ದಾನಮ್ಮ ತಪೋಕ್ಷೇತ್ರದಲ್ಲಿ ತ್ರಿವರ್ಣ ಬಸವ ಬುತ್ತಿಯ ಮೆರವಣಿಗೆ

ಬಸವ ಮೀಡಿಯಾ
ಬಸವ ಮೀಡಿಯಾ

ಜತ್ತ:

ಗುಡ್ಡಾಪೂರು ದಾನಮ್ಮನವರ ತಪೋಕ್ಷೇತ್ರ, ನೀಲಮ್ಮ ಬಸವಣ್ಣನವರ ದಾಂಪತ್ಯ ಧರ್ಮಭೂಮಿ ಜತ್ತ ತಾಲ್ಲೂಕಿನ ಸಂಖ ಊರಲ್ಲಿ  ಡಾ. ಮಹೇಶ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಮಣಕನವಾಡಿಯ ಅಭಿನವ ಮೃತ್ಯುಂಜಯ ಸ್ವಾಮೀಜಿಯವರಿಂದ ಬಸವ ಪುರಾಣ ಅತ್ಯಂತ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಸಾಗುತ್ತಿದೆ.

ಗುರು ಬಸವ ವಿರಕ್ತ ಮಠದ ನಾಲ್ಕನೇ ಪೀಠಾಧಿಪತಿಗಳಾಗಿ ಆಯ್ಕೆಯಾದ ಪೂಜ್ಯರು ಶ್ರೀಮಠದ ವತಿಯಿಂದ ಒಂದು ತಿಂಗಳ ಕಾಲ ವಿನೂತನ ಕಾರ್ಯಕ್ರಮ ಆಯೋಜಿಸಿದ್ದಾರೆ.

ಜನವರಿ 26 ಗಣರಾಜ್ಯೋತ್ಸವವನ್ನು ಸಂಖ ಮತ್ತು ಸುತ್ತಮುತ್ತಲಿನ ಸಾವಿರಾರು ಬಸವ ಭಕ್ತ ಶರಣೆಯರು ತ್ರಿವರ್ಣ ಬಣ್ಣದ ಬುಟ್ಟಿಯಲ್ಲಿ ಬಸವ ಬುತ್ತಿಯನ್ನು ಹೊತ್ತು ತಂದಿದ್ದು ಅತ್ಯಂತ ಆಕರ್ಷಣೀಯವಾಗಿತ್ತು. ಶಿಸ್ತಿನಿಂದ ಬಸವ ಹೆಜ್ಜೆ ಹಾಕಿ ರಾಷ್ಟ್ರಕ್ಕೆ ಗೌರವ ಸಲ್ಲಿಸಿದರು.

ಬಸವ ಪುರಾಣದ ವೇದಿಕೆಯಲ್ಲಿ ಪೂಜ್ಯ ಮೃತ್ಯುಂಜಯ ಅಪ್ಪಗಳು ಮಾತನಾಡಿ, ಪ್ರತಿಯೊಬ್ಬರು ರಾಷ್ಟ್ರದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ರಾಷ್ಟ್ರ ಮೊದಲು ನಂತರ ನಾನು ಎನ್ನುವ ಭಾವ ಇರಬೇಕು. ರಾಷ್ಟ್ರೀಯ ಭಾವೈಕ್ಯತೆಗಾಗಿ ಬಸವಾದಿ ಪ್ರಮಥರು ಸಾಕಷ್ಟು ದುಡಿದಿದ್ದಾರೆ. ನಮ್ಮ ಭಾರತೀಯ ಸಂವಿಧಾನದ ಆಶಯಗಳು ವಚನಗಳಲ್ಲಿ ಕಾಣಸಿಗುತ್ತವೆ ಎಂದರಲ್ಲದೆ ಬಸವತತ್ವದಿಂದ ಭಾರತ ಬಲಿಷ್ಠವಾಗಲು ಸಾಧ್ಯ ಎಂದು ಮಾರ್ಮಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣದ ಸದ್ಗುರು ಬಸವಪ್ರಭು ಸ್ವಾಮೀಜಿ ಪೂಜ್ಯ ಡಾ.ಮಹೇಶ ದೇವರಿಗೆ ಬಿನ್ನವತ್ತಳೆ ಸಮರ್ಪಿಸಿ ಪೂಜ್ಯರು ಸಾತ್ವಿಕರು, ಬಸವತತ್ವ ನಿಷ್ಟರು, ಅಧ್ಯಯನಶೀಲರಾಗಿದ್ದಾರೆ. ಜತ್ತ ತಾಲೂಕು ಬಸವಾದಿ ಪ್ರಮಥರು ಮತ್ತು ಗುಡ್ಡಾಪೂರು ದಾನಮ್ಮ ನಡೆದಾಡಿದ ಭೂಮಿಯಾಗಿದೆ.

ಈ ಭಾಗದಲ್ಲಿ ಹದಿನೈದು ವರ್ಷದಿಂದ ದಾನಮ್ಮ ಜ್ಯೋತಿ ಯಾತ್ರೆ ಮಾಡುತ್ತಾ ಬಸವತತ್ವ ಪ್ರಚಾರ ಮಾಡಲಾಗಿದೆ. ನಮ್ಮ ಸಂಕಲ್ಪಕ್ಕೆ ಸಾಕ್ಷಿಯಾಗಿ ಸಂಖ ಶ್ರೀ ಗುರು ಬಸವ ವಿರಕ್ತ ಮಠಕ್ಕೆ ಪೂಜ್ಯರು ಆಯ್ಕೆಯಾಗಿರುವುದು ಸಂತಸದ ಸಂಗತಿ. ಪೂಜ್ಯರು ಈ ಭಾಗದಲ್ಲಿ ಶ್ರೀಮಠದಿಂದ ಬಸವತತ್ವವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು, ಅವರ ಬೆಂಬಲಕ್ಕೆ ನಾವಿದ್ದೇವೆ ಎಂದರು.

ವಚನ ಗ್ರಂಥಗಳಿಂದ ತುಲಾಭಾರ

ಪೂಜ್ಯ ಡಾ. ಮಹೇಶ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವದಂಗವಾಗಿ ವಚನ ಗ್ರಂಥಗಳಿಂದ ಅವರ ತುಲಾಭಾರ ಮಾಡಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಚಡಚಣ ಶ್ರೀಗಳು, ಬಸವನ ಬಾಗೆವಾಡಿ ಶ್ರೀಗಳು, ಇನ್ನಿತರ ಪೂಜ್ಯರು ಸಮ್ಮುಖ ವಹಿಸಿದ್ದರು. ಜತ್ತ ತಾಲೂಕಿನ ದಾನಮ್ಮದೇವಿ ಜ್ಯೋತಿ ಪ್ರತಿಷ್ಟಾನದ ಪದಾಧಿಕಾರಿಗಳು, ಖೋಜನವಾಡಿ ರಾಷ್ಟ್ರೀಯ ಬಸವದಳದ ಶರಣರು, ಮೀರಜನ ಸುಭಾಷ್ ಸಾಯಗಾವ್, ಸುಜಾತ ಪಾಟೀಲ, ದಾನೇಶ್ವರಿ ಶ್ರೀಶೈಲ ಬಿರಾದಾರ, ಮಲ್ಲಿಕಾರ್ಜುನ ಡೊಣಗಾಪೂರು, ಭಾರತಿ ಮಾಳಿ, ಸಾವಿತ್ರಿ ನಾಯಿಕ, ಸುರೇಖಾ ಚವ್ಹಾಣ, ಕಾಡಪ್ಪ ಜಾಮಗೊಂಡ, ಮಹಾದೇವಪ್ಪ ತೇಲಿ ಪೂಜ್ಯರನ್ನು ಸತ್ಕರಿಸಿದರು. ಸಾವಿರಾರು ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *