8 ಕೋಟಿ ವೆಚ್ಚದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಭಾ ಭವನದ ಶಂಕುಸ್ಥಾಪನೆ

ಬಸವ ಮೀಡಿಯಾ
ಬಸವ ಮೀಡಿಯಾ

ಕುಕನೂರು:

ತಾಲ್ಲೂಕಿನ ಮಂಡಲಗಿರಿ ಗ್ರಾಮ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಬುದ್ಧ-ಬಸವ-ಅಂಬೇಡ್ಕರ್ ಸಂಕೀರ್ಣದಲ್ಲಿ ೮ ಕೋಟಿ ರೂ. ವೆಚ್ಚದ ಮಹಾಮಾನವತಾವಾದಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ಸಾರ್ವಜನಿಕ ಸಮುದಾಯ ಭವನ ಮತ್ತು ಮತ್ತಿತರ ಕಾಮಗಾರಿಗಳ ಶಂಕುಸ್ಥಾಪನೆಯ ಸಮಾರಂಭ ಅದ್ಧೂರಿಯಾಗಿ ಈಚೆಗೆ ನಡೆಯಿತು.

ಪೂಜ್ಯ ಗದುಗಿನ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಶಂಕುಸ್ಥಾಪನೆ ಕಾರ್ಯ ನೆರವೇರಿಸಿದರು. ರಾಜ್ಯದ ಮುಖ್ಯಮಂತ್ರಿಗಳ ಹಣಕಾಸಿನ ಸಲಹೆಗಾರರು, ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿಯವರು ಅಧ್ಯಕ್ಷತೆ ವಹಿಸಿದ್ದರು.

ರಾಯರೆಡ್ಡಿಯವರು ಈ ಸಂದರ್ಭದಲ್ಲಿ ಮಾತನಾಡುತ್ತ, ಲಿಂಗೈಕ್ಯ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮಹಾಮಾನವತಾವಾದಿಗಳು, ಅಪ್ಪಟ ಶರಣ ತತ್ವದ ಪಾಲಕರು ಹಾಗೂ ಮೂಢನಂಬಿಕೆಯ ವಿರೋಧಿಗಳಾಗಿದ್ದರು.

ಕಾಯಕ-ದಾಸೋಹ-ಸಮಾನತೆಯ ಪ್ರತಿಪಾದಕರಾಗಿದ್ದರು. ಅವರು ತಮ್ಮ ಬಗ್ಗೆ ಪ್ರಚಾರ ಪಡೆಯದೆ ಬುದ್ಧ-ಬಸವ-ಅಂಬೇಡ್ಕರ್ ಕುರಿತು ಮಹಾಕಾವ್ಯಗಳನ್ನು ಬರೆಯಿಸಿ, ತಮ್ಮ ಶ್ರೀಮಠದಿಂದ ಪ್ರಕಟಿಸಿ, ಆ ಪುರಾಣಗಳ ಪ್ರವಚನವನ್ನು ಮಠದಿಂದ ಪ್ರಾರಂಭಿಸಿದ ಕೀರ್ತಿ ಪೂಜ್ಯರಿಗೆ ಸಲ್ಲುವದು. ಲಿಂಗಾಯತ ಮಠಗಳು ‍ಕರ್ನಾಟಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.

ಶಂಕುಸ್ಥಾಪನೆ ನೆರವೇರಿಸಿದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಬಸವರಾಜ ರಾಯರಡ್ಡಿಯವರು ಕ್ಷೇತ್ರದಲ್ಲಿ ಮಾಡಿದ ಎಲ್ಲ ಸಾಧನೆಯ ಕ್ರಾಂತಿ ಮತ್ತು ಜನರ ಕಲ್ಯಾಣದಲ್ಲಿ ದೇವರನ್ನು ಕಾಣುತ್ತಿದ್ದಾರೆ ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.

ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸರ್ಕಾರಕ್ಕೆ ದಾನ ನೀಡಿದ ೨.೫ ಎಕರೆ ಬೆಲೆಬಾಳುವ ಜಮೀನನಲ್ಲಿ ಈ ಕಾಮಗಾರಿ ಶಂಕುಸ್ಥಾಪನೆ ಆಗಿದೆ.

ಸಮಾರಂಭದಲ್ಲಿ ವೇದಿಕೆಯ ಮೇಲೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ, ಗ್ರಾ.ಪಂ.ಅಧ್ಯಕ್ಷೆ ನಿಂಗಮ್ಮ ಸಿದ್ಧನಗೌಡ, ಇಟಗಿ ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ ಭಜಂತ್ರಿ, ತಹಸೀಲದಾರ ಬಸವರಾಜ ಬೆಣ್ಣೆಶಿರೂರು, ಪ್ರಭಾರ ಬಿ.ಇ.ಓ. ಅಶೋಕ ಗೌಡ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಜಗದ್ಗುರು ತೋಂಟದಾರ‍್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಶಿವಾನಂದ ಎಸ್. ಪಟ್ಟಣಶೆಟ್ಟಿ, ಅಶೋಕ ತೋಟದ, ಸಂಗಮೇಶ ಗುತ್ತಿ, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಖಾಸಿಂಸಾಬ ತಳಕಲ್, ಮಂಜುನಾಥ ಕಡೇಮನಿ, ಮಂಜುನಾಥ ಸೋಂಪುರ, ಕರಬಸಪ್ಪ ನಿಡಗುಂದಿ, ಹನುಮಂತಪ್ಪ ಉಪ್ಪಾರ, ವಿಶ್ವನಾಥ ಹೊರಪೇಟಿ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *