ವಚನ ವಿಜಯೋತ್ಸವ-೨೦೨೬
ಬೀದರ:
ವಚನ ವಿಜಯೋತ್ಸವದ ನಿಮಿತ್ಯ ಶುಕ್ರವಾರ ಬೆಳಗ್ಗೆ ಬಸವಗಿರಿಯ ಸುಂದರ ಪರಿಸರದಲ್ಲಿ ಸಾವಿರಾರು ಶರಣ ಶರಣೆಯರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ನೇರವೇರಿತು.
ಬಿಳಿ ಉಡುಪು, ಕಾವಿಸ್ಕಾರ್ಫ್, ಹಣೆಯ ಮೇಲೆ ವಿಭೂತಿ, ಕೈಯಲ್ಲಿ ಇಷ್ಟಲಿಂಗದೊಂದಿಗೆ ಪೂಜೆಯಲ್ಲಿ ನಿರತರಾದವರ ದೃಶ್ಯ ಕಣ್ಮನ ಸೆಳೆಯಿತು.

ಬಸವ ಓಂ ನಮಃ ಶಿವಾಯ ಮಂತ್ರ ಝೇಂಕರಿಸಿತು. ಡಾ. ಗಂಗಾಂಬಿಕಾ ಅಕ್ಕ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷತೆ ತೋರಿಸಿಕೊಟ್ಟು, ಇಷ್ಟಲಿಂಗ ಪೂಜೆಯಿಂದ ಸಂಕಲ್ಪ ಸಿದ್ಧಿಯಾಗುತ್ತದೆ. ಸಹಜ ಜೀವನ ಸಾಗಿಸಲು ಇಷ್ಟಲಿಂಗ ಪೂಜೆ ಬೇಕು. ಅದರಿಂದ ಆಯುಷ್ಯ, ಆರೋಗ್ಯ ವೃದ್ಧಿಸಿ ಶಾಂತಿ ದೊರೆಯುತ್ತದೆ ಎಂದರು.
ಸಿಂಧನೂರಿನ ವಾಣಿಜ್ಯ ತೆರಿಗೆ ನಿವೃತ್ತ ಅಧಿಕಾರಿ, ಅನುಭಾವಿ ಪಿ. ರುದ್ರಪ್ಪ ಅನುಭಾವ ನೀಡುತ್ತ, ಬಸವಣ್ಣನವರು ದೇವರ ಸ್ವರೂಪವನ್ನು ಜನಮಾನಸಕ್ಕೆ ತಿಳಿಸಿದರು. ಜೀವಾತ್ಮ ಬಿಟ್ಟು ಪರಮಾತ್ಮ ದೇವರಿಲ್ಲ. ನಿತ್ಯ ಲಿಂಗಪೂಜೆ, ಏಕಾಗ್ರತೆಯಿಂದ ಧ್ಯಾನ ಮಾಡಿದಲ್ಲಿ ದೇವರನ್ನು ಕಾಣಲು ಸಾಧ್ಯ. ಈ ಕ್ರಮದಿಂದ ನಮ್ಮ ಬದುಕು ಹಸನಾಗುವುದು. ಭಕ್ತಿ ಮತ್ತು ವೈಚಾರಿಕತೆಯಿಂದ ಕೂಡಿದ ಧರ್ಮ ಲಿಂಗಾಯತ. ವೈಚಾರಿಕತೆಯಿಲ್ಲದ ಭಕ್ತಿ ಮೌಢ್ಯತೆಯಿಂದ ಕೂಡಿರುತ್ತದೆ ಎಂದರು.

ಸಾನಿಧ್ಯ ವಹಿಸಿದ ಬಸವ ಮಹಾಮನೆ ಸಂಸ್ಥೆಯ ಸಿದ್ಧರಾಮೇಶ್ವರ ಶರಣರು ಬೆಲ್ದಾಳ ಆಶೀರ್ವಚನ ನೀಡಿದರು.
ಸತ್ಯಕ್ಕತಾಯಿ, ಲಲಿತಾತಾಯಿ, ಚಂದ್ರಕಲಾ ತಾಯಿ ನೇತೃತ್ವ ವಹಿಸಿದ್ದರು. ಸರಸ್ವತಿ ಘೂಳೆ, ಜಗನ್ನಾಥ ರಾಚೋಟಿ, ಕೆ. ನರಹರಿ ಶಿವಕುಮಾರ ಸಾಲಿ, ಮೀನಾಕ್ಷಿ ಪಾಟೀಲ, ಅನುಪಮಾ ರೋಳಕರ್, ಸಂಗೀತಾ ಪಾಟೀಲ, ಅಂಬಾರಾಯ ಬಿರಾದಾರ, ಪ್ರತಿಭಾ ಗಾದಗಿ, ಸಂಗಮೇಶ ತೊಗರಖೇಡೆ, ಇಂದುಮತಿ ಪನ್ನಾಳೆ, ಭಕ್ತರಾಜ ಚಿತ್ತಾಪೂರೆ ಸೇರಿದಂತೆ ಇತರರಿದ್ದರು.
ಇದೇ ಸಂದರ್ಭ ಶಂಕರೆಪ್ಪ ಹೊನ್ನಾ, ಗಣಪತಿ ಕಾಸ್ತೆ, ಸಂಗಪ್ಪ ಉಳ್ಳಾಗಡ್ಡೆ ಅವರಿಗೆ ಶರಣ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಆದಿತ್ಯ ಪಂಚಾಳ ವಚನ ಸಂಗೀತ ನಡೆಸಿಕೊಟ್ಟರು. ಲಿಂಗಾಕ್ಷಿ ಖೇಣಿ ವಚನ ನೃತ್ಯ ನಡೆಸಿಕೊಟ್ಟರು.

ಷಟಸ್ಥಲ ಧ್ವಜಾರೋಹಣ:
ಬಸವಗಿರಿಯ ಪರುಷಕಟ್ಟೆಯ ಮುಂಭಾಗದಲ್ಲಿ ಡಾ. ಗಂಗಾಂಬಿಕಾ ಅಕ್ಕನವರ ಸಾನಿಧ್ಯದಲ್ಲಿ ಡಾ. ವಿಜಯಶ್ರೀ ಡಾ. ಸುಭಾಷ ಬಶೆಟ್ಟಿ ದಂಪತಿ ಧ್ವಜಾರೋಹಣಗೈಯುವ ಮೂಲಕ ವಚನ ವಿಜಯೋತ್ಸವಕ್ಕೆ ಚಾಲನೆ ನೀಡಿದರು. ಧ್ವಜಗೀತೆಯ ನಂತರ ಪರುಷಕಟ್ಟೆಯ ಮೇಲೆ ವಚನ ಪ್ರಾರ್ಥನೆ ಸಲ್ಲಿಸಿದರು. ವಚನ ವಿಜಯೋತ್ಸವಕ್ಕೆ ಜಯವಾಗಲಿ, ಕಲ್ಯಾಣ ಕ್ರಾಂತಿಗೆ ಜಯವಾಗಲಿ, ಶರಣ ಸಂಕಲ್ಪಕ್ಕೆ ಜಯವಾಗಲಿ ಎಂಬ ಜಯಘೋಷ ಮೊಳಗಿದವು. ಭಾರತಿ ಪಾಟೀಲ ಸ್ವಾಗತಿಸಿದರೆ, ಆರತಿ ಲಕ್ಕಶೆಟ್ಟಿ ನಿರೂಪಿಸಿದರು.
