ಜಾತಿ ಇಲ್ಲವಾಗಿಸುವ ಪ್ರಯತ್ನ ಬಸವಾದಿ ಶರಣರದಾಗಿತ್ತು
ಚಿತ್ರದುರ್ಗ :
ಮೇಲ್ಜಾತಿ-ಕೆಳಜಾತಿ, ಉಚ್ಛ-ನೀಚ, ಶ್ರೇಷ್ಠ- ಕನಿಷ್ಠ, ಈ ತರತಮ್ ಭಾವನೆಯ ಶಬ್ದಗಳು ಮನುಷ್ಯರಲ್ಲಿ ಬರಬಾರದು. ಅದು ಜಾತಿಯ ಹೆಸರಿನಲ್ಲಿ.
ಯಾವ ವ್ಯಕ್ತಿ ತನ್ನ ಸದ್ಗುಣಗಳಿಂದ ಸಮಾಜಕ್ಕೆ ಆದರ್ಶವಾಗಿ ಬದುಕುತ್ತಾನೋ ಅವನು ಶ್ರೇಷ್ಠ. ಅದುಬಿಟ್ಟು ಸಮಾಜಕ್ಕೆ, ವ್ಯಕ್ತಿತ್ವಕ್ಕೆ ಮಾರಕವಾಗಿ ಅಡ್ಡದಾರಿ ಹಿಡಿದು ಸಮಾಜ ಕಂಟಕ ಕೆಲಸ ಮಾಡುತ್ತಾನೋ ಅವನು ಕನಿಷ್ಠ ಅಂತ ಹೇಳಬಹುದು.
ಜಾತಿಯ ಹೆಸರಿನಲ್ಲಿ ಅಸಮಾನತೆ ಸೃಷ್ಟಿಸುವುದು ಬೇಡ. ಅದಕ್ಕಾಗಿ ೧೨ನೇ ಶತಮಾನದಲ್ಲಿ ಕಸುಬುಗಳಿದ್ದವೇ ಹೊರತು ಜಾತಿಗಳಿರಲಿಲ್ಲ. ಜಾತಿ ಇಲ್ಲವಾಗಿಸುವ ಪ್ರಯತ್ನ ಬಸವಾದಿ ಶಿವಶರಣರಣದ್ದಾಗಿತ್ತು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಶ್ರೀಗಳು, ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದ ಪ್ರಾಂಗಣದಲ್ಲಿ ಏರ್ಪಡಿಸಿದ್ದ ಶಿವಶರಣರಾದ ತುರುಗಾಹಿ ರಾಮಣ್ಣ ಹಾಗೂ ಕುರುಬ ವೀರ ಗೊಲ್ಲಾಳೇಶ್ವರ ಶರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

೧೨ನೇ ಶತಮಾನದಲ್ಲಿ ನೂರಾರು ವಿವಿಧ ಕಸುಬಿನವರು ಯಾವುದೇ ಶಿಕ್ಷಣ ಪಡೆಯದೇ ಅನೇಕ ಸಣ್ಣ-ಸಣ್ಣ ಕಸುಬುಗಳನ್ನು ಮಾಡುತ್ತ ಅದರಲ್ಲೇ ನೆಮ್ಮದಿ ಖುಷಿ ಕಂಡುಕೊಂಡು ನಂತರ ಅನುಭವ ಮಂಟಪದಲ್ಲಿ ಸೇರಿ ದಂದಣ-ದತ್ತಣ ಗೋಷ್ಠಿಗಳಲ್ಲಿ ಭಾಗವಹಿಸುತ್ತ ಸಮಾಜಕ್ಕೆ ದಾರಿದೀಪವಾಗಬಲ್ಲ ವಚನಗಳನ್ನು ನಮಗೆ ನೀಡಿ ಹೋಗಿದ್ದಾರೆ. ಅಂತಹವರು ಸಾವಿರಾರು ವರ್ಷ ಕಳೆದರೂ ಅವರ ಕಾಯ ಅಳಿದರೂ ಅವರ ವಿಚಾರಗಳ ಜತೆಯಲ್ಲಿ ನಾವೆಲ್ಲ ಸಾಗುತ್ತಿದ್ದೇವೆ.
ಈ ಸಂದರ್ಭದಲ್ಲಿ ಶಿವಶರಣರಾದ ಕುರುಬ ಗೊಲ್ಲಾಳೇಶ್ವರರ ಬಗ್ಗೆ ವಿಷಯ ಮಂಡಿಸಿದ ನಗರದ ವಾಸುದೇವರೆಡ್ಡಿ ಸ್ಮಾರಕ ಪ್ರೌಢ ಶಾಲೆಯ ಶಿಕ್ಷಕ ಡಿ.ಹೆಚ್. ರಾಮಲಿಂಗಪ್ಪ ಅವರು, ಬಸವಾದಿ ಶಿವಶರಣರು ಕೆಲವೇ ವರ್ಷಗಳಲ್ಲಿ ನೂರಾರು ಶಿವಶರಣರು ಧರೆಗೆ ಅವತರಿಸಿ ಜೀವನದ ಎಲ್ಲ ರಂಗಗಳ ಕುರಿತು ಅರ್ಥಪೂರ್ಣ ಚಿಂತನೆ ನಡೆಸಿದ ಕಾಲಘಟ್ಟವದು. ಅವರೆಲ್ಲರ ಮೂಲ ಉದ್ಧೇಶ ಮಾನವ ಕಲ್ಯಾಣವಾಗಿತ್ತು.
ವಚನಗಳು ಸಾಹಿತ್ಯದ ಪ್ರಕಾರವಾಗಿದ್ದರೂ ವಚನಕಾರರು ಮೂಲತಃ ಸಾಹಿತಿಗಳಲ್ಲ. ಸಾಹಿತ್ಯ ರಚಿಸಬೇಕೆಂದು ಹೊರಟವರಲ್ಲ. ಅವರು ಪ್ರಥಮತಃ ಆತ್ಮಸಂಶೋಧಕರು. ಈ ಸಾಲಿನಲ್ಲಿ ಗೊಲ್ಲಾಳೇಶ್ವರರು ಒಬ್ಬರಾಗಿದ್ದು ಇವರ ಬಗ್ಗೆ ಹಲವು ಕಾವ್ಯಗಳಲ್ಲಿ ಪ್ರಸ್ತಾಪ ಬರುತ್ತದೆ.
ಶಿವಶರಣ ಗೊಲ್ಲಾಳನು ಮೂಲದಲ್ಲಿ ಕುರುಬರ ಜಾತಿಯಲ್ಲಿ ಹುಟ್ಟಿದರೂ ಒಬ್ಬ ಸ್ಥಿತಿವಂತ ಕುರಿಗಾರನಾಗಿದ್ದನು. ಇಂದಿನ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಗೋಲಗೇರಿ ಗ್ರಾಮ ಅವರ ಹುಟ್ಟೂರು ಮತ್ತು ಮುಂದೆ ಇದೇ ಅವರ ಕರ್ಮ ಮತ್ತು ಕಾರ್ಯಕ್ಷೇತ್ರವೂ ಆಗುತ್ತದೆ. ಅಲ್ಲಿ ಗೊಲ್ಲಾಳೇಶ್ವರರ ಭವ್ಯ ದೇವಾಲಯವು ಈಗಲೂ ಇದೆ.
ವೀರ ಬೀರೇಶ್ವರ ಎಂಬ ಅಂಕಿತದಲ್ಲಿ ಅನೇಕ ವಚನಗಳನ್ನು ರಚಿಸಿದ್ದು, ಶಿವಭಕ್ತಿಗೆ ಹೆಸರಾಗಿದ್ದ ಗೊಲ್ಲಾಳೇಶ್ವರನಿಗೆ ಒಮ್ಮೆ ಶಿವ ಪ್ರತ್ಯಕ್ಷನಾಗಿದ್ದು ಉಂಟೆಂದು ಜನಪದರು ಹೇಳುವುದಿದೆ ಎಂದು ಹೇಳಿದರು.
ಮತ್ತೊಬ್ಬ ಶಿವಶರಣ ತುರುಗಾಹಿ ರಾಮಣ್ಣ ಅವರ ಬಗೆಗೆ ವಿಷಯಾವಲೋಕನ ಮಾಡಿದ ನಗರದ ಪ್ರಿಯದರ್ಶಿನಿ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕ ಸಿ.ಎಂ. ತಿಪ್ಪೇರುದ್ರಪ್ಪ ಅವರು, ಶರಣರಾದ ತುರುಗಾಹಿ ರಾಮಣ್ಣನವರು ದನಗಳನ್ನು ಕಾಯುವ ಕಸುಬನ್ನು ಮಾಡುತ್ತಿದ್ದರು. ತುರು ಎಂದರೆ ಹಸು, ಗೋವು, ಆಕಳು, ದನ ಎಂಬ ಅರ್ಥಗಳಿವೆ. ತುರು+ಕಾಯಿ=ತುರುಕಾಯಿ. ನಂತರ ರೂಪಾಂತರ ಹೊಂದಿ ತುರುಗಾಹಿ ಆಗಿದೆ.
ಇವರ ಊರು ತ್ರಿಮಲದೂರು ಎಂದಿದ್ದು ಯಾವ ಕಡೆ ಬರುತ್ತದೆಂಬುದಕ್ಕೆ ಮಾಹಿತಿ ಲಭ್ಯವಿಲ್ಲ. ಗೋಪಿನಾಥ ವಿಶ್ವೇಶ್ವರಲಿಂಗ ಎಂಬ ಅಂಕಿತದಲ್ಲಿ ೪೬ ವಚನಗಳನ್ನು ರಚಿಸಿದ್ದಾರೆ.
ರಾಮಣ್ಣನವರು ಕಲ್ಯಾಣದಲ್ಲಿದ್ದಾರೆಂಬುದಕ್ಕೆ ಅವರ ವಚನಗಳಲ್ಲಿ ಉಲ್ಲೇಖವಿದೆ. ಕಲ್ಯಾಣದ ಕ್ಷೋಭೆಯ ನಂತರ ಯಾವ ಯಾವ ಶರಣರು ಎಲ್ಲಿಗೆ ಹೋದರು ಎಂಬ ದಾಖಲೆ ದೊರೆಯುತ್ತದೆ. ಇವರು ಕಲ್ಯಾಣದಲ್ಲಿ ನೆಲೆ ನಿಂತ ಬಗ್ಗೆ ಮಾಹಿತಿ ಇದೆ. ಊರವರ ದನಗಳನ್ನೆಲ್ಲ ಹುಲ್ಲು ಮೇಯಿಸಲು ಅಡವಿಗೆ ಹೊಡೆದುಕೊಂಡು ಹೋಗುವಾಗ, ಮೇಯಿಸಲು ನಿಲ್ಲಿಸಿದಾಗ ರಾಮಣ್ಣನವರ ಬಾಹ್ಯ ಕಣ್ಣಿನ ಕೆಲಸದ ಜೊತೆಗೆ ಅವರ ಅಂತರಂಗದ ಆಧ್ಯಾತ್ಮ ನೇತ್ರವೂ ನಿರಂತರವಾಗಿ ತೆರೆದಿರುತ್ತಿತ್ತು. ಅದಕ್ಕೆ ಸಾಕ್ಷಿಯಾಗಿ ಅವರ ವಚನಗಳು ನಮಗೆ ಮಾರ್ಗದರ್ಶಿಯಾಗುತ್ತವೆಂದು ಅವರ ಸಾಧನೆಯ ವಿವಿಧ ಮಗ್ಗಲುಗಳನ್ನು ಪರಿಚಯಿಸಿದರು.
ಮುಖ್ಯಅತಿಥಿಗಳಾಗಿದ್ದ ಜಿಲ್ಲಾ ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಬಿ.ಟಿ. ಜಗದೀಶ ಅವರು ಮಾತನಾಡಿ, ಬೃಹನ್ಮಠವು ಹಿಂದುಳಿದ, ಶೋಷಿತ ಸಮುದಾಯದವರನ್ನು ಪ್ರತಿನಿಧಿಸುವ ಅವರ ಕಸುಬಿನ ಬಹುತೇಕ ಶರಣರನ್ನು ಅವರ ಬಗೆಗಿನ ಜೀವನ ವೃತ್ತಾಂತವನ್ನು ಪರಿಚಯಿಸುವ ಮಹಾತ್ಕಾರ್ಯ ಮಾಡುತ್ತಿದೆ. ಬಹುತೇಕ ಎಲ್ಲೂ ಇಂತಹ ಆದರ್ಶ ನಡೆ ಇಲ್ಲ ಎಂದೇ ಹೇಳಬೇಕು. ಮುಂದಿನ ಪೀಳಿಗೆಗೆ ಇದೊಂದು ಮಾರ್ಗದರ್ಶಿ ಕೈದೀವಿಗೆಯಾಗಿದೆ ಎಂದರು.
ವೇದಿಕೆಯಲ್ಲಿ ಗೌಳಿ ಸಮಾಜದ ಜಾಲಿಕಟ್ಟೆ ಓಂಕಾರಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಸಮಾಜಗಳ ಮುಖಂಡರಾದ ಎಸ್. ವೀರೇಶ, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ಬಸವರಾಜ ಕಟ್ಟಿ, ನಾಗರಾಜ ಸಂಗಮ್, ಪಶುವೈದ್ಯಾಧಿಕಾರಿ ಡಾ. ದೊಡ್ಡಮಲ್ಲಯ್ಯ, ಚಂದ್ರಣ್ಣ, ರುದ್ರಪ್ಪ, ಪರಮೇಶ್ವರಪ್ಪ ಜಾಲಿಕಟ್ಟೆ, ವಕೀಲರಾದ ಹನುಮಂತಪ್ಪ, ಕ.ರ.ವೇ. ಸಂಚಾಲಕ ರಮೇಶ್, ಮಾಲತೇಶ್, ಎಂ.ವಿ. ಬಾಗೇಶ್, ಉಗ್ರಾಣ ಅಂಗಡಿ ಬಸವರಾಜ್, ಪುಷ್ಪವಲ್ಲಿ, ನಾರಾಯಣಪ್ಪ ಸೇರಿದಂತೆ ಸಾರ್ವಜನಿಕರು, ಭಕ್ತರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜಿನ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಿಯದರ್ಶಿನಿ ಶಾಲೆಯ ನಿರ್ವಹಣೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಪಂಡಿತ್ ರವಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಪತ್ತಾರ ಹಾಗೂ ಬಸವರಾಜ ಕಟ್ಟಿ ಅವರುಗಳು ತುರುಗಾಹಿ ರಾಮಣ್ಣ ಹಾಗೂ ಕುರುಬ ಗೊಲ್ಲಾಳೇಶ್ವರರ ವಚನಗಳನ್ನು ಹಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa
