ಸಾಣೇಹಳ್ಳಿ:
ಭೀಮಣ್ಣ ಖಂಡ್ರೆಯವರ ಮರಣ ವಾರ್ತೆಯನ್ನು ತಿಳಿದು ವೇದನೆಯಾಯ್ತು. ಅವರ ಸಾಧನೆ ಅವಿಸ್ಮರಣೀಯ. ಆರಂಭದಲ್ಲಿ ಅವರದು ಏಕಾಂಗಿ ಹೋರಾಟ. ಅದೇ ಮುಂದೆ ಬಹುದೊಡ್ಡ ಸಂಘಟನೆಗೆ ಕಾರಣವಾಯ್ತು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ರಾಜಕೀಯ, ಶಿಕ್ಷಣ, ಸಮಾಜ ಹೀಗೆ ಬಹುಮುಖ ಸೇವೆ ಸಲ್ಲಿಸಿದವರು. ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷರಾಗಿ ಅದ್ಭುತ ಕಾರ್ಯ ಮಾಡಿದ್ದರು. ದೀರ್ಘಕಾಲ ಎಲ್ಲರಿಗೂ ಬೇಕಾದವರಾಗಿ ಬಾಳಿ ವಯೋಧರ್ಮಕ್ಕನುಗುಣವಾಗಿ ಭೀಮಣ್ಣ ಅವರು ಶಿವನ ಪಾದ ಸೇರಿದ್ದಾರೆ.

ಅವರನ್ನು ಅವರ ಕುಟುಂಬದವರು ಇಳಿ ವಯಸ್ಸಿನಲ್ಲಿ ಮಕ್ಕಳಂತೆ ಸಾಕಿದ್ದು ನಮಗೆ ಗೊತ್ತು. ಈಗ ಅವರ ಸೇವಾಕಾರ್ಯಗಳನ್ನು ಅವರ ಮಗ ಈಶ್ವರ ಖಂಡ್ರೆ ಮತ್ತು ಅವರ ಮೊಮ್ಮಗ ಮುಂದುವರೆಸಿದ್ದಾರೆ.
ಭೀಮಣ್ಣ ಖಂಡ್ರೆಯವರ ಮರಣ ಸಹಜವಾಗಿಯೇ ಅವರ ಹಿತೈಷಿಗಳಿಗೆ, ಕುಟುಂಬಕ್ಕೆ ದುಃಖ ತರುವುದು ಸಹಜ. ಆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಸವಾದಿ ಶರಣರು ಕರುಣಿಸಲಿ ಎಂದು ಹಾರೈಸುತ್ತೇವೆ ಎಂದು ಶ್ರೀಗಳು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
