ಗದಗ:
ಮಹಾತ್ಮಾ ಗಾಂಧೀಜಿಯವರ ಜೀವನವೇ ಒಂದು ಪ್ರಯೋಗಶಾಲೆಯಾಗಿತ್ತು. ದೇಶದ ಅನೇಕ ಮಹಾತ್ಮರು, ಶರಣರು, ದಾರ್ಶನಿಕರು, ಹೇಳಿದ ಸಂದೇಶಗಳನ್ನು ಆಳವಾಗಿ ತಿಳಿದುಕೊಂಡು ಅವುಗಳನ್ನು ಅಳವಡಿಸಿಕೊಂಡ ಜೀವನ ಅವರದಾಗಿತ್ತು ಎಂದು ಜಗದ್ಗುರು ಡಾ. ತೋಂಟದ ಸಿದ್ದರಾಮ ಮಾಹಾಸ್ವಾಮಿಗಳು ಮಾತನಾಡಿದರು.
ಶ್ರೀ ತೋಂಟದಾರ್ಯ ಮಠದಲ್ಲಿ ಜರುಗಿದ ೨೮೧೮ನೇ ಶಿವಾನುಭವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಅನೇಕ ನೈತಿಕ ಮೌಲ್ಯಗಳನ್ನು ಅವರು ಬದುಕಿನಲ್ಲಿ ಅಳವಡಿಸಿಕೊಂಡವರಾಗಿದ್ದರು. ಸತ್ಯವೇ ಈಶ್ವರ ಈಶ್ವರನೇ ಸತ್ಯ ಎಂದು ಪ್ರತಿಪಾದಿಸಿದವರು.

ಮಹಾತ್ಮ ಗಾಂಧೀಜಿಯವರು ಸರಳ ಜೀವನ ಅನುಸರಿಸಿದವರು. ನೈತಿಕತೆಯ ಬದುಕಿನಲ್ಲಿ ಶಕ್ತಿ ಇದೆ ಎನ್ನುವುದನ್ನು ತೋರಿಸಿದವರು. ಅವರ ಜೀವನವೇ ಅವರ ಸಂದೇಶವಾಗಿತ್ತು. ಸತ್ಯ ಮತ್ತು ಅಹಿಂಸೆಗಳನ್ನು ಅಸ್ತ್ರವನ್ನಾಗಿಸಿಕೊಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತೃತ್ವ ವಹಿಸಿ ಬಲಿಷ್ಠ ಬ್ರಿಟಿಷರನ್ನು ಈ ದೇಶದಿಂದ ಹೊರ ಹಾಕಿ ಸ್ವಾತಂತ್ರ್ಯ ತಂದುಕೊಟ್ಟವರು. ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ಪ್ರಗತಿಯತ್ತ ಸಾಗುತ್ತದೆ ಎಂದರು.
ದೇಶದ ಪ್ರಧಾನ ಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜೀವನ ಅತ್ಯಂತ ಸರಳ ಮತ್ತು ಸಹಜ ಜೀವನವಾಗಿತ್ತು. ಅವರು ಕೇವಲ ೧೭ ತಿಂಗಳ ಆಡಳಿತ ನೀಡಿದವರು. ಭೀಕರ ಬರಗಾಲ ಮತ್ತು ಕಷ್ಟ ಕಾಲದಲ್ಲಿ ಸುಭದ್ರ ಆಡಳಿತ ನೀಡಿ ಜನಪ್ರಿಯರಾಗಿದ್ದರು.
ಬರಗಾಲ ಸಂದರ್ಭದಲ್ಲಿ ವಾರಕ್ಕೊಮ್ಮೆ ಉಪವಾಸ ಆಚರಿಸಬೇಕೆಂದು ಕರೆ ನೀಡಿದರು. ಜೈ ಜವಾನ್ ಜೈ ಕಿಸಾನ್ ಎಂದು ಕರೆ ನೀಡಿದರು. ದೇಶದ ರೈತರಿಗೆ ಮತ್ತು ಸೈನಿಕರಿಗೆ ಬಹುದೊಡ್ಡ ಗೌರವ ನೀಡಿದ ವ್ಯಕ್ತಿ ಅವರಾಗಿದ್ದರು ಎಂದರು. ಮುಳಗುಂದದ ಸುಪ್ರಸಿದ್ಧ ವೈದ್ಯರಾದ ಡಾ.ಎಸ್.ಸಿ. ಚವಡಿ ಅವರು ಮಹಾತ್ಮ ಗಾಂಧೀಜಿ ಮತ್ತು ಲಾಲಬಹಾದ್ದೂರ್ ಶಾಸ್ತ್ರಿಜಿಯವರ ಜೀವನ ಮತ್ತು ಸಂದೇಶ ಕುರಿತು ಮಾತನಾಡುತ್ತಾ, ಮಹಾತ್ಮಾ ಗಾಂಧೀಜಿಯವರ ತತ್ವಗಳನ್ನು ನಾನು ಜೀವನದಲ್ಲಿ ಅಳವಡಿಸಿಕೊಂಡು ನನ್ನ ವೃತ್ತಿ ಮಾಡುತ್ತಿದ್ದೇನೆ. ರೋಗಿಗಳೇ ದೇವರೆಂದು ಚಿಕಿತ್ಸೆ ಕೊಡುತ್ತೇನೆ. ಮಹಾತ್ಮ ಗಾಂಧೀಜಿಯವರ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜೀವನದ ಸಂದೇಶಗಳು ಅಪಾರವಾದವುಗಳು. ಅವುಗಳ ಆಚರಣೆ ಇಂದಿನ ಅಗತ್ಯವಾಗಿದೆ ಎಂದರು.
ಮಹಾತ್ಮಾ ಗಾಂಧೀಜಿಯವರ ಕುರಿತಾಗಿ ಡಾ. ಸಿದ್ದಲಿಂಗೇಶ ಸಜ್ಜನಶೆಟ್ಟರ, ಶಿಲ್ಪಾ ಮ್ಯಾಗೇರಿ ಮತ್ತು ನೀಲಮ್ಮ ಅಂಗಡಿ ಅವರು ಕವನ ವಾಚನ ಮಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ದಾನಯ್ಯ ಗಣಾಚಾರಿ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿದರು. ಮಠದ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವರ ಭಕ್ತಿಯನ್ನು ಅಭಿನಂದಿಸಿದರು. ಇವರ ಸೇವಾ ಅವಧಿಯಲ್ಲಿ ಲಿಂಗಾಯತ ಪ್ರಗತಿಶೀಲ ಸಂಘವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಯಿತು ಎಂದರು.
ಸುಪ್ರಸಿದ್ಧ ಗಾಯಕರಾದ ಪಂಡಿತ ವೆಂಕಟೇಶಕುಮಾರ ಆಲ್ಕೋಡ್ ತಂಡದವರಿಂದ ಗಾಂಧಿಜಿಯವರ ಕುರಿತಾದ ವಿವಿಧ ಕಾವ್ಯ ಗಾಯನ ಜರುಗಿತು. ವಿಶೇಷವಾಗಿ ಡಿ.ಎಸ್. ಕರ್ಕಿ ಅವರ ಕಾವ್ಯ ಗಾಯನ ಕೇಳುಗರ ಗಮನ ಸೆಳೆಯಿತು.

ಗದುಗಿನ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ. ಎಸ್. ಪಲ್ಲೇದ ಅವರಿಗೆ ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸ್ಪೋರ್ಟ್ಸ್ ಫೌಂಡೇಶನ್ ನ ರಾಜ್ಯಮಟ್ಟದ ರಾಜಯೋಗಿ ಡಿ. ಕ್ರಷ್ಣಮಾಚಾರ್ಯ ಪ್ರಶಸ್ತಿಗೆ ಭಾಜನರಾದ ನಿಮಿತ್ತ ಅವರನ್ನು ಪೂಜ್ಯರು ಸನ್ಮಾನಿಸಿದರು. ದಾಸೋಹ ಸೇವೆಯನ್ನು ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳು ವಹಿಸಿಕೊಂಡಿದ್ದರು.
ಧರ್ಮಗ್ರಂಥ ಪಠಣವನ್ನು ಪ್ರೀತಮ ಕುಂಬಾರ, ವಚನ ಚಿಂತನವನ್ನು ಪ್ರತಿಕ್ಷಾ ಕುಂಬಾರ ಮಾಡಿದರು. ಮ್ರತ್ಯುಂಜಯ ಗುರುನಾಥ ಸುತಾರ ಅವರಿಂದ ಪ್ರಾರ್ಥನೆ ಜರುಗಿತು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತ ಕೋರಿದರು. ವಿದ್ಯಾ ಗಂಜೀಹಾಳ ಕಾರ್ಯಕ್ರಮ ನಿರೂಪಣೆ ಮಾಡಿದರು.
ಶಿವಾನುಭವದಲ್ಲಿ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
