ಬೆಳಗಾವಿ:
ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳು ಬಸವ ಮಾರ್ಗದಲ್ಲಿ ಸಾಗಿ ಶಿವಬಸವ ಮಹಾಮಾರ್ಗವನ್ನು ನಿರ್ಮಿಸಿದ ಮಹಾನ್ ಯೋಗಿಗಳು ಎಂದು ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಬಣ್ಣಿಸಿದರು.
ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 136 ನೇ ಜಯಂತಿ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ “ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ಅಮೃತ ಗೌರವ ಅಭಿನಂದನ ಸ್ವೀಕರಿಸಿ ರವಿವಾರ ಮಾತನಾಡಿದರು.
ಬೆಳಗಾವಿಗೆ ಸಾಂಸ್ಕೃತಿಕವಾಗಿ ಮತ್ತು ಭಾಷಿಕವಾಗಿ ಶಿವಬಸವ ಶ್ರೀಗಳ ಕೊಡುಗೆ ಅದ್ವಿತೀಯ, ಮುಗ್ಧ ನಗೆ, ಮಗುವಿನಂಥ ಮುಖ, ಮಿತಭಾಷಿ, ಮಾತೃ ಹೃದಯದ ಶ್ರೀಗಳು ಬಡವರ ಬಾಳಿಗೆ ಬೆಳಕಾದರು.
ಬಡವರಿಗಾಗಿ ಸದ್ದಿಲ್ಲದೆ ದುಡಿದ ಯೋಗಿ, ಪದವಿ ಪ್ರಶಸ್ತಿ ಪುರಸ್ಕಾರಗಳಿಂದ ದೂರವಿದ್ದು ನಾಡಿನ ಗಣ್ಯಾತಿ ಗಣ್ಯರನ್ನು, ಜ್ಞಾನಪೀಠಿಗಳನ್ನು ರೂಪಿಸಿದ ಮಹಾನ್ ಸಂತ ಎಂದರು.

1974 ರಲ್ಲಿ ಮೊದಲ ಬಾರಿಗೆ ಶ್ರೀಗಳ ಸಾನಿಧ್ಯದಲ್ಲಿ ಎಸ್.ಡಿ. ಇಂಚಲ ಸ್ಮಾರಕ ಉಪನ್ಯಾಸವನ್ನು ತಾವು ನೀಡಿದ್ದನ್ನು ಜಗಜಂಪಿ ಅವರು ಸ್ಮರಿಸಿಕೊಂಡರು. 1978 ರಲ್ಲಿ “ವಚನಗಳಲ್ಲಿ ಜೀವನ ಮೌಲ್ಯಗಳು”ಎಂಬ ವಿಷಯದ ಕುರಿತು ಶ್ರೀಗಳ ಸಾನಿಧ್ಯದಲ್ಲಿ ಉಪನ್ಯಾಸ ನೀಡುವಾಗ ಬೇಗನೆ ತೆರಳುವುದಾಗಿ ಹೇಳಿದ್ದ ಶ್ರೀಗಳು ಸಂಪೂರ್ಣ 40 ನಿಮಿಷಗಳ ಕಾಲ ಉಪನ್ಯಾಸ ಕೇಳಿ ಕೊನೆಗೆ ಅತ್ಯುತ್ತಮ ಉಪನ್ಯಾಸಕ ನಾಗು ಎಂದು ಆಶೀರ್ವದಿಸಿ ತೆರಳಿದ್ದನ್ನು ಅವರು ನೆನಪಿಸಿಕೊಂಡರು.
ಸಮ್ಮುಖ ವಹಿಸಿದ್ದ ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸಮಸ್ತ ಭಾರತವನ್ನು ಮತ್ತು ಒಳ್ಳೆಯ ಭಕ್ತರನ್ನು ಕಾಣಬೇಕಾದರೆ ನಾಗನೂರು ರುದ್ರಾಕ್ಷಿಮಠಕ್ಕೆ ಬರಬೇಕು, ಭಾರತದ ಭಾಗ್ಯವಿಧಾತನಾಗಿ ಬರಬೇಕೆಂದು ಬಸವಣ್ಣನಿಗಾಗಿ ಅಲ್ಲಮಪ್ರಭುಗಳು ಕಾಯುತ್ತಿದ್ದರು. ಅದರಂತೆ ಬೆಳಗಾವಿಯ ಭಾಗ್ಯವಿಧಾತರಾಗಿ ಶಿವಬಸವ ಶ್ರೀಗಳು ಬಂದರು.
12 ನೇ ಶತಮಾನದಲ್ಲಿ ಬಸವಾದಿ ಶಿವಶರಣರು 1.65 ಕೋಟಿಗೂ ಅಧಿಕ ವಚನಗಳನ್ನು ರಚಿಸಿದ್ದಾರೆ ಎನ್ನಲಾಗುತ್ತದೆ, ಅದರಲ್ಲಿ ನಮಗೆ ಇದೂವರೆಗೂ ದೊರೆತದ್ದು ಕೇವಲ 23 ಸಾವಿರ ವಚನಗಳು ಮಾತ್ರ. ಅಷ್ಟಕ್ಕೆ ನಾವು ಲಂಡನ್ ಸೇರಿ ಹಲವು ದೇಶಗಳನ್ನು ತಲುಪಿದ್ದೇವೆ ಇನ್ನು ಶರಣರು ರಚಿಸಿದ ವಚನಗಳೆಲ್ಲ ಸಿಕ್ಕಿದ್ದರೆ ನಾವು ಇಡೀ ಜಗತ್ತನ್ನೇ ತಲುಪುತ್ತಿದ್ದೆವು.

ಬಸವಣ್ಣನವರು ಹೇಳಿದ ಅತಿ ದೊಡ್ಡ ಸಿದ್ದಾಂತ ಶಿವಯೋಗ ಸಿದ್ಧಾಂತ. ಅದನ್ನು ಸಾಧಿಸಿ ಶಿವಬಸವ ಶ್ರೀಗಳು ಸ್ವತಃ ಲಿಂಗವಾದರು. ಅನ್ನ ಮತ್ತು ಅಕ್ಷರ ದೊಂದಿಗೆ ಸಂಸ್ಕಾರವನ್ನು ನೀಡಿದ ಶ್ರೀಗಳು ಅಪಾರ ಪ್ರಭಾವಳಿ ಹೊಂದಿದ್ದರು. ಇಷ್ಟಲಿಂಗದ ಆರಾಧನೆಯೊಂದಿಗೆ ಮರಣವೇ ಮಹಾನವಮಿ ಆಗಬೇಕು ಎಂಬಂತೆ ಬದುಕಿದರು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಗದುಗಿನ ತೋಂಟದಾರ್ಯ ಮಠದ ಪೂಜ್ಯ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಸಾನಿಧ್ಯವನ್ನು ನಿಡಸೋಶಿ ಸಿದ್ಧಸಂಸ್ಥಾನ ಮಠದ ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿ ಲಿಂಗೈಕ್ಯ ಶಿವಬಸವ ಶ್ರೀಗಳ ಅಭೂತಪೂರ್ವವಾದ ಕಾರ್ಯವನ್ನು ಕೊಂಡಾಡಿದರು.
ಶಿವಬಸವ ಶ್ರೀಗಳು ಮಾಡಿದ ಪುಣ್ಯದ ಫಲದಿಂದ ಇಂದು ಈ ನಾಡು ಬೆಳಗುತಿದೆ ಎಂದರು.
ನೇತೃತ್ವವನ್ನು ವಹಿಸಿದ್ದ ಹುಲಸೂರಿನ ವಿರಕ್ತಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಲಿಂಗಾಯತರು ಸನಾತನ ಧರ್ಮದ ವಿರೋಧಿಗಳಲ್ಲ. ಲಿಂಗಾಯತರು ಹಿಂದೂ ಪರಂಪರೆಯ ವಿರೋಧಿಗಳೂ ಅಲ್ಲ. ಲಿಂಗಾಯತರು ಸ್ವತಂತ್ರ ಧರ್ಮವನ್ನು ಕೇಳುತ್ತಿದ್ದೇವೆ. ಅದು ಒಂದಿಲ್ಲ ಒಂದು ದಿನ ನಮಗೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ. ನಾವು ಯಾರ ವಿರೋಧಿಗಳು ಅಲ್ಲ ಎಂದರು.
ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾರ್ಥಕ 75 ವರ್ಷಗಳನ್ನು ಪೂರೈಸಿರುವ ಬೆಳಗಾವಿಯ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಅವರಿಗೆ ಅಮೃತ ಗೌರವ ಅಭಿನಂದನೆ ಸಲ್ಲಿಸಲಾಯಿತು.
ನಾಗನೂರು ರುದ್ರಾಕ್ಷಿ ಮಠದ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮಠದಿಂದ ಕೊಡಮಾಡುವ “ಪ್ರಸಾದ ಶ್ರೀ” ಪ್ರಶಸ್ತಿಯನ್ನು ಚೊಳಚಗುಡ್ಡದ ಹಿರಿಯ ವೈದ್ಯ ಡಾ. ಲಿಂಗಪ್ಪ ಮಹಾಗುಂಡಪ್ಪ ಹಾದಿಮನಿ, ಬೆಳಗಾವಿ ವಿಮಾನ ಪ್ರಾಧಿಕಾರದ ಅಧಿಕಾರಿ ಸುಭಾಷ್ ಪಾಟೀಲ, ಅನಿಗೋಳದ ನಾಗೇಶ ಮರಕುಂಬಿ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಸಚಿವ ಎಂ.ಬಿ. ಪಾಟೀಲ STEAM-H ಯುವವಿಜ್ಞಾನಿ ಕಾರ್ಯಾಲಯ ಉದ್ಘಾಟಿಸಿದರು.
ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಎಲ್. ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪ್ರಾಧ್ಯಾಪಕ ಎ.ಕೆ. ಪಾಟೀಲ ಮತ್ತು ರಾಜಶೇಖರ ಪಾಟೀಲ ನಿರ್ವಹಿಸಿದರು. ಅಪಾರ ಭಕ್ತ ಸಮುದಾಯ ನೆರೆದಿತ್ತು.
