ಬಸವಕಲ್ಯಾಣ
ಬಸವಣ್ಣನವರ ಕರ್ಮಭೂಮಿಯಲ್ಲಿ 2 ಲಕ್ಷ ಜನರನ್ನು ಸೇರಿಸಿ ಸಾಮೂಹಿಕ ಇಷ್ಟಲಿಂಗ ಪೂಜೆಗೆ ತಯಾರಿ ನಡೆದಿದೆ, ಎಂದು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಹೇಳಿದ್ದಾರೆ.
2027ರಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಇಷ್ಟ ಲಿಂಗದ ಜೊತೆಗೆ 21 ವರ್ಷದೊಳಗಿನ ಯುವಕರನ್ನು ಕರೆಸಿ ಸಂಸತ್ತು ನಡೆಸಲಾಗುವುದು. ವಿಶ್ವದಲ್ಲಿ ಪ್ರಜಾಪ್ರಭುತ್ವವಿರುವ ದೇಶಗಳ ಮುಖ್ಯಸ್ಥರಿಗೆ ಈ ಸಂಸತ್ತಿನಲ್ಲಿ ಭಾಗವಹಿಸಲು ತಮ್ಮ ಪ್ರತಿನಿಧಿಗಳನ್ನು ಕಳುಹಿಸುವಂತೆ ಕೋರಲಾಗುವುದು, ಎಂದು ತಿಳಿಸಿದರು.
“ಬಸವಕಲ್ಯಾಣದ ಅನುಭವ ಮಂಟಪವೇ ಜಗತ್ತಿನ ಮೊದಲ ಸಂಸತ್ತು ಎಂದು ನಾವು ಹೇಳುತ್ತೇವೆ. ಆದರೆ ಈ ವಾದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ,” ಎಂದು ಸೇಡಂ ಹೇಳಿದರು.
ಇತ್ತೀಚಿಗೆ ನಗರದಲ್ಲಿ ನಡೆದ ಲೇಖಕ ಶಾಮಲಿಂಗ ಜವಳಿ ಅವರು ಬರೆದಿರುವ ‘ಬಸವಯುಗ ವೈಭವ’ ಗ್ರಂಥದ ಮುಖಪುಟ ಅನಾವರಣದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪುಸ್ತಕವು ಕಲಬುರಗಿಯಲ್ಲಿ ಮಾರ್ಚ್ ವೇಳೆಗೆ ಬಿಡುಗಡೆಯಾಗಲಿದೆ. ಬಸವತತ್ವ, ಶರಣರ ಬಗೆಗಿನ ಸಮಗ್ರ ಮಾಹಿತಿ ಇರಲಿದೆ. ಹೀಗಾಗಿ, ಈ ಪುಸ್ತಕವನ್ನು ಎಲ್ಲರೂ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.
