‘ಶರಣರ ವಚನಗಳಿಗೆ ಬದುಕು ಬದಲಾಯಿಸುವ ಶಕ್ತಿ ಇದೆ’

ನರಗುಂದ:

ಬಸವಾದಿ ಶಿವಶರಣರ ವಚನಗಳಿಗೆ ಬದುಕನ್ನು ಬದಲಾಯಿಸುವ ಶಕ್ತಿ ಇದೆ. ಅವುಗಳು ಮಾನವನ ಜೀವನದ ದಾರಿದೀಪವಾಗಿವೆ. ತಂತ್ರಜ್ಞಾನದ ಭರಾಟೆಯಲ್ಲಿ ಬದಲಾಗುತ್ತಿರುವ ಮನುಷ್ಯರ ಜೀವನ ಶೈಲಿಗೆ ಶಿವಶರಣರ ವಚನಗಳು ಸ್ಪೂರ್ತಿದಾಯಕವಾಗಿವೆ ಎಂದು ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಕೆ.ಟಿ. ಪಾಟೀಲ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿದೋದ್ದೇಶ ಟ್ರಸ್ಟ್ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೩೮೩ ನೇ ಮಾಸಿಕ ಶಿವಾನುಭವದಲ್ಲಿ ಮಾತನಾಡಿದರು.

ಮಠ-ಮಾನ್ಯಗಳ ಆಧ್ಯಾತ್ಮಿಕ ಪರಂಪರೆಯಿಂದ ಸುಸಂಸ್ಕೃತ ಮತ್ತು ಸಾತ್ವಿಕ ಜೀವನವನ್ನು ಕಟ್ಟಿಕೊಳ್ಳಬಹುದಾಗಿದೆ, ನಾವು ಇಂದು ಆಧ್ಯಾತ್ಮಿಕ ಕೇಂದ್ರಗಳಿಂದ ದೂರ ಸರಿದು ಮೋಬೈಲ್ ಗೇಮ್ ಹಾಗೂ ಇನ್ನಿತರೆ ಮನುಷ್ಯನಿಗೆ ಮಾರಕವಾದಂತಹ ತಂತ್ರಜ್ಞಾನಗಳ ಅತಿಯಾದ ಬಳಕೆಯ ಕಡೆಗೆ ಮುಖ ಮಾಡುತ್ತಿದ್ದೇವೆ. ಇದು ಹೀಗೆಯೆ ಮುಂದುವರೆದರೆ ನಮ್ಮ ಪರಂಪರೆ ಇತಿಹಾಸ ವಿನಾಶದಂಚಿಗೆ ಸಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಜಾನಪದ ಚಿಂತಕ ಪ್ರೊ. ಆರ್.ಬಿ. ಚಿನಿವಾಲರ ಮಾತನಾಡಿ, ನಮ್ಮ ಮಕ್ಕಳನ್ನು ಅತೀ ಬುದ್ಧಿವಂತರನ್ನಾಗಿಸುವ ಭರದಲ್ಲಿ ಅವರ ಭವಿಷ್ಯದ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ. ಹೀಗಾಗಿ ಪಾಲಕರಾದವರು ತಮ್ಮ ಮಕ್ಕಳ ಮುಂದೆ ಟಿ.ವ್ಹಿ, ಮೊಬಾಯಿಲ್ ಮತ್ತು ದುಶ್ಚಟಗಳಿಂದ ದೂರವಿರಬೇಕು. ಜೊತೆಗೆ ಅವರ ಚಲನ ವಲನಗಳ ಬಗೆಗೆ ಲಕ್ಷ್ಯವಹಿಸಬೇಕು ಎಂದು ಅವರು ಹೇಳಿದರು.

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಹೀಗಾಗಿ ಮಕ್ಕಳು ವಿದ್ಯಾವಂತರಾಗಿ ಸಾಮಾಜಿಕ ಬದ್ದತೆಯನ್ನು ಹೊಂದಿ ದೇಶಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡುವಂತೆ ಪ್ರೇರೇಪಿಸಬೇಕು. ಮತ್ತು ಆ ಮೂಲಕ ಅವರಿಗೆ ಇನ್ನಷ್ಟು ಸಾದನೆ ಮಾಡಲು ಅವರಿಗೆ ಬೇಕಾದ ಸಹಕಾರವನ್ನು ಪಾಲಕರು ಮತ್ತು ಶಿಕ್ಷಕರು ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವಯ್ಯನವರು ಹಿರೇಮಠ ಸಮ್ಮುಖ ಸ್ಥಾನವಹಿಸಿದ್ದರು. ಶಿಕ್ಷಕರಾದ ಶಿವಾನಂದ ಮಲ್ಲಾಪೂರ, ಶಂಕರಗೌಡ ಅಸೂಟಿ, ಪ್ರಭಾಕರ ಮಂಟೂರ ಪ್ರಮುಖರು ಉಪಸ್ಥಿತರಿದ್ದರು.

ಶ್ರೀ ಶರಣಬಸವೇಶ್ವರ ಭಜನಾ ಮಂಡಳಿಯವರಿಂದ ವಚನ ಸಂಗೀತ ನೆರವೇರಿತು, ಶ್ರೀಮಠದ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *