ರಾಜಸಿಂಹಾಸನ ಇದ್ದರೂ ಶೂನ್ಯಪೀಠ ಸ್ಥಾಪಿಸಿದ ಬಸವಣ್ಣ

ಬಸವ ಮೀಡಿಯಾ
ಬಸವ ಮೀಡಿಯಾ

ವಚನಗಳು ಮಾನವ ಹಕ್ಕು ಪ್ರತಿಪಾದಿಸುತ್ತವೆ

ಗದಗ:

ವಚನಗಳು ಕೇವಲ ಧಾರ್ಮಿಕ ಕಾವ್ಯವಲ್ಲ. ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಮಾನವೀಯತೆ ಈ ನಾಲ್ಕು ಮಾನವ ಹಕ್ಕುಗಳ ಮೂಲ ತತ್ವಗಳನ್ನು ವಚನಗಳು 12ನೇ ಶತಮಾನದಲ್ಲಿಯೇ ಘೋಷಿಸಿದ್ದವು. ಆದ್ದರಿಂದ ವಚನಗಳು ಭಾರತದ ಮೊದಲ ಮಾನವ ಹಕ್ಕುಗಳ ಸಂವಿಧಾನ ಎಂದು ಭೈರನಟ್ಟಿ-ಶಿರೋಳದ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2776 ಶಿವಾನುಭವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವರ್ಗ, ವರ್ಣ, ಲಿಂಗ ಭೇದಭಾವ ಮಾಡದೇ ಮಾನವ ಹಕ್ಕುಗಳನ್ನು ಶರಣರು ಕೊಟ್ಟರು. ತಮ್ಮ ವಚನಗಳ ಮೂಲಕ ಮೇಲ್ಜಾತಿ ಕೆಳಜಾತಿಯಲ್ಲಿ ಸಮಾನತೆ ತಂದು ಇವನಮ್ಮವ ಇವನಮ್ಮವ ಎನ್ನುವ ಅದ್ಬುತ ಪರಿಕಲ್ಪನೆ ತಂದರು. ಬಲಗೈಯಷ್ಟೇ ಎಡಗೈನೂ ಶ್ರೇಷ್ಟ ಎಂಬ ತತ್ವ ಸಾರಿ, ದೇಶದಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗುವುದನ್ನು ತಪ್ಪಿಸಿದರು.

26ಕ್ಕಿಂತಲೂ ಹೆಚ್ಚು ದೇಶಗಳು ಮಾನವ ಹಕ್ಕುಗಳನ್ನು ಒಪ್ಪಿಕೊಂಡಿವೆ. ಪ್ರತಿ ವಚನದ ಒಂದಾದರು ಸಾಲು ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತವೆ ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ವಿ. ನಡುವಿನಮನಿ ‘ವಚನಗಳಲ್ಲಿ ಮಾನವ ಹಕ್ಕುಗಳು’ ವಿಷಯ ಕುರಿತು ಮಾತನಾಡಿ, ಇದರ ಪರಿಕಲ್ಪನೆ ಆಕಾಶದಷ್ಟು ಅಗಲ, ಸಮುದ್ರದಷ್ಟು ಆಳ. ಶರಣರು 12ನೇ ಶತಮಾನದಲ್ಲಿಯೇ ಮಾನವ ಹಕ್ಕುಗಳ ಬಗ್ಗೆ ಧ್ವನಿ ಎತ್ತಿ ಮಾನವನಿಗೆ ಗೌರವ ಇರಬೇಕೆಂದರು.

ಅಂದು ರಾಜ ಸಿಂಹಾಸನ ಇದ್ದರೂ ಪ್ರಜಾಪ್ರಭುತ್ವವಾದಿ ಬಸವಣ್ಣನವರು ಶೂನ್ಯಪೀಠ ಸ್ಥಾಪಿಸಿದರು. ವೈಚಾರಿಕ ತತ್ವ ಬಿತ್ತಿದ ಬಸವಣ್ಣನವರು ವೈಚಾರಿಕತೆಯನ್ನು ಬಾಲ್ಯದಲ್ಲಿಯೇ ಮೈಗೂಡಿಸಿಕೊಳ್ಳುತ್ತಾರೆ. ಸಮಾಜಕ್ಕೆ ಅದ್ಬುತವಾದ ಆಲೋಚನೆಗಳನ್ನು ಕೊಟ್ಟರು. ಇವನಮ್ಮವ ಎಂಬ ಭಾವ ಕೊಟ್ಟ ಬಸವಣ್ಣ ಮಹಾಮಾನವತಾವಾದಿ ಆದರು.

ಅನುಭವ ಲೌಕಿಕ, ಅನುಭಾವ ಅಧ್ಯಾತ್ಮಿಕ. ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತಿದೆ. ದಿನನಿತ್ಯದ ವ್ಯವಹಾರವೇ ಅನುಭಾವ. ಶರಣರ ಅನುಭಾವವನ್ನು ಪಡೆದುಕೊಳ್ಳಬೇಕಾದ ಅಗತ್ಯವಿದೆ ಎಂದರು.

ಡಾ. ಭೀಮರೆಡ್ಡಿ ದೇವರಡ್ಡಿ ಕಿಲಬನವರ ಅವರು ಸಮಾಜಸೇವೆಗಾಗಿ ಗೌರವ ಡಾಕ್ಟರೇಟ್ ಮತ್ತು ರಾಜ್ಯಪ್ರಶಸ್ತಿ ಪಡೆದ ನಿಮಿತ್ತ ಶ್ರೀಮಠದಿಂದ ಸನ್ಮಾನಿಸಲಾಯಿತು.

ಆರಾದ್ಯ ಕುನಾಲ್ ಅಳ್ಳೊಳ್ಳಿ ಇವರಿಂದ ಸಂಗೀತ ಸೇವೆ, ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಸೂರಜಗೌಡ ಮರಿಗೌಡ್ರ ಹಾಗೂ ವಚನ ಚಿಂತನವನ್ನು ಕೃತಿಕಾ ಮರಿಗೌಡ್ರ ನಿರ್ವಹಿಸಿದರು.

ದಾಸೋಹ ಸೇವೆಯನ್ನು ಲಿಂಗೈಕ್ಯ ನೂರಂದಪ್ಪ ಪರಪ್ಪ ಗದಗ ಇವರ ಸ್ಮರಣಾರ್ಥ ರವೀಂದ್ರ ಸಂಗನಬಸಪ್ಪ ಗದಗ, ಹಾಗೂ ಶರಣು ವಿರುಪಾಕ್ಷಪ್ಪ ಗದಗ ಮತ್ತು ವೈಭವ ಗದಗ ಇವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *