ನಿಡಸೋಶಿ:
ಅಮೂಲ್ಯವಾದ ವಚನಗಳ ಅಂತರ್ಭಾವವನ್ನು ಜನಮಾನಸಕ್ಕೆ ಮುಟ್ಟಿಸುವ ಉದ್ದೇಶವನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಂಡಿದ್ದ ದಾವಣಗೆರೆಯ ಜೀವ ಶರಣ ಸಿದ್ದಮಲ್ಲಪ್ಪ ಅಜ್ಜಂಪುರ ಶೆಟ್ರು ಫೆಬ್ರವರಿ 17, 2012 ರಂದು ಬಯಲಲ್ಲಿ ಬಯಲಾದರು.
ಅವರು ವೈದ್ಯಕೀಯ ಉಪಚಾರಕ್ಕಾಗಿ ಬೆಂಗಳೂರಿಗೆ ತೆರಳುವಾಗ ತಮ್ಮ ತಂದೆ ತಾಯಿಗಳ ಹೆಸರಿನಲ್ಲಿ ಒಂದು ಟ್ರಸ್ಟ್ ಮಾಡಲು ಮತ್ತು ತಮ್ಮ ಭಾಗಕ್ಕೆ ಇದ್ದ ಹಣವನ್ನು ಬಸವ ತತ್ವ ಪ್ರಸಾರಕ್ಕಾಗಿಯೇ ವಿನಿಯೋಗ ಮಾಡಬೇಕೆಂದು, ತಮ್ಮ ಕುಟುಂಬದ ಸಹೋದರ ಸಹೋದರಿಯರ ಸಮ್ಮುಖದಲ್ಲಿ ವಿಲ್ ಮಾಡಿದ್ದು ಇತಿಹಾಸ.
ಆ ವಿಲ್ ಬರೆವ ಕೆಲಸವನ್ನು ನನ್ನ ಮೂಲಕ ಮಾಡಿಸಿದ್ದು ನನ್ನ ಜೀವನದ ಒಂದು ಅಪೂರ್ವ ಸಂಧರ್ಭ. ಆ ಟ್ರಸ್ಟ್ ಸದಸ್ಯತ್ವದಲ್ಲಿ ನಾನು ಅವರ ಕುಟುಂಬದ ಸದಸ್ಯ ಅಲ್ಲದಿದ್ದರೂ, ನನ್ನನ್ನು ಸೇರಿಸಿ, ತತ್ವದ ಪ್ರಸಾರದ ಗುರಿಯ ಬಗ್ಗೆ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತ ಮಾಡಿದರು.
ಅದೇ ರೀತಿ ದಿನಾಂಕ ಜೂನ್ 22, 2012ರಂದು ಶರಣ ಬಸವರಾಜಪ್ಪ ಶರಣೆ ಪುಟ್ಟಮ್ಮ ನವರ ಹೆಸರಿನಲ್ಲಿ ಟ್ರಸ್ಟ್ ಪ್ರಾರಂಭವಾಯಿತು.
ಇಲ್ಲಿಯವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಗೂ ಕರ್ನಾಟಕದ ಗಡಿ ಭಾಗದ ಸೊಲ್ಲಾಪುರ ಸೇರಿದಂತೆ 19 ಶರಣತತ್ವ ಕಮ್ಮಟಗಳನ್ನು ಅತ್ಯಂತ ಶಿಸ್ತುಬದ್ಧವಾಗಿ, ತಾತ್ವಿಕವಾಗಿ ಯಶಸ್ವಿಯಾಗಿ ನಡೆಸಲಾಯಿತು.

20ನೆ ಶರಣತತ್ವ ಕಮ್ಮಟದ ಸಿದ್ಧತೆ :
20ನೆ ಶರಣ ತತ್ವ ಕಮ್ಮಟವನ್ನು ನಮ್ಮ ಊರಿನಲ್ಲಿ ನಡೆಸಬೇಕೆಂದು ಬೆಳಗಾವಿ ಸಮೀಪದ ಹೆಬ್ಬಾಳದ ಯುವಕರು ವಿನಂತಿಸಿಕೊಂಡ ಪ್ರಯುಕ್ತ, ಆ ಊರಿನಲ್ಲಿನ ವ್ಯವಸ್ಥೆ ಪರಿಶೀಲಿಸಲು ಭೇಟಿ ನೀಡಿದಾಗ ಆ ಊರಿನ ಯುವಕರಲ್ಲಿ ಕಂಡುಬಂದ ಉತ್ಸಾಹ, ಬಸವನಿಷ್ಠೆ, ಟ್ರಸ್ಟಿನ ಸದಸ್ಯರ ಮನಸೆಳೆಯಿತು.

ಆದರೆ ದಾವಣಗೆರೆಯ ಕಮ್ಮಟದ ವಿಷಯತಿಳಿದ ಕೂಡಲೇ ಸೇರಬಹುದಾದ ಬಸವಭಕ್ತರ ಸಂಖ್ಯೆ 300ರ ಗಡಿಯನ್ನು ದಾಟುತ್ತಿರುವದು ಪ್ರತಿ ಕಮ್ಮಟದ ಅನುಭವ, ಹಾಗಾಗಿ ಹೊರಗಿಂದ ಬಂದವರಿಗೆ ವಸತಿ ವ್ಯವಸ್ಧೆ ಕಲ್ಪಿಸುವ ಯೋಚನೆ ಬಂದಾಗ ಆತಂಕ ಶುರುವಾಯಿತು. ಆ ಊರಿನ ಯುವಕರು ಅಲ್ಲಿಯೇ ಸಮೀಪದ ನೀಡಸೋಶಿಯ ಪೂಜ್ಯರ ಬಳಿಗೆ ಸದಸ್ಯರನ್ನು ಕರೆದೊಯ್ದು ತಮ್ಮ ಅಪೇಕ್ಷೆಯನ್ನು ಅರುಹಿದರು.
ನಿಡಸೋಶಿಯ ಪೀಠಾಧ್ಯಕ್ಷರಾದ ಪೂಜ್ಯ ಡಾ. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಯುವಕರ ಉತ್ಸಾಹ ನೋಡಿ, ನೀವೆಲ್ಲರೂ ಪಕ್ಕದ ಗ್ರಾಮದವರು, ನಮ್ಮ ಮಠದಲ್ಲಿಯೇ ಕಾರ್ಯಕ್ರಮ ಮಾಡಿ ಅಲ್ಲಿಗೆ ನೀವೆಲ್ಲ ಬನ್ನಿ, ನಾವು ಸಂಪೂರ್ಣ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು. ಆ ಪ್ರಯುಕ್ತ ದಿನಾಂಕ ಡಿಸೆಂಬರ್ 11ರಿಂದ 14 ರವರೆಗೆ ಮಠದ ಎಸ್.ಜೆ. ಪಿ.ಎನ್. ಟ್ರಸ್ಟಿನ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮ ನಡೆಸುವ ಯೋಜನೆಗೆ ತಯಾರಿ ಪ್ರಾರಂಭವಾಯಿತು.

ಮಠದ ಜಗದ್ಗುರುಗಳು ಅತ್ಯಂತ ಕಾಳಜಿ ಪೂರ್ವಕವಾಗಿ ಕಾಲೇಜಿನ ಪ್ರಾಂಶುಪಾಲರುಗಳನ್ನ, ಉಪನ್ಯಾಸಕರನ್ನು ಕರೆದು ಮೇಲಿಂದ ಮೇಲೆ ಸಭೆಗಳನ್ನು ಮಾಡಿ, ಅವರವರಿಗೆ ವಸತಿ, ಪ್ರಸಾದ, ವೇದಿಕೆ, ನೀರು, ವಾಹನ ಸೌಕರ್ಯ, ನೋಂದಣಿಗಳ ಜವಾಬ್ದಾರಿಯನ್ನು ನಿಗದಿಪಡಿಸಿ ಕೆಲಸವನ್ನು ಹಂಚಿದ ಪ್ರಯುಕ್ತ ಎಲ್ಲ ವ್ಯವಸ್ಥೆಗಳು ಸುಲಲಿತವಾಗಿ ನಡೆದು ಹೋದದ್ದು ಎಲ್ಲರಿಗೂ ಖುಷಿ ತಂದಿತು. ಕಾಲೇಜಿನ ಎಲ್ಲರೂ ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಮುತುವರ್ಜಿಯಿಂದ ಸೇವೆ ಸಲ್ಲಿಸಿದ್ದು ಈ ಕಮ್ಮಟದ ಒಂದು ವಿಶೇಷತೆ.
ಅಷ್ಟೂ ಜನ 400 ಕ್ಕೂ ಹೆಚ್ಚು ವಸತಿ ಶಿಬಿರಾರ್ಥಿಗಳಿಗೆ ಕುಡಿಯಲು ಸದಾ ಬಿಸಿನೀರು, ಆರೋಗ್ಯ ತಪಾಸಣೆ, 24 ತಾಸು ವಸತಿ ನಿಲಯದ ಮೇಲ್ವಿಚಾರಣೆಯ ಸಿಬ್ಬಂದಿ, ಊರಿಗೆ ಮರಳಲು ವಾಹನ ವ್ಯವಸ್ಥೆ ಈ ಕಮ್ಮಟದ ವ್ಯವಸ್ಥೆಯ ಹಿರಿಮೆ ಎನಿಸಿತು. ಹೊರಗಿನಿಂದ ಪ್ರತಿದಿನ ಹಳ್ಳಿಗಳಿಂದ ಬಂದು ಹೋಗುವ ಶಿಬಿರಾರ್ಥಿಗಳ ನೊಂದಣಿ 1200ನ್ನು ಮೀರಿತ್ತು.

ಕಾರ್ಯಕ್ರಮಗಳ ವಿವರ:
ಡಿಸೆಂಬರ್ 11, 2025 ರಂದು ಸಾಯಂಕಾಲ 6.30ಕ್ಕೆ ಷಟ್ಸ್ಥಲ ಧ್ವಜಾರೋಹಣದ ಮೂಲಕ ಪೂಜ್ಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕಮ್ಮಟಕ್ಕೆ ಚಾಲನೆ ನೀಡಿದರು. ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮ ಸ್ವಾಮೀಜಿ ಧರ್ಮಗುರು ಬಸವಣ್ಣನವರ ಭಾವಚಿತ್ರ ಮತ್ತು ವಚನ ಗ್ರಂಥಗಳಿಗೆ ಪುಷ್ಪಾರ್ಚನೆ ಮಾಡಿದರು. ಪೂಜ್ಯ ನಿಜಲಿಂಗೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಅಧ್ಯಕ್ಷತೆ ಬಸವ ಬಳಗದ ಹುಚ್ಚಪ್ಪ ಮಾಸ್ತರ್ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಸಚಿವರಾದ ಎ. ಬಿ. ಪಾಟೀಲ, ರಮೇಶ್ ಕತ್ತಿ ಅವರು ಮತ್ತು ಹೊಸಪೇಟೆಯ ಬಸವಕಿರಣ ಅವರು ವಹಿಸಿದ್ದರು.

ಮಂಜು ಮಡಿವಾಳರ ವಚನಗಳಲ್ಲಿ ಆರೋಗ್ಯ ಮತ್ತು ಆಹಾರದ ಪರಿಕಲ್ಪನೆ ಬಗ್ಗೆ ವಿಷಯ ಮಂಡನೆ ಮಾಡಿದರು. ಮುಖ್ಯ ಅತಿಥಿಗಳೆಲ್ಲರೂ ಆರೋಗ್ಯದ ಕಾಳಜಿ ವಚನಗಳಲ್ಲಿ ಹೇಗೆ ಇದೆ ಎಂದು ತಿಳಿಸಿ, ಇಂದು ಯುವ ಪೀಳಿಗೆ ಸರಿಯಾದ ಆಹಾರವನ್ನು ಸೇವಿಸದ ಕಾರಣ ಕಿರಿವಯಸ್ಸಿನಲ್ಲಿಯೇ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಮಾಡಿದರು.
ಎಸ್.ಸಿ. ಕಮತೆ ಪ್ರಾಂಶುಪಾಲರು ಎಸ್ಜೆಪಿನ್ ಟ್ರಸ್ಟ್ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಪ್ರೊ. ಡಿ.ಆರ್. ಉಮರಾಣಿ ಪ್ರಾಂಶುಪಾಲರು, ಎಸ್ಜೆಪಿನ್ ಟ್ರಸ್ಟ್ ಪಾಲಿಟೆಕ್ನಿಕ್ ನಿಡಸೋಶಿ ಅವರು ಉಪಸ್ಥಿತರಿದ್ದರು.
12 ರಂದು ಬೆಳಿಗ್ಗೆ 6.15 ರಿಂದ 7.15 ರವರೆಗೆ ಶಿವಯೋಗ ಪ್ರಾತ್ಯಕ್ಷಿಕೆಯನ್ನು ಪೂಜ್ಯ ಗುರುಮಹಾಂತ ಸ್ವಾಮೀಜಿ ನೆರವೇರಿಸಿ, ಇಷ್ಟಲಿಂಗ ಧರಿಸುವ ಅವಶ್ಯಕತೆ ಬಗ್ಗೆ ಸರಳ ಭಾಷೆಯಲ್ಲಿ ವಿವರಿಸಿದರು.

7.30 ರಿಂದ 9 ಗಂಟೆಯವರೆಗೆ ಸಂಕೇಶ್ವರ ಪಟ್ಟಣದಲ್ಲಿ ಪಥಸಂಚಲನ ನಡೆಸಲಾಯಿತು. ನೂರಾರು ಜನ ಬಸವಮೂರ್ತಿಯೊಂದಿಗೆ, ಸ್ವಾಮೀಜಿಗಳ ನೇತ್ರತ್ವದಲ್ಲಿ ಸಾಗುವಾಗ ಅಲ್ಲಿನ ಜನರು ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ, ಆರತಿ ಬೆಳಗಿ, ಪುಷ್ಪಗಳನ್ನು ಭಕ್ತಿಯಿಂದ ಸಮರ್ಪಿಸಿದ್ದು, ಬಸವಣ್ಣನವರು ಹೇಗೆ ಜನರ ಹೃದಯದಲ್ಲಿ ಆಳವಾಗಿ ನೆಲೆಸಿದ್ದಾರೆ ಎನ್ನುವದು ಕಂಡು ಬರುತ್ತಿತ್ತು.
ಅಂದು ಸರಿಯಾಗಿ 10 ಗಂಟೆಗೆ ಮೊದಲನೇ ಗೋಷ್ಠಿ, ಗುರುತತ್ವದ ಬಗ್ಗೆ ಪೂಜ್ಯ ಮರುಳಸಿದ್ಧ ಸ್ವಾಮಿಗಳು ಬಸವಪೀಠ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಅವರು ವಿಷಯ ಪ್ರವೇಶ ಮಾಡಿದರು. ಗುರು ಎನ್ನುವದು ಸೃಷ್ಟಿಯ ರಚನೆಯ ಮೊದಲ ಹೆಜ್ಜೆ, ಅದು ಸಾಕಾರವು ಹೌದು ನಿರಾಕಾರವೋ ಹೌದು, ಎನ್ನುವದನ್ನು ವಚನಗಳ ಮೂಲಕ ವಿಶ್ಲೇಷಣೆ ಮಾಡಿದರು.
11.30 ಗಂಟೆಗೆ ‘ಲಿಂಗತತ್ವ’ದ ಬಗ್ಗೆ ಬೆಳಗಾವಿಯ ಕೆ.ಎಲ್.ಇ. ವೈದ್ಯಕೀಯ ಮಹಾವಿದ್ಯಾಲಯದ ಡಾ. ಅವಿನಾಶ ಕವಿ ಅವರು ಪಿ. ಪಿ. ಟಿ. ಮೂಲಕ ವಚನಾಧಾರಿತವಾಗಿ ತತ್ವದ ವಿಶ್ಲೇಷಣೆ ಮಾಡಿದರು. ಸ್ಥಾವರ ಲಿಂಗ ಇಷ್ಟಲಿಂಗಕ್ಕಿಂತ ಹೇಗೆ ಭಿನ್ನ ಎನ್ನುವದನ್ನು ತಿಳಿಸಿದರು.
12.30 ಕ್ಕೆ ‘ಜಂಗಮ ತತ್ವ’ದ ಬಗ್ಗೆ ಹುಬ್ಬಳ್ಳಿಯ ಶಶಿಧರ ಕರವೀರಶೆಟ್ಟರ ವಿಷಯ ಪ್ರವೇಶ ಮಾಡಿ, ಜಂಗಮ ಎಂದರೆ ಸೃಷ್ಟಿಯ ಚಟುವಟಿಕೆಯಲ್ಲಿನ ವಿರಾಟ ಶಿವಶಕ್ತಿ. ಅದರಿಂದಲೇ ಎಲ್ಲ ಜೀವಿಗಳ ಅಸ್ತಿತ್ವ ನೆಲೆ ನಿಂತಿದೆ ಎಂದು ತಿಳಿಸಿದರು.

ನಂತರ ಸಭಿಕರಿಂದ ಮೂರು ವಿಷಯಗಳ ಬಗ್ಗೆ ಸಂವಾದ ನಡೆಯಿತು. ಬಹಳಷ್ಟು ಪ್ರಶ್ನೆಗಳನ್ನು ಶಿಬಿರಾರ್ಥಿಗಳು ಕೇಳಿ ಉತ್ತರ ಪಡೆದರು.
ಮಧ್ಯಾನ್ಹ 3 ಗಂಟೆಯಿಂದ 4ಗಂಟೆಯವರೆಗೆ ‘ಮಂತ್ರತತ್ವ’ ಬಗ್ಗೆ ಬೆಳಗಾವಿಯ ಪೂಜ್ಯ ವಾಗ್ದೇವಿ ತಾಯಿಯವರು ವಿಷಯ ಮಂಡನೆ ಮಾಡಿದರು.
ಮಧ್ಯಾನ್ಹ 4.15 ರಿಂದ ‘ವಿಭೂತಿ – ರುದ್ರಾಕ್ಷಿ’ ತತ್ವಗಳ ಬಗ್ಗೆ ಹುಬ್ಬಳ್ಳಿಯ ಶಶಿಧರ ಕರವೀರಶೆಟ್ಟರ ವಿಷಯ ಪ್ರವೇಶ ಮಾಡಿದರು. ವಿಭೂತಿ ಎಂದರೆ ಶಿವಚೇತನ ಬೆಳಗು ಎಂದು ವಿವರಿಸಿ, ಅದನ್ನು ಎಚ್ಚರದಿಂದ ಉಳಿಸಿಕೊಳ್ಳುವದೇ ರುದ್ರಾಕ್ಷಿ ಎನ್ನುವ ವಿವರಣೆ ನೀಡಿದರು. ಮತ್ತೆ ಶಿಬಿರಾರ್ಥಿಗಳಿಂದ ಬಂದ ಪ್ರಶ್ನೆಗಳಿಗೆ ಸರಿಯಾಗಿ ಮನಮುಟ್ಟುವಂತೆ ಉತ್ತರವನ್ನು ಒದಗಿಸಿದರು.
ಸಾಯಂಕಾಲ 6.30 ಕ್ಕೆ ಸಾರ್ವಜನಿಕ ಕಾರ್ಯಕ್ರಮ ಪ್ರಾರಂಭವಾಯಿತು. ಬಸವ ಕಲಾಲೋಕದ ಕಲಾವಿದರಿಂದ ಸುಮಧುರ ವಚನಸಂಗೀತ ಮೂಡಿಬಂದಿತು.

ಕಾರ್ಯಕ್ರಮದಲ್ಲಿ ಡಾ. ಶರತಚಂದ್ರ ಸ್ವಾಮೀಜಿ ಕುಂದೂರುಮಠ, ಮೈಸೂರು ಅವರು ಶೈವದ ಭಾಗಗಳಾದ ವೀರಶೈವ, ಕಾಪಾಲಿಕ, ಶುದ್ಧ ಶೈವಗಳು ಹೇಗೆ ಲಿಂಗಾಯತದಲ್ಲಿ ಲೀನವಾಗಿ ಹೋದವು ಎನ್ನುವದನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು.
ನಂತರ ಪೂಜ್ಯ ಸಿದ್ಧಬಸವದೇವರು ಹುಣಸಿಕೊಳ್ಳಮಠ, ಯಮಕನಮರಡಿ ಅವರ ಉತ್ಸಾಹದ ಕಳಕಳಿಯ ನುಡಿಗಳು ಸಭಿಕರ ಮೆಚ್ಚುಗೆಗೆ ಪಾತ್ರವಾದವು. ಪೂಜ್ಯ ವಾಗ್ದೇವಿ ತಾಯಿಯವರು ಸಂಕ್ಷಿಪ್ತವಾಗಿ ಮಾತನಾಡಿ ಸಮಯ ಪ್ರಜ್ಞೆ ಮೆರೆದರು. ಶರಣ ಬಿ.ಎಂ. ಹಾಲಭಾವಿ ಪ್ರಾಂಶುಪಾಲರು ಬಿ.ಸಿ.ಎ. ಕಾಲೇಜು ನಿಡಸೋಶಿ ಉಪಸ್ಥಿತರಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸುಸಂಪನ್ನ ಗೊಂಡಿತು.
13ರಂದು ಬೆಳಿಗ್ಗೆ ಪೂಜ್ಯ ಡಾ. ಪಂಚಮಲಿಂಗೇಶ್ವರ ಸ್ವಾಮೀಜಿ ಅವರ ನೇತ್ರತ್ವದಲ್ಲಿ ಸಮೀಪದ ನೇರಳೆ ಗ್ರಾಮದಲ್ಲಿ ಬಸವ ಕಲಾಲೋಕದ ಸಂಗೀತ, ಭಜನೆ, ವಚನ ಘೋಷಣೆಗಳ ಮೂಲಕ ಪಥಸಂಚಲನ ಭಾವ ಪೂರ್ಣವಾಗಿ ನಡೆಯಿತು. ಆ ಊರಿನ ಜನಸ್ತೋಮ ಭಕ್ತಿಯಿಂದ ಪಥ ಸಂಚಲನಕ್ಕೆ ಸ್ವಾಗತ ಕೋರಿತು. ಜನ ಭಕ್ತಿಯಿಂದ ಬಸವಮೂರ್ತಿಗೆ ಆರತಿ ಬೆಳಗಿ, ಪುಷ್ಪ ಸಮರ್ಪಣೆ ಮಾಡಿ ಗೌರವ ಸೂಚಿಸಿದರು.
10 ಗಂಟೆಗೆ ಸರಿಯಾಗಿ ‘ಪಾದೋದಕ – ಪ್ರಸಾದ’ ತತ್ವಗಳ ವಿಷಯ ಪ್ರವೇಶವನ್ನು ಸಿಂಧನೂರಿನ ಪಿ. ರುದ್ರಪ್ಪ ಮಾಡಿದರು. ಪಾದೋದಕ ಪ್ರಸಾದ ಎಂಬೆರಡು ಪರವಸ್ತುವಿನ ಸ್ವರೂಪಗಳು. ಕೇವಲ ಹೊರಗನೇ ತೊಳೆದು ಕುಡಿಯುವದು ಪಾದೋದಕ ಆಗಲಾರದು. ಪಾದೋದಕದ ಸಮರ್ಪಣೆ ಇಲ್ಲದಿದ್ದರೆ ಪ್ರಸಾದವೇ ಇಲ್ಲ. ಕೇವಲ ಅನ್ನ ಪ್ರಸಾದವೇ ಪ್ರಸಾದವಲ್ಲ, ಅದು ಅಂತರಂಗದಲ್ಲಿ ಉದಯಿಸಿದ ಪ್ರಸನ್ನತಾಭಾವ ಎನ್ನುವ ವಿಶ್ಲೇಷನಣೆಯನ್ನು ವಚನಧಾರಿತವಾಗಿ ಮಂಡಿಸಿದರು.

11.30 ಕ್ಕೆ ‘ಪಂಚಾಚಾರಗಳ’ ಬಗ್ಗೆ ಪ್ರೊ. ಸಿದ್ದಣ್ಣ ಲಂಗೋಟಿ ಅವರು ವಿಷಯ ಮಂಡಿಸಿ, ಆಚಾರಗಳು ಈ ಧರ್ಮದ ತಳಹದಿ ಎಂದು ಅರುಹಿದರು.
ಮಧ್ಯಾನ್ಹ 12.30ರಿಂದ ಷಟ್ಸ್ಥಲಗಳ ಮಾರ್ಗಕ್ರಿಯೆಯ ಭಕ್ತ, ಮಹೇಶ, ಪ್ರಸಾದಿ ತತ್ವಗಳ ಬಗ್ಗೆ ಬೆಂಗಳೂರಿನ ಭಾರತಿ ಕೆಂಪಯ್ಯ ಅವರು ನೂರೊಂದು ಸ್ಥಳಗಳ ಚೌಕಟ್ಟಿನಲ್ಲಿ ಭಕ್ತನ ಮೂರು ನಿರಾಕಾರ ನೆಲೆಗಳ ಬಗ್ಗೆ ವಿವರಣೆ ನೀಡಿದರು.
3 ಗಂಟೆಯಿಂದ 3.45ರವರೆಗೆ ಷಟ್ ಸ್ಥಲದ ಮೀರಿದ ಕ್ರಿಯೆಯ ಪ್ರಾಣಲಿಂಗಿ ಶರಣ ಐಕ್ಯದ ನೆಲಗಳು ಸಾಧಕನಲ್ಲಿ ಹೇಗೆ ವಿಸ್ತರಿಸಿಕೊಂಡು ಶಿವನೊಡನೆ ಸಹಭೋಜನ ಮಾಡುವ ಹಂತವನ್ನು ತಲುಪುತ್ತವೆ ಎಂದು ಅಮೂಲಾಗ್ರವಾಗಿ ಮಂಡನೆ ಮಾಡಿದರು.

ಸುಮಾರು 4 ಗಂಟೆಯಿಂದ 5.30 ರವರೆಗೆ ಶಿಬಿರಾರ್ಥಿಗಳು ಮತ್ತು ಪಕ್ಕದ ಊರಿನ ಜನರಿಂದ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಸಂವಾದ ಬಹಳ ಅರ್ಥಪೂರ್ಣವಾಗಿ ಮೂಡಿ ಬಂದಿತು. ಮುಂದಿನ ಕಮ್ಮಟಗಳಲ್ಲಿ ಪ್ರತಿದಿನ ಇಂತಹ ಸಾಮಾನ್ಯ ಸಂವಾದಕ್ಕೆ ಸಮಯ ನಿಗದಿ ಮಾಡಿ ಎನ್ನುವ ಕೋರಿಕೆ ಜನರಿಂದ ಕೇಳಿ ಬಂದಿತು.
ಸಾಯಂಕಾಲ 6 ಗಂಟೆಗೆ ಸರಿಯಾಗಿ ಬಸವ ಕಲಾಲೋಕದ ಕಲಾವಿದರು ಮತ್ತು ಸಿಬಿಎಸ್ಇ ಶಾಲೆಯ ಮಕ್ಕಳಿಂದ ಪ್ರಾರ್ಥನೆ ಮೂಲಕ ಪ್ರಾರಂಭವಾದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪೂಜ್ಯ ಡಾ. ಶಿವಲಿಂಗೇಶ್ವರ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಶರಣ ರುದ್ರೇಶ್ ಕಿತ್ತೂರ ಮುದ್ದೇಬಿಹಾಳ ಅವರು ‘ವಚನಕಾರರ ವೈಜ್ಞಾನಿಕ ಚಿಂತನೆಗಳು’ ಎಂಬ ವಿಷಯ ಕುರಿತು ಕ್ವಾಂಟಮ್ ನ entanglement ಪ್ರಕ್ರಿಯೆ ಬಗ್ಗೆ ಶರಣರ ವಚನಗಳಲ್ಲಿ ಕಂಡು ಬಂದ ಉಲ್ಲೇಖಗಳನ್ನು ನೀಡಿ ಶರಣಧರ್ಮ ವಿಜ್ಞಾನದ ಅಂಶಗಳನ್ನು ಅಂದೇ ಪ್ರಸ್ತಾಪ ಮಾಡಿತ್ತು ಎನ್ನುವ ವಿಷಯವನ್ನು ತಿಳಿಸಿದರು.
ನಂತರ ಮತ್ತೊಬ್ಬ ಅನುಭಾವಿ ಕಲಬುರ್ಗಿಯ ಮಹಾಂತೇಶ ಕುಂಬಾರ ಅವರು ‘ಮಾನವೀಯ ಮೌಲ್ಯಗಳ ರಕ್ಷಣೆಯೇ ಬದುಕಿನ ಸಾರ್ಥಕತೆ’ ಎನ್ನುವ ವಿಷಯ ಕುರಿತು ಮಾತನಾಡಿ, ಶರಣತತ್ವದಲ್ಲಿ ಬದುಕಿನ ಮೌಲ್ಯಗಳ ಸಂಪತ್ತೆ ಇದೆ ಎಂದು ಅರುಹಿ ಅವುಗಳ ಪ್ರಾಮುಖ್ಯತೆಯನ್ನು ಅರ್ಥಪೂರ್ಣವಾಗಿ ವಿವರಿಸಿದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿಯೊಡನೆ ಆಗಮಿಸಿ ಕೆಲವು ವಿಷಯಗಳನ್ನು ಹಂಚಿಕೊಂಡರು. ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ರೊಟ್ಟಿಯವರು ಸಂಕ್ಷಿಪ್ತವಾಗಿ ಮಾತನಾಡಿ, ಶರಣತತ್ವಗಳ ಪ್ರಸಾರದ ಅವಶ್ಯಕತೆಯನ್ನು ತಿಳಿಸಿದರು.
ಸಮ್ಮುಖ ವಹಿಸಿದ ಪೂಜ್ಯ ಸಂಪಾದನಾ ಮಠದ ಮಹಾಸ್ವಾಮಿಗಳು ಚಿಕ್ಕೋಡಿಯವರು ತಮ್ಮ ಮಠದ ಹೆಸರಿನಲ್ಲಿಯೇ ಶೂನ್ಯ ಸಂಪಾದನೆಯ ನಾಮಾಂಕಿತ ಇದೆ ಎಂದು ತಿಳಿಸಿದರು.
ನೇತೃತ್ವವನ್ನು ಪೂಜ್ಯ ಗುರು ಯಸಿದ್ದೇಶ್ವರ ಮಹಾಸ್ವಾಮಿಗಳು ರೇವಣಸಿದ್ದೇಶ್ವರ ವಿರಕ್ತಮಠ ಬೆಂಡವಾಡ ಅವರು ವಹಿಸಿದ್ದರು. ಶರಣ ಡಾ. ಎಸ್. ಜೆ. ವಾಳಕೆ ಪ್ರಾಂಶುಪಾಲರು ಪಿ ಯು. ಕಾಲೇಜು ನಿಡಸೋಶಿ ಮತ್ತು ಯು.ಬಿ. ನಾಯಕ, ಪ್ರಾಂಶುಪಾಲರು, ಸಿ.ಬಿ.ಎಸ್. ಇ. ಶಾಲೆ ನಿಡಸೋಶಿ ಅವರು ಗೌರವ ಉಪಸ್ಥಿತರಿದ್ದರು.
ನಂತರ ಸಿ.ಬಿ. ಎಸ್.ಇ. ಶಾಲೆ ನಿಡಸೋಶಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸುಸಂಪನ್ನ ಗೊಂಡಿತು.
14 ರಂದು ಬೆಳಿಗ್ಗೆ 6.15 ರಿಂದ 7.15 ರವರೆಗೆ ಪೂಜ್ಯ ಗುರುಮಹಾಂತ ಸ್ವಾಮೀಜಿ ಇಲಕಲ್ಲ ಅವರು ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಆಸಕ್ತರಿಗೆ ಹೊಸದಾಗಿ ಲಿಂಗ ದೀಕ್ಷೆಯನ್ನು ನೀಡಿದರು.
7.30 ರಿಂದ ನಿಡಸೋಶಿ ಗ್ರಾಮದಲ್ಲಿ ಪಥಸಂಚಲನ ಭಕ್ತಿ ಭಾವಗಳಿಂದ ನಡೆಯಿತು. ಶಿಬಿರಾರ್ಥಿಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದ್ದು ವಿಶೇಷ ಆಕರ್ಷಣೆ ಎನಿಸಿತು.

10 ಗಂಟೆಗೆ ಕಮ್ಮಟದ ಸಮಾರೋಪ ಸಮಾರಂಭ ಪ್ರಾರಂಭವಾಯಿತು. ಶಿಬಿರಾರ್ಥಿಗಳು ತಮ್ಮ ಮೂರು ದಿನಗಳ ಅನುಭವಗಳನ್ನು ಹಂಚಿಕೊಂಡರು. ಸುವ್ಯವಸ್ಥಿತವಾಗಿ ಕಮ್ಮಟ ನಡೆಸಿಕೊಟ್ಟ ಪೂಜ್ಯರಿಗೆ, ಕಾಲೇಜಿನ ಸಿಬ್ಬಂದಿಗೆ ಶಿಬಿರಾರ್ಥಿಗಳು ಕೃತಜ್ಞತೆ ಅರ್ಪಿಸಿದರು.
ಅಧ್ನಕ್ಷತೆಯನ್ನು ಶರಣ ಶಂಭುಲಿಂಗಪ್ಪ ಅಜ್ಜಂಪುರಶೆಟ್ರು, ದಾವಣಗೆರೆ ಅವರು ವಹಿಸಿಕೊಂಡಿದ್ದರು. ಪೂಜ್ಯ ಶಿವಬಸವ ಸ್ವಾಮಿಗಳು ಹುಕ್ಕೇರಿಮಠ ಸಮ್ಮುಖದ ನುಡಿಗಳನ್ನಾಡಿದರು. ಪೂಜ್ಯ ಶಿವಾನಂದ ಸ್ವಾಮೀಜಿ ಶ್ರೀ ಸಿದ್ದೇಶ್ವರಮಠ, ಹಂದಿಗುಂದ ಅವರು ಮಾತನಾಡಿ, ಮಾತನಾಡಿದ್ದು ಸಾಕಾಗಿದೆ, ಮಠಗಳು ಇನ್ನು ಮೇಲೆ ಇಂತಹ ಕಮ್ಮಟಗಳನ್ನು ಏರ್ಪಡಿಸಬೇಕು, ಅದು ಮಾತ್ರ ತತ್ವವನ್ನು ಗಟ್ಟಿಗೊಳಿಸಬಲ್ಲದು ಎಂದು ತಿಳಿಸಿದರು.
ಪೂಜ್ಯ ಡಾ. ಶಿವಲೀಂಗೆಶ್ವರ ಮಹಾಸ್ವಾಮಿಗಳು, ದುರದುಂಡಿಶ್ವರ ಮಠ, ನಿಡಸೋಶಿ ಅವರು ಮಾತನಾಡಿ, ಕಮ್ಮಟದ ಯಶಸ್ಸಿಗೆ ಕಾರಣರಾದ ಸಿಬ್ಬಂದಿ ವರ್ಗದವರನ್ನು ಸ್ಮರಿಸಿ, ಅಜ್ಜಂಪುರಶೆಟ್ರು ಕುಟುಂಬದ ಹಿರಿಮೆಯನ್ನು ಕೊಂಡಾಡಿದರು.
11ರಿಂದ 14 ರವರೆಗೆ ನಾಲ್ಕುದಿನ ಯಶಸ್ವಿಯಾಗಿ ನಡೆದ ಕಮ್ಮಟದ ಅಂತಿಮ ನಿರ್ಣಯಗಳನ್ನು ಪಿ. ರುದ್ರಪ್ಪ ಓದಿದರು. ಅದಕ್ಕೆ ಶಿಬಿರಾರ್ಥಿಗಳು ಚಪ್ಪಾಳೆ ತಟ್ಟಿ ಒಪ್ಪಿಗೆ ಸೂಚಿಸಿದರು. ವಚನ ಮಂಗಲದೊಂದಿಗೆ ಕಮ್ಮಟ ಸಂಪನ್ನಗೊಂಡಿತು.

ಬಸವ ತತ್ಪ ಆಚಾರ ವಿಚಾರದಲ್ಲಿ ದಾವಣಗೆರೆ ಅಜ್ಜಂಪುರ ಶೇಟ್ರು ಇಭಾಗದಲ್ಲಿ ತುಂಬಾ ಹೆಸರುವಾಸಿಯಾದ ಸರಳ ಸಜ್ಜನಿಕೆಯ ಮನೆತನ
ಅವರ ಅರಿದೊಡೆ ಶರಣ ಮರೆತೊಡೆ ಮಾನವ ಎಂಬ ಪ್ರಾಯೋಜಿತ ಕಿರು ಪುಸ್ತಕ ಅಷ್ಟಾವರಣ ಪಂಚಾಚರ
ಅಷ್ಟು ತನು ಅಷ್ಟಮದ ಷಟ್ಸ್ಥಲ ತುಂಬಾ ಪರಿಣಾಮಕಾರಿಯಾಗಿದೆ 🙏🙏