೦೮,೦೯, ೧೦ ಪಟ್ಟಣದಲ್ಲಿ ತೋಂಟದಾರ್ಯ ಮಠದ ಜಾತ್ರೆ
ಶಿರೋಳ
೧೨ನೇ ಶತಮಾನದ ಶರಣರ ಕಾಯಕ ಹಾಗೂ ದಾಸೋಹ ಸಿದ್ಧಾಂತವನ್ನು ಚಾಚೂತಪ್ಪದೆ ನಡೆಸಿಕೊಂಡು ಬರುತ್ತಿರುವ ಉತ್ತರ ಕರ್ನಾಟಕ ಅಪರೂಪದ ರೊಟ್ಟಿ ಊಟದ ಜಾತ್ರೆಯೆಂದೆ ಪ್ರಸಿದ್ಧಿ ಪಡೆದಿರುವ ಶಿರೋಳ ಗ್ರಾಮದಲ್ಲಿ ಜರುಗುವ ಈ ಜಾತ್ರೆ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಿದೆ.
ಜಾತಿಭೇದ ಮರೆತು ಎಲ್ಲರೂ ಕೂಡಿಕೊಂಡು ಮಾಡಿ ಕೂಡಿಟ್ಟ ಅಡುಗೆಯನ್ನು ತಾವೂ ಉಂಡು ಇತರರನ್ನು ಉಣಿಸುವ ಸತ್ ಸಂಪ್ರದಾಯವನ್ನು ಶಿರೋಳದ ಮಠದ ಜಾತ್ರೆಯ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ.
ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಬಾನ, ಕರಿಹಿಂಡಿ, ಬಿಸಿಬರ್ತ(ಬಜ್ಜಿ), ರುಚಿಯನ್ನು ನೀವು ಸವಿಯಬೆಕೆಂದರೆ, ಇಲ್ಲಿಗೆ ಬರಬೇಕು.ಈ ಉತ್ತರ ಕರ್ನಾಟಕದ ಅಪರೂಪದ ರೊಟ್ಟಿ ಊಟದ ಜಾತ್ರೆಗೆ ನಾಡಿನ ಹಲವು ಭಾಗಗಳಿಂದ ಜನರು ಧಾವಿಸುತ್ತಾರೆ.

ಪ್ರತಿ ವರ್ಷ ಹತ್ತಾರು ಸಾವಿರ ಜನರು ಬಿಳಿಜೋಳದ ಖಡಕ್ ರೊಟ್ಟಿ, ಎಳ್ಳು ಹಚ್ಚಿದ ಸಜ್ಜಿರೊಟ್ಟಿ, ಬಾನ ವಿವಿಧ ತರಕಾರಿಗಳಿಂದ ದೊಡ್ಡ ದೊಡ್ಡ ಹರವಿಗಳಲ್ಲಿ ಹಾಕಿಟ್ಟ ವಿಶಿಷ್ಟ ರುಚಿಯ ವಿವಿಧ ತರಹದ ತರಕಾರಿಗಳಾದ ಸವತೆಕಾಯಿ, ಗಜ್ಜರಿ ಹೀಗೆ ಎಲ್ಲ ಬಗೆಯ ಬಹು ಜೀವಸತ್ವಗಳಿಂದ ಕೂಡಿದ ಕಾಳುಗಳನ್ನೆಲ್ಲ ಹಾಕಿ ಕುದಿಸಿ ಒಗ್ಗರಣೆಯನ್ನು ಹಾಕಿದ ತುಂಬಾ ರುಚಿಕಟ್ಟಾದ ಕರಿಹಿಂಡಿ ರಾತ್ರಿ ಹೊತ್ತಿನ ಚಳಿಯನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ.
ಹೀಗೆ ಜನರು ಖಡಕ್ ರೊಟ್ಟಿ ಬಾನ, ಕರಿಹಿಂಡಿಯನ್ನು ಸಂತಸದಿಂದ ಉಂಡು ಸಂಭ್ರ್ರಮದಿಂದ ಜಾತ್ರೆ ಮಾಡಿ ತಮ್ಮ ತಮ್ಮ ಊರಿಗೆ ಹೋಗುತ್ತಾರೆ.
ಈ ರೊಟ್ಟಿ ಊಟದ ಜಾತ್ರೆಯು ಮೊದ ಮೊದಲು ಸಣ್ಣ ಪ್ರಮಾಣದಲ್ಲಿ ನಡೆಯುತ್ತಿತ್ತು. ಇತ್ತಿಚಿನ ವರ್ಷಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ರೊಟ್ಟಿ ಊಟಕ್ಕೆ ಸರಿ ಸುಮಾರು ೧೫ ಚೀಲ ಜೋಳದ ರೊಟ್ಟಿಗಳು ಖರ್ಚಾಗುತ್ತವೆ. ಸುಮಾರು ೫೦ ಸಾವಿರಕ್ಕೂ ಹೆಚ್ಚು ರೊಟ್ಟಿಗಳು ಬೇಕಾಗುತ್ತವೆ.
ಪ್ರತಿ ವರ್ಷ ಜಾತ್ರೆಯ ಎರಡನೇ ದಿನ ನಡೆಯುವ ಈ ರೊಟ್ಟಿ ಊಟದ ಜಾತ್ರೆಗೆ, ಹತ್ತು ಹದಿನೈದು ದಿನಗಳ ಮೊದಲೆ ತಯಾರಿ ಪ್ರಾರಂಭವಾಗುತ್ತದೆ. ಎಲ್ಲವೂ ಜನಸೇವೆಯಿಂದ ನಡೆಯುವಂತದ್ದು.
ದಾಸೋಹಕ್ಕೆಂದು ಕೊಡುಗೈ ದಾನಿಗಳಿಂದ ಸಂಗ್ರಹಿಸಲಾದ ಜೋಳ, ಸಜ್ಜಿಯನ್ನು ಹಿಟ್ಟು ಮಾಡಿಸಿ ಜಾತ್ರೆಗೆ ಬರಬಹುದಾದ ನಿರೀಕ್ಷಿತ ಜನರ ಪ್ರಮಾಣಕ್ಕೆ ಬೇಕಾಗುವಷ್ಟು ರೊಟ್ಟಿಗಳನ್ನು ಮಾಡಿಸಲಾಗುತ್ತದೆ. ಜಾತ್ರೆ ನಡೆಯುವ ಗ್ರಾಮವೂ ಸೇರಿದಂತೆ ಸುತ್ತಲಿನ ಏಳೆಂಟು ಗ್ರಾಮಗಳಲ್ಲಿ ಜಾತಿಭೇದ ಎಣಿಸದೇ ಮನೆ-ಮನೆಗೆ ರೊಟ್ಟಿ ಮಾಡಲು ಹಿಟ್ಟನ್ನು ಹಾಕಲಾಗುತ್ತದೆ.
ಹಿಟ್ಟು ಹಾಕಿಸಿಕೊಂಡವರೆಲ್ಲರೂ ರೊಟ್ಟಿ ಮಾಡಿ ಕೊಡುವಾಗ ತಮ್ಮಿಷ್ಟದಂತೆ ತಮ್ಮವೂ ಹತ್ತಿಪ್ಪತ್ತು ರೊಟ್ಟಿಗಳನ್ನು ಸೇರಿಸಿ ಭಕ್ತಿಯಿಂದ ಮಠಕ್ಕೆ ಮುಟ್ಟಿಸಿ ಹೋಗುತ್ತಾರೆ. ಕೆಲವರಂತೂ ತಮ್ಮ ತಮ್ಮ ಮನೆಯಿಂದ ಎಲ್ಲಾ ರೊಟ್ಟಿಗಳನ್ನು ತರುತ್ತಾರೆ. ತಮ್ಮ ತಮ್ಮ ಹಳ್ಳಿಯಿಂದ ಇಂತಿಷ್ಟು ರೊಟ್ಟಿ ತರುತ್ತೇವೆ ಎಂದು ಮಾತು ಕೊಟ್ಟಿರುತ್ತಾರೆ ಅದರಂತೆ ತರುತ್ತಾರೆ.
ಹೀಗೆ ರೊಟ್ಟಿ ಊಟದ ಜಾತ್ರೆಗಾಗಿ ಇಡೀ ಗ್ರಾಮದಲ್ಲಿ ಹಬ್ಬದ ಸಡಗರ, ಗ್ರಾಮದ ಮಹಿಳೆಯರು ರೊಟ್ಟಿ ಊಟದ ತಯಾರಿಗಾಗಿ ಶ್ರೀ ಮಠಕ್ಕೆ ಬಂದು ಕಾಯಿಪಲ್ಲೆ, ಕಾಳು-ಕಡಿಗಳನ್ನು ಆರಿಸುತ್ತಾರೆ ಈ ರೀತಿಯಾಗಿ ಭಕ್ತಿಯಿಂದ ತಮ್ಮ ಸೇವೆ ಸಲ್ಲಿಸುತ್ತಾರೆ. ಮಹಿಳೆಯೆರೊಂದಿಗೆ ಪ್ರತಿಯೊಂದು ಕೆಲಸದಲ್ಲಿ ಕೈ ಜೋಡಿಸುವ ಯುವಕರ ಪಡೆಯು ನಿರಂತರವಾಗಿ ರೊಟ್ಟಿ ಊಟಕ್ಕೆ ಬೇಕಾಗುವ ಎಲ್ಲ ತಯಾರಿಯನ್ನು ವ್ಯವಸ್ಥಿತವಾಗಿ ಶ್ರೀಮಠದಲ್ಲಿ ನಡೆಸಿರುತ್ತದೆ.

ಉದ್ದೇಶ:
ಗದುಗಿನ ಶೀ ತೋಂಟದಾರ್ಯಮಠ ಹಾಗೂ ಇದರ ಶಾಖಾ ಮಠಗಳೆಲ್ಲವೂ ಜನ ಸಂಸ್ಕೃತಿಯ ಕೇಂದ್ರಗಳಾಗುವ ನಿಟ್ಟಿನಲ್ಲಿ ಹತ್ತು ಹಲವು ಜನಪರ, ವೈಚಾರಿಕ, ವಿಧಾಯಕ ಕಾರ್ಯಕ್ರಮಗಳ ಮೂಲಕ ನಿಜ ಜಾತ್ರೆಗೆ ಮುನ್ನುಡಿ ಬರೆದಿವೆ. ಅದರಂತೆ ಶಿರೋಳದ ರೊಟ್ಟಿ ಊಟದ ಜಾತ್ರೆಯ ಮೂಲಕ ಸರ್ವಧರ್ಮಿಯರನ್ನೂ ಒಂದೇ ರೀತಿ ಕಾಣುವದು ಹಾಗೂ ಬಡವ-ಶ್ರೀಮಂತ ಎಂಬ ಬೇದ-ಭಾವ ತೋರದೆ ಎಲ್ಲರೂ ಅಣ-ತಮ್ಮ, ಅಕ್ಕ-ತಂಗಿಯರೆಂಬ ಭಾವ, ತಾಳಿ ಶ್ರೀಮಠದಲ್ಲಿ ಭಕ್ತ ಸಮೂಹ ನೀಡಿದ ಕಾಳು, ದಾನವಾಗಿ ಬಂದ ರೊಟ್ಟಿಗಳೊಂದಿಗೆ ಇಡೀ ಊರೇ ಒಟ್ಟಾಗಿ ಕಲೆತು ಊಟ ಮಾಡುವ ಈ ಅಪರೂಪದ ಸರ್ವಧರ್ಮ ಸಮನ್ವಯದ ಪ್ರತೀಕವಾದ ರೊಟ್ಟಿ ಊಟದ ಜಾತ್ರೆಯು ವರ್ಗ, ವರ್ಣ ವ್ಯವಸ್ಥೆಯಿಂದ ಬಹುದೂರ ನಿಲ್ಲುವಂತೆ ಮಾಡಿದೆ.
ಇವ ನಮ್ಮವ ಎಂಬ ಶರಣರ ಮಂತ್ರವಾಕ್ಯ ಇಲ್ಲಿ ಕಾರ್ಯಗತವಾಗಿದೆ. ಇಡೀ ರಾಜ್ಯಕ್ಕೆ ಸರ್ವಧರ್ಮ ಸಮನ್ವಯದ ಭಾವೈಕ್ಯತೆಯ ಮಂತ್ರವನ್ನು ಸಾರಿ ಅದನ್ನು ಪ್ರಾಯೋಗಿಕವಾಗಿ ಮಾಡಿ ಯಶಸ್ವಿಗೊಂಡು ಜನರ ಮನದಲ್ಲಿನ ಜಾತಿಯತೆಯ ಭಾವನೆಯನ್ನು ಕಿತ್ತು ಹಾಕಲು, ಹೊಸ ಪ್ರಯತ್ನವನ್ನು ಈ ಜಾತ್ರೆಯ ಮೂಲಕ ಮಾಡಿ ತೋರಿಸಿದೆ.
ವರ್ಷದಿಂದ ವರ್ಷಕ್ಕೆ ಮನೆಮಾತಾಗಿರುವ ಈ ರೊಟ್ಟಿ ಊಟದ ಜಾತ್ರೆ ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿದೆ. ಬದಾಮಿ ಬನಶಂಕರಿ ದೇವಿ ಜಾತ್ರೆಯಲ್ಲಿ ರೊಟ್ಟಿ, ಬಾನ ಪಲ್ಯವನ್ನು ಅಲ್ಲಿಗೆ ಹೋದವರು ಹಣ ಕೊಟ್ಟು ಸ್ವೀಕರಿಸುವದು ಸಾಮಾನ್ಯ. ಆದರೆ ಇಲ್ಲಿ ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದದ ರೂಪದಲ್ಲಿ ಉಚಿತವಾಗಿಯೇ ನೀಡಲಾಗುತ್ತದೆ.
ಹೀಗೆ ಕಾಯಕ ಹಾಗೂ ದಾಸೋಹಗಳನ್ನು ಜನಸಾಮಾನ್ಯರಲ್ಲಿ ಬೆಳೆಸಿ ಅದನ್ನೆ ಜನಸಂಸ್ಕೃತಿಯನ್ನಾಗಿ ಅನೇಕ ಕಾರ್ಯಕ್ರಮಗಳ ಮೂಲಕ ಬಿಂಬಿಸಿ ಜಾಗ್ರತಗೊಳಿಸುತ್ತಿದ್ದಾರೆ. ದಾಸೋಹಕ್ಕೆ ಇನ್ನೊಂದು ಹೆಸರೇ ಮಠ ಮಾನ್ಯಗಳು ಅನ್ನುವಷ್ಠರ ಮಟ್ಟಿಗೆ ಮಠಗಳಲ್ಲಿ ದಾಸೋಹವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಹೀಗೆ ರಾಜ್ಯದಲ್ಲಿ ವಿಭಿನ್ನವಾಗಿ ಕಾಣುವ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು. ಹಿಂದಿನ ಪೀಠಾದಿಪತಿಗಳಾದ, ಶಿಕ್ಷಣ ಸಿರಿ ರಾಜ್ಯಪ್ರಶಸ್ತಿ ಪುರಸ್ಕೃತರಾದ ಲಿಂಗೈಕ್ಯ ಪೂಜ್ಯ ಗುರುಬಸವ ಮಹಾಸ್ವಾಮಿಗಳು ಮಠವನ್ನು ನಿಂತು ನೋಡುವಂತೆ ಮಾಡಿದ್ದಾರೆ.

ಅದಕ್ಕೆ ಸಾಕ್ಷಿ ಎಂಬಂತೆ ಶ್ರೀ ಮಾದಾರ ಚನ್ನಯ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ, ಶ್ರೀ ಗುರುಬಸವ ಪ್ರೌಢಶಾಲೆ, ಶ್ರೀ ಜಗದ್ಗುರು ತೊಂಟದಾರ್ಯ ಆಂಗ್ಲ ಮಾದ್ಯಮ ಶಾಲೆ, ಶ್ರೀ ಹಂಪಸಾಗರ ಪರ್ವತ ಮರಿದೇವರ ಸ್ಮಾರಕ ಯೋಗ–ವ್ಯಾಯಾಮ ಶಾಲೆ, ದಾಸೋಹ ಕೇಂದ್ರ ಹೀಗೆ ಅನೇಕ ಕಾರ್ಯಗಳ ಜೊತೆಯಲ್ಲಿ ಹೊಸ ಹೊಸ ಕಾರ್ಯಕ್ರಮಗಳಾದ ಕೃಷಿ, ಸಾಹಿತ್ಯ, ಪವಾಡ ಬಯಲು, ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಚಿಕಿತ್ಸೆ ಹೀಗೆ ಪ್ರತಿಯೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಿರಂತರವಾಗಿ ಶ್ರೀ ಮಠದ ಗುರುಬಸವ ಜನಕಲ್ಯಾಣ ಸಂಸ್ಥೆ(ರಿ)ಆಶ್ರಯದಲ್ಲಿ ನಡೆದುಕೊಂಡು ಬಂದಿವೆ.
ಪ್ರತಿವರ್ಷ ಜಾತ್ರೆಯ ಅಂಗವಾಗಿ, ಕಲ್ಲು ಸಿಡಿಹೊಡೆಯುವುದು ಹೀಗೆ ಹತ್ತು ಹಲವು, ವೈಚಾರಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಶಿರೋಳದ ಶ್ರೀಮಠದ ಪೀಠಾದಿಪತಿಗಳಾದ ಲಿಂಗೈಕ್ಯ ಪೂಜ್ಯ ಗುರುಬಸವ ಮಹಾಸ್ವಾಮಿಗಳು-ವ್ಯವಸ್ಥಿವಾಗಿ ನಡೆಸಿಕೊಂಡು ಬಂದಿದ್ದಾರೆ. ಇವರಿಗೆ ಬೆಂಬಲವಾಗಿ ಗದುಗಿನ ಡಾ|| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಮಾರ್ಗದರ್ಶನವು ಶ್ರೀಮಠದ ಮೂಲ ಶಕ್ತಿಯಾಗಿದೆ.

ಇಬ್ಬರೂ ಪೂಜ್ಯರು ಲಿಂಗೈಕ್ಯರಾದ ನಂತರ ಶ್ರೀಮಠದ ಹಾಗೂ ಸಮಾಜ ಉಪಯೋಗಿ ಕೆಲಸಗಳನ್ನು ಗದುಗಿನ ಇಂದಿನ ಪೂಜ್ಯ ಜಗದ್ಗುರು ಡಾ. ತೊಂಟದ ಸಿದ್ಧರಾಮ ಮಹಾಸ್ವಾಮಿಗಳು ಮುಂದುವರೆಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಶಿರೋಳ ತೋಂಟದಾರ್ಯ ಮಠಕ್ಕೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯಶ್ರೀ ಶಾಂತಲಿಂಗ ಮಹಾಸ್ವಾಮಿಗಳನ್ನು ಪೀಠಾಧಿಪತಿಯನ್ನಾಗಿ ನೇಮಿಸಿ ಶಿರೋಳ ತೋಂಟದಾರ್ಯ ಮಠದ ಅಧಿಕಾರವನ್ನು ಹಸ್ತಾಂತರಿಸಿ ಲಿಂಗೈಕ್ಯ ಪೂಜ್ಯ ಗುರುಬಸವ ಮಹಾಸ್ವಾಮಿಗಳವರ ಆಶಯಗಳನ್ನು ಶ್ರೀಮಠದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಮಾರ್ಗದರ್ಶನ ನೀಡಿದ್ದಾರೆ.
ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಶಿರೋಳ ಹಾಗೂ ಶ್ರೀಮಠದೊಂದಿಗೆ ಮೊದಲಿನಿಂದಲೂ ಸಂಪರ್ಕ ಹೊಂದಿದವರಾಗಿದ್ದು, ಲಿಂಗೈಕ್ಯ ಗುರುಬಸವ ಸ್ವಾಮಿಗಳು ಮತ್ತು ಶಾಂತಲಿಂಗ ಮಹಾಸ್ವಾಮಿಗಳು ಇವರೀರ್ವರು ಕೂಡ ಲಿಂಗೈಕ್ಯ ಜಗದ್ಗುರು ತೊಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಕರಕಮಲ ಸಂಜಾತರು. ಶಿರೋಳ ಪೂಜ್ಯರ ಅನಿರೀಕ್ಷಿತ ಅಗಲಿಕೆಯಿಂದ ಶ್ರೀಮಠದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಶಾಂತಲಿಂಗ ಶ್ರೀಗಳು ಸಾಮಾಜಿಕ ಕಳಕಳಿಯುಳ್ಳರಾಗಿದ್ದು ಶ್ರೀಮಠದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ.
ಶಿರೋಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶ್ರೀಮಠದ ಭಕ್ತಾದಿಗಳು ಪೂಜ್ಯ ಶಾಂತಲಿಂಗ ಶ್ರೀಗಳ ಬಗ್ಗೆ ಅಪಾರ ಭಕ್ತಿ ಗೌರವ ಹೊಂದಿರುವುದರಿಂದ ಶ್ರೀಮಠವು ಮತ್ತು ಶಿಕ್ಷಣ ಸಂಸ್ಥೆಗಳನ್ನು ಇನ್ನೂ ಎತ್ತರಕ್ಕೆ ಬೆಳೆಸುವ ವಿಶ್ವಾಸವನ್ನು ಭಕ್ತ ಸಮೂಹ ವ್ಯಕ್ತಪಡಿಸುತ್ತದೆ.
೨೦೨೬ರ ಜಾತ್ರೆಯು ಪೂಜ್ಯರ ಸಮ್ಮುಖತ್ವದಲ್ಲಿ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಧ್ಯ ೨೦೨೬ರ ಜನೇವರಿ ೦೮, ೦೯ ಮತ್ತು ೧೦ರಂದು ಮೂರು ದಿನಗಳ ಕಾಲ ನಡೆಯುವ ನಮ್ಮೂರಿನ ಉತ್ತರ ಕರ್ನಾಟಕದ ಅಪರೂಪದ ರೊಟ್ಟಿ ಊಟದ ಶಿರೋಳ ಶ್ರೀ ತೋಂಟದಾರ್ಯ ಜಾತ್ರೆಗೆ ನೀವು ಬನ್ನಿ, ನಿಮ್ಮೊಂದಿಗೆ ನಿಮ್ಮ ಬಂಧು ಮಿತ್ರರರನ್ನು ಕರೆತನ್ನಿ, ಹಾಗೂ ದೇಶಕ್ಕೆ ಕೋಮುಸೌಹಾರ್ಧತೆ ಪರಂಪರೆಯನ್ನು ಸಾರಿ ಹೇಳಿ.
೨೦೨೬ನೇ ಸಾಲಿನ ಶ್ರೀ ತೋಂಟದಾರ್ಯ ಜಾತ್ರಾ ಮಹೋತ್ಸವದ ಪದಾಧಿಕಾರಿಗಳು:
ಅಧ್ಯಕ್ಷರು – ಶ್ರೀ ರವೀಂದ್ರ ನಿಂ. ಹಿರೇಮಠ, ಉಪಾಧ್ಯಕ್ಷರು – ಶ್ರೀ ದ್ಯಾಮಣ್ಣ ಪ. ತೆಗ್ಗಿ, ಕಾರ್ಯದರ್ಶಿಗಳು- ಶ್ರೀ ಚಂದ್ರಶೇಖರ ಬ. ಸೊಬರದ, ಸಹಕಾರ್ಯದರ್ಶಿ – ಶ್ರೀ ಸತ್ಯವಾನಪ್ಪ. ವೀ. ಚಿಕ್ಕನರಗುಂದ.
ಪ್ರಸಾದ ಸಮಿತಿ ಅಧ್ಯಕ್ಷರು – ಶ್ರೀ ಯಮನಪ್ಪ ಕಾಡಪ್ಪನವರ, ಉತ್ಸವ ಸಮಿತಿ ಅಧ್ಯಕ್ಷರು- ಶ್ರೀ ಈರಪ್ಪ ಗು. ಕರಕೀಕಟ್ಟಿ,
ಕಾರ್ಯಕ್ರಮ ಸಮಿತಿ ಅಧ್ಯಕ್ಷರು- ಶ್ರೀ ರಮಜಾನಸಾಬ ನದಾಫ ಅವರಾಗಿದ್ದಾರೆ.
