‘ಶಿಕ್ಷಕರ ದಿನಾಚರಣೆಯನ್ನು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಆಚರಿಸಬೇಕು’
ಗದಗ :
ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದ ದಿನಗಳಲ್ಲಿ ಸಾವಿತ್ರಿಬಾಯಿ ಫುಲೆ ಅವರು ಗಟ್ಟಿಧೈರ್ಯ ಮಾಡಿ ಶಿಕ್ಷಣ ಕೊಟ್ಟಿದ್ದು ಐತಿಹಾಸಿಕ ಸಾಧನೆ. ಆ ಮೂಲಕ ಫುಲೆ ಅವರು ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಎಂಬ ಕೀರ್ತಿಗೆ ಭಾಜನರಾದರು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೮೦ ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾವಿತ್ರಿಬಾಯಿ ಫುಲೆ ಅವರು ಬದುಕಿನಲ್ಲಿ ಕಷ್ಟನಷ್ಟಗಳನ್ನು ಅನುಭವಿಸಿ, ಮದುವೆಯಾದ ಮೇಲೆ ಪತಿಯಿಂದ ಶಿಕ್ಷಣ ಪಡೆದು, ಅಂದಿನ ಕಾಲದಲ್ಲಿಯೇ ಹದಿನೆಂಟು ಶಾಲೆಗಳನ್ನು ತೆರೆದು ಸಾಧನೆಯನ್ನು ಮಾಡಿದ್ದು ಸಾಮಾನ್ಯ ಸಂಗತಿಯಲ್ಲ.
ನಮ್ಮ ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದಾದರೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯಂದು ಆಚರಿಸಬೇಕು ಎಂದು ಹೇಳುತ್ತಿದ್ದರು.
ಸಾವಿತ್ರಿಬಾಯಿ ಫುಲೆ ದಂಪತಿಗಳನ್ನು ಕೊಲೆ ಮಾಡಲಿಕ್ಕೆ ಬಂದಾಗ ಅವರೊಂದಿಗೆ ನಡೆದ ಸಂವಾದವನ್ನು ಕೇಳಿ, ಕೊಲೆ ಮಾಡುವುದನ್ನು ಬಿಟ್ಟರು. ಆ ಕೊಲೆಗಾರರು ಮನಪರಿವರ್ತನೆ ಮಾಡಿಕೊಂಡು, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರು. ಸದ್ಗುಣ ಸದಾಚಾರ ಸದ್ಬುದ್ಧಿ ಬರಲಿಕ್ಕೆ ಇಂಥ ಆದರ್ಶ ದಂಪತಿಗಳು ಸಾಕು. ಫುಲೆ ದಂಪತಿಗಳ ಆತ್ಮಶಕ್ತಿ ಅದ್ಬುತವಾದದ್ದು ಎಂದು ನುಡಿದರು.

ಉಪನ್ಯಾಸಕರಾಗಿ ಆಗಮಿಸಿದ ಗದಗ ಕೆ.ಎಲ್.ಇ. ಸಂಸ್ಥೆಯ ಜೆಟಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಶಕುಂತಲಾ ಸಿಂಧೂರ ಮಾತನಾಡಿ, ಸಾವಿತ್ರಿಬಾಯಿ ಫುಲೆ ದಂಪತಿಗಳ ಚರಿತ್ರೆಗಿಂತ ಚಾರಿತ್ರ‍್ಯ ನೋಡಬೇಕು. ಸತಿಪತಿಗಳ ಬದುಕು ಹಾಲು ಜೇನಿನಂತೆ ಇರಬೇಕು. ಅದರಂತೆ ನಡೆದವರು ಸಾವಿತ್ರಿಬಾಯಿ ಫುಲೆ ದಂಪತಿಗಳು. ಸತಿ ಪತಿ ಇಬ್ಬರೂ ಪರಸ್ಪರ ಗೌರವಿಸಬೇಕು.
ಅಂದು ೩೫ ವಿಧವಾ ಮಹಿಳೆಯರಿಗೆ ಬಾಣಂತಿತನ ಮಾಡಿಸಿದವರು ಸಾವಿತ್ರಿಬಾಯಿ ಫುಲೆಯವರು. ನಿಸ್ವಾರ್ಥ ಸೇವೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಸಾವಿತ್ರಿಬಾಯಿ ಮಹಿಳಾ ಕುಲಕ್ಕೆ ಮತ್ತು ಪುರುಷ ಕುಲಕ್ಕೆ ಮಾದರಿಯಾಗಿದ್ದರು ಎಂದು ಮಾತನಾಡಿದರು.
ಬಸವರಾಜ ವೆಂಕಟಾಪುರ ಶರಣರು ಮಾತನಾಡುತ್ತ, ಆಧ್ಯಾತ್ಮದ ಬದುಕು ಸಾವಿತ್ರಿಬಾಯಿ ಫುಲೆಯವರದು. ಅವರ ಸಮಾಜ ಪರಿವರ್ತನೆಯ ಮೌನಕ್ರಾಂತಿ ಮೆಚ್ಚುವಂತಹುದು ಎಂದು ಹೇಳಿದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ಸೇವೆಯನ್ನು ನೆಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಅನುಶ್ರೀ ಎಸ್. ಅಗ್ಗದ ಹಾಗೂ ವಚನ ಚಿಂತನವನ್ನು ನಿರೀಕ್ಷಾ ಬಿ. ನಾಯ್ಕರ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಶಾಂತರಾಜು ಮಾಗನೂರು ದಾವಣಗೆರೆ ಇವರು ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
