ಜಾತಿ, ಮತ ಭೇದವಿಲ್ಲದೆ ಇಷ್ಟಲಿಂಗ ದೀಕ್ಷೆ ಪಡೆಯಬಹುದು: ಈಶ್ವರ ಖಂಡ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಸೇಡಂ ಬಸವ ಜಯಂತಿ ಉತ್ಸವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

ಸೇಡಂ :

ಲಿಂಗಾಯತ ಧರ್ಮದಲ್ಲಿ ಲಿಂಗಧಾರಣೆ ಮತ್ತು ಇಷ್ಟಲಿಂಗ ಪೂಜೆ ಮನಶುದ್ಧಿಯ ಪ್ರಕ್ರಿಯೆ. ಲಿಂಗದೀಕ್ಷೆಯನ್ನು ಜಾತಿ-ಮತ ಭೇದವಿಲ್ಲದೆ ಎಲ್ಲರೂ ಸ್ವಿಕರಿಸಬಹುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಹೇಳಿದರು.

ನಗರದ ಮಾತೃಛಾಯ ಕಾಲೇಜು ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಲ್ಪಟ್ಟಿದ್ದ ಬಸವ ಜಯಂತಿ ಹಾಗೂ ಬೃಹತ್ ಸಾಮೂಹಿಕ ಇಷ್ಟಲಿಂಗ ಪೂಜಾ ವಿಶೇಷ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಸವಣ್ಣನವರ ತತ್ತ್ವವನ್ನು ನಿಜಬದುಕಿನಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಬಸವಾದಿ ಶರಣರ 12ನೇ ಶತಮಾನದ ವೈಚಾರಿಕ ಕ್ರಾಂತಿ ಇಡೀ ವಿಶ್ವದ ಮಾನವಕುಲಕ್ಕೆ ದಾರಿದೀಪವಾಗಿದೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡುತ್ತ, 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಗತ್ತಿನ ಮೊದಲ – ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬಸವಾದಿ ಶರಣರು, ಅವರ ತತ್ವಗಳು ಸಾರ್ವಕಾಲಿಕವಾಗಿದ್ದು, ವಿಶ್ವಕ್ಕೆ ಮಾದರಿಯಾಗಿವೆ ಎಂದರು.

ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ 2 ಸಾವಿರ ಜನ ಭಾಗಿಯಾಗಿದ್ದರು. ಸಚಿವ ಶರಣಪ್ರಕಾಶ ಪಾಟೀಲ ಅವರು ದಂಪತಿ ಸಮೇತ ಇಷ್ಟಲಿಂಗ ಪೂಜೆ ಮಾಡಿಕೊಂಡರು.

ತೊಟ್ನಳ್ಳಿ ಡಾ. ತ್ರಿಮೂರ್ತಿ ಶಿವಾಚಾರ್ಯರು ಇಷ್ಟಲಿಂಗ ಪೂಜೆ ಕಾರ್ಯಕ್ರಮ ನೆರವೇರಿಸಿದರು. ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿದರು.

ಸಮಾರಂಭದಲ್ಲಿ ಶ್ರೀ ಶಿವಶಂಕರ ಶಿವಾಚಾರ್ಯರು, ಸದಾಶಿವ ಸ್ವಾಮೀಜಿ, ಪಂಚಾಕ್ಷರ ಸ್ವಾಮೀಜಿ, ಅಭಿನವ ಗವಿಸಿದ್ದಲಿಂಗ ಶಿವಾಚಾರ್ಯ, ಸಿದ್ದವೀರ ಶಿವಾಚಾರ್ಯರು, ಕರುಣೇಶ್ವರ ಸ್ವಾಮೀಜಿ, ಡಾ. ಶಾಂತಸೋಮನಾಥ ಶಿವಾಚಾರ್ಯರು, ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು, ಮಲ್ಲಿಕಾರ್ಜುನ ಸ್ವಾಮಿ, ಚಿಕ್ಕಶಿವಲಿಂಗೇಶ್ವರ ದೇವರು, ಕೇದಾರಲಿಂಗ ದೇವರು ಉಪಸ್ಥಿತರಿದ್ದರು.

ಬಸವ ಕೇಂದ್ರದ ಅಧ್ಯಕ್ಷ ಮುರಿಗೆಪ್ಪ ಕೋಳಕೂರ, ಮಹಾತ್ಮ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ ಪಾಟೀಲ, ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಸಿದ್ದಣ್ಣಶೆಟ್ಟಿ, ಮಾಜಿ ಉಪಸಭಾಪತಿ ಚಂದ್ರಶೇಖರ ರೆಡ್ಡಿ, ಮದನಾ ದೇಶಮುಖ, ಮಾಜಿ ಶಾಸಕ ರಾಜಕುಮಾರ ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಮೋದಿ, ತಾಲೂಕು ಅಧ್ಯಕ್ಷ ರಾಜಶೇಖರ ನಿಲಂಗಿ, ಡಾ. ಭಾಗ್ಯಶ್ರೀ ಪಾಟೀಲ, ಮಹಿಳಾ ಫೌಂಡೇಶನ್ ಅಧ್ಯಕ್ಷೆ ಚನ್ನಮ್ಮ ಪಾಟೀಲ, ಸಂತೋಷಿರಾಣಿ ಪಾಟೀಲ, ವೀರಶೈವ ಲಿಂಗಾಯತ ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮತ್ತಿತರರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
1 Comment
  • 🙏🙏 ಇಂತಹ ಇಷ್ಟಲಿಂಗ ಪೂಜೆ ಹಾಗು ದೀಕ್ಷಾ ಕಾರ್ಯಕ್ರಮಗಳು ನಾಡಿನೆಲ್ಲೆಡೆ ನಡೆಯಬೇಕು 🙏🙏

Leave a Reply

Your email address will not be published. Required fields are marked *