‘ಶರಣರಿಗೆ ಬೆವರೇ ಭಗವಂತನ ಅಭಿಷೇಕ, ಕಾಯಕವೇ ಕೈಲಾಸವಾಗಿತ್ತು’

ಶರಣರ ಅಧ್ಯಾತ್ಮ ಪೂಜೆ ಪುರಸ್ಕಾರಗಳಲ್ಲಿ ಇರಲಿಲ್ಲ: ಡಾ. ಜಯಪ್ಪ ಹೊನ್ನಾಳಿ

ಮೈಸೂರು:

ಬಸವಾದಿ ಪ್ರಮಥರು ಸತ್ಯಶುದ್ಧ ಕಾಯಕಕ್ಕೆ, ದಾಸೋಹಕ್ಕೆ ಹಾಗೂ ನೈತಿಕ ಜೀವನಕ್ಕೆ ಮಹತ್ವ ಕೊಟ್ಟರು, ಅಂದರೆ ಶರಣರ ಅಧ್ಯಾತ್ಮ ಪೂಜೆ ಪುರಸ್ಕಾರಗಳಲ್ಲಿ ಇರಲಿಲ್ಲ ಎಂದು ನಗರ ಘಟಕದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ನಗರದ ಜೆಎಸ್ಎಸ್ ಪ್ರಧಾನ ವಿದ್ಯಾರ್ಥಿ ನಿಲಯದಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ‘ಶರಣರ ದೃಷ್ಟಿಯಲ್ಲಿ ಅಧ್ಯಾತ್ಮ’ ಎಂಬ ವಿಷಯ ಕುರಿತಂತೆ ಮಾತನಾಡಿದರು.

ಬೆವರೇ ಭಗವಂತನ ಅಭಿಷೇಕವೆಂದು ಭಾವಿಸಿದ್ಧ ಶರಣರಿಗೆ ಕಾಯಕವೇ ಕೈಲಾಸವಾಗಿತ್ತು, ಅವರಲ್ಲಿ ಶ್ರದ್ಧೆಯಿಂದ ಶ್ರಮಿಸುವುದರಲ್ಲೇ ಭಗವಂತನ ಕಾಣುವ ಆತ್ಮದಾಶಯವಿತ್ತು, ಹಾಗಾಗಿಯೇ ಅವರು ತಮ್ಮ ಕಾಯಕದ ಫಲವನ್ನು ದಾಸೋಹ ಭಾವದಿಂದ ಸಮಾಜಕ್ಕೆ ನೈವೇದ್ಯ ಮಾಡಿ, “ಇವನಾರವ ಇವನಾರವ” ಎನ್ನದೇ, “ಇವ ನಮ್ಮವ ಇವ ನಮ್ಮವ” ಎಂದೇ ಭಾವಿಸಿ, ಪಕ್ಕದವರಲ್ಲೇ ಪರಮಾತ್ಮನನ್ನು ಕಂಡರು ಎಂದರು.

ಅಂತಃಕರಣ ಶುದ್ಧಿಗೆ ಪ್ರಾಧಾನ್ಯತೆ ನೀಡಿದ ಶರಣರು ಕಾಮ, ಕ್ರೋಧ, ಮೋಹ, ಮದ, ಮತ್ಸರ ಹಾಗೂ ದುರಾಸೆಗಳಿಂದ ದೂರವಿದ್ದು, ದೇಹವನ್ನೇ ದೇವಾಲಯವಾಗಿಸಿ, ಆತ್ಮವನ್ನೇ ಪರಮಾತ್ಮನ ಅವಿನಾಭಾಗವಾಗಿಸಿ, ಮೇಲು-ಕೀಳು ಮಾಡುತ್ತಿದ್ದ ಪುರೋಹಿತಶಾಹಿಗಳ ದೇವಾಲಯ ಸಂಸ್ಕೃತಿಯನ್ನೇ ದಿಕ್ಕರಿಸಿ, ಜನ ಸಾಮಾನ್ಯರ ಭಾಷೆಯಾಗಿದ್ದ ಕನ್ನಡದಲ್ಲೇ ದೇವರೊಂದಿಗೆ ಆತ್ಮಾನುಸಂಧಾನ ಮಾಡಿ, ಕನ್ನಡವನ್ನು ದೇವಭಾಷೆಯಾಗಿಸಿದ ಕೀರ್ತಿಗೆ ಪಾತ್ರರಾದರು ಎಂದರು.

ತೋರುಗಾಣಿಕೆಯ ಮತ್ತು ಬೂಟಾಟಿಕೆಯ ಭಕ್ತಿಯನ್ನು ಹೀಗಳೆದ ಶೂನ್ಯಪೀಠದ ಸಿಂಹಾಸನಾಧ್ಯಕ್ಷ ಅಲ್ಲಮಪ್ರಭು ಆ ಕಾರಣದಿಂದಲೇ “ಗುಹೇಶ್ವರನ ಭಕ್ತಿಯೆಂಬುದು ಪರಮ ಪಾತಕ ಕಾಣಿರೊ” ಎಂದದ್ದು ಹಾಗೂ ಭಕ್ತನಾದವನು ಲಿಂಗಾಂಗ ಸಾಮರಸ್ಯ ತೋರಿ, ದೇವರಲ್ಲಿ ಒಂದಾಗಬೇಕು ಎಂದು ತಿಳಿಸಿ, ಸದಾಚಾರಕ್ಕೆ ಹೆಚ್ಚು ಒತ್ತು ಕೊಟ್ಟು, ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವುದೇ ಅಧ್ಯಾತ್ಮಿಕ ಸಾಧನೆ ಎಂದದ್ದು ಎಂದರು.

ನಿಲಯ ಪಾಲಕರಾದ ಮಹದೇವಸ್ವಾಮಿ ಎನ್. ಸಸಿಗೆ ನೀರೆರೆವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ನಗರ್ಲೆ ಶಿವಕುಮಾರ ಉಪನ್ಯಾಸ ನೀಡಿದರು. ಉಪನ್ಯಾಸಕಿ ಆಶಾಲತಾ ಮೊದಲಾಗಿ ದತ್ತಿದಾಸೋಹಿಗಳು ಉಪಸ್ಥಿತರಿದ್ದರು.

ಮಲ್ಲಿಕಾ ಮಹದೇವಸ್ವಾಮಿ ನಿರೂಪಿಸಿದರು, ವೀಣಾ ನಂದೀಶ ಮತ್ತು ಪರಿಷತ್ತಿನ ಕಾರ್ಯದರ್ಶಿ ನಂದೀಶ್ವರ ಬಿ. ಎನ್, ಖಜಾಂಚಿ ಡಾ. ಮುದ್ದುಮಲ್ಲೇಶ್ ದತ್ತಿದಾಸೋಹಿಗಳ ಪರಿಚಯಿಸಿದರು. ಚನ್ನಬಸಪ್ಪ ಪ್ರಾರ್ಥನೆ ಮಾಡಿದರು.

ನಿಲಯದ ಸಿಬ್ಬಂದಿ ವರ್ಗದವರೂ, ಪರಿಷತ್ತಿನ ಉಪಾಧ್ಯಕ್ಷ ಚಿನ್ನಸ್ವಾಮಿ ಎಂ, ನಾಡಿನ ಹಿರಿಯ ಗಾಯಕರಾದ ಪ್ರೊ. ಎಸ್ ಮಲ್ಲಣ್ಣ, ಹಿರಿಯ ಸಾಹಿತಿ ಪ್ರೊ. ಕೆ ಆರ್ ಪ್ರೇಮಲೀಲಾ, ವಸಂತಯ್ಯ, ಆರ್. ಕೆ. ಸ್ವಾಮಿ, ಬಸವರಾಜೇಂದ್ರಸ್ವಾಮಿ ಮುಂತಾದವರಿದ್ದರು.

ಪರಿಷತ್ತಿನ ಸಂಚಾಲಕರಾದ ಡಾ. ಲೋಕೇಶಪ್ಪ ಹೆಚ್. ಎನ್. ಶರಣು ಸಮರ್ಪಣೆ ಮಾಡಿದರು. ಸಮಾರಂಭದ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment

Leave a Reply

Your email address will not be published. Required fields are marked *