ವಚನ ತಿರುಚುವ ದುಷ್ಟಶಕ್ತಿಗಳನ್ನು ತಡೆಯಲು ಜಾಗೃತಿ ಸಮಾವೇಶದಲ್ಲಿ ಕರೆ

ಬಸವಾದಿ ಶರಣರ ಜಾಗೃತಿ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದ ಬಸವಾಭಿಮಾನಿಗಳು

ಶಹಾಪುರ

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವ್ಯಕ್ತಿ ಪೂಜೆ ಅಪಾಯಕಾರಿ ಬೆಳವಣಿಗೆ. ಧರ್ಮದ ಆಧಾರದ ಮೇಲೆ ರಾಜಕೀಯ ಷಡ್ಯಂತ್ರ ನಡೆಸಿ ರಾಜಕೀಯ ತೆವಲು ತೀರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೆ ಬಸವಣ್ಣ ಎಟಿಎಂ ಆಗಿದ್ದಾರೆ. ವಚನಗಳನ್ನು ತಿರುಚುವ ದುಷ್ಟಶಕ್ತಿಗಳನ್ನು ಮಟ್ಟಹಾಕಬೇಕು ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ತಿಳಿಸಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭೆ, ಕಲ್ಯಾಣ ಕರ್ನಾಟಕದ ಬಸವಪರ ಸಂಘಟನೆಗಳು, ಕಾಯಕ ಶರಣರ ಒಕ್ಕೂಟ, ಸೌಹಾರ್ದ ಕರ್ನಾಟಕ, ದಲಿತ, ಹಿಂದುಳಿದ, ಪ್ರಗತಿಪರ, ರೈತ, ಕಾರ್ಮಿಕ, ಮಹಿಳಾ ಹಾಗೂ ಯುವಜನ, ವಿದ್ಯಾರ್ಥಿ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವಾದಿ ಶರಣರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ತನ್ನ ನಾಲಿಗೆಯನ್ನು ಹರಿಬಿಟ್ಟು ಸುಪ್ರಿಂಕೋರ್ಟಿನಲ್ಲಿ ವಾಗ್ದಂಡನೆ ವಿಧಿಸಿಕೊಂಡ ಒಬ್ಬ ಸ್ವಾಮೀಜಿಗೆ ಆತ್ಮಗೌರವ ಮಾನ ಮರ್ಯಾದೆ ಇದ್ದರೆ ಧ್ಯಾನ ಮಾಡಲಿ. ಯುವಕರನ್ನು ಹುರುದುಂಬಿಸಿ ಪ್ರಚೋದನಾಕಾರಿ ಭಾಷಣ ಮಾಡಿದರೆ ಪೊಲೀಸರು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಬಾರದು. ಶರಣ, ಸೂಫಿ ಸಂತರ ನಾಡಿನಲ್ಲಿ ಸಾಮರಸ್ಯ ಕದಡಿದರೆ ವೇದಿಕೆಯೆ ಮೇಲೆಯೇ ಬಂಧಿಸಬೇಕು ಎಂದು ಅವರು ಕನ್ನೇರಿ ಸ್ವಾಮೀಜಿ ಹೆಸರನ್ನು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

ಪ್ರಗತಿಪರ ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, ಬಸವ ತತ್ವವನ್ನು ಚಾಚುತಪ್ಪದೇ ಪಾಲಿಸುವ ಶ್ರಮಿಕವರ್ಗ ನಮ್ಮದಾಗಿದೆ. ಕೋಮುವಾದ ಹೆಸರಿನಲ್ಲಿ ಬೆಂಕಿ ಇಡುವ ಕೆಲಸ ನಿಲ್ಲಿಸಿ. ಧರ್ಮದ ಹೆಸರಿನಲ್ಲಿ ಶೀಟಿ ಊದಿ ಯುವಕರನ್ನು ಪ್ರಚೋದನೆ ಮಾಡುವುದು ಬೇಡ. ನಿಮ್ಮ ಆರ್ ಎಸ್ ಎಸ್ ಅಜಂಡಾ ಸಗರನಾಡಿನಲ್ಲಿ ನಡೆಯುವುದಿಲ್ಲ. ಬಸವಾದಿ ಶರಣರ ಹಿಂದೂ ಸಮಾವೇಶ ಠುಸ್ ಆಗಲಿದೆ ಎಂದು ಛೇಡಿಸಿದರು.

ಪ್ರಜಾಪ್ರಭುತ್ವದ ಪ್ರಶ್ನೆಯ ಜತೆಯಲ್ಲಿ ಸಾಂಸ್ಕೃತಿಕ ನಾಯಕನ ಬಗ್ಗೆ ಹಗುರವಾಗಿ ಮಾತನಾಡಿದರೆ ಸರ್ಕಾರ ಮೌನವಹಿಸಬಾರದು. ಓಟಿನ ರಾಜಕಾರಣ ಮಾಡದೆ ಸಾಮಾನ್ಯರ ಬದುಕಿನ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹಿಂದೂ ಸಮಾವೇಶಕ್ಕೆ ನಮ್ಮ ಧಿಕ್ಕಾರವಿದೆ. ಸಚಿವರು ಗಮನಹರಿಸಬೇಕು ಎಂದು ಪ್ರಗತಿಪರ ಚಿಂತಕಿ ಕೆ. ನೀಲಾ ಅವರು ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಪ್ರಸ್ತಾಪ ಮಾಡದೆ ಆಗ್ರಹಿಸಿದರು.

ಹಿಂದೂ ಧರ್ಮವೇ ಅಲ್ಲ. ಲಿಂಗಾಯತ ಜಾತಿ ಅಲ್ಲ. ಶರಣರ ಹಾಗೂ ವಚನಗಳ ತತ್ವಗಳನ್ನು ಉಳಿಸಿಕೊಳ್ಳಬೇಕು. ಮನುವಾದಿಗಳಿಗೆ ಆಸ್ಪದ ನೀಡಬಾರದು. ಸಗರ ನಾಡಿನಲ್ಲಿ ವಿಷಬೀಜ ಬಿತ್ತುವ ಕೆಲಸ ಸಾಗುವುದಿಲ್ಲ. ಪುರಾಣ ಎಂಬುವುದು ಪುಂಡರಗೋಷ್ಠಿಯಾಗಿದೆ ಎಂದು ಅವರು ಲೇವಡಿ ಮಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಆರ್.ಜಿ. ಶೆಟ್ಟಿಗಾರ್ ಮಾತನಾಡಿ, ಬಸವಣ್ಣನವರು ನಮ್ಮ ಬೆಳಕು. ಹಿಂದೂ ಹೆಸರು ಸೇರಿಸಿ ಅಪಚಾರ ಮಾಡುವ ಮಠಾಧೀಶರನ್ನು ಮಟ್ಟಹಾಕಿ. ಕನ್ನೇರಿ ಸ್ವಾಮೀಜಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಬೃಹತ್ ಮೆರವಣಿಗೆ:

ಸಮಾವೇಶಕ್ಕೆ ಮೊದಲು ನಗರದ ಬಸವೇಶ್ವರ ವೃತ್ತದಿಂದ ಮೊಚಿಗಡ್ಡೆ, ದಿಗ್ಗಿಬೇಸ್, ಸಿ.ಬಿ. ಕಮಾನದವರೆಗೆ ಶರಣರ ಭಾವಚಿತ್ರಗಳ ಹಾಗೂ ವಚನ ಗಾಯನದೊಂದಿಗೆ ಬೃಹತ್ ಮೆರವಣಿಗೆ ನಡೆಯಿತು.

ಬಸವ ಟೋಪಿ ಧರಿಸಿ, ಷಟಸ್ಥಲ ಧ್ವಜ ಹಿಡಿದು ಸಾವಿರಾರು ಜನ ಸಾಗಿದರು.

ಸಮಾವೇಶದಲ್ಲಿ ಕಲಬುರಗಿ, ರಾಯಚೂರು, ಬೀದರ, ವಿಜಯಪುರ, ಯಾದಗಿರಿ, ಕೊಪ್ಪಳ ಜಿಲ್ಲೆಗಳಿಂದ ಬಸವಾಭಿಮಾನಿಗಳು ಹಾಗೂ ಚಿಂತಕರು ಭಾಗವಹಿಸಿ ಸಮಾವೇಶದ ಖದರು ಹೆಚ್ಚಿಸಿದರು.

ಪ್ರಗತಿಪರ ಚಿಂತಕರಾದ ಪ್ರೊ. ಆರ್.ಕೆ. ಹುಡಗಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವ ಗಂಗೋತ್ರಿಯ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ, ಸಿದ್ಧ ಕಬೀರಾನಂದ ಸ್ವಾಮೀಜಿ, ಮಹಾರಾಷ್ಟ್ರದ ಮಹಾನಂದ ತಾಯಿ ಮುಗಳಿ, ಗುರುಮಠಕಲ್ ಶ್ರೀಗಳು, ಕಡಕೋಳ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂದೇಶ ಕಳಿಸಿದ್ದರು.

ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಆಳಂದದ ಕೊರಣೇಶ್ವರ ಸ್ವಾಮೀಜಿ,
ಮನಗುಂಡಿ ಬಸವಾನಂದ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯರು, ಬಸಯ್ಯ ಶರಣರು, ಗುಣತೀರ್ಥವಾಡಿ ಬಸವಪ್ರಭು ಸ್ವಾಮೀಜಿ, ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು, ಸಂಘಟನೆಗಳ ಪ್ರಮುಖರಾದ ಗುಂಡಪ್ಪ ಕಲಬುರಗಿ, ಗಿರೆಪ್ಪಗೌಡ ಬಾಣತಿಹಾಳ, ಚನ್ನಪ್ಪ ಆನೇಗುಂದಿ, ತಿಮ್ಮಯ್ಯ ಪುರ್ಲೆ, ಸಿದ್ರಾಮ ಹೊನ್ಕಲ್, ವಿಶ್ವಾರಾಧ್ಯ ಸತ್ಯಂಪೇಟೆ, ಅಯ್ಯಣ್ಣ ಕನ್ಯಾಕೊಳ್ಳುರ, ಆರ್. ಚೆನ್ನಬಸು ವನದುರ್ಗ, ರವೀಂದ್ರನಾಥ ಹೊಸಮನಿ, ದಾವಲಸಾಬ ನದಾಫ್, ಎಸ್.ಎಂ. ಸಾಗರ, ಶಿವಣ್ಣ ಇಜೇರಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಜೈಲಾಲ ತೋಟದಮನೆ, ಮಲ್ಲಿಕಾರ್ಜುನ ಹಿರೇಮಠ, ಶೇಖರ ದೊರೆ, ಶರಣಬಸಪ್ಪ ಪಾಟೀಲ, ಸಯ್ಯದ ಉದ್ದಿನ್ ಖಾದ್ರಿ, ಯೂಸುಫ್ ಸಿದ್ದಿಕಿ, ರಾಮು ಸಗರ, ಭೀಮರಾಯ ಪೂಜಾರಿ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
1 Comment
  • ಈಗಾಗಲೇ ವಚನಗಳನ್ನು ತಿರುಚಿಯಾಗಿದೆ, ಇನ್ನೇನಿದೆ ಅದ್ರಲ್ಲಿ ತಿರುಚೋಕೆ

Leave a Reply

Your email address will not be published. Required fields are marked *