ಸಾಣೇಹಳ್ಳಿ:
ಇಲ್ಲಿನ ಬೊಮ್ಮಣ್ಣರ ಶರಣೆ ದಾಕ್ಷಾಯಣಮ್ಮ ರಾಮಲಿಂಗಪ್ಪ ಅವರ ಮನೆಯಂಗಳದಲ್ಲಿ “ಅನುಭಾವದೆಡೆಗೆ” ಚಿಂತನಾಗೋಷ್ಠಿ ನಡೆಯಿತು.
ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಬಸವಣ್ಣನವರ ವಚನಗಳಲ್ಲಿ ಬದುಕಿನ ಸತ್ಯಗಳು ಅಡಗಿದ್ದು, ಅವುಗಳನ್ನು ಅರ್ಥೈಸಿಕೊಳ್ಳಲು ವಿವೇಚನಾ ಶಕ್ತಿಯ ಅಗತ್ಯವಿದೆ. ನಾವು ದೇವರನ್ನು ಗುಡಿ, ಗುಂಡಾರ, ಮಠ ಅಥವಾ ಪ್ರಕೃತಿಯ ಪಂಚಭೂತಗಳಲ್ಲಿ ಹುಡುಕುತ್ತೇವೆ. ಆದರೆ ಪ್ರತಿಯೊಬ್ಬ ಮನುಷ್ಯನ ಒಳಗೂ ಆ ಶಿವಚೈತನ್ಯ ಅಥವಾ ದೈವತ್ವ ಅಡಗಿದೆ.
ಹಾಗಿದ್ದರೂ ಅದು ನಮಗೆ ಏಕೆ ಕಾಣುತ್ತಿಲ್ಲ? ಅದಕ್ಕೆ ಕಾರಣ ನಮ್ಮನ್ನು ಆವರಿಸಿರುವ ಅಜ್ಞಾನವೆಂಬ ಕತ್ತಲೆ. ಕಣ್ಣುಗಳು ಚೆನ್ನಾಗಿದ್ದರೂ ಕತ್ತಲೆಯಲ್ಲಿ ವಸ್ತುಗಳು ಕಾಣಿಸದಂತೆ, ಅಜ್ಞಾನದ ಕತ್ತಲೆಯಲ್ಲಿ ನಮ್ಮೊಳಗಿನ ದೈವತ್ವ ನಮಗೆ ಅರಿವಾಗುತ್ತಿಲ್ಲ.
ನಮ್ಮೊಳಗಿನ ಈ ದೈವತ್ವವನ್ನು ಕಾಣಲು ಸದ್ಗುರುವಿನ ಮಾರ್ಗದರ್ಶನ ಎಂಬ ಬೆಳಕು ಅತ್ಯಗತ್ಯ. ಸಂಸ್ಕಾರ ಮತ್ತು ಜ್ಞಾನದ ಮೂಲಕ ಮಾತ್ರ ನಮ್ಮ ಅಂತರಂಗದ ಶಿವನನ್ನು ನಾವು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ.
ಮನುಷ್ಯನ ಅಂತರಂಗವನ್ನು ಆವರಿಸಿರುವ ಅರಿಷಡ್ವರ್ಗಗಳೆಂಬ ಕತ್ತಲೆಯನ್ನು ಹೋಗಲಾಡಿಸಿ, ಜ್ಞಾನದ ಬೆಳಕನ್ನು ತೋರುವ ಶಕ್ತಿ ಕೇವಲ ‘ಗುರು’ವಿಗೆ ಮಾತ್ರ ಸಾಧ್ಯ. “ನಮ್ಮ ಸುತ್ತಲಿನ ವಸ್ತುಗಳು ಕತ್ತಲೆಯಲ್ಲಿ ಹೇಗೆ ಕಾಣಿಸುವುದಿಲ್ಲವೋ, ಹಾಗೆಯೇ ನಮ್ಮ ಅಂತರಂಗದಲ್ಲೂ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ದುರ್ಗುಣಗಳ ಕತ್ತಲೆ ಆವರಿಸಿದೆ. ಈ ಕತ್ತಲೆಯನ್ನು ಕಳೆದು ಬೆಳಕು ತೋರುವ ಗುರು ಸಿಗುತ್ತಿಲ್ಲ.

ಗುರು ಹೊರಗೆ ಹುಡುಕುವುದಲ್ಲ ನಮಗೆ ನಾವೇ ಗುರುವಾಗಬೇಕು. ಶರಣರ ಪರಿಭಾಷೆಯಲ್ಲಿ ಹೇಳುವುದಾದರೆ ‘ಅರಿವೇ ಗುರು’. ಬಸವಣ್ಣನವರು ತಮ್ಮ ಅರಿವನ್ನೇ ಗುರುವನ್ನಾಗಿಸಿಕೊಂಡು ಅಂತರಂಗದ ಕತ್ತಲೆಯನ್ನು ಗೆದ್ದು ‘ಶಿವಚೈತನ್ಯ’ದ ದರ್ಶನ ಪಡೆದರು.
12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ‘ಅನುಭವ ಮಂಟಪ’ ಕೇವಲ ಒಂದು ಸ್ಥಳವಾಗಿರಲಿಲ್ಲ; ಅದು ವಿಚಾರಧಾರೆಗಳ ಸಂಗಮವಾಗಿತ್ತು. ಕಾಯಕ ಮುಗಿಸಿ ಸಂಜೆ ಹೊತ್ತು ಎಲ್ಲರೂ ಸೇರಿ ಅಂತರಂಗದ ಜ್ಯೋತಿಯ ಬಗ್ಗೆ ಚರ್ಚಿಸುತ್ತಿದ್ದರು. ಸಾಮಾನ್ಯ ಜನರೂ ಕೂಡ ಈ ಗೋಷ್ಠಿಗಳ ಮೂಲಕ ಅನುಭಾವಿಗಳಾಗಿ ರೂಪುಗೊಳ್ಳುತ್ತಿದ್ದರು. ಇಂತಹ ಸದ್ಗೋಷ್ಠಿಗಳು ಇಂದಿನ ಪ್ರತಿ ಮನೆಯಲ್ಲೂ, ಮಠಗಳಲ್ಲೂ ನಡೆಯಬೇಕಾದ ಅಗತ್ಯವಿದೆ ಎಂದರು.
ಸಜ್ಜನರ ಸಂಘ ಸಕ್ಕರೆಯ ಸವಿಯಿದ್ದಂತೆ (ಅಮೃತ).
ದುರ್ಜನರ ಸಂಗ ಇದು ವಿಷಕಾರಿ ಹಾವಿನ ಸಹವಾಸವಿದ್ದಂತೆ.
“ವಿಷ ಬೇಕೋ ಅಥವಾ ಅಮೃತ ಬೇಕೋ ಎಂಬುದು ನಮ್ಮ ಅರಿವಿಗೆ ಬಿಟ್ಟ ವಿಚಾರ. ಯಾರು ತಮ್ಮ ಅರಿವನ್ನು ಆಚಾರದಲ್ಲಿ ತರುತ್ತಾರೋ, ಅವರು ಅಮೃತ ಸೇವನೆ ಮಾಡಿದಂತೆ.
ಶರಣರು ತೋರಿದ ಸಮಾಜಮುಖಿ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಮನುಷ್ಯ ತನ್ನ ದುರಾಸೆಯಿಂದ ನಿರ್ಮಿಸಿಕೊಂಡಿರುವ ಗೋಡೆಗಳನ್ನು ಕೆಡವಿ ‘ನಾವೆಲ್ಲರೂ ಒಂದು’ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕಿದೆ.
12ನೇ ಶತಮಾನದ ಅನುಭವ ಮಂಟಪವು ಜಾತ್ಯತೀತ ಮತ್ತು ಲಿಂಗಾತೀತ ಸಮಾಜಕ್ಕೆ ಮುನ್ನುಡಿ ಬರೆದಿತ್ತು. ಅಲ್ಲಿ ಅಲ್ಲಮಪ್ರಭುಗಳು, ಚೆನ್ನಬಸವಣ್ಣ, ಅಕ್ಕಮಹಾದೇವಿ, ಸೂಳೆ ಸಂಕವ್ವೆ ಹಾಗೂ ಹೆಂಡದ ಮಾರಯ್ಯನವರಂತಹ ವಿಭಿನ್ನ ಹಿನ್ನೆಲೆಯ ಶರಣರು ಸಮಾನತೆಯಿಂದ ಬದುಕಿದ್ದರು.

ಅನೇಕರು ವೃತ್ತಿ ಮತ್ತು ಕಾಯಕದ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಕಾಯಕ ಎಂಬುದು ಕೇವಲ ಹೊಟ್ಟೆಪಾಡಿಗಾಗಿ ಮಾಡುವ ಕೆಲಸವಲ್ಲ; ಅದು ಸತ್ಯ ಮತ್ತು ಶುದ್ಧತೆಯಿಂದ ಕೂಡಿದ ಅಧ್ಯಾತ್ಮಿಕ ಹಾದಿ. ಕಾಯಕದಿಂದ ವ್ಯಕ್ತಿ ಹಾಗೂ ಸಮಾಜದ ವಿಕಾಸವಾಗಬೇಕು. ಅನ್ಯರಿಗೆ ತೊಂದರೆ ಕೊಡುವ ಅಥವಾ ಸಮಾಜಕ್ಕೆ ಮಾರಕವಾಗುವ ಕೆಲಸಗಳನ್ನು ‘ಕಾಯಕ’ ಎಂದು ಕರೆಯಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಶರಣ ಚಿಂತಕ ಪರಮೇಶ್ವರಪ್ಪ ಮಾತನಾಡಿ; ಸಮಾಜದಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆ, ಜಾತಿಭೇದ ಮತ್ತು ಅಸಮಾನತೆಯನ್ನು ತೊಡೆದುಹಾಕಲು ಬಸವಣ್ಣನವರ ತತ್ವಗಳೇ ದಾರಿದೀಪ ಎಂದು ಪ್ರತಿಪಾದಿಸಿದರು. ಬಸವಣ್ಣನವರು ಮತ್ತು ಶರಣರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಅಗತ್ಯತೆಯನ್ನು ಒತ್ತಿ ಹೇಳಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಗಂಡು-ಹೆಣ್ಣು ಎಂಬ ಭೇದವಿಲ್ಲದೆ, ಜಾತಿ ಮತ್ತು ವರ್ಗಗಳ ತಾರತಮ್ಯವಿಲ್ಲದ ಶ್ರೇಣೀಕೃತ ಸಮಾಜದ ವಿರುದ್ಧ ಧ್ವನಿ ಎತ್ತಿದರು. ಪ್ರತಿಯೊಬ್ಬರೂ ಸಮಾನರು ಎಂಬ ವಿಶ್ವಧರ್ಮವನ್ನು ಸ್ಥಾಪಿಸಿದರು. ಅಂದು ಶರಣರು ಅನುಭವಿಸಿದ ಕಷ್ಟಗಳು ಮತ್ತು ಅವರ ತ್ಯಾಗ, ಬಲಿದಾನದ ಫಲವಾಗಿ ಇಂದು ನಾವು ಸಮಾಜದಲ್ಲಿ ಗೌರವದ ಸ್ಥಾನಮಾನ ಪಡೆದಿದ್ದೇವೆ.
ಲಿಂಗಾಯತ ಧರ್ಮ ಎಂಬುದು ಕೇವಲ ಒಂದು ಜಾತಿಯಲ್ಲ, ಅದೊಂದು ಮಾನವೀಯ ತತ್ವಗಳನ್ನು ಒಳಗೊಂಡ ವಿಶ್ವಧರ್ಮ. “ಮನುಷ್ಯನ ದೈಹಿಕ ಸ್ವಚ್ಛತೆಗೆ ಸ್ನಾನ, ಬಟ್ಟೆಯ ಸ್ವಚ್ಛತೆಗೆ ಮಡಿವಾಳ ಬೇಕು. ಆದರೆ ಮನಸ್ಸಿನ ಮೈಲಿಗೆಯನ್ನು ಕಳೆಯಲು ಶರಣರ ಅನುಭಾವ ಹಾಗೂ ಬಸವತತ್ವದ ಅರಿವು ಅತ್ಯಗತ್ಯ” ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಆದ್ರಿಕಟ್ಟೆಯ ಬಸವರಾಜಪ್ಪ ಮಾತನಾಡಿ; ಮನುಷ್ಯನ ಜೀವನದಲ್ಲಿ ಆಚರಣೆಗಳಿಗಿಂತ ಅವುಗಳ ಹಿಂದಿರುವ ತತ್ವಗಳು ಹೆಚ್ಚು ಮುಖ್ಯವಾಗುತ್ತವೆ. ತತ್ವವಿಲ್ಲದ ಆಚರಣೆ ಮತ್ತು ಆಚರಣೆಯಿಲ್ಲದ ತತ್ವ ಎರಡೂ ನಿರರ್ಥಕ.
ಕಾರ್ಯಕ್ರಮಕ್ಕೆ ತೆರಳುವಾಗ ಬಸ್ ನಿಲ್ದಾಣದಲ್ಲಿ ಭೇಟಿಯಾದ ವೃದ್ಧ ಮಹಿಳೆಯೊಬ್ಬರ ಮಾತುಗಳು ಭಕ್ತಿಯ ಗಾಢತೆಯನ್ನು ಪ್ರತಿಬಿಂಬಿಸುವಂತಿದ್ದವು. ಆಕೆ ಸಾಣೇಹಳ್ಳಿಯ ನಿವಾಸಿಯೇ ಎಂದು ಗುರುತಿಸಲು ಕಾರಣವಾಗಿದ್ದು ಆಕೆಯ ಹಣೆಯ ಮೇಲಿದ್ದ ದೊಡ್ಡ ವಿಭೂತಿ. “ನನ್ನ ಹಣೆಯ ಮೇಲಿರುವ ವಿಭೂತಿ ನೋಡಿಯೇ ನೀವು ನಾನು ಸಾಣೇಹಳ್ಳಿಯವಳು ಎಂದು ಗುರುತಿಸಿದಿರಲ್ಲವೇ?” ಎಂಬ ಆಕೆಯ ಪ್ರಶ್ನೆಯಲ್ಲಿ ತನ್ನೂರಿನ ಮತ್ತು ಸಂಪ್ರದಾಯದ ಬಗೆಗಿನ ಹೆಮ್ಮೆಯಿತ್ತು.

ಬೆಳಗಿನ ಜಾವ ಎದ್ದು, ಮುಖ ತೊಳೆದು ಭಕ್ತಿಯಿಂದ ವಿಭೂತಿ ಧರಿಸುವ ಆಕೆಯ ಶ್ರದ್ಧೆ ಎಲ್ಲರಿಗೂ ಮಾದರಿ. ಕೇವಲ ಲಿಂಗಧಾರಣೆ ಅಥವಾ ಪೂಜೆ ಮಾಡುವುದು ಮುಖ್ಯವಲ್ಲ, ಅದರ ಹಿಂದಿನ ಮೂಲಭೂತ ಶ್ರದ್ಧೆ ಮತ್ತು ಭಕ್ತಿ ಮುಖ್ಯ. ಸಾಣೇಹಳ್ಳಿಯ ವಿಭೂತಿ ಒಂದು ಗುರುತಾಗಿ ಮಾತ್ರವಲ್ಲದೆ, ಒಂದು ಸಂಸ್ಕೃತಿಯ ಸಂಕೇತವಾಗಿ ಹೇಗೆ ಉಳಿದುಬಂದಿದೆ ಎಂಬುದಕ್ಕೆ ಇದು ಸಾಕ್ಷಿ.
“ತತ್ವವಿಲ್ಲದ ಆಚರಣೆ ಮತ್ತು ಆಚರಣೆಯಿಲ್ಲದ ತತ್ವ – ಇವೆರಡಕ್ಕೂ ಬೆಲೆಯಿಲ್ಲ. ನಾವು ಮಾಡುವ ಆಚರಣೆಯ ಹಿಂದೆ ತತ್ವವಿದ್ದಾಗ ಮಾತ್ರ ಅದಕ್ಕೆ ಮೌಲ್ಯ ಬರುತ್ತದೆ.” 12ನೇ ಶತಮಾನದಿಂದ ಇಂದಿನವರೆಗೂ ನಾವು ಅನೇಕ ಆಚರಣೆಗಳನ್ನು ಪಾಲಿಸುತ್ತಾ ಬಂದಿದ್ದೇವೆ. ಆದರೆ ಅವುಗಳಲ್ಲಿ ತತ್ವ ಅಡಗಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ.
ವೈದಿಕ ಪರಂಪರೆಯಲ್ಲಿರುವ ಉನ್ನತ ತತ್ವಗಳು ಇಂದಿನ ಸಾಮಾಜಿಕ ಆಚರಣೆಗಳಲ್ಲಿ ಕೇವಲ ಬಾಹ್ಯ ರೂಪಕ್ಕೆ ಸೀಮಿತವಾಗಿರುವುದು ಆತಂಕಕಾರಿ. ಸಮಾಜದಲ್ಲಿ ಜ್ಞಾನದ ಹಸಿವಿಗಿಂತ ಮೌಢ್ಯದ ಆಚರಣೆಗಳೇ ಹೆಚ್ಚಾಗುತ್ತಿರುವುದು ಪ್ರಗತಿಗೆ ಮಾರಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾಮದ ಹಿರಿಯರಾದ ಎಸ್. ಆರ್. ಚಂದ್ರಶೇಖರಯ್ಯ ಮಾತನಾಡಿ; ತಮ್ಮ ವ್ಯವಹಾರ ಜ್ಞಾನ ಮತ್ತು ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಇಂದು ಸಮಾಜಕ್ಕೆ ಉಪಕಾರಿಯಾಗಿ ಬದುಕುತ್ತಿರುವ ರಾಮಲಿಂಗಪ್ಪ ಅವರ ಜೀವನ ಯುವ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ, ದಾಕ್ಷಾಯಿಣಿ, ಶರಣ್, ಅಕ್ಕನ ಬಳಗದವರು ವಚನಗೀತೆಗಳನ್ನು ಹಾಡಿದರು. ನಿವೃತ್ತ ಶಿಕ್ಷಕ ವೀರಭದ್ರಪ್ಪ ಸ್ವಾಗತಿಸಿದರೆ, ಪ್ರಕಾಶ್ ಎಸ್. ಎಸ್. ನಿರೂಪಿಸಿ ವಂದಿಸಿದರು. ವೇದಿಕೆಯ ಮೇಲೆ ತಾಲ್ಲೂಕು ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಸ್ ಸಿದ್ದಪ್ಪ ಉಪಸ್ಥಿತರಿದ್ದರು.
