ಸರಳ, ಸಜ್ಜನ, ನಿರ್ಗರ್ವಿ ಶಾಮನೂರು ಶಿವಂಕರಪ್ಪ ಸ್ಮರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ಮೇರು ವ್ಯಕ್ತಿತ್ವದ ಡಾ. ಶಾಮನೂರು ಶಿವಂಕರಪ್ಪ ಅವರ ಸಮಾಜ ಸೇವಾ ಕಾರ್ಯಗಳು ಸ್ಮರಣೀಯವಾಗಿವೆ ಎಂದು ಚಿಗಟೇರಿ ನಾರದ ಮುನಿ ಸೇವಾ ಟ್ರಸ್ಟ್ ಅಧ್ಯಕ್ಷ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರೂ ಆದ ಅಣಬೇರು ರಾಜಣ್ಣ ಶ್ಲಾಘಿಸಿದರು.

ಚಿಗಟೇರಿ ನಾರದ ಮುನಿ ಸೇವಾ ಟ್ರಸ್ಟ್ ವತಿಯಿಂದ ಮಂಗಳವಾರ ಸಂಜೆ ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾವಿರಾರು ಕೋಟಿ ರೂ. ಗಳಿಗೆ ಒಡೆಯರಾಗಿದ್ದರೂ ಅವರಲ್ಲಿದ್ದ ತಾಳ್ಮೆ, ತಂದೆ-ತಾಯಿಗಳನ್ನು, ದೇವರುಗಳನ್ನು ಪೂಜಿಸುವ ಗುಣ ವಿಶೇಷವಾದುದು. ಚಿಕ್ಕ ವ್ಯಾಪಾರದಿಂದ ಶುರುವಾದ ಅವರ ಜೀವನ ಈಗ ಸಾವಿರಾರು ಕೋಟಿಗೆ ಒಡೆಯರಾಗಿದ್ದಾರೆ. ಕೈಗಾರಿಕೆಗಳನ್ನು ಸ್ಥಾಪಿಸಿ, ಹತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿರುವುದನ್ನು ರಾಜಣ್ಣ ಪ್ರಶಂಸಿಸಿದರು.

ಕಡಿಮೆ ವಿದ್ಯಾಭ್ಯಾಸ ಮಾಡಿದ್ದರೂ ಅವರಲ್ಲಿ ಹೇರಳವಾದ ಸಾಮಾನ್ಯ ಜ್ಞಾನ ಇತ್ತು. ನಿಗರ್ವಿಗಳು, ಕಿಂಚಿತ್ತೂ ಅಹಂಕಾರ ಇಲ್ಲದ ಸರಳ, ಸಜ್ಜನಿಕೆಯ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರನ್ನು ಅತ್ಯಂತ ಪ್ರೀತ್ಯಾದರಗಳಿಂದ ಕಾಣುತ್ತಿದ್ದರು ಎಂದರು.

ನಾಡಿನ ಅನೇಕ ದೇಗುಲಗಳಿಗೆ, ಮಠ ಮಾನ್ಯಗಳಿಗೆ ನೀಡಿದ ಕೊಡುಗೆ ಕೂಡ ಅಪಾರವಾದುದು. ಅವರು ಸತ್ತು ಬದುಕಿದವರು. ಅವರ ನಡೆ-ನುಡಿ, ಸತ್ಯತೆ, ಆದರ್ಶಗುಣಗಳು ನಮಗೆ ದಾರಿದೀಪವಾಗಿವೆ ಎಂದು ರಾಜಣ್ಣ ಹೇಳಿದರು.

ಕಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿ, ಶಿವಶಂಕರಪ್ಪ ಅವರದು ಸಾರ್ಥಕ ಬದುಕು. ಅವರೊಬ್ಬ ಇತಿಹಾಸ ಪುರುಷ. ಶಿಕ್ಷಣ, ಆರೋಗ್ಯ, ಆರ್ಥಿಕ ಸಬಲೀಕರಣದ ಬಗ್ಗೆ ಹೆಚ್ಚು ಒತ್ತು ನೀಡುವ ಮೂಲಕ ದಾವಣಗೆರೆ ಸಮಗ್ರ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆಂದು ಹೇಳಿದರು.

ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಈ ಭಾಗದ ಅಂದರೆ ಮಧ್ಯ ಕರ್ನಾಟಕದ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ವಿಶ್ರಾಂತ ಪ್ರಾಧ್ಯಾಪಕರೂ, ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ಡಾ.ಹೆಚ್.ಎಸ್. ಮಂಜುನಾಥ್ ಕುರ್ಕಿ ಬಣ್ಣಿಸಿದರು.

ಗುರು, ದೈವಭಕ್ತಿ ಹೊಂದಿದ್ದ ಶಿವಶಂಕರಪ್ಪ ಅವರು ಆಧುನಿಕ ದಾವಣಗೆರೆಯ ನಿರ್ಮಾತೃ. ಬಾಪೂಜಿ ವಿದ್ಯಾಸಂಸ್ಥೆ ಸ್ಥಾಪಿಸುವ ಮೂಲಕ ಸುಮಾರು ಇಪ್ಪತ್ತು ಸಾವಿರ ನೌಕರರು ತಮ್ಮ ಬದುಕು ಕಟ್ಟಿಕೊಳ್ಳಲು ಕಾರಣೀಭೂತರಾಗಿದ್ದಾರೆ. ಅವರ ಶೈಕ್ಷಣಿಕ, ಕೈಗಾರಿಕೆ, ಧಾರ್ಮಿಕ, ಸಾಮಾಜಿಕ ಸೇವೆ ಶ್ಯಾಘನೀಯ ಎಂದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರಪ್ಪ, ಹಿರಿಯ ಪತ್ರಕರ್ತ ಎಂ.ಎಸ್. ಶಿವಶರಣಪ್ಪ, ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಸಿರಿಗೆರೆ ಪರಮೇಶ್ವರಪ್ಪ, ಮೆಳ್ಳೇಕಟ್ಟೆ ನಾಗರಾಜಪ್ಪ, ಬುಳ್ಳಾಪುರದ ಮಲ್ಲಿಕಾರ್ಜುನ ಸ್ವಾಮಿ, ವೀಣಾ ಮಂಜುನಾಥ, ಶಾಮನೂರು ಬಸಣ್ಣ ಮತ್ತು ಇತರರು ಶಾಮನೂರು ಶಿವಶಂಕರಪ್ಪ ಅವರ ಸಾಧನೆ, ಸಮಾಜ ಸೇವಾ ಕ್ಷೇತ್ರ, ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸಿ ನಮನ ಸಲ್ಲಿಸಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕಕ್ಕರಗೊಳ್ಳ ಕೆ.ಬಿ. ಪರಮೇಶ್ವರಪ್ಪ, ಶಿಕ್ಷಕ ನಾಗರಾಜ ಸಿರಿಗೆರೆ, ಶ್ರೀನಿವಾಸ, ಷಡಾಕ್ಷರಪ್ಪ ವಡ್ಡಿನಹಳ್ಳಿ, ಸಂತೋಷ, ಸುವರ್ಣಮ್ಮ, ವನಜಾ ಮಹಾಲಿಂಗಯ್ಯ, ಶಿವಾನಂದಪ್ಪ, ಷಣ್ಮುಖಪ್ಪ, ಬಿ.ಟಿ. ಪ್ರಕಾಶ ಮತ್ತಿತರರು ಉಪಸ್ಥಿತರಿದ್ದರು.

ಆರಂಭದಲ್ಲಿ ಶಾಮನೂರು ಅವರು ಭಾವಚಿತ್ರಕ್ಕೆ ಪುಷ್ಪಾರ್ಪಣೆಯ ಗೌರವ ಸಲ್ಲಿಕೆ ಆಯಿತು. ಆಹಾರ ಇಲಾಖೆ ನಿವೃತ್ತ ಅಧಿಕಾರಿ ಬಿ.ಟಿ.ಪ್ರಕಾಶ ವಚನ ಗಾಯನ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
Leave a comment

Leave a Reply

Your email address will not be published. Required fields are marked *