ಲಂಡನ್
ಬಸವಾದಿ ಶರಣರ ಕಲ್ಯಾಣ ಕ್ರಾಂತಿ ಬರಿ ಆಧ್ಯಾತ್ಮಿಕ, ಧಾರ್ಮಿಕ ಚಿಂತನೆಯ ವಿಷಯವಾಗದೆ, ಕಲ್ಯಾಣ ರಾಜ್ಯದ (Welfare State) ಕಲ್ಪನೆಯನ್ನೂ ಜಾರಿಗೆ ತರಲು ಪ್ರಯತ್ನಿಸಿತು.
ಉದಾಹರಣೆಗೆ ಏಲೇಶ್ವರ ಕೇತಯ್ಯನವರ ಒಂದು ವಚನ ನೋಡಿ:
“ಆವ ವ್ರತ ನೇಮವ ಹಿಡಿದಡೂ
ಆ ವ್ರತ ನೇಮದ ಭಾವಶುದ್ಧವಾಗಿರಬೇಕು.
ಅಸಿ ಕೃಷಿ ಯಾಚಕ ವಾಣಿಜ್ಯತ್ವದಿಂದ ಬಂದ ದ್ರವ್ಯಂಗಳಲ್ಲಿ
ಬಾಹ್ಯದ ಬಳಕೆ ಅಂತರಂಗದ ನಿರಿಗೆ
ಉಭಯ ಶುದ್ಧವಾಗಿಪ್ಪ ಭಕ್ತನಂಗವೆ ಏಲೇಶ್ವರಲಿಂಗದಂಗ.”
ಇಲ್ಲಿ ಸಂದರ್ಭಕ್ಕಾಗಿ, ಬಹಿರಂಗದ ಅಂದರೆ ಬಂಡವಾಳ ಕೇಂದ್ರಿತ ಮತ್ತು ಅಂತರಂಗದ ಅಂದರೆ ಸಬಲೀಕರಣ ಅಂತ ಓದಿಕೊಂಡರೆ ಶರಣರ ಆರ್ಥಿಕ ಚಿಂತನೆಯ ಬಗ್ಗೆ ಒಂದು ಸಣ್ಣ ಸುಳಿವು ಸಿಗಬಹುದು.
ನೆನ್ನೆ ಮಂಡನೆಯಾದ 2026-27ರ ಕೇಂದ್ರ ಬಜೆಟ್‌ನ ನಂತರ ‘ವಿಕಸಿತ ಭಾರತ’ ಮತ್ತು ಟ್ರಿಲಿಯನ್ ಡಾಲರ್ ಕನಸುಗಳ ಆಕರ್ಷಕ ಗ್ರಾಫಿಕ್ಸ್ ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಆದರೆ ಬಸವತತ್ವದ ಅಡಿಯಲ್ಲಿ ಈ ಬಜೆಟ್‌ನ್ನು ವಿಶ್ಲೇಷಿಸಿದರೆ ನಮಗೆ ಕಾಣಿಸುವುದೇನು ಎಂದು ನೋಡೋಣ:
ಸಚಿವಾಲಯದ ಹವಾನಿಯಂತ್ರಿತ ಕೊಠಡಿಗಳಿಂದ ಹೊರಬಂದು, ಭಾರತದ ಅತ್ಯಂತ ಹಿಂದುಳಿದ ಪ್ರದೇಶಗಳ ಸ್ಥಿತಿಯನ್ನು ನೋಡಿದರೆ, ಈ ಬಜೆಟ್‌ನ ಅಂಕಿ-ಅಂಶಗಳು, ಯಾವದೊ ತಿಳಿಯಲಾರದ ಭಾಷೆಯಂತೆ ಭಾಸವಾಗುತ್ತವೆ.
ಭಾರತದ ಅತ್ಯಂತ ದುರ್ಬಲ ವರ್ಗದ ಮೇಲೆ ಈ ಬಜೆಟ್ ಬೀರುವ ಪ್ರಭಾವವನ್ನು ಅರ್ಥಮಾಡಿಕೊಳ್ಳಲು, ನಾವು ನಮ್ಮ ನೆಲದ ಶ್ರೇಷ್ಠ ತತ್ವಗಳಾದ ‘ಕಾಯಕ’ (ದುಡಿಮೆಯೇ ದೈವ) ಮತ್ತು ‘ದಾಸೋಹ’ (ಸಮಾಜದೊಂದಿಗೆ ಹಂಚಿಕೊಳ್ಳುವಿಕೆ) ಎಂಬ ಮಾಪನಗಳ ಮೂಲಕ ನೋಡಬೇಕಿದೆ.
- ಕಾಯಕ ದೃಷ್ಠಿಕೋನದಿಂದ
ಉದ್ಯೋಗವಿಲ್ಲದ ಬೆಳವಣಿಗೆಯಲ್ಲಿ ಘನತೆ ಎಲ್ಲಿದೆ?
ಕಾಯಕ ತತ್ವವು “ಕಾಯಕವೇ ಕೈಲಾಸ” ಎಂದು ಕಲಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಉತ್ಪಾದನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಬಲನಾಗಬೇಕು ಮತ್ತು ಆ ದುಡಿಮೆಗೆ ಗೌರವವಿರಬೇಕು ಎಂಬುದು ಇದರ ಆಶಯ.
ಸರ್ಕಾರ 2026ರ ಬಜೆಟ್ ಮೂಲಸೌಕರ್ಯಕ್ಕಾಗಿ ₹12.2 ಲಕ್ಷ ಕೋಟಿ ಮೀಸಲಿಡುವ ಮೂಲಕ ಉತ್ಪಾದನೆಗೆ ಒತ್ತು ನೀಡಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದೆ. ಆದರೆ, ಕುಡಿಯುವ ನೀರು ಮತ್ತು ಸ್ಥಳೀಯ ಸಣ್ಣ ಕೈಗಾರಿಕೆಗಳಿಲ್ಲದ ಜಿಲ್ಲೆಗಳ ಯುವಕರಿಗೆ ಈ ಬೃಹತ್ ಯೋಜನೆಗಳು ಒಂದು ಬಿಸಿಲು ಕುದುರೆಯಂತೆ ಕಾಣುತ್ತವೆ.
ಹೊಂದಾಣಿಕೆಯ ಕೊರತೆ
ಬಜೆಟ್ ಸೆಮಿಕಂಡಕ್ಟರ್ ಮಿಷನ್ ಮತ್ತು ಕೈಗಾರಿಕಾ ಕಾರಿಡಾರ್‌ಗಳಿಗೆ ಕೋಟ್ಯಂತರ ರೂಪಾಯಿ ಸುರಿಯುತ್ತಿದೆ. ಆದರೆ ಹಿಂದುಳಿದ ಜಿಲ್ಲೆಗಳಿಗೆ ಅಗತ್ಯವಿರುವ ಶ್ರಮ-ಆಧಾರಿತ ಕಾಯಕಕ್ಕೆ (Labor-intensive work) ಇಲ್ಲಿ ಹೆಚ್ಚಿನ ಮಾನ್ಯತೆ ಇಲ್ಲ. ಹಾಗೇಯೆ, ಮನರೇಗಾವನ್ನ ಹೆಸರ ಬದಲಾಯಿಸುವದರೊಂದಿಗೆ, ಆ ಯೋಜನೆಯ ಆಶಯವನ್ನ ಮರೆಮಾಚಿದರು.
ದುಡಿಮೆಯ ಕೊರತೆ
ಹಿಂದುಳಿದ ಜಿಲ್ಲೆಗಳ ಯುವಕರಿಗೆ ಸ್ಥಳೀಯವಾಗಿ ಕೆಲಸ ಸಿಗದಿದ್ದರೆ, ಅವರ ಪಾಲಿಗೆ ‘ಕಾಯಕ’ ಎಂಬುದು ದೈವತ್ವದ ಬದಲು ‘ನಿರುದ್ಯೋಗದ ನಿರಾಸೆ’ಯಾಗಿ ಬದಲಾಗುತ್ತದೆ.
ಬಜೆಟ್ ಕೇವಲ ತಾಂತ್ರಿಕ ಮತ್ತು ಬಂಡವಾಳ-ಆಧಾರಿತ ವಲಯಗಳಿಗೆ ಆದ್ಯತೆ ನೀಡುವ ಮೂಲಕ “ಕಾಯಕದ ಕಂದಕ (Employement Gap)” ವನ್ನು ಸೃಷ್ಟಿಸಿದೆ. ಉತ್ಪಾದನಾ ಸಾಧನಗಳು ಕೇವಲ ನಗರದ ಗಣ್ಯರ ಪಾಲಾಗುತ್ತಿವೆ.
- ದಾಸೋಹದ ದೃಷ್ಠಿಕೋನದಿಂದ
ಕೇವಲ ಬದುಕುಳಿಯುವುದು ಸಬಲೀಕರಣವಲ್ಲ
ದಾಸೋಹ ಎಂದರೆ ಕೇವಲ ದಾನವಲ್ಲ; ಅದು ಸಮಾಜದ ಸಂಪತ್ತನ್ನು ಸಮಾನವಾಗಿ ಹಂಚಿ, ಪ್ರತಿಯೊಬ್ಬರಿಗೂ ಗೌರವಾನ್ವಿತ ಜೀವನವನ್ನು ಒದಗಿಸುವ ನೈತಿಕ ಜವಾಬ್ದಾರಿ.
ಸರ್ಕಾರವು ಉಚಿತ ಪಡಿತರ ಯೋಜನೆ ಮತ್ತು 17 ಜೀವ ಉಳಿಸುವ ಔಷಧಗಳ ಮೇಲಿನ ಸುಂಕ ರದ್ದತಿಯನ್ನು ‘ದಾಸೋಹ’ ಎಂದು ಬಿಂಬಿಸುತ್ತಿದೆ. ಇವು ಅಗತ್ಯವಾದ ಸುರಕ್ಷತಾ ಕ್ರಮಗಳಾದರೂ, ಇವು “ಬದುಕುಳಿಯುವ ದಾಸೋಹ” ಮಾತ್ರ, ಇವು “ಬಾಳನ್ನು ಬೆಳಗುವ ದಾಸೋಹ” ಅಲ್ಲ.
ಆರೋಗ್ಯ ಮತ್ತು ಶಿಕ್ಷಣದ ಕೊರತೆ
ಹಿಂದುಳಿದ ಜಿಲ್ಲೆಗಳಲ್ಲಿ ನಿಜವಾದ ‘ದಾಸೋಹ’ ಎಂದರೆ ಗುಣಮಟ್ಟದ ಶಾಲೆಗಳು ಮತ್ತು 24 ಗಂಟೆ ಕೆಲಸ ಮಾಡುವ ಆಸ್ಪತ್ರೆಗಳು. ಆದರೆ ಬಜೆಟ್ “ಡಿಜಿಟಲ್ ಹೆಲ್ತ್” ಮತ್ತು AI ಶಿಕ್ಷಣದ ಬಗ್ಗೆ ಮಾತನಾಡುತ್ತದೆಯೇ ಹೊರತು, ಹಳ್ಳಿಯ ಆಸ್ಪತ್ರೆಗಳಲ್ಲಿ ವೈದ್ಯರ ಮತ್ತು ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ಭರವಸೆ ನೀಡುತ್ತಿಲ್ಲ.
ತೆರಿಗೆ ಮತ್ತು ಪುನರ್ ಹಂಚಿಕೆ
ಹೊಸ ಆದಾಯ ತೆರಿಗೆ ಕಾಯ್ದೆಯು ಮಧ್ಯಮ ವರ್ಗಕ್ಕೆ ಸಮಾಧಾನ ನೀಡಬಹುದು. ಆದರೆ ದೇಶದ ಶೇ. 1ರಷ್ಟು ಶ್ರೀಮಂತರ ಬಳಿ ಇರುವ ಅತೀ ಹೆಚ್ಚಿನ ಸಂಪತ್ತನ್ನು ಕೆಳಮಟ್ಟದ ಶೇ. 50ರಷ್ಟು ಜನರಿಗೆ ಹಂಚುವ ಯಾವುದೇ ದಿಟ್ಟ ಕ್ರಮ ಇಲ್ಲಿ ಕಾಣುತ್ತಿಲ್ಲ.
ಜನರಿಗೆ ಉಚಿತ ಧಾನ್ಯ ನೀಡುವುದು ಅವರನ್ನು ಬದುಕಿಸಿಡಬಹುದು, ಆದರೆ ಅವರಿಗೆ ಗುಣಮಟ್ಟದ ಸಾರ್ವಜನಿಕ ಸೇವೆಗಳನ್ನು (ಶಿಕ್ಷಣ, ಆರೋಗ್ಯ) ನೀಡುವುದು ಅವರನ್ನು ಸಮಾನರನ್ನಾಗಿ ಮಾಡುತ್ತದೆ. ಬಜೆಟ್ ಸಬಲೀಕರಣಕ್ಕಿಂತ ಹೆಚ್ಚಾಗಿ ಅವಲಂಬನೆಯನ್ನು ಆರಿಸಿಕೊಂಡಿದೆ.
ಬಸವಾದಿ ಶರಣರ ಕನಸಿನ ಸಮಾಜದಲ್ಲಿ ದುಡಿಯುವವನಿಗೆ ಗೌರವವಿರಬೇಕು ಮತ್ತು ಅಗತ್ಯವಿರುವವರಿಗೆ ಸಬಲೀಕರಣದ ಹಸ್ತ ಸಿಗಬೇಕು. ಹಿಂದುಳಿದ ಜಿಲ್ಲೆಗಳ ಯುವಕರ ‘ಕಾಯಕ’ಕ್ಕೆ ಬಲ ತುಂಬುವವರೆಗೆ ಮತ್ತು ಶಿಕ್ಷಣದ ‘ದಾಸೋಹ’ವನ್ನು ಸರಿಯಾಗಿ ಮಾಡುವವರೆಗೆ, ನಾವು ನಿಜವಾದ “ವಿಕಸಿತ ಭಾರತ”ವನ್ನು ನಿರ್ಮಿಸಲು ಸಾಧ್ಯವಿಲ್ಲ.
ಘೋಷಿತ 5,000 ಕಿಲೋಮೀಟರ್ ವೇಗದ ರೈಲು ಮಾರ್ಗವನ್ನು ನಿರ್ಮಿಸಿ, ಹಿಂದುಳಿದ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ನರ್ಸ್ ಇಲ್ಲದಂತೆ ಮಾಡುವುದು ಯಾವ ನ್ಯಾಯ? ಇದು ಕೇವಲ ಅಂಕಿ-ಅಂಶಗಳ ಬಜೆಟ್ ಆಗಿದೆಯೇ ಹೊರತು ಜನರ ಬಜೆಟ್ ಅಲ್ಲ.
