‘ಈಡಿಗರ ಅಕ್ಕಮ್ಮ’ ‘ಹೆಂಡದ ಮಾರಯ್ಯ’ ಪ್ರಶಸ್ತಿ ಪ್ರದಾನ
ಕಲಬುರಗಿ
ನಗರದಲ್ಲಿ ಈಡಿಗರ ಅಕ್ಕಮ್ಮ, ಹೆಂಡದ ಮಾರಯ್ಯನವರ ಸ್ಮರಣೋತ್ಸವನ್ನು ನವೆಂಬರ್ 2ರಂದು ಆಯೋಜಿಸಲಾಗುವುದು ಎಂದು ಕರದಾಳ ನಾರಾಯಣ ಗುರು ಶಕ್ತಿಪೀಠದ ಪೂಜ್ಯ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಯಕ ಶರಣರ ವಚನಗಳು ಪ್ರಚಾರವಾಗುತ್ತಿಲ್ಲ. ಅಂಥವರಲ್ಲಿ ಈಡಿಗರ ಅಕ್ಕಮ್ಮ ಹಾಗೂ ಹೆಂಡದ ಮಾರಯ್ಯನವರೂ ಸೇರಿದ್ದಾರೆ. ಅಕ್ಕಮ್ಮನವರು ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ಏಲೇಶ್ವರ (ಏಲೇರಿ)ದವರು. ಅವರು ಶರಣ ಚಳವಳಿಯ ಭಾಗವಾಗಿದ್ದರು.
154 ವಚನಗಳನ್ನು ರಚಿಸಿದ್ದರು. ಹೆಂಡದ ಮಾರಯ್ಯನವರು 12 ವಚನಗಳನ್ನು ಬರೆದಿದ್ದಾರೆ. ಅದನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದರು.
‘ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 13 ಸಾಧಕರಿಗೆ ‘ಈಡಿಗರ ಅಕ್ಕಮ್ಮ’ ಹಾಗೂ 12 ಸಾಧಕರಿಗೆ ‘ಹೆಂಡದ ಮಾರಯ್ಯ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಿ.ಎಂ.ರಾವೂರ ಅವರು ಹೆಂಡದ ಮಾರಯ್ಯ ಹಾಗೂ ಸದಾನಂದ ಪೆರ್ಲ ಅವರು ಈಡಿಗರ ಅಕ್ಕಮ್ಮನವರ ಕುರಿತು ಉಪನ್ಯಾಸ ನೀಡುವರು’ ಎಂದು ಮಾಹಿತಿ ನೀಡಿದರು.
‘10 ತಾಲ್ಲೂಕುಗಳ 350–500 ಆಹ್ವಾನಿತರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಇದೇ ವೇಳೆ ರಾಷ್ಟ್ರೀಯ ಈಡಿಗ ಮಹಾಮಂಡಳದ ಕಲಬುರಗಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ತಿಳಿಸಿದರು.
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಸದಾನಂದ ಪೆರ್ಲ, ಮುಖಂಡರಾದ ವೆಂಕಟೇಶ ಗುಂಡಾನೂರು, ಮಹೇಶ ಗುತ್ತೇದಾರ ಹಾಗೂ ಅಖಿಲೇಶ ಗುತ್ತೇದಾರ ಹಾಜರಿದ್ದರು.

ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ
ಇವರು ಆರೆಸ್ಸೆಸ್ ಪರವಾಗಿರುವ ಸ್ವಾಮಿಗಳು. ಲಿಂಗಾಯತರ ವಿರುದ್ಧ ಸಂಘಿಗಳ ಇನ್ನೊಂದು ಕುತಂತ್ರ ನಡೆಯುತ್ತಿದೆ. ಕಲಬುರಗಿ ಸಂಘಟನೆಗಳು ಎಚ್ಚರವಿರಲಿ.
ಅಕ್ಕ ಮಹಾದೇವಿ ನಂತರ ವಚನಗಳ ರಚನೆಯ ಎರಡನೇ ಸ್ಥಾನದಲ್ಲಿ ಇರುವ ಶರಣೆ ಅಕ್ಕಮ್ಮ ಎಂದು ಗುರುತಿಸಿ ಎಲೆರಿ ಗ್ರಾಮಕ್ಕೂ ಹೋಗಿ ಬಂದಾಗಿದೆ. ಆದರೆ ಆ ತಾಯಿಯ ಅಂಕಿತನಾಮ ಇರುವ ರಾಮೇಶ್ವರ ಮಂದಿರ ಇದೆ ಜೊತೆಗೆ ಶರಣ ಕೇತಯ್ಯಾ ಸ್ಥಳವು ಹೌದು ಕಾರ್ಯಕ್ರಮ ಯಶಸ್ವಿಯಾಗಲಿ, ಸಾಂಸ್ಕೃತಿಕ ನಾಯಕನ ಭಾವಚಿತ್ರ ಇದ್ದರೆ ಇನ್ನೂ ಶೋಭೆ, ಶರಣು ಶರಣಾರ್ಥಿ