ವಚನ ನಿರ್ವಚನ: ಯಾವ ದೇವರೂ ಕಾಡುವುದಿಲ್ಲ, ಕಾಡುವುದು ದೇವರಲ್ಲ

‘ಇಷ್ಟಲಿಂಗ ವಿಶ್ವಪ್ರಜ್ಞೆಯ ಧ್ಯೋತಕ’

ಗುಳೇದಗುಡ್ಡ:

ಬಸವಕೇಂದ್ರದ ವತಿಯಿಂದ ಶನಿವಾರ ಶರಣ ರಾಘವೇಂದ್ರ ಬಾಳಪ್ಪ ಮಡಿವಾಳರ ಅವರ ಮನೆಯಲ್ಲಿ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ನಡೆಯಿತು.

ಚಿಂತನೆಗೆ ಆಯ್ದುಕೊಂಡ ವಚನ ಮಡಿವಾಳ ಮಾಚಿದೇವ ತಂದೆಗಳವರದು –

ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿಕೊಂಬ ಮಹಾಲಿಂಗವಂತರು ನೀವು ಕೇಳಿರೊ
ಮನೆಗೊಂದು ದೈವ,  ನಿಮಗೊಂದು ದೈವ
ನಿಮ್ಮಂಗನೆ ಅನ್ಯದೈವಕ್ಕೆಂದು
ನಿಯಾಮಿಸಿ ಮಾಡಿದ ಪಾಕವ
ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು
ಭಂಜಿಸುತಿರ್ದ, ಮತ್ತೆ ಮರಳಿ
ಲಿಂಗವಂತರೆನಿಸಿಕೊಂಡ
ಲಿಂಗದ್ರೋಹಿಗಳಿಗೆ ಕುಂಭೀ ಪಾತಕ
ನಾಯಕ ನರಕ ತಪ್ಪದೆಂದ
ಕಲಿದೇವರದೇವಯ್ಯ.

ಈ ವಚನದ ಚಿಂತನೆಗೆ ತೊಡಗಿದ ಪ್ರೊ. ಶ್ರೀಕಾಂತ ಗಡೇದ ಅವರು – ಮಾಚಿದೇವರ ಕಾಯಕ ಬಟ್ಟೆ ತೊಳೆಯುವದರ ಜೊತೆಗೆ ಮನದ ಮೈಲಿಗೆಯನ್ನು ತೊಳೆದರು.

ಮಾಚಿದೇವರು ಕಾಯಕಕ್ಕೆ ಒಂದು ಮೌಲ್ಯವನ್ನು ಒದಗಿಸಿ, ವಚನ ರಚನೆಯನ್ನು ಹೇಳಿಕೊಟ್ಟು ಕೊನೆಗೆ ಕಲ್ಯಾಣ ಕ್ರಾಂತಿಯ ನಂತರ ವಚನ ಕಟ್ಟುಗಳನ್ನು ರಕ್ಷಿಸಿದವರು ಆಗಿದ್ದಾರೆ. ಅರಿವು ಆಚಾರ ಅನುಭಾವಗಳನ್ನು ಅಳವಡಿಸಿದಾತನಿಗೆ ಇಷ್ಟಲಿಂಗದ ಮಹತ್ವ ಗೊತ್ತಿರಬೇಕು. ಗಂಡ ಹೆಂಡತಿ ಇಬ್ಬರೂ ಇಷ್ಟಲಿಂಗ ಧಾರಿಗಳಾಗಿರತಕ್ಕದ್ದು ಎಂದು ಹೇಳಿದರು.

ಉದ್ಯಮಿ ಶರಣ ಮಹಾಂತೇಶ ಸಿಂದಗಿಯವರು ಇದೇ ವಚನದ ಅರ್ಥವನ್ನು ವಿವರಿಸುತ್ತ, ಎಲ್ಲರಿಗೂ ಒಂದೇ ದೇವರು ಇರಬೇಕು. ಅದರಲ್ಲಿ ಅರಸ-ಅಗಸ ಎಂಬ ಭೇದವಿಲ್ಲ. ಲಿಂಗದೇವರು ತನಗೆ ಸರ್ವಸ್ವವಾಗಬೇಕು.  ಒಬ್ಬ ಮಹಿಳೆ ಅನ್ಯ ಪುರುಷನನ್ನು ನೋಡಿದರೆ ಹೇಗೆ ತಪ್ಪಾಗುವದೋ ಹಾಗೆ ಇಷ್ಟಲಿಂಗಧಾರಿಯಾದ ಶರಣ ಬೇರೆ ದೇವರಗಳತ್ತ ಹೊರಳಿದರೆ ಇದೇ ಪರಸ್ಥಿತಿಯಾಗುತ್ತದೆ. ಯಾವ ದೇವರೂ ಕಾಡುವುದಿಲ್ಲ. ಕಾಡುವುದು ದೇವರಲ್ಲ. ಗಂಡ-ಹೆಂಡಿರು ಒಂದೇ ಮನಸ್ಸಿನಿಂದ ಇಷ್ಟಲಿಂಗವನ್ನು ಅರಿತು ಆಚರಿಸಬೇಕು ಎಂದು ತಿಳಿಹೇಳಿದರು.

ಶರಣ ಮಹಾಲಿಂಗಪ್ಪ ಕರನಂದಿಯವರು ಇದೇ ವಚನ ಚಿಂತನೆಯಲ್ಲಿ ತೊಡಗಿ, ಗಂಡ-ಹೆಂಡತಿ ಲಿಂಗತತ್ವವನ್ನು ಅರಿತು ಧರಿಸಬೇಕು. ಹೆಂಡತಿ ಬೇರೆ ದೇವರಿಗೆ ಮಾಡಿದ ಅಡುಗೆಯನ್ನು ಇಷ್ಟಲಿಂಗಕ್ಕೆ ಅರ್ಪಿಸಕೂಡದು. ಇಲ್ಲವಾದರೆ ಅದು ದ್ರೋಹವಾಗುತ್ತದೆ ಎಂದು ವಿವರಿಸಿ ಮಡಿವಾಳ ಮಾಚಿದೇವರು ಚರಿತ್ರೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಡಾ. ಗಿರೀಶ ನೀಲಕಂಠಮಠ ಅವರು ಈ ವಚನ ಚಿಂತನೆಯನ್ನು ಮುಂದುವರೆಸುತ್ತ, ಈ ವಚನ ಏಕದೇವೋಪಾಸನೆಯನ್ನು ಪ್ರತಿಪಾದಿಸುತ್ತದೆ. ಇರುವ ದೇವರು ಒಂದೇ ಆದರೂ ಜ್ಞಾನಿಗಳು ಅದನ್ನು ಬೇರೆ ಬೇರೆಯಾಗಿ ಹೇಳುತ್ತಾರೆ.  ನಮ್ಮ ವಿಶ್ವ ಪ್ರಜ್ಞೆಯೇ ದೇವರು.  ಅದನ್ನೇ ಇಷ್ಟಲಿಂಗವಾಗಿ ಧರಿಸಿದ ಮೇಲೆ ಅನ್ಯದೈವಕ್ಕೆ ಎರಗುವದು ಸಲ್ಲದು.

ಹಾಗೆಯೇ ವಚನದಲ್ಲಿ ಮಡಿವಾಳ ಮಾಚಿದೇವರು, ಲಿಂಗವಂತರೆನಿಸಿಕೊಂಡ ತತ್ವಹೀನರನ್ನು ವ್ಯಂಗ್ಯವಾಗಿ ಕಾಣುವ ಹಾಗೂ ಮುಂದಿನ ಸಾಲುಗಳಲ್ಲಿ ಜಾಗ್ರತೆಯನ್ನು ತುಂಬುವ ಅರ್ಥವಿದೆ. ಇಲ್ಲಿ ಬಳಸಿದ ಸ್ವರ್ಗ-ನರಕಗಳು ನಮ್ಮಲ್ಲಿಯೇ ಇವೆ.

ಲಿಂಗವ ಧರಿಸಿ ಆ ತತ್ವಕ್ಕೆ ಅನುಗುಣವಾಗಿ ನಡೆಯುವುದೇ ಸ್ವರ್ಗ. ಇದಕ್ಕೆ ವ್ಯತಿರಿಕ್ತವಾಗಿ ನಡೆಯುವುದೇ ನರಕ. ತನಗೆ ತನ್ನ ಮನೆಗೆ, ತನ್ನ ಅಂಗನೆಗೆ ಒಂದೊಂದು ದೇವರ ಮಾಡಿಕೊಳ್ಳುವುದೇ ನರಕ.  ಅದಕ್ಕೂ ಮೀರಿ ಭಿನ್ನದೇವರಿಗೆ ಮಾಡಿದ ಪಾಕ ಲಿಂಗಕ್ಕೆ ಸಲ್ಲದು. ತಾನು ಧರಿಸಿರುವ ಲಿಂಗವೇ ವಿಶ್ವ ಪ್ರಜ್ಞೆಯ ದ್ಯೋತಕ. ಇಷ್ಟಲಿಂಗದಿಂದ ಮಹಾಲಿಂಗದ ಕಡೆಗೆ ಸಾಗುವುದೇ ಲಿಂಗವಂತರ ಮಹಾಮಾರ್ಗವೆಂದು ಅರಿಯಬೇಕು ಎಂದು ಮಾಚಿದೇವರು ಹೇಳಿದ್ದಾರೆ.

ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಡಾ. ಗಿರೀಶ ನೀಲಕಂಠಮಠ ಅವರು ಶರಣು ಸಮರ್ಪಣೆ ಮಾಡಿದರು. ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ

ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರಾದ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು ಎಲ್ಲರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಮೊದಲಾದವರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *