ರಾಯಚೂರು:
ಶರಣರ ಚಿಂತನೆ ಆಗಿನ ದಿನಕ್ಕಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಶರಣರ ಮೊದಲ ಪ್ರತಿಪಾದನೆಯೇ ಕಾಯಕ ಮತ್ತು ದಾಸೋಹ ತತ್ವವಾಗಿದೆ.
ಈಗ ರಸ್ತೆಯ ತುಂಬ ಜನರಿದ್ದಾರೆ. ಆದರೆ ಕೃಷಿ ಕೆಲಸಕ್ಕೆ ಜನ ಸಿಗುತ್ತಿಲ್ಲ. ಕಂಪನಿಯ ಕೆಲಸಕ್ಕೆ ಜನರಿಲ್ಲ. ಕಾಯಕ ಕೊಡಲು ಸರಕಾರಕ್ಕೆ ಗೊತ್ತಾಗುತ್ತಿಲ್ಲ. ಕಾರಣ ಸಮಾಜಕ್ಕೆ, ಸರಕಾರಕ್ಕೆ ಕಾಯಕದ ಮಹತ್ವ ತಿಳಿಯದೇ ಇರುವುದಕ್ಕೆ ಹೀಗಾಗಿದೆ ಎಂದು ವೈದ್ಯರು, ಸಾಹಿತಿಗಳಾದ ಡಾ. ಶಿವಾನಂದ ಕುಬಸದ ವಿಷಾದ ವ್ಯಕ್ತಪಡಿಸಿದರು.
ಶನಿವಾರ ನಗರದ ಬಸವ ಕೇಂದ್ರದಲ್ಲಿ ‘ಆಧುನಿಕ ಸಮಾಜದಲ್ಲಿ ಶರಣರ ಚಿಂತನೆಗಳ ಪ್ರಸ್ತುತತೆ’ ವಿಷಯವಾಗಿ ನಡೆದ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮರುಳ ಶಂಕರದೇವ ಅಫ್ಘಾನಿಸ್ತಾನದಿಂದ ಅಂದಿನ ಅನುಭವ ಮಂಟಪಕ್ಕೆ ಬಂದ ಸೂಫಿ ಸಂತ. ಆತನಿಗೆ ಕಾಯಕ ಗೊತ್ತಿರಲಿಲ್ಲ. ಕಲ್ಯಾಣದಲ್ಲಿ ಕಾಯಕವಿಲ್ಲದವರಿಗೆ ಪ್ರಸಾದವಿರಲಿಲ್ಲ. ಆಗ ಅವರು ಮಹಾಮನೆಯಲ್ಲಿ ಶರಣರ ಊಟದ ತಟ್ಟೆ ತೊಳೆದು ಅದನ್ನೇ ಕಾಯಕ ಮಾಡಿಕೊಂಡು ಪ್ರಸಾದ ಸ್ವೀಕರಿಸಿದರು.
ನಮ್ಮ ಭಾರತ ಹಸಿವಿನ ಸೂಚ್ಯಂಕದಲ್ಲಿ ೧೦೫ನೇ ಸ್ಥಾನದಲ್ಲಿದೆ. ಆದರೆ ವರ್ಷಕ್ಕೆ ೮೦ ಮಿಲಿಯನ್ ಟನ್ ಆಹಾರವನ್ನು ನಾವು ವ್ಯರ್ಥ ಹಾಳು ಮಾಡುತ್ತಿದ್ದೇವೆ.
ಜನರಲ್ಲಿ ಒಣ ಪ್ರತಿಷ್ಠೆಯ ಭಾವ ತೊಲಗಿ, ಅನ್ನಕ್ಕೆ ಶರಣರು ನೀಡಿದ ಪ್ರಸಾದದ ಭಾವನೆ ಮೂಡಿದರೆ ಎಲ್ಲಿಯೂ ಆಹಾರದ ಪೋಲು ಆಗುವುದಿಲ್ಲ ಎಂದು ಹೇಳಿದರು.

ಶರಣರು ತಮಗೆ ಅಗತ್ಯವಿದ್ದಷ್ಟು ಬಳಸಿ ಉಳಿದುದನ್ನು ಶಿವನ ಸೊಮ್ಮು ಎಂದು ನೀಡುತ್ತಿದ್ದರು. ಅದನ್ನು ಅಗತ್ಯವಿದ್ದವರು ಬಳಸಿಕೊಳ್ಳುತ್ತಿದ್ದರು. ಶರಣರದು ದಾನವಾಗಿರಲಿಲ್ಲ ಬದಲಿಗೆ ಅದು ದಾಸೋಹವಾಗಿತ್ತು. ಶರಣರ ಪರಿಕಲ್ಪನೆ ಹಾಗಿತ್ತು ಎಂದರು.
ನಾವು ಬಸವಣ್ಣನ ಸಪ್ತಶಿಲಗಳ ವಚನ ಹೇಳಿ ಅದಕ್ಕೆ ತದ್ವಿರುದ್ಧವಾಗಿ ನಡೆಯುವುದು ಆಗಬಾರದೆಂಬ ಕಳಕಳಿಯನ್ನು ಕುಬಸದ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬಸವ ಕೇಂದ್ರದ ಗೌರವಾಧ್ಯಕ್ಷ ನಾಗನಗೌಡ ಹರವಿ ವಹಿಸಿ ಮಾತನಾಡಿದರು. ಅತಿಥಿಗಳಾಗಿ ರಾಯಚೂರು ಒಪೆಕ್ ಆಸ್ಪತ್ರೆಯ ಡಾ. ಸುರೇಶ ಸಗರದ ಮಾತನಾಡಿದರು. ಡಾ. ಮಹಲಿಂಗಪ್ಪ, ಡಾ. ರವಿ ರಾಜೇಶ್ವರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಜಾಗತಿಕ ಲಿಂಗಾಯತ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ. ಸರ್ವಮಂಗಳಾ ಸಕ್ರಿ, ಬಸವ ಕೇಂದ್ರದ ಚನ್ನಬಸವ ಇಂಜನಿಯರ್ ವೇದಿಕೆಯಲ್ಲಿ ಇದ್ದರು.
ಡಾ. ಸರ್ವಮಂಗಳಾ ಸಕ್ರಿ ಪ್ರಾಸ್ತಾವಿಕ, ಪರಿಚಯ, ನಿರೂಪಣೆ ಮಾಡಿದರು. ಡಾ. ಸರಿತಾ ಪ್ರಾರ್ಥನೆ ಮಾಡಿದರು. ದೇವೀಂದ್ರಮ್ಮ ಸ್ವಾಗತಿಸಿದರು. ಪಾರ್ವತಿ ಪಾಟೀಲ ಶರಣು ಸಮರ್ಪಣೆ ಮಾಡಿದರು.
ಬಸವ ಕೇಂದ್ರದ ಕಾರ್ಯದರ್ಶಿ ಚೆನ್ನಬಸವಣ್ಣ ಮಹಾಜನಶೆಟ್ಟಿ, ಡಾ. ಬಸನಗೌಡ, ಶಿವಯೋಗಿ ಪಾಟೀಲ ಜೋಳದಡಗಿ, ಸೋಮನಾಥರಡ್ಡಿ ಪಾಟೀಲ, ಗಣದಿನ್ನಿ ಗಿರಿಮಲ್ಲನಗೌಡ ಕರಡಕಲ್ಲ, ಪವನ್ ಪಾಟೀಲ, ಮಲ್ಲಮ್ಮ ಪಾಟೀಲ ಜಾಡಲದಿನ್ನಿ, ನಾಗೇಶಪ್ಪ ನಿವೃತ್ತ ಎಎಸ್ಐ, ಅಮರೇಶ ನಿಲೋಗಲ್ಲ ಅನೇಕರು ಉಪಸ್ಥಿತರಿದ್ದರು. ವಚನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.
