ಮಹಾಮನೆಯಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ
ಚಾಮರಾಜನಗರ:
ಶಕ್ತಿ, ಸಹನೆ, ಧೈರ್ಯ, ಪ್ರೀತಿ ಹಾಗೂ ಸಾಧನೆಯ ಪ್ರತೀಕವಾಗಿ ಬದುಕಿನ ಪ್ರತಿಯೊಂದು ಹಂತದಲ್ಲೂ ಸ್ಫೂರ್ತಿಯಾಗುವ ಮಹಿಳೆ ಸಮಾಜದ ವಿಶಿಷ್ಟ ವ್ಯಕ್ತಿತ್ವ ಎಂದು ಮಾಜಿ ಸಚಿವೆ ಗೀತಾ ಮಹಾದೇವ ಪ್ರಸಾದ ಅಭಿಪ್ರಾಯಪಟ್ಟರು.
ನಗರದ ಮಹಾಮನೆ ಸಭಾಂಗಣದಲ್ಲಿ ಸೋಮವಾರ ವೀರಶೈವ ಲಿಂಗಾಯತ ನೌಕರರ ಸಂಘ ಹಾಗೂ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಾಜಿ ಶಾಸಕರಾದ ಎಸ್.ಪುಟ್ಟಸ್ವಾಮಿ ಮತ್ತು ಪ್ರೊ.ಮಲೆಯೂರು ಗುರುಸ್ವಾಮಿ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆ ಅಮ್ಮನಾಗಿ, ಮಡದಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ ಬದುಕಿನ ಪ್ರತಿಯೊಂದು ರೂಪದಲ್ಲಿಯೂ ಪ್ರೀತಿ, ಕಾಳಜಿ ಮತ್ತು ಮಮತೆಯನ್ನು ಹಂಚುವ ನಿಸ್ವಾರ್ಥದ ಜೀವಿಯಾಗಿದ್ದಾಳೆ. ಮಹಿಳೆಯ ತ್ಯಾಗ, ಪರಿಶ್ರಮ ಹಾಗೂ ಸಹನೆಗೆ ಯಾವುದೂ ಸಾಟಿಯಾಗುವುದಿಲ್ಲ. ಜಗತ್ತನ್ನು ಸುಂದರವಾಗಿಸುವ ಶಕ್ತಿ ಮಹಿಳೆಯಲ್ಲಿದೆ. ಬದುಕಿಗೆ ಅರ್ಥ ನೀಡುವ ಜಗತ್ತಿನ ಎಲ್ಲಾ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರು ಮಾತನಾಡಿ, ಮಹಿಳೆಯರು ಕುಟುಂಬದ ಆಧಾರಸ್ತಂಭ, ಮಾತ್ರವಲ್ಲದೆ ಸಮಾಜದ ಅಭಿವೃದ್ಧಿಗೆ ಪ್ರಮುಖ ಶಕ್ತಿಯಾಗಿದ್ದಾರೆ.
ಮಹಿಳೆಯರು ತಮ್ಮ ತ್ಯಾಗ, ಪ್ರೀತಿ ಮತ್ತು ಪರಿಶ್ರಮದ ಮೂಲಕ ಸಮಾಜವನ್ನು ಉತ್ತಮ ದಾರಿಯಲ್ಲಿ ನಡೆಸುತ್ತಿದ್ದಾರೆ.
ಶಿಕ್ಷಣ, ಉದ್ಯೋಗ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಹೊಸ ಇತಿಹಾಸ ನಿರ್ಮಿಸುತ್ತಿದ್ದಾರೆ. ಸಮಾನತೆ, ಗೌರವ ಹಾಗೂ ಅವಕಾಶಗಳೊಂದಿಗೆ ಮಹಿಳೆ ಮುಂದೆ ಸಾಗಿದಾಗ ಸಮಾಜವು ಮತ್ತಷ್ಟು ಶಕ್ತಿಶಾಲಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಬಸವ ರಾಜೇಂದ್ರ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಾ.ಶ್ವೇತಾ ಶಶಿಧರ್ ಮಾತನಾಡಿ, ಪ್ರತಿಯೊಂದು ಕುಟುಂಬದ ಆಧಾರ ಮಹಿಳೆಯಾಗಿದ್ದು, ಅವಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕುಟುಂಬದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಅತ್ಯವಶ್ಯಕ ಎಂದು ಹೇಳಿದರು.
ಮಹಿಳೆಯರ ಸಬಲೀಕರಣವು ನವಭಾರತ ನಿರ್ಮಾಣದ ಬಲವಾದ ಅಡಿಪಾಯವಾಗಿದೆ. ಮಹಿಳೆಯರಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಅವರ ಕನಸುಗಳಿಗೆ ಬೆಂಬಲ ನೀಡಿ, ಅವರ ಸಾಧನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಕೆ.ರವಿಕುಮಾರ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಸಂತಮ್ಮ, ಡಾ.ನಟರಾಜಮೂರ್ತಿ, ಪಟೇಲ್ ವೃಷಬೆಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಾರ್ವತಿ ಮಹಿಳಾ ಸಮಾಜದ ಸದಸ್ಯರಿಂದ ಸಾಧಕ ಮಹಿಳೆಯರನ್ನು ಪರಿಚಯಿಸುವ ವೇಷಭೂಷಣ ಪ್ರದರ್ಶನ ಕಾರ್ಯಕ್ರಮ ನಡೆಯಿತು. ನಂತರ ಉಡಿಗಾಲದ ಶರಣೆ ನೀಲಾಂಬಿಕೆ ಭಜನೆ ತಂಡದವರು ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎನ್ ರಿಚ್ ಮಹದೇವಸ್ವಾಮಿ, ಮೂರು ಸಂಘಗಳ ಪದಾಧಿಕಾರಿಗಳಾದ ಜ್ಯೋತಿ ಪಟೇಲ್, ಸುಮಿತ್ರಾ, ಸವಿತಾರಾಣಿ, ನಾಗಮಣಿ, ಗೌರಮ್ಮ, ಉಮಾ ಮಹೇಶ್ವರಿ, ನಿರ್ಮಲ, ರಾಮಸಮುದ್ರ ಶಿವಕುಮಾರ, ಅರ್ಕಪ್ಪ, ಕೊತ್ತಲವಾಡಿ ಮಹಾದೇವಸ್ವಾಮಿ, ಐಟಿಐ ಮಹದೇವಸ್ವಾಮಿ, ಕಿರಣ್ ರಾಜು, ದೊಡ್ಡರಾಯಪೇಟೆ ನಾಗರಾಜು, ಮಲ್ಲಿಕಾರ್ಜುನಪ್ಪ, ಉಮೇಶ್, ಪೊಲೀಸ್ ಜಯಶಂಕರಮೂರ್ತಿ, ಬಿ.ಎಸ್. ಬಸವರಾಜು, ಸೋಮಶೇಖರ, ಯೋಗೇಶ, ಕಾಳನಹುಂಡಿ ಗುರುಸ್ವಾಮಿ, ಗೌಡಿಕೆ ನಾಗೇಶ, ಕೆಂಪನಪುರ ಮಹಾದೇವಸ್ವಾಮಿ, ಹೊನ್ನಮೇಟಿ ಸುಂದರ, ಆರ್.ಎಸ್. ಲಿಂಗರಾಜು, ಸಿದ್ದಲಿಂಗಸ್ವಾಮಿ, ವಿನಯ, ರತ್ನಮ್ಮ, ಸೇರಿದಂತೆ ಮೂರು ಸಂಘಗಳ ಅನೇಕ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
