ವೈಯಕ್ತಿಕ ನಿಂದನೆಗೆ ಹೆದರುವುದಿಲ್ಲ, ತಾತ್ವಿಕ ಹೋರಾಟಕ್ಕೆ ಬನ್ನಿ: ನಿಜಗುಣಾನಂದ ಶ್ರೀ

ಕೂಡಲಸಂಗಮ

ಉಪನಿಷತ್ತು, ಭಗವದ್ಗೀತೆ, ವೇದ, ಆಗಮಗಳು ಲಿಂಗಾಯತರಿಗೆ ಪರಾಮರ್ಶ ಗ್ರಂಥಗಳು, ವಚನ ಸಾಹಿತ್ಯ ನಮಗೆ ಪಠ್ಯ ಪುಸ್ತಕ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ನಡೆದ ೩೯ನೇ ಶರಣಮೇಳದ ಮಂಗಳವಾರ ರಾತ್ರಿ ನಡೆದ ಲಿಂಗಾಯತ-ಬಸವ ಧರ್ಮ ಮಹಾಜಗದ್ಗುರು ಪೀಠದ ೩೪ನೇ ಪೀಠಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ದೇವರ ಹೆಸರಿನಲ್ಲಿ ದೇವದಾಸಿ ಪದ್ದತಿಯಿದ್ದ ದಿನಗಳಲ್ಲಿ ವೇಶ್ಯೆಯರನ್ನು ಶರಣೆಯರನ್ನಾಗಿ ಮಾಡಿದ ಧರ್ಮ ಲಿಂಗಾಯತ. ಇಂತಹ ಪರಿವರ್ತನೆ ಮಾಡುವ ಸಾಮರ್ಥ್ಯ ಯಾವ ಧರ್ಮದಲ್ಲಿ ಇದೆ. ಹೆಣ್ಣುಮಕ್ಕಳ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಸನಾತನ ಧರ್ಮದ ವಿರುದ್ಧ ಲಿಂಗಾಯತ ಧರ್ಮ ಹೋರಾಡಿತು ಎಂದು ಗರ್ವ, ಅಹಂಕಾರದಿಂದ ಹೇಳುವುದಿಲ್ಲ ಅಭಿಮಾನ, ಪ್ರೀತಿಯಿಂದ ಹೇಳುತ್ತೆವೆ.

ಸನಾತನ ಧರ್ಮದವರ ನಮ್ಮ ಮೇಲಿನ ವೈಯಕ್ತಿಕ ನಿಂದನೆಗೆ ನಾವು ಎಂದೂ ಹೆದರುವುದಿಲ್ಲ, ತಾತ್ವಿಕ ಹೋರಾಟಕ್ಕೆ ಬನ್ನಿ. ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಶಿಷ್ಯರಾದ ನಾವು ಸಿದ್ದರಿದ್ದೇವೆ.

ಶ್ರೇಣಿಕೃತ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಕೊಟ್ಟ ನೆಲ, ಧರ್ಮಕ್ಷೇತ್ರ ಕೂಡಲಸಂಗಮ, ಈ ದೇಶ ಉಳಿದದ್ದು ಬುದ್ದ, ಬಸವ, ಅಂಬೇಡ್ಕರಿಂದ ಎಂಬುದನ್ನು ಎಲ್ಲರು ಅರಿಯಬೇಕು ಎಂದರು.

ಮೈಸೂರು ಗಾವಡಗೆರೆ ಗುರು-ಲಿಂಗ-ಜಂಗಮ ದೇವರ ಮಠದ ನಟರಾಜ ಸ್ವಾಮೀಜಿ ಮಾತನಾಡಿ, ಲಿಂಗ ಯಾರ ಸ್ವತ್ತು ಅಲ್ಲ. ಲಿಂಗ ಕಟ್ಟಿದವರೇ ಲಿಂಗ ಮರೆತು ಮಾತನಾಡುತ್ತಿರುವುದು ಅಪಚಾರ. ಕೆಲವರು ತಮ್ಮ ಸ್ವಾರ್ಥಕ್ಕೆ ಶರಣ ಮೇಳವನ್ನು ರಣಮೇಳ ಮಾಡಲು ಹೊರಟ್ಟಿದ್ದಾರೆ, ಬಸವ ಭಕ್ತರು ಅದಕ್ಕೆ ಅವಕಾಶ ಕೊಡುವುದಿಲ್ಲ.

ನಮಗೆ ಸಂಪತ್ತಿನ ಕೊರತೆ ಇಲ್ಲ, ಸಂಬಂಧದ ಕೊರತೆ ಇದೆ. ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಬಸವ ಧರ್ಮ ಪೀಠದ ಮೂಲಕ ಸಂಬಂಧ ಬೆಸೆಯುವ, ನಾಡು ಕಟ್ಟುವ ಕಾರ್ಯ ಮಾಡಿದರು ಎಂದರು.

ಲಿಂಗಾಯತ-ಬಸವ ಧರ್ಮ ಮಹಾಜಗದ್ಗುರು ಪೀಠದ ೩೪ನೇ ಪೀಠಾರೋಹಣ ಸ್ವೀಕರಿಸಿ ಮಾತೆ ಗಂಗಾದೇವಿ ಮಾತನಾಡಿ, ಬಸವಾದಿ ಶರಣರ ತತ್ವ ವಿಚಾರದ ಮೇಲೆ ಸ್ಥಾಪಿದವಾದ ಪೀಠ ಬಸವಧರ್ಮ ಪೀಠ, ನಾಡಿನ ಜನಕ್ಕೆ ಬಸವಾದಿ ಶರಣರ ವಿಚಾರಗಳನ್ನು ಭಿತ್ತರಿಸುವ ಕಾರ್ಯ ಮಾಡಿದೆ ಎಂದರು.

ಸಮಾರಂಭದಲ್ಲಿ ಬಸವಧರ್ಮ ಪೀಠದ ಜಂಗಮಮೂರ್ತಿಗಳು, ಗಣನಾಯಕ-ನಾಯಕಿಯರು ಇದ್ದರು.

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಚಂದ್ರಶೇಖರ ಇಟಗಿ ಅವರ ತ್ರಿದಳ, ಶ್ರೀಧರ ಗೌಡರ ಅವರ ಇದೇ ಅಂತರಂಗ ಸುದ್ದಿ, ಬಹಿರಂಗ ಸುದ್ದಿ ಗ್ರಂಥ ಬಿಡುಗಡೆ ಮಾಡಿದರು.

ಬಸವ ಧರ್ಮ ಪೀಠದಿಂದ ಶಿವರಾತ್ರಿಯ ನಿಮಿತ್ಯ ಉಳವಿಯಲ್ಲಿ ಅಕ್ಕನಾಗಲಾಂಬಿಕಾ ಪೀಠಾರೋಹಣ ಸಮಾರಂಭ ಫೆಬ್ರವರಿ ೨೭ ರಂದು ಹಮ್ಮಿಕೊಂಡಿದೆ ಎಂದು ರಾಷ್ಟ್ರೀಯ ಬಸವ ದಳದ ಸದಸ್ಯ ಸುಧೀರ ವಾಲಿ ಹೇಳಿದರು.

ಲಿಂಗಾಯತ-ಬಸವ ಧರ್ಮ ಮಹಾಜಗದ್ಗುರು ಪೀಠದ ೩೪ನೇ ಪೀಠಾರೋಹಣ ಸಮಾರಂಭದ ಧ್ವಜಾರೋಹಣವನ್ನು ಬೆಳಗಾವಿ ಹಂದಿಗುಂದ ವಿರಕ್ತಮಠದ ಶಿವಾನಂದ ಸ್ವಾಮೀಜಿ ಮಾಡಿದರು. ಸಹಸ್ರಾರು ಶರಣ ಶರಣೆಯರು ಮೇಳದಲ್ಲಿ ನೆರೆದಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
1 Comment
  • ಲಿಂಗಾಯತ ಸಮಾಜಕ್ಕೆ ನಿಜಗುಣಾನಂದ ಸ್ವಾಮಿಜಿಯಂತೆ, ಲಿಂಗಾನಂದ ಅಪ್ಪಾಜಿಯಿಂದ ಪ್ರೇರಿತರಾದ ನೇರ-ನಿಷ್ಟುರರಾದ ಅನೇಕ ಪ್ರವಚನಕಾರರು ತಯಾರಾಗಬೇಕು. ಅವರ ನೇರ ನುಡಿಗಳು ಅತೀ ಅವಶ್ಯ​.

Leave a Reply

Your email address will not be published. Required fields are marked *