ನಂಜನಗೂಡಿನಲ್ಲಿ ಬಸವಭಕ್ತರ ಮನಸ್ಸು ಗೆದ್ದ ಶರಣ ವೇಷ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ನಂಜನಗೂಡು:

ಹತ್ತಿರದ ಫ.ಗು. ಹಳಕಟ್ಟಿ ನಗರದಲ್ಲಿ ಬಸವ ಮಾಸ ಸಮಿತಿ ವತಿಯಿಂದ ನಡೆಯುತ್ತಿರುವ 29 ನೇ ದಿನದ  ಬಸವಾದಿ ಶರಣರ ಕುರಿತಾದ ಜೀವನ ಮೌಲ್ಯ ಅನುಭಾವದ ಕಾರ್ಯಕ್ರಮದಲ್ಲಿ ಕಿರಿಯರ ಮತ್ತು ಹಿರಿಯರ “ಶರಣರ ಛದ್ಮವೇಷ”ಸ್ಪರ್ಧಾತ್ಮಕ ಪ್ರದರ್ಶನ ನಡೆಯಿತು.

ಕಿರಿಯರ ವಿಭಾಗದ 1 ವರ್ಷದಿಂದ 18 ವರ್ಷದವರ ತನಕ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮೊದಲ ಬಹುಮಾನ “ಹರ್ಡೇಕರ್ ಮಂಜಪ್ಪ”ವೇಷಧಾರಿ ಚಿನ್ಮಯ್ ಎಂ. ಮುದ್ದು ಮಾದಪ್ಪ ಅವರಿಗೆ, ಎರಡನೇ ಬಹುಮಾನ “ಶರಣ ಆದಯ್ಯ”ವೇಷಧಾರಿ ವೇದಮೂರ್ತಿ ಅಶೋಕಕುಮಾರ ಅವರಿಗೆ, ಮೂರನೇ ಬಹುಮಾನ “ಗುರುಮಲ್ಲೇಶ್ವರರು” ವೇಷಧಾರಿ ಶಶಾಂಕ್ ಸಿ. ಎಂ. ಅವರು ಪಡೆದುಕೊಂಡರು. ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಕೂಡ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ನೀಡಲಾಯಿತು.

ವೇಷಭೂಷಣದಲ್ಲಿ ಮಕ್ಕಳು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುದೇವ, ಒಕ್ಕಲಿಗರ ಮುದ್ದಣ, ಆದಯ್ಯ, ಸತ್ಯಕ್ಕ, ಗೊಗ್ಗವ್ವೆ, ಚೆನ್ನಬಸವಣ್ಣ, ಬಾಲಬಸವಣ್ಣ, ಅಕ್ಕನಾಗಮ್ಮ, ನೀಲಾಂಬಿಕೆ, ಮಡಿವಾಳ ಮಾಚಿದೇವರು, ಹಡಪದ ಅಪ್ಪಣ್ಣ, ಗೆಜ್ಜೆಗಾರ ಘಟ್ಟಿವಾಳಯ್ಯ ಹೀಗೆ ಮಕ್ಕಳು ಶರಣರಂತೆ ಕಂಡುಬಂದ ದೃಶ್ಯ ಬಸವ ಭಕ್ತರ ಮನಗೆದ್ದಿತು.

ಹಿರಿಯರ ವಿಭಾಗದಲ್ಲಿ 19 ವರ್ಷದಿಂದ 80 ವರ್ಷದವರೆಗೆ ಛದ್ಮವೇಷವನ್ನು ಪತ್ರ ಬರಹಗಾರರು ಮತ್ತು ಹಿರಿಯರಾದ ಬದನವಾಳು ಮಹದೇವಪ್ಪನವರು “ವಿಶ್ವ ಗುರು ಬಸವೇಶ್ವರರ”ಛದ್ಮವೇಷಧಾರಿಯಾಗಿ ಕಾಣಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಮತ್ತೊಂದು ವಿಶೇಷವೆಂದರೆ ಬದನವಾಳು ಮಹದೇವಪ್ಪನವರ ಮಗಳು ಪ್ರಮೀಳಾ ಅವರು “ಅಕ್ಕಮಹಾದೇವಿ”ಯಾಗಿ ಮತ್ತು ಮೊಮ್ಮಗಳು ಯಶಸ್ವಿನಿ “ಅಲ್ಲಮಪ್ರಭು”ಗಳಾಗಿ ಹಾಗೂ ಮತ್ತೊಬ್ಬ ಮೊಮ್ಮಗ ಸಹ ಛದ್ಮವೇಷ ಹಾಕಿ ಕುಟುಂಬದ ನಾಲ್ಕು ಮಂದಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದರು.

ಹಂಗಳಪುರ ಮತ್ತೊಂದು ಕುಟುಂಬದವರಾದ ಸುರೇಶ ಮತ್ತು ಜ್ಯೋತಿ ದಂಪತಿಗಳು ಸಹ “ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ”ನವರ ವೇಷ ಧರಿಸಿದಲ್ಲದೆ “ಹರಳಯ್ಯ ಮತ್ತು ಕಲ್ಯಾಣಮ್ಮ” ದಂಪತಿ ಪಾತ್ರದ ಅಭಿನಯ ತೋರಿಸಿದರು. ಇವರ ಕುಟುಂಬದ ನಾಲ್ಕು ಮಂದಿಯು ಶರಣರ ವೇಷಧರಿಸಿ ಮೆಚ್ಚುಗೆಗೆ ಪಾತ್ರರಾದರು.

ರೂಪ ಮಂಜುನಾಥ ಅವರು ಅಜಗಣ್ಣ ಶರಣರ ಪಾತ್ರ, ಸಹೋದರಿ ಶರಣೆ ಮುಕ್ತಾಯಕ್ಕ, ಸುಜಾತ ಗಂಗಾಧರಸ್ವಾಮಿ ಕೊಟ್ಟಣದ ಸೋಮವ್ವ, ಪುಷ್ಪ ಮಂಜುನಾಥ ಅವರು ಶರಣೆ ಸತ್ಯಕ್ಕ, ಹಂಗಳಪುರದ ಲೀಲಾ ಮಲ್ಲಿಕಾರ್ಜುನ ಅವರು ಶರಣೆ ದುಗ್ಗಳೆ ಹೀಗೆ ಹಿರಿಯರೂ ನಾವೇನೂ ಕಮ್ಮಿಯಿಲ್ಲವೆಂಬಂತೆ ಛದ್ಮವೇಷ ಧರಿಸಿ ಬಸವ ಭಕ್ತರ ಮನಗೆದ್ದರು.

ಕಾರ್ಯಕ್ರಮದ ತೀರ್ಪುಗಾರರಾಗಿ ನಿವೃತ್ತ ಉಪನ್ಯಾಸಕ ಕಡಬೂರು ರಾಜಶೇಖರ, ನಿವೃತ್ತ ಮುಖ್ಯ ಶಿಕ್ಷಕರಾದ ಹಂಗಳ ನಾಗಪ್ಪ, ಪಿ.ಸಿ.ರಾಜಶೇಖರ್, ಬಸವನಪುರ ಸಿದ್ದಪ್ಪ ಕಾರ್ಯ ನಿರ್ವಹಿಸಿದರು. ಎಲ್ಲ ಕಾರ್ಯಗಳನ್ನು ಬಸವ ಮಾಸ ಸಮಿತಿ ಸದಸ್ಯರು ಉತ್ತಮವಾಗಿ ನಡೆಸಿಕೊಟ್ಟರು.

ತಾಯಂದಿರು ಉತ್ಸಾಹ ಮತು ಭಕ್ತಿ-ಭಾವದಿಂದ ಹಿರಿಯರ ಮತ್ತು ಕಿರಿಯರ ಶರಣರ ವೇಷಭೂಷಣದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಸಂತೋಷಪಟ್ಟರು. ಕಳೆದ ವರ್ಷವು ಕೂಡಾ ಛದ್ಮವೇಷ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *