ಬಸವ ಶಕ್ತಿ ಸಮಾವೇಶ: ಬದ್ಧತೆಯಿರುವವರು ಚುನಾವಣೆಗೂ ನಿಲ್ಲಬೇಕು

ಬಸವ ಮೀಡಿಯಾ
ಬಸವ ಮೀಡಿಯಾ

ಚಾಮರಾಜನಗರ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ಚಾಮರಾಜನಗರ ಜಿಲ್ಲೆಯ ಮೂರು ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಎಂ.ಲೋಕೇಶ್ (ಬಿಂದು)
ಅಧ್ಯಕ್ಷರು,
ಜಾಗತಿಕ ಲಿಂಗಾಯತ ಮಹಾಸಭಾ, ಕೊಳ್ಳೆಗಾಲ

ಕೆ. ಎಸ್ ಮಹೇಶ್
ಅಖಿಲ ಭಾರತ ವೀರಶೈವ ಮಹಾಸಭಾ, ಕೊಳ್ಳೇಗಾಲ
ಕಾರ್ಯದರ್ಶಿ,
ಅಖಿಲ ಭಾರತ ವೀರಶೈವ ಮಹಾಸಭಾ, ಕೊಳ್ಳೇಗಾಲ

ಚಂದ್ರು. ಎನ್. ಲಕ್ಕೂರು.
ಅಧ್ಯಕ್ಷರು, ತಾಲ್ಲೂಕು ಬಸವ ಕೇಂದ್ರ
ಗುಂಡ್ಲುಪೇಟೆ ತಾಲ್ಲೂಕು.

ಬದ್ಧತೆಯಿರುವವರು ಚುನಾವಣೆಗೂ ನಿಲ್ಲಬೇಕು ಎಂ.ಲೋಕೇಶ್ (ಬಿಂದು)

ಚುನಾವಣೆಯಲ್ಲಿ ಗೆದ್ದಮೇಲೆ ರಾಜಕಾರಣಿಗಳು ಐದು ವರ್ಷ ತಿರುಗಿ ನೋಡುವುದಿಲ್ಲ. ಸಮಾಜದ ಯಾವುದೇ ಕೆಲಸ, ತತ್ವ ಸಿದ್ದಾಂತದ ಬಗ್ಗೆ ಬದ್ಧತೆ ಇರುವುದಿಲ್ಲ. ಅವರನ್ನ ಪ್ರಶ್ನಿಸೋ, ಅವರ ಮೇಲೆ ಒತ್ತಡ ತರುವ ಕೆಲಸ ಶುರುವಾಗಬೇಕಿದೆ.

ರಾಜಕೀಯ ಇಂದು ನಿಂತ ನೀರಾಗಿದೆ. ಅದೇ ಜನ ಚುನಾವಣೆಗೆ ನಿಲ್ಲುತ್ತಾರೆ. ಹೊಸ ಮುಖಗಳಿಗೆ, ಹೊಸ ಆಲೋಚನೆಗಳಿಗೆ ಅವಕಾಶವಿಲ್ಲದ ಹಾಗಿದೆ.

ಈ ವಿಷಯಗಳ ಬಗ್ಗೆ ಲಿಂಗಾಯತ ಸಮಾಜದಲ್ಲಿ, ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಬಸವ ಶಕ್ತಿ ಸಮಾವೇಶ, ಶಿಬಿರಗಳು ಎಲ್ಲಾ ಕಡೆ ನಡೆಯಬೇಕಿದೆ.

ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಜಾಗೃತಿ ಮೂಡಿಸುವಂತಹ ಕೆಲಸಗಳು ನಡೆಯಬೇಕು.

ಬೇರೆ ಬೇರೆ ಪಕ್ಷಗಳಲ್ಲಿ ಲಿಂಗಾಯತ ಕಾರ್ಯಕರ್ತರಿದ್ದಾರೆ. ಅವರಲ್ಲಿ ಲಿಂಗಾಯತ ಸಮಾಜ, ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು. ಅವರೆಲ್ಲ ಈಗಾಗಲೇ ರಾಜಕೀಯದಲ್ಲಿ ಪಳಗಿರುತ್ತಾರೆ, ಮತದಾರರ ಜೊತೆ ಸಂಪರ್ಕವಿಟ್ಟುಕೊಂಡಿರುತ್ತಾರೆ. ಅವರ ಮೂಲಕ ರಾಜಕಾರಣಿಗಳ ಮೇಲೆ ಒತ್ತಡ ಹಾಕುವುದು, ಸಮಾಜದಲ್ಲಿ ಅವರು ಜಾಗೃತಿ ಮೂಡಿಸುವುದು ಸುಲುಭವಾಗುತ್ತದೆ.

ಸಾಮಾಜಿಕ ಬದ್ದತೆ ಇರುವವರು ಚುನಾವಣೆಗೂ ನಿಲ್ಲಬೇಕು. ಸಾಲ ಮಾಡಿಕೊಂಡು ಪ್ರಚಾರ ಮಾಡಿ ಅಂತ ನಾನು ಹೇಳುತ್ತಿಲ್ಲ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸಾಧ್ಯವಾದಷ್ಟು ಸಮಾನ ಮನಸ್ಕರ ಜೊತೆ ಕೆಲಸ ಮಾಡಲಿ. 500 ಮತ ಬೀಳಲಿ ಸಾಕು. ಜನರಲ್ಲಿ ಹೊಸ ಆಲೋಚನೆ ಬಿತ್ತಲು, ಪರ್ಯಾಯ ರಾಜಕಾರಣ ಬೆಳೆಸಲು ಚುನಾವಣೆಗಳನ್ನು ಬಳಸಿಕೊಳ್ಳಬಹುದು. ರಾಜಕಾರಣಿಗಳಿಗೂ ವಿಷಯದ ಗಂಭೀರತೆ ಅರಿವಾಗುತ್ತದೆ. ಬಸವ ಕಾರ್ಯಕರ್ತರು ಇದರ ಬಗ್ಗೆ ಯೋಚಿಸಬೇಕು.

ಸಮಾಜ ರಾಜಕೀಯವಾಗಿ ಜಾಗೃತವಾದರೆ ಬಸವ ತತ್ವ, ಲಿಂಗಾಯತ ಅಸ್ಮಿತೆ ಗಟ್ಟಿಯಾಗುತ್ತದೆ. ಇಲ್ಲದಿದ್ದರೆ ನಮ್ಮ ಅಸ್ತಿತ್ವಕ್ಕೇ ಅಪಾಯ.

ಕೊಳ್ಳೇಗಾಲ ನಗರಪಾಲಿಕೆಯಲ್ಲಿರುವ 31 ಸದಸ್ಯರಲ್ಲಿ ನಮ್ಮ ಸಮುದಾಯದವರು ಇಬ್ಬರು ಮಾತ್ರ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರೆಯೋಣ.

ರಾಜಕೀಯ ಪರಿಣಿತರಿಂದ ತರಬೇತಿ ಅಗತ್ಯ (ಚಂದ್ರು. ಎನ್. ಲಕ್ಕೂರು)

ಚುನಾವಣೆಗಳಲ್ಲಿ ಲಿಂಗಾಯತ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ನಮ್ಮ ಧರ್ಮದ ಪರವಾಗಿರುವ ಉತ್ತಮ ವ್ಯಕ್ತಿಗಳನ್ನು ಬೆಂಬಲಿಸಿ ವಿಧಾನಸೌಧಕ್ಕೆ ಕಳಿಸಿಕೊಡಬೇಕು. ಆಗ ಮಾತ್ರ ನಾವು ನಮ್ಮ ಧರ್ಮವನ್ನು ಉಳಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗಬಹುದು.

ಈ ಕೆಲಸಕ್ಕೆ ಬಸವ ಶಕ್ತಿ ಸಮಾವೇಶದ ಮೂಲಕ ತರಬೇತಿಯ ಅಗತ್ಯವಿದೆ. ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ಇಂತಹ ತರಬೇತಿ ನೀಡುವುದು ಒಳ್ಳೆಯದು.

ಬಸವ ಶಕ್ತಿ ಸಮಾವೇಶವನ್ನು ರಾಜ್ಯದ ಎಲ್ಲಾ ಜಿಲ್ಲೆಯವರಿಗೆ ಅನುಕೂಲವಾಗುವ ಸ್ಥಳದಲ್ಲಿ ನಡೆಸಬೇಕು. ನಮ್ಮ ಲಿಂಗಾಯತ ಧರ್ಮ, ಸಂಸ್ಕೃತಿ, ರಾಜಕೀಯದ ಬಗ್ಗೆ ಉತ್ತಮ ವಾಗ್ಮಿ ಹಾಗೂ ರಾಜಕೀಯ ಚಟುವಟಿಕೆಗಳ ಬಗ್ಗೆ ನುರಿತರಾಗಿರುವ ವ್ಯಕ್ತಿಗಳನ್ನು ಕರೆಸಿ ಮಾಹಿತಿ ನೀಡಬೇಕು.

ಸಮಾವೇಶ ಸಂಘಟಿಸಲು ನೆರವಾಗಲು ನಮಗೆ ಸಂಪೂರ್ಣವಾದ ಆಸಕ್ತಿ ಇದೆ. ನಮ್ಮ ಸಂಘಟನೆ ವತಿಯಿಂದ ಸಾಧ್ಯವಾದಷ್ಟು ಹೆಚ್ಚಿನ ಜನ ಭಾಗವಹಿಸುವಂತೆ ಮಾಡಲು ಶ್ರಮ‌ ವಹಿಸುತ್ತೇವೆ.

ಕೊಳ್ಳೇಗಾಲದಲ್ಲಿ 40,000 ಮತಗಳಿವೆ ಆದರೆ ನಮ್ಮದೇ ಜಾಗವಿಲ್ಲ (ಕೆ. ಎಸ್ ಮಹೇಶ್)

ಲಿಂಗಾಯತ ಸಮಾಜ ರಾಜಕೀಯ ಪ್ರಭಾವ ಮತ್ತು ಪ್ರಜ್ಞೆ ಬೆಳೆಸಿಕೊಳ್ಳುವ ಅಗತ್ಯವಿದೆ.

ಕೊಳ್ಳೇಗಾಲದಲ್ಲಿ 40,000 ಲಿಂಗಾಯತ ಮತಗಳಿವೆ. ಆದರೆ ನಮ್ಮದೇ ಕಟ್ಟಡವಿಲ್ಲ, ಜಾಗವಿಲ್ಲ. ಬಾಡಿಗೆ ಮನೆಯಲ್ಲೇ ಕಾರ್ಯಕ್ರಮ ನಡೆಸುತ್ತಿದ್ದೇವೆ.

15 ವರ್ಷಗಳಿಂದ ನಮ್ಮದೇ ಜಾಗ ಪಡೆಯಲು ಪ್ರಯತ್ನಿಸಿದರೂ ಯಾವ ರಾಜಕಾರಣಿಯೂ ಸ್ಪಂದಿಸಿಲ್ಲ. ನಮಗೆ ರಾಜಕೀಯ ಪ್ರಭಾವ ಇದ್ದಿದ್ದರೆ ಈ ಕೆಲಸ ಯಾವಾಗಲೋ ಆಗುತ್ತಿತ್ತು.

ಅದಕ್ಕೆ ಬಸವ ಶಕ್ತಿ ಸಮಾವೇಶ, ಶಿಬಿರಗಳ ಮೂಲಕ ರಾಜಕೀಯ ಪ್ರಜ್ಞೆ ಮೂಡಿಸುವ ಕೆಲಸವಾಗಬೇಕು. ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಭಾವವೂ ಬೆಳೆಯುತ್ತದೆ.

ಕೊಳ್ಳೇಗಾಲದಲ್ಲಿ ಸಮಾಜ ಮೂರು ಗುಂಪಾಗಿದೆ. ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾದ ಜೊತೆಗೆ, ರೇಣುಕಾಚಾರ್ಯರ ಇನ್ನೊಂದು ಗುಂಪಿದೆ. ನಮ್ಮನಮ್ಮಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ಸಾಧ್ಯವಾದಷ್ಟು ಜನ ಒಗ್ಗಟ್ಟಾಗಿ ರಾಜಕಾರಣಿಗಳನ್ನು ಭೇಟಿ ಮಾಡಿದರೆ ಕೆಲಸವಾಗುತ್ತದೆ.

ಬಸವ ಶಕ್ತಿ ಸಮಾವೇಶಕ್ಕೆ ನಮ್ಮ ಬೆಂಬಲವಿದೆ, ಭಾಗವಹಿಸುತ್ತೇವೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment
  • ರಾಜಕೀಯ ಒತ್ತಡ ತರಬೇಕು, ಆದರೆ ನಾವೇ ಚುನಾವಣೆಗೆ ನಿಲ್ಲುವುದು ಎಷ್ಟು ಸರಿ? ಎಲ್ಲಾ ರೀತಿಯ ಅಭಿಪ್ರಾಯಗಳು ಚರ್ಚೆಯಾಗಲಿ

Leave a Reply

Your email address will not be published. Required fields are marked *