ಎರಡನೇ ಯುರೋಪಿಯನ್ ಬಸವ ಜಯಂತಿ ಸಮ್ಮೇಳನ
ಎರ್ಲಂಗನ್
ಬಸವಣ್ಣನವರು ಸ್ಥಾಪಿಸಿದ ವಿಶ್ವದ ಮೊದಲ ಸಂಸತ್ತು ಎಂದು ಪರಿಗಣಿಸಲಾದ ಅನುಭವ ಮಂಟಪವು ಯಾವುದೇ ತಾರತಮ್ಯವನ್ನು ಲೆಕ್ಕಿಸದೆ ಎಲ್ಲರ ಸಾರ್ವತ್ರಿಕ ಭಾಗವಹಿಸುವಿಕೆಗೆ ಅಡಿಪಾಯ ಹಾಕಿತು, ಎಂದು ಜರ್ಮನಿಯಲ್ಲಿನ ಭಾರತದ ರಾಯಭಾರಿ ಅಜಿತ್ ವಿನಾಯಕ ಗುಪ್ತೆ ಶನಿವಾರ ಹೇಳಿದರು.
ಜರ್ಮನಿಯ ಎರ್ಲಂಗನ್ ನಗರದಲ್ಲಿ ನಡೆದ ಎರಡನೇ ಯುರೋಪಿಯನ್ ಬಸವ ಜಯಂತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣ ಜಾತಿ, ವರ್ಗ ಮತ್ತು ಲಿಂಗ ತಾರತಮ್ಯವನ್ನು ಪ್ರಸಿದ್ಧವಾಗಿ ತಿರಸ್ಕರಿಸಿದ ವರ್ಗರಹಿತ ಸಮಾಜದ ಉಗ್ರ ಪ್ರತಿಪಾದಕರಾಗಿದ್ದರು.
ಭಕ್ತಿ ಮತ್ತು ಘನತೆ ಭವ್ಯ ಕಟ್ಟಡಗಳಲ್ಲಿ ಕಂಡುಬರುವುದಿಲ್ಲ, ಆದರೆ ಮಾನವ ಚೈತನ್ಯದೊಳಗೆ ಕಂಡುಬರುತ್ತದೆ ಎಂದು ಬಸವಣ್ಣ ನಂಬಿದ್ದರು. ಇದು ಅವರು ಪ್ರತಿಪಾದಿಸಿದ ಸಾಮಾಜಿಕ ಸುಧಾರಣೆ ಮತ್ತು ಸಮಾನತೆಯ ಅಡಿಪಾಯವಾಗಿದೆ, ಇದು ಆಧುನಿಕ ಯುರೋಪಿನಲ್ಲಿ ಮತ್ತು ಭಾರತದಲ್ಲಿ ಪ್ರತಿಧ್ವನಿಸುತ್ತದೆ.

ಬಸವಣ್ಣ ಕಲಿಸಿದ ‘ಏಳು ಆಜ್ಞೆಗಳು’ ನಮಗೆ ಸಾರ್ವತ್ರಿಕ ನೀತಿ ಸಂಹಿತೆಯನ್ನು ಒದಗಿಸುತ್ತವೆ. ಕದಿಯಬೇಡಿ, ಸುಳ್ಳು ಹೇಳಬೇಡಿ ಅಥವಾ ಇತರರನ್ನು ದ್ವೇಷಿಸಬೇಡಿ – ಈ ಸರಳ ಸತ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಹೋದರತ್ವದ ಮನೋಭಾವವನ್ನು ಸಮಗ್ರತೆಯಿಂದ ಬದುಕುವುದು ಅವರ ಪರಂಪರೆಗೆ ನಾವು ಸಲ್ಲಿಸಬಹುದಾದ ಶ್ರೇಷ್ಠ ಗೌರವ, ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಚಿಕ್ಕಮಗಳೂರು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಬಸವಣ್ಣ ದಯೆಯುಳ್ಳದ್ದೇ ಧರ್ಮ, ಅಲ್ಲವಾದುದು ಅಧರ್ಮವೆಂದೇ ಹೇಳಿದ್ದಾರೆ.

ಬಸವಣ್ಣನವರು ಸಮಾಜದ ವಿಪ್ಲವಗಳಿಗೆ ಕಾರಣರಾದ ಕಳ್ಳ, ಕಾಮುಕ, ಕೊಲೆಗಡುಕರೆಲ್ಲರ ಮನಃ ಪರಿವರ್ತನೆ ಮಾಡಲು ಪ್ರಯತ್ನಿಸಿದರು. ಇದರ ಪರಿಣಾಮ ಅವರ ಕಾರ್ಯಕ್ಷೇತ್ರವಾದ ಕಲ್ಯಾಣವು ಪರಮ ಶಾಂತಿಯ ಕ್ಷೇತ್ರವಾಯಿತು. ಜಗತ್ತಿಗೆ ಸಾರ್ವತ್ರಿಕ ಸಹೋದರತ್ವದ ಮಹತ್ವವನ್ನು ಒತ್ತಿಹೇಳಿದ ಬಸವಣ್ಣನವರಂತಹ ಚಿಂತಕರ ಅಗತ್ಯವಿದೆ ಎಂದು ನಾನು ಬಲವಾಗಿ ನಂಬುತ್ತೇನೆ.
ಬಸವಣ್ಣ ರಾಜಸತ್ತೆಯಿಂದ ಸಾಧ್ಯವಾಗದ ಮೌಲ್ಯಗಳ ಅನುಷ್ಠಾನವನ್ನು ಅನುಭವ ಮಂಟಪವನ್ನು ಸ್ಥಾಪಿಸಿ ಸಾಧ್ಯವಾಗಿಸಿದರು. ಅನುಭವ ಮಂಟಪದ ಕಾನೂನಿನನ್ವಯ ಪ್ರತಿಯೊಬ್ಬ ವ್ಯಕ್ತಿ ತನ್ನ ಉದರ ಪೋಷಣೆಗಾಗಿ ದುಡಿಯಲೇಬೇಕು. ಆ ದುಡಿಮೆಯು ಪ್ರಾಮಾಣಿಕತೆ ಮತ್ತು ಭಕ್ತಿಯಿಂದ ಕೂಡಿದ್ದಾಗಿರಬೇಕು.

ಅದನ್ನೇ ಕಾಯಕವೆಂದು ಕರೆದು ಪ್ರತೀ ವ್ಯಕ್ತಿಯು ಕಾಯಕ ಮಾಡಲೇ ಬೇಕೆಂಬ ಕಡ್ಡಾಯ ನಿಯಮ ಜಾರಿಗೆ ತಂದಿದ್ದರು. ಜೊತೆಗೆ ಕಾಯಕದ ಪ್ರತಿಫಲವನ್ನು ಒಬ್ಬನೇ ಉಣ್ಣದೇ ಹಂಚಿ ಉಣ್ಣಬೇಕು. ಹಾಗೆ ಹಂಚಿ ಉಣ್ಣುವಾಗ ನಾನು ನೀಡಿದೆ ಎಂಬ ಭಾವವನ್ನು ನಿರಸನ ಮಾಡಿಕೊಂಡು ದಾಸೋಹ ಭಾವದಲ್ಲಿ ವ್ಯಕ್ತಿ ಇರಬೇಕೆಂಬ ನಿಯಮ ಜಾರಿಗೆ ತಂದಿದ್ದರು.
ಕಾಯಕ ಮತ್ತು ದಾಸೋಹಗಳ ಮೂಲಕ ದುಡಿಮೆ ಮತ್ತು ವಿತರಣೆಗಳನ್ನು ದೈವತ್ವಕ್ಕೆ ಏರಿಸಲಾಗಿತ್ತು. ಅಂತೆಯೇ ಕಾಯಕವೇ ಕೈಲಾಸ, ದಾಸೋಹವೇ ದೇವಧಾಮ ಎಂಬ ನುಡಿಗಟ್ಟುಗಳು ಅಂದಿನಿಂದಲೂ ಸುಪ್ರಸಿದ್ಧವಾಗಿ ಜನಮಾನಸದಲ್ಲಿ ನೆಲೆಸಿವೆ.

ಪ್ರಸ್ತುತ ಮೌಲ್ಯಗಳ ಅಧಃಪಥನವೇ ಮೌಲ್ಯವೆಂದು ಭಾವಿಸಿಕೊಳ್ಳುವ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ ಮೌಲ್ಯಗಳಿಗಾಗಿಯೇ ಬಾಳಿದ, ಹೋರಾಡಿದ ಬಸವಾದಿ ಪ್ರಮಥರ ವಿಚಾರಧಾರೆಗಳು ಇಂದಿನ ತುರ್ತು ಅಗತ್ಯವಾಗಿವೆ, ಎಂದು ಹೇಳಿದರು.
ಜಗಜ್ಯೋತಿ ಬಸವಣ್ಣನವರ ವಚನಗಳು ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಅನ್ವಯವಾಗುತ್ತವೆ. ‘ದಾಸೋಹ’ ಸರ್ವೋದಯ ತತ್ವದ ಆಧಾರಿತದ್ದು. ಅದು ಸಿದ್ಧಾಂತಕ್ಕೂ ಮೀರಿದ ಜೀವನದ ತತ್ವ, ಎಂದು ಪ್ರೊ. ಡಾ. ರಾಬರ್ಟ್ ಜೆ ಝೈಡೆನ್ಬೋಸ್
ಹೇಳಿದರು.
ನಾವು ಇಂದು ಜಗಜ್ಯೋತಿ ಬಸವೇಶ್ವರರನ್ನು ಸ್ಮರಿಸುತ್ತಿರುವಾಗ, ಅವರ ಮಾರ್ಗದಲ್ಲಿ ನಡೆಯಲು ಬದ್ಧರಾಗೋಣ. ನ್ಯಾಯಯುತ ಮತ್ತು ಸಹಾನುಭೂತಿಯ ಸಮಾಜ ಸ್ಥಾಪಿಸುವ ಅವರ ತತ್ವವು ಭಾರತೀಯ ವಲಸಿಗರಿಗೆ ಮತ್ತು ಜರ್ಮನಿಯಲ್ಲಿರುವ ನಮ್ಮ ಸ್ನೇಹಿತರಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸಲಿ.
ಬಸವಣ್ಣನವರ ಹೆಚ್ಚಿನ ಕೃತಿಗಳನ್ನು ಜರ್ಮನ್ ಭಾಷೆಯಲ್ಲಿ ಭಾಷಾಂತರಿಸುವಲ್ಲಿ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಮುಂಬರುವ ದಿನಗಳಲ್ಲಿ ಬಸವಣ್ಣನವರ ಬೃಹತ್ ಸಾಧನೆಯ ಆಧಾರದ ಮೇಲೆ ಪ್ರದರ್ಶನಗಳನ್ನು ಆಯೋಜಿಸಬೇಕು, ಎಂದರು.

ಕಾರ್ಯಕ್ರಮದಲ್ಲಿ ಫ್ರೌ ಇವಾ ಲಿನ್ಹಾರ್ಟ್, ಉಪ ಮೇಯರ್, ಸ್ಟಾಡ್ಟ್ ಎರ್ಲಾಂಗೆನ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಸವ ಸಮಿತಿ ಯುರೋಪಿನ ಅಧ್ಯಕ್ಷರಾದ ವಿಜಯ್ ಕುಮಾರ್ ಮತ್ತು ಕಾರ್ಯಕಾರಿ ಮಂಡಳಿಯವರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಭಾರತೀಯ ಜಾನಪದ ಕಲಾ ತಂಡಗಳೊಂದಿಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಪಲ್ಲಕ್ಕಿ ಉತ್ಸವ ನೆರವೇರಿಸಿ ಪೂಜೆ ಸಲ್ಲಿಸಲಾಯಿತು.
