿ, ಸಿಂಧೂ ಬಯಲಿನಲ್ಲೇ ಲಿಂಗಾಯತ ಹುಟ್ಟಿಕೊಂಡಿದ್ದು, ಲಿಂಗ, ಲಿಂಗದ ಕಾಯಿ ಬಗ್ಗೆ ಮಾಹಿತಿ ಇದೆ. ಮಹಾಭಾರತದಲ್ಲಿ ಧರ್ಮರಾಜ-ಭೀಷ್ಮನ ಮಧ್ಯೆ ನಡೆಯುವ ಸಂ‍ಭಾಷಣೆಯಲ್ಲೂ ದಾನ ಪಡೆಯಲು ಬ್ರಾಹ್ಮಣರಂತೆ, ಲಿಂಗಾಯತರೂ ಅರ್ಹರು ಎಂಬ ಬಗ್ಗೆ ಉಲ್ಲೇಖ ಬರುತ್ತದೆ.

ಬಸವಣ್ಣನವರ ಕಾಲದ ಪೂರ್ವದಲ್ಲೇ ಲಿಂಗಾಯತ ಧರ್ಮವಿತ್ತು. ಶರಣರ ಯುಗದಲ್ಲಿ ಲಿಂಗಾಯತ ಧರ್ಮ ಸ್ಥಾಪನೆ ಆಗಿಲ್ಲ. ಅದಕ್ಕೂ ಮುಂಚೆಯೇ ಲಿಂಗಾಯತ ಇತ್ತು ಎಂದು ಸ್ಪಷ್ಟಪಡಿಸಿದರು.

ಹಿರಿಯ ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಮಾತನಾಡಿ, ವೀರಶೈವ-ಲಿಂಗಾಯತ ಎರಡೂ ಒಂದೇ ಆಗಿದ್ದು, ಗುರು-ವಿರಕ್ತರು ಸಹ ಒಂದೇ ನಾಣ್ಯದ ಎರಡು ಮುಖಗಳು. ವೀರಶೈವ ಲಿಂಗಾಯತ ಸಮುದಾಯಲ್ಲಿ ಬೀಗತನ ಹೆಚ್ಚಾಗಬೇಕು ಎಂದರು.

ಚಿತ್ರದುರ್ಗದ ಬೋಧಕ ವಿ.ಚನ್ನಬಸಪ್ಪ ಕೃತಿ ಪರಿಚಯಿಸಿದರು. ಹರ ಸಾಹಿತ್ಯ ಸಂಕುಲದ ಅಧ್ಯಕ್ಷ ಎಸ್.ಸಿ.ಕಾಶೀನಾಥ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಚಾಲಕ ವಿ.ಶಂಭುಲಿಂಗಪ್ಪ ಉಪಸ್ಥಿತರಿದ್ದರು.

ಹಿರಿಯ ಉದ್ಯಮಿಗಳಾದ ವಾಣಿ ಶಿವಣ್ಣ, ಅಂದನೂರು ಮುರುಗೇಶ, ಸಂಕುಲದ ಉಪಾಧ್ಯಕ್ಷ ವಿನಾಯಕ ರಾನಡೆ, ಕೋಶಾಧ್ಯಕ್ಷ ಬಾದಾಮಿ ಚಂದ್ರಶೇಖರ, ಕಾ ರ್ಯದರ್ಶಿ ಬಾದಾಮಿ ಜಯಣ್ಣ, ಎಂ.ಬಿ.ನಟರಾಜ ಚಿತ್ರದುರ್ಗ, ಜಿ.ಷಣ್ಮುಖಪ್ಪ, ಓಂಕಾರಯ್ಯ ತವನಿಧಿ, ವಕೀಲ ಬಸವರಾಜ ಉಚ್ಚಂಗಿದುರ್ಗ, ಮಂಜುನಾಥ ಪುರವಂತರ ಕಕ್ಕರಗೊಳ್ಳ, ಅಂದನೂರು ಜಿ.ಷಣ್ಮುಖಪ್ಪ ಮಾಸ್ತರ್ ಇತರರು ಪಾಲ್ಗೊಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
2 Comments
  • ವಿಪ್ರ ರಚಿತ ವಚನ ದರ್ಶನ ಮೂಲಕ ಮನುವಾದಿಗಳು ನೆಲಕ್ಕೆ ಬಿದ್ದು ಮೀಸೆ ಮಣ್ಣಾದರೂ ಮತ್ತೊಂದು ಹುಚ್ಚು ಪ್ರಯತ್ನ ,ವ್ಯರ್ಥ ಪ್ರಯತ್ನ ಇದಕ್ಕೆ ಮತ್ತೂಂದು ಹುಸಿ ಬಸವಾದ್ದೈತ ಹಿಂದುತ್ವ ಹಿಂದಕ್ಕೆ ತಳ್ಳಿ ಮುಂದಕ್ಕೆ ಸಾಗುವುದು ಸ್ವತಂತ್ರ ಲಿಂಗಾಯತ ಧರ್ಮ
    ನೀವು ಮಾಡಿದಷ್ಟು ಕಿತಾಪತಿ ಗಟ್ಟಿಯಾಗುವುದು
    ಲಿಂಗಾಯತ ಧರ್ಮ. ಮತ್ತೂಬ್ಬರ ಧರ್ಮದಲ್ಲಿ
    ಮೂಗು ತುರಿಸುವ ಕೆಲಸ ಬಿಟ್ಟು. ನಿಮ್ಮ ಹಿಂದೂ ಧರ್ಮದ
    ಮೌಡ್ಯ ಕಳೆಯುವ, ಸುಧಾರಿಸುವ ಕೆಲಸ ಮಾಡಿ
    ನಿಮ್ಮ ಕುತಂತ್ರಕ್ಕೆ ಲಿಂಗಾಯತರು ಬಲಿಯಾಗುವದಿಲ್ಲ ಇನ್ನೂ ಗಟ್ಟಿಯಾಗಿ ಹೇಳುತ್ತಾರೆ ಲಿಂಗಾಯತರು ಹಿಂದೂಗಳಲ್ಲ, ಲಿಂಗಾಯತರು ವೀರಶೈವರಲ್ಲ

Leave a Reply

Your email address will not be published. Required fields are marked *