ವೇದಾಗಮಗಳು ಸತ್ಯದ ದರ್ಶನ ನೀಡಲಾರವು: ಅಶೋಕ ಬರಗುಂಡಿ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ:

ವೇದಗಳು ದೇವರನ್ನು ಕುರಿತು ಹೇಳುವಾಗ ದೇವರು ಈ ಜಗದ ಅಣುರೇಣು ತೃಣಕಾಷ್ಠದಲ್ಲೂ ಇದ್ದಾನೆ ಎನ್ನುವವು. ಆದರೆ ಅವು ಮೂಲ ಮನುಷ್ಯನನ್ನೇ ಮರೆತುಬಿಟ್ಟವು.

ಜನಸಾಮಾನ್ಯರಿಗೆ ಅರಿಯಲಾಗದಂತಹ ರೀತಿಯಲ್ಲಿ ರಚನೆಯಾದ ವೇದಾಗಮಗಳು ಬರೀ ಪಂಡಿತರ, ವೈದಿಕರು ತಮ್ಮ ಜೀವನೋಪಾಯಕ್ಕಾಗಿ ಉಳಿದವರನ್ನು ಶೋಷಿಸಲಷ್ಟೇ ಬಳಕೆಯಾದವು. ಅವು ಜನಸಾಮಾನ್ಯರಿಗೆ ನಿಜವಾದ ಧರ್ಮದ ಸತ್ಯದರ್ಶನ ಮಾಡಿಸಲಿಲ್ಲವೆಂದು ಶರಣತತ್ವ ಚಿಂತಕ ಅಶೋಕ ಬರಗುಂಡಿ ಅವರು ತಿಳಿಸಿದರು.

ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಗಳ ಸಂಯುಕ್ತಾಶ್ರಯದಲ್ಲಿ ‘ಮನೆ-ಮನಗಳಲ್ಲಿ ವಚನ ಶ್ರಾವಣ’ ಎಸ್. ಎಸ್. ಶೆಟ್ಟರ, ವಕೀಲರು ಅವರ ಮನೆಯಲ್ಲಿ ನಡೆದ ‘ವಚನ ನಿರ್ವಚನ’ ಕಾರ್ಯಕ್ರಮದಲ್ಲಿ ಅಲ್ಲಮಪ್ರಭುಗಳ ವಚನ “ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು, ಆಗಮ ಆಗು ಹೋಗಲರಿಯದೆ ಕೆಟ್ಟವು. ಪುರಾಣ ಪೂರೈಸಲರಿಯದೆ ಕೆಟ್ಟವು. ಹಿರಿಯರು ತಮ್ಮ ತಾವು ಅರಿಯದೆ ಕೆಟ್ಟರು, ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು, ನಿಮ್ಮನೆತ್ತ ಬಲ್ಲರೂ ಗುಹೇಶ್ವರಾ”ಈ ವಚನ ನಿರ್ವಚನ ಗೈಯುತ್ತಾ ಮಾತನಾಡಿದರು.

ಮುಂದುವರೆದ ಅವರು, ವೇದಾಗಮಗಳ ಹೇಳುವುದು ಒಂದು, ಮಾಡುವುದು ಇನ್ನೊಂದಾಗಿದೆ ಎಂಬುದನ್ನು ಅಲ್ಲಮಪ್ರಭುಗಳು ಈ ವಚನದಲ್ಲಿ ಸಾರಿದ್ದಾರೆ. ನಾಲ್ಕು ವೇದಗಳಿವೆ ಅವು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದಗಳು. ಒಂದೊಂದು ಒಂದು ಪಥವಾಗಿದೆ. ಆದರಿಲ್ಲಿ ಒಂದು ಸಮಸ್ಯೆ ಇದೆ. ಈ ವೇದಗಳನ್ನು ಬರೆದವರಾರು ಎಂಬುದು. ಅದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ನೋಡಿ ನಮ್ಮ ವಚನಗಳನ್ನು ಅವಲೋಕನಗೈದಾಗ ಅಲ್ಲಿ ವಚನಕಾರರ ಹೆಸರಿದೆ. ಅನುಭವ ಮಂಟಪದಲ್ಲಿ ನಡೆದ ಚಿಂತನ ಮಂಥನಗಳು, ತಾವು ಕಟ್ಟಬೇಕಾದ ಸಮಾಜದ ಕಲ್ಪನೆಗಳನ್ನೇ ವಚನಗಳನ್ನಾಗಿಸಿದರು. ಆದರೆ ವೇದಾಗಮಗಳ ಉದ್ದೇಶ ಅರಿವಾಗುವುದಿಲ್ಲ. ಇಲ್ಲಿ ವೇದಗಳನ್ನು ಹೇಳುವುದನ್ನು ಪ್ರಶ್ನಿಸಲಾಗದು ಎನ್ನುವರು. ವೇದಗಳು ಹೇಳುವುದು ಒಂದು, ಆದರೆ ಬದುಕುವುದು ಮತ್ತೊಂದಾಗಿದೆ. ಇಲ್ಲಿ ಇದೇ ವೇದಗಳನ್ನು ಓದಿಕೊಂಡು ಒಬ್ಬರು ಅದ್ವೈತವೆಂದರೆ, ಮತ್ತೊಬ್ಬರು ವಿಶಿಷ್ಟಾದ್ವೈತವೆಂದರು, ಮಗದೊಬ್ಬರು ದ್ವೈತವೆಂದರು. ಇವು ಮೂರು ಭಿನ್ನಭಿನ್ನ ತತ್ವಗಳೇ ಆಗಿವೆ. ಇಂದಿಗೂ ಆ ಭಿನ್ನತೆಗಳು ಮುಂದುವರೆದೆ ಇವೆ. ಈ ಮೂರುಪಂಥದ ಅನುಯಾಯಿಗಳೂ ಪರಸ್ಪರ ದೋಷಿಸುತ್ತಿರುತ್ತಾರೆ. ಆದರೆ ಇವೆಲ್ಲ ಒಂದೇ ಮೂಲದಿಂದೆಂಬುದ ಮರೆಯಬಾರದು.

ವೇದಾಗಮಗಳು ಕೊನೆಗೆ ತಂದಿದ್ದು ಚಾತುರ್ವರ್ಣಾಶ್ರಮ ವ್ಯವಸ್ಥೆಯನ್ನು. ಮಾನವರನ್ನು ಶ್ರೇಣಿಗಳಾಗಿ ವಿಂಗಡಿಸಿದ್ದು, ಹಲವರು ಮೇಲ್ವರ್ಗದವರಾದರೆ ಇನ್ನೂ ಕೆಲವರು ತಳವರ್ಗದವರು, ಶೂದ್ರರಾದರು.

ಇಲ್ಲಿ ಹೆಣ್ಣುಮಕ್ಕಳಿಗೆ ಶೂದ್ರರ ಸ್ಥಾನ ನೀಡಲಾಯಿತು. ಇದು ಶೋಷಣೆಗೆ ಕಾರಣವಾಯಿತು. ಈ ಶೋಷಣೆಯೇ ಮುಂದೆ ಲಿಂಗಾಯತ ಧರ್ಮದ ಉದಯಕ್ಕೆ ಕಾರಣವಾಯಿತು. ಬಸವಾದಿ ಶರಣರು ವೇದಾಗಮ ಅಸಮಾನತೆಯನ್ನು ಕಟುವಾಗಿ ಖಂಡಿಸಿದ್ದಾರೆ.

ಶರಣರ ಬಹಳಷ್ಟು ವಚನಗಳಲ್ಲಿ ವೇದಾಗಮ, ಶಾಸ್ತ್ರ, ಪುರಾಣಗಳನ್ನು ಟೀಕೆಗೆ ಒಳಗಾಗಿವೆ ಎಂದರು.

ತಮ್ಮ ಉಪನ್ಯಾಸದ ಆರಂಭದಲ್ಲಿ ಲಿಂಗಾಯತರು ಧರ್ಮದ ಮೂಲತತ್ವಗಳನ್ನು ಮರೆಯುತ್ತಿದ್ದಾರೆ. ಮೂರ್ತಿಪೂಜೆಗಳ ಅಬ್ಬರದಲ್ಲಿ ಶರಣರ ವಚನ ಸಾಹಿತ್ಯದ ನಿಜತತ್ವಗಳು ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಧರ್ಮ ಲಿಂಗತತ್ವ ಅಂದರೆ ಏಕದೇವೋಪಾಸನೆ ಹೇಳುತ್ತದೆ. ವೈಧಿಕವು ಹೇಳುವಂತೆ ದೇವರು ಏನೆಲ್ಲ ನೀಡುತ್ತಾನೆನ್ನುವುದನ್ನು ನಿರಾಕರಿಸುತ್ತದೆ. ಮಾನವನಲ್ಲಿ ಬಹಿರಂಗ ಭಕ್ತಿಗಿಂತ, ಆಚರಣೆ, ಅರಿವಿನ ಭಕ್ತಿಯನ್ನು ಸಾರುತ್ತದೆ. ಹೊರಪೂಜೆಗಿಂತ ಒಳ ಚೈತನ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ. ಶರಣರು ‘ಅನ್ಯ’ ಆಚರಣೆಗಳನ್ನು ವಿರೋಧಿಸುವುದನ್ನು ಲಿಂಗಾಯತರು ಅರಿಯಬೇಕೆಂದರು.

ಮನುಷ್ಯ ಮನುಷ್ಯರ ನಡುವೆ ಭಿನ್ನತೆ ಹುಟ್ಟಿಸುವುದು, ದೇವ, ಭಕ್ತರ ನಡುವೆ ಅಂತರ ಮೂಡಿಸುವ ಮೂರ್ತಿಪೂಜೆ, ಬಹಿರಂಗ ತೋರಿಕೆಯ ಭಕ್ತಿ ಶರಣರ ಅಸಮ್ಮತಿಗೆ ಒಳಗಾಗಿತ್ತು. ಆ ಕಾರಣಕ್ಕಾಗಿ ಶರಣರು ವೇದಾಗಮ, ಶಾಸ್ತ್ರಗಳನ್ನು ಖಂಡಿಸಿದರೆಂದರು.

ವೇದಿಕೆಯ ಮೇಲೆ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಎಸ್. ಎಸ್. ಶೆಟ್ಟರ ವಕೀಲರು ಉಪಸ್ಥಿತರಿದ್ದರು.

ಆರಂಭದಲ್ಲಿ ವಚನ ಪ್ರಾರ್ಥನೆಯನ್ನು ಬಸವದಳದ ಶರಣೆಯರು ಮಾಡಿದರು. ಸ್ವಾಗತವನ್ನು ನ್ಯಾಯವಾದಿ ಚೆನ್ನಬಸವರಾಜ ಎಸ್. ಶೆಟ್ಟರ ಮಾಡಿದರು.

ಕಾವ್ಯ ಚೆನ್ನಬಸವ ಶೆಟ್ಟರ ಸುಶ್ಯಾವ್ರ್ಯವಾಗಿ ವಚನಗಳನ್ನು ಹಾಡಿದರು. ಗೌರಕ್ಕ ಬಡಿಗಣ್ಣವರ ಕಾರ್ಯಕ್ರಮ ನಿರೂಪಿಸಿದರು. ಬಸವದಳದ ಶರಣೆಯರಿಂದ ವಚನ ಮಂಗಲ ಜರುಗಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *