ಹರಪನಹಳ್ಳಿ: ಪೂಜಾರ ದಂಪತಿಗಳ ಹೊಸ ಮನೆಯ ಬಸವತತ್ವದ ಗುರುಪ್ರವೇಶ

‘ಲಿಂಗಾಯತ ಯುವಕರಲ್ಲಿ ನಿಜಾಚರಣೆ ಬಗ್ಗೆ ಅರಿವು ಮೂಡಿಸಬೇಕು’

ಹರಪನಹಳ್ಳಿ:

ತಾಲೂಕಿನ ಅಡಿವಿಹಳ್ಳಿ ಗ್ರಾಮದ ಶಕುಂತಲಾ ಮತ್ತು ಬಸವರಾಜ ಪೂಜಾರ ದಂಪತಿಗಳ ನೂತನ ಮನೆಯು ಬಸವತತ್ವ ನಿಜಾಚರಣೆಯ ಮೂಲಕ ಗುರುಪ್ರವೇಶವಾಯಿತು. ಬಸವರಾಜ ಪೂಜಾರ ಗ್ರಾಮ ಪಂಚಾಯತಿ ನೌಕರರ ಸಂಘದ ತಾಲೂಕ ಘಟಕದ ಅಧ್ಯಕ್ಷರಾಗಿದ್ದಾರೆ.

ಮೊದಲಿಗೆ ಷಟಸ್ಥಲ ಧ್ವಜಾರೋಹಣವನ್ನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ ಹಾಗೂ ಮಾಜಿ ಶಾಸಕರಾದ ನಂದಿಹಳ್ಳಿ  ಹಾಲಪ್ಪ ಅವರುಗಳು ನೆರವೇರಿಸಿದರು.

ಅರಸೀಕೆರೆಯ ಶ್ರೀ  ಕೋಲಶಾಂತೇಶ್ವರ ಮಠದ  ವಿರಕ್ತಮಠದ ಪೂಜ್ಯ ಶಾಂತವೀರ ಶ್ರೀಗಳು ವಿಶ್ವಗುರು ಬಸವಣ್ಣನವರ  ಭಾವಚಿತ್ರವನ್ನು ದಂಪತಿಗಳಿಗೆ ನೀಡಿದರು. ನಂತರ ದಂಪತಿಗಳು ಭಾವಚಿತ್ರದೊಂದಿಗೆ ಮನೆಗೆ ಗುರುಪ್ರವೇಶ ಮಾಡಿಸಿದರು.

ನಂತರ ಮನೆಯೊಳಗೆ ವಿಜಯನಗರ ಜಿಲ್ಲೆ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಇಷ್ಟಲಿಂಗ ಅಧ್ಯಯನ ಕೇಂದ್ರ ಹೊಸಪೇಟೆ ಸದಸ್ಯರ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ಶರಣ – ಶರಣೆಯರು ಇಷ್ಟಲಿಂಗ ಪೂಜೆ ಮಾಡಿಕೊಂಡರು. ಪ್ರಾಂಶುಪಾಲರಾದ ಡಾ. ಟಿ. ಹೆಚ್. ಬಸವರಾಜ ಅವರು ಶಿವಯೋಗ ಹೇಳಿಕೊಟ್ಟರು. ಜೊತೆಗೆ ಲಿಂಗಾಯತ ಧರ್ಮದ ನಿಜ ಆಚರಣೆಯ ತತ್ವಗಳನ್ನು ತಿಳಿಸಿದರು.

ಪ್ರಸ್ತುತ ವರ್ತಮಾನದ ಲಿಂಗಾಯತ ಕುಟುಂಬಗಳಲ್ಲಿ ಲಿಂಗಾಯತ ನಿಜಾಚರಣೆಯ ತತ್ವಗಳು ಕಣ್ಮರೆಯಾಗುತ್ತಿದ್ದು, ಅನ್ಯಧರ್ಮದ ಆಚರಣೆಗಳೇ ಲಿಂಗಾಯತರ ಮನೆಗಳಲ್ಲಿ ತುಂಬಿಕೊಂಡಿವೆ ಇದು ಸರಿಯಲ್ಲ.

ಹನ್ನೆರಡನೇ ಶತಮಾನದ ಬಸವಾದಿ ಶರಣರು ಅಂದು ಸಮಾಜದಲ್ಲಿದ್ದ ಸಾಮಾಜಿಕ ಅಸಮಾನತೆ, ಧಾರ್ಮಿಕ ಮೌಢ್ಯತೆ, ಲಿಂಗ ತಾರತಮ್ಯವನ್ನು ಖಂಡಿಸಿ ಜೀವನಕ್ಕೆ ಬೇಕಾದ ವಾಸ್ತವದ ಬದುಕಿನ ಸತ್ಯಗಳನ್ನು ಪ್ರತಿಪಾದನೆ ಮಾಡಿದರು. ಅದರಲ್ಲಿ ಬಹುಮುಖ್ಯವಾಗಿ ಇಷ್ಟಲಿಂಗ ಅನುಷ್ಠಾನ ಮಾಡಿಕೊಳ್ಳುವುದನ್ನು ಪ್ರಬಲವಾಗಿ ಪ್ರತಿಪಾದಿಸಿದರು.

ಇಷ್ಟಲಿಂಗ ಎಂದರೆ ದೇವರಲ್ಲ. ಆದರೆ ಅದರ ಅನುಷ್ಠಾನ ಅರಿವಿನ ಕುರುಹು ಎಂದು ಪ್ರತಿಪಾದಿಸಿದರು. ತನ್ನನ್ನು ತಾನು ಅರಿತು ಜೀವಿಸಿದರೆ ಕುಟುಂಬಕ್ಕೆ ಮತ್ತು ಸಮಾಜಕ್ಕೆ  ಲೇಸನ್ನು ಬಯಸಿದಂತೆ ಎಂದರು.

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯ ಈ ಆಚರಣೆಗಳಿಂದ ದೂರವಾಗುತ್ತಿದ್ದಾರೆ, ಆದ್ದರಿಂದ  ಅವರಲ್ಲಿ ಅರಿವು ಮೂಡಿಸುವ ಒಂದು ಭಾಗ ಈ ನಿಜಾಚರಣೆ ಎಂದರು.

ನಂತರ ಶಾಂತವೀರ ಶ್ರೀಗಳು ಆಶೀರ್ವಚನ ನೀಡುತ್ತ, ಇತ್ತೀಚಿಗೆ ಲಿಂಗಾಯತ ಕುಟುಂಬಗಳು ಹೋಮ, ಹವನ, ಯಜ್ಞ ಮತ್ತಿತರ ವೈದಿಕ ಆಚರಣೆಗಳನ್ನು ಆಚರಿಸುತ್ತಿರುವುದು ವಿಷಾಧಕರವಾಗಿದೆ.

ಅಂತಹುದರಲ್ಲಿ ಶಕುಂತಲಾ- ಬಸುರಾಜ ಪೂಜಾರ ದಂಪತಿಗಳು ಬಸವಾದಿ ಶರಣರು ಪ್ರತಿಪಾದಿಸಿದ ಸರಳ ಲಿಂಗಾಯತ ನಿಜಾಚರಣೆಗಳ ಮೂಲಕ ನೂತನ ಮನೆಗೆ ಗುರುಪ್ರವೇಶವನ್ನು ಮಾಡಿರುವುದು ತುಂಬಾ ಸಂತೋಷದ ವಿಷಯ.

ಮುಂದಿನ ದಿನಗಳಲ್ಲಿ ಲಿಂಗಾಯತ ಸಮುದಾಯವು ಈ ತರದ ಆಚರಣೆಗಳನ್ನು ಅನುಸರಿಸಬೇಕೆನ್ನುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ  ಬಂಧು-ಮಿತ್ರರು, ಗ್ರಾಮದ ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
1 Comment

Leave a Reply

Your email address will not be published. Required fields are marked *