‘ಪರಿಸರ ದಿನಾಚರಣೆ ವೇದಿಕೆ ಪ್ರಚಾರಕ್ಕೆ ಸೀಮಿತವಾಗಿದೆ’

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ನಗರದಲ್ಲಿ ಕಾಂಕ್ರೀಟ್ ಜಗತ್ತು ಬೆಳೆಯುತ್ತಿದೆ, ಇದು ಮಾರಕ. ಲೇಔಟ್ ಮಾಡುವಾಗ ಕಡ್ಡಾಯವಾಗಿ ಗಿಡ ನೆಡಸಲು ತಾಕೀತು ಮಾಡಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ದೇವಿ ಪ್ರಸಾದ ಕಲಾಲ ಅಭಿಪ್ರಾಯ ಪಟ್ಟರು.

ಬಸವಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಶರಣ ಸಂಗಮ ಹಾಗೂ ವಿಶ್ವ ಪರಿಸರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಬೀದರ ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ತು ಅಧ್ಯಕ್ಷರಾದ ದೇವಿಪ್ರಸಾದ ಕಲಾಲ ಮಾತನಾಡುತ್ತ, ಪ್ರತಿಯೊಬ್ಬರು ತಮ್ಮ ಕರ್ತವ್ಯ ಪಾಲಿಸಬೇಕು.

ನನಗಾಗಿ ಒಂದು ಗಿಡ, ಬೇರೆಯವರಿಗಾಗಿ ಒಂದು ಗಿಡ ಎಂಬ ವಾಕ್ಯ ಅನುಷ್ಠಾನ ಗೊಂಡರೆ ಮರಗಳು ಬೆಳೆಯಲು ಸಾಧ್ಯ. ಸ್ವಲ್ಪ ನಮ್ಮ ಜೀವನ ಶೈಲಿ ಬದಲಾವಣೆ ಮಾಡಿ ಕೊಳ್ಳಬೇಕು.

ಆಹಾರ, ನೀರು, ಮಣ್ಣು ಇವನ್ನು ನಾವಿಂದು ಉಳಿತಾಯ ಮಾಡೋಣ, ಇದು ಮುಂದಿನ ಮಕ್ಕಳಿಗೆ ವರದಾನ. ಹಸಿರು ಪರಿಸರ ಕಡಿಮೆಯಾಗುತ್ತಿರುವುದರಿಂದಲೇ ಬೇಸಿಗೆ ಬಿಸಿಲು ಎಲ್ಲರನ್ನು ತತ್ತರಿಸಿದೆ. ಬೀದರನಲ್ಲಿ ಕೇವಲ ೬% ರಿಂದ ೭% ಅರಣ್ಯವಿದೆ. ಇದನ್ನು ಕನಿಷ್ಠ ಶೇ. ೨೩ಕ್ಕೇರಿಸಲು ಪ್ರಯತ್ನ ಮಾಡಬೇಕು. ಪರಿಸರ ದಿನಾಚರಣೆ ವೇದಿಕೆಗೆ ಪ್ರಚಾರಕ್ಕೆ ಸೀಮಿತವಾಗುತ್ತಿರುವುದು ನೋವು ತಂದಿದೆ. ಪ್ರತಿಯೊಬ್ಬರು ಅತ್ಯಂತ ಗಂಭೀರವಾಗಿ ಚಿಂತನೆ ಮಾಡಿ ಗಿಡ ನೆಟ್ಟು ಅದನ್ನು ಸಂರಕ್ಷಣೆ ಮಾಡುವ ಸತ್ಯ ಸಂಕಲ್ಪ ಮಾಡಲು ವಿನಂತಿಸಿದರು.

ಅರಣ್ಯ ಇಲಾಖೆಯ ಅಧಿಕಾರಿ ಮಹೇಶ ಜಂಗೆ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜೀವನಕ್ಕೊಂದು ಉಲ್ಲಾಸ ಬೇಕೆಂದರೆ ಅದು ಹಚ್ಚಹಸಿರಿನ ವಾತಾವರಣದಿಂದ ಮಾತ್ರ ಸಾಧ್ಯ. ಇಲಾಖೆ ಬೀದರ ಜಿಲ್ಲೆಯನ್ನು ಅರಣ್ಯೀಕರಣಗೊಳಿಸುತ್ತ ದಾಪುಗಾಲು ಹಾಕಿದೆ. ಅನೇಕ ಕಡೆಗಳಲ್ಲಿ ಗಿಡ ನೆಟ್ಟು ಸಂರಕ್ಷಣೆ ಮಾಡಲಾಗುತ್ತಿದೆ.

ಸಾರ್ವಜನಿಕರು ಸ್ವಲ್ಪಮಟ್ಟಿಗೆ ಮುತುರ್ಜಿ ವಹಿಸಿ ಗಿಡಗಳಿಗೆ ಕಾಪಾಡಿದರೆ ಇನ್ನು ಬಲು ಬೇಗನೇ ಗಿಡಗಳು ಬೆಳೆಯಲು ಸಹಕಾರಿ. ಸಾರ್ವಜನಿಕ, ಧಾರ್ಮಿಕ ಸ್ಥಳಗಳಲ್ಲಿ ಉಚಿತವಾಗಿ ಗಿಡ ಕೊಡಲಾಗುತ್ತಿದೆ ಅದರ ಲಾಭ ಪಡೆಯಬಹುದಾಗಿದೆ.

ವೈಯುಕ್ತಿಕ ವಿವಿಧ ಜಾತಿಯ ಗಿಡ ಬೇಕೆಂದರೆ ಅತ್ಯಂತ ಕಡಿಮೆ ದರದಲ್ಲಿ ಲಭ್ಯ. ಇದರ ಸದುಪಯೋಗ ಪಡೆಯಲು ತಿಳಿಸಿದರು. ಪರಿಸರ ನಮ್ಮೆಲ್ಲರ ಆಸ್ತಿಯನ್ನಾಗಿ ಮಾಡಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧಿಸಬಹುದು. ಮನೆಗೆ ಮಕ್ಕಳು ಎಷ್ಟು ಶ್ರೇಷ್ಟವೋ ಅಷ್ಟೇ ಪರಿಸರಕ್ಕೆ ಗಿಡಗಳು ಶ್ರೇಷ್ಠ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷರಾದ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ ಮಾತನಾಡಿ, ಈ ವರ್ಷದ ಬಿಸಿಲಿನ ತಾಪಕ್ಕೆ ಅನೇಕರು ಸಂಕಷ್ಟ ಅನುಭವಿಸಿದ್ದಾರೆ. ಫ್ಯಾನ ಕೆಲಸ ಮಾಡಿಲ್ಲ ಹೀಗೆ ನಾವೆಲ್ಲ ಕುಳಿತರೆ ಪರಿಸರ ಇನ್ನು ಹಾಳಾಗುತ್ತದೆ. ಪ್ರತಿಯೊಬ್ಬರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪರಿಸರ ನಿಯಂತ್ರಣ ಮಾಡುವ ದಿಶೆಯಲ್ಲಿ ಧನಾತ್ಮಕ ಚಿಂತನೆ ಮಾಡಲೇಬೇಕು. ಇಂದು ಎಲ್ಲಕ್ಕೂ ಮುಖ್ಯವಾಗಿ ಗಿಡ ಬೆಳೆಸಿ ಪರಿಸರ ಉಳಿಸಿ ಎಂಬುದನ್ನು ಅನುಷ್ಠಾನಕ್ಕೆ ತರಬೇಕು ಎಂದರು.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿಗೆ ಸರಕಾರದಿಂದ ನೇಮಕಗೊಂಡ ಬಾಬು ದಾನಿ, ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಸಿದ್ಧಾರೂಢ ನಾಗೊರಾ, ಮಹ್ಮದ ರಫೀಕ್ ತಾಳಿಕೋಟಿ, ಸಂತೋಷ ಭಂಡೆ, ಮಹಾನಂದಾ ಪಾಟೀಲ ಅವರುಗಳಿಗೆ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಗಾದಗಿ ಪಿಡಿಓ ಉಮೇಶ ಜಾಬಾ ಹಾಗೂ ಸ್ವಾಭಿಮಾನಿ ಗೆಳೆಯರ ಬಳಗದ ಅಧ್ಯಕ್ಷ ಪಕ್ಷಿಪ್ರೇಮಿಗಳಾದ ಚೆಂದು ಪಡಶೆಟ್ಟಿ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಮೊದಲಿಗೆ ಡಾ. ವಿದ್ಯಾವತಿ ಬಲ್ಲೂರ ಸ್ವಾಗತಿಸಿದರೆ, ಕಲ್ಯಾಣರಾವ ಚಾಳಕಾಪೂರೆ ನಿರೂಪಿಸಿದರೆ, ಜಗನ್ನಾಥ ಶಿವಯೋಗಿ ವಂದಿಸಿದರು.

ರೇವಣಪ್ಪ ಮೂಲಗೆ, ರೇಖಾ ನಿಂಗದಳ್ಳಿ, ಸಿದ್ರಾಮಯ್ಯ ಸ್ವಾಮಿ, ವೀರುಪಾಕ್ಷ ದೇವರು ವಚನ ಸಂಗೀತ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *