ಕನ್ನೇರಿ ಸ್ವಾಮಿಯನ್ನು ಗಡಿಪಾರು ಮಾಡಲು ಜಿಲ್ಲಾ ಡಿಎಸ್ಸೆಸ್ಸ್ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ನಾಲತವಾಡ:

ರಾಯಬಾಗದಲ್ಲಿ ಈಚೆಗೆ ಮತ್ತೆ ಬಸವ ಅನುಯಾಯಿಗಳನ್ನು  ‘ಬಸವ ತಾಲಿಬಾನಿಗಳು’ ಎಂದು ಉಗ್ರರಿಗೆ ಹೋಲಿಕೆ ಮಾಡಿ ಹಗುರವಾಗಿ ಮಾತನಾಡಿರುವ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಿಸಿ ರಾಜ್ಯ ಪ್ರವೇಶ ನಿಷೇಧಿಸಬೇಕು, ಅವರನ್ನು ಗಡಿಪಾರು ಮಾಡಬೇಕು ಎಂದು ವಿಜಯಪುರ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಯೋಜಕ ಮಂಜುನಾಥ ಕಟ್ಟಿಮನಿ ಆಗ್ರಹಿಸಿದರು.

ಸ್ಥಳೀಯ ಬಸವ ಕೇಂದ್ರದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು,‘ಈ ಹಿಂದೆಯೂ ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧೀಶರ ಬಗ್ಗೆ ಅವಾಚ್ಯ, ಅಸಂವಿಧಾನಿಕ ಭಾಷೆಯನ್ನು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಬಳಸಿದ್ದರು.

ಕನ್ಹೇರಿ ಮಠ ಬಸವಾದಿ ಶರಣರ ಪರಂಪರೆ ಹೊಂದಿದ ಪೀಠವಾಗಿದೆ. ಬಸವಧರ್ಮ ಉತ್ತರಾಧಿಕಾರಿಗಳಾದ  ಇವರು, ಲಿಂಗವಂತ ಬಸವ ಭಕ್ತರನ್ನು ತಪ್ಪು ದಾರಿಗೆ ಎಳೆಯುತ್ತಾ, ಇಷ್ಟಲಿಂಗದ ಬದಲಾಗಿ ಹನುಮ ಮಾಲೆ ಹಾಕುತ್ತಿರುವುದು ಮತಾಂತರ ಮಾಡುವ ಹುನ್ನಾರವಾಗಿದೆ.

ಬಸವ ಅನುಯಾಯಿಗಳ ಬಗ್ಗೆ  ಪದೇ ಪದೇ ಹಗುರವಾಗಿ ಮಾತನಾಡಿರುವುದು ಗಮನಿಸಿದರೆ ಇವರ ನಾಲಿಗೆ ಮತ್ತು ಮೆದುಳಿನ ಮಧ್ಯದ ಸಂಪರ್ಕ ಕಡಿತಗೊಂಡಂತೆ ಭಾಸವಾಗುತ್ತದೆ’.

ಸಂಘಟನೆಯ ಮುಖಂಡ ಮಾರುತಿ ಸಿದ್ದಾಪುರ ಮಾತನಾಡಿ, ‘ಲಿಂಗಾಯತರನ್ನು ಮತಾಂತರ ಮಾಡುತ್ತ, ಸಮಾಜದ ಅಸಮತೋಲನಕ್ಕೆ ಕಾರಣರಾಗಿರುವ ಇಂಥ ಸ್ವಾಮೀಜಿ ಸಮಾಜದ ಮಧ್ಯೆ ಇರುವ ಹಕ್ಕು ಕಳೆದುಕೊಂಡಿರುತ್ತಾರೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಇವರ ವಿರುದ್ಧ ಎಫ್ಐಆರ್ ದಾಖಲಿಸಿ, ರಾಜ್ಯದಿಂದ ಗಡಿಪಾರಿಗೆ ಆದೇಶ ನೀಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *