ದೇಶದ ಪ್ರಗತಿ ಗ್ರಾಮಗಳ ಅಭಿವೃದ್ಧಿಯಿಂದ ಸಾಧ್ಯ: ಸಿದ್ದರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಭಾರತ ಹೆಚ್ಚಾಗಿ ಹಳ್ಳಿಗಳಿಂದ ಕೂಡಿದ ವಿಶಾಲವಾದ ಭೂಪ್ರದೇಶ. ಹಳ್ಳಿಗಳು ಅಭಿವೃದ್ಧಿಯಾಗಬೇಕು. ಭಾರತ ದೇಶದ ಆರ್ಥಿಕ ಪ್ರಗತಿ ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯ ಎಂದು ಡಾ. ತೋಂಟದ ಸಿದ್ಧರಾಮ ಮಾಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೧೯ನೇ ಶಿವಾನುಭವದ ಸಾನಿದ್ಯ ವಹಿಸಿ ಮಾತನಾಡಿದ ಶ್ರೀಗಳು, ಶಿಕ್ಷಣ, ಆರೋಗ್ಯ, ಕೃಷಿ, ತಂತ್ರಜ್ಞಾನ ಹೀಗೆ ಇನ್ನೂ ಹೆಚ್ಚಿನ ಪ್ರಾತಿನಿಧ್ಯ ಹಳ್ಳಿಗಳಿಗೆ ದೊರೆಯಬೇಕು. ಹಳ್ಳಿಗಳ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳು ಚುರುಕಾಗಬೇಕು. ಹೀಗಾದಾಗ ಮಾತ್ರ ದೇಶದ ಆರ್ಥಿಕ ಪ್ರಗತಿ ಸಾಧ್ಯ.

ಗ್ರಾಮೀಣ ಯುವಕರಲ್ಲಿ  ಕೌಶಲ್ಯದಿಂದ ಕೆಲಸ ಮಾಡುವ ಕುಶಲ ಕೈಗಾರಿಕೆ ಜ್ಞಾನ ಕೊಡಬೇಕಾಗಿದೆ. ಹಳ್ಳಿಗಳು ಮತ್ತು ರೈತ ನಮ್ಮ ದೇಶದ ಬೆನ್ನೆಲುಬು. ಅಭಿವೃದ್ಧಿಯ ಜೊತೆಗೆ ಮಾನವ ಸಂಪನ್ಮೂಲತೆಯನ್ನು ಬಳಸಿಕೊಂಡರೆ ದೇಶದ ಆರ್ಥಿಕತೆ ಹೆಚ್ಚುತ್ತದೆ ಎಂದರು. ದುಡಿಯುವ ಕೈಗಳಿಗೆ ಉದ್ಯೋಗ ಕೊಟ್ಟು ಅವರ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ದೊಡ್ಡ ದೊಡ್ಡ  ಕಾರ್ಖಾನೆಗಳಿಂದ  ಹೊರಹೊಮ್ಮುವ ವಿಷಾನಿಲ, ಕಲುಷಿತ ನೀರು, ಮನುಷ್ಯನ ಆರೋಗ್ಯಕ್ಕೆ ಘೋರ ದುಷ್ಪರಿಣಾಮ  ಉಂಟುಮಾಡುತ್ತಿವೆ. ವೈಜ್ಞಾನಿಕತೆಯನ್ನು ಬಳಸಿಕೊಂಡು ಅವುಗಳಿಂದ ಉಂಟಾಗುವ ದುಷ್ಪರಿಣಾಮವನ್ನು ತಡೆಯುವುದು ಇಂದಿನ ಅಗತ್ಯವಾಗಿದೆ ಎಂದರು.

ಮದ್ಯ ಮತ್ತು ಮಾದಕ ವಸ್ತುಗಳ ಬಳಕೆ ಹೆಚ್ಚಾಗಿರುವದಕ್ಕೆ ಕಳವಳ ವ್ಯಕ್ತಪಡಿಸಿದರು.

೫೩ ವರ್ಷಗಳಿಂದ ಗದಗ ವಾಣಿಜ್ಯೋದ್ಯಮ ಸಂಸ್ಥೆ ಶ್ರೇಷ್ಠ ಕೆಲಸ ಮಾಡುತ್ತಾ ಬಂದಿದೆ. ಇಂತಹ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಯದೇವ  ಮೆಣಸಗಿ, ಕಾರ್ಯದರ್ಶಿ ರಾಘವೇಂದ್ರ ಕಾಲವಾಡ ಅವರನ್ನು ಪೂಜ್ಯರು ಸನ್ಮಾನ ಮಾಡಿದರು. ಅವರ ಎಲ್ಲಾ ಕಾರ್ಯಕಾರಿ ಸದಸ್ಯರನ್ನು ಆಶಿರ್ವದಿಸುತ್ತ, ತಮ್ಮ ಕಾರ್ಯಾವಧಿಯಲ್ಲಿ  ಯುವಕರು ಮತ್ತು ಮಹಿಳೆಯರ ಸಬಲೀಕರಣ ಮುಂತಾದ ಕಾರ್ಯಕ್ರಮಗಳು ಜರುಗಲಿ ಎಂದರು.

ತುಮಕೂರಿನ ನಿವೃತ್ತ ಶಿಕ್ಷಕ ನಂಜಯ್ಯನವರು ನಾಲ್ಕು ವಿಶೇಷ ವಚನಗಳನ್ನು ವಿಶ್ಲೇಷಣೆ ಮಾಡಿದರು.

ಪ್ರಕೃತಿ ಅದ್ಭುತವಾದದ್ದು ಅನೇಕ ವಿಸ್ಮಯಗಳನ್ನು ಹೊಂದಿದೆ, ಶರಣರು ಅವುಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು ಎಂದರು. ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣದ ಅನೇಕ ವಚನಗಳನ್ನು ಶರಣರು ಬರೆದಿದ್ದಾರೆ ಎಂದರು.

ಅತಿಥಿ ಉಪನ್ಯಾಸಕರಾಗಿದ್ದ ಡಾ. ಟಿ. ಎನ್. ಗೋಡಿ ಅವರು ‘ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ವಾಣಿಜ್ಯ ಸಂಸ್ಥೆಗಳ ಪಾತ್ರ’ ಎನ್ನುವ ವಿಷಯ ಕುರಿತು ಮಾತನಾಡುತ್ತಾ, ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದ ಶಿಕ್ಷಣವನ್ನು ಪಡೆದು ಉದ್ಯೋಗ ಪಡೆಯಲು ಮುಂದಾಗಬೇಕು. ದೇಶದ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬೆಳೆಸಬೇಕು. ನೈಸರ್ಗಿಕ, ಬೌದ್ಧಿಕ, ಮಾನವ ಸಂಪನ್ಮೂಲ, ಸದ್ಬಳಕೆ ಮಾಡಿಕೊಂಡರೆ ದೇಶದ ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ.

ವ್ಯಾಪಾರ ವಾಣಿಜ್ಯ ಬೇಡಿಕೆಗಳ ತಕ್ಕಂತೆ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ವಿದೇಶಗಳ ಬಂಡವಾಳ ಹೂಡಿಕೆ ಮತ್ತು ವ್ಯವಹಾರ ಹೆಚ್ಚಬೇಕು ಎಂದರು. ಬಂಡವಾಳ ಹೂಡಿಕೆಯಲ್ಲಿ ಆರ್ಥಿಕತೆ ಅವಶ್ಯಕತೆ ಇದೆ. ಆರ್ಥಿಕ ವ್ಯವಹಾರದಲ್ಲಿ ವಿಶ್ವಾಸದ ಅಗತ್ಯತೆ ಇದೆ. ವಿಶ್ವಾಸದಲ್ಲಿ ಪಾರದರ್ಶಕದ ಅವಶ್ಯಕತೆ ಇದೆ ಎಂದು ಅರ್ಥಪೂರ್ಣ ಉಪನ್ಯಾಸ ಮಾಡಿದರು.

ಗೌರವ ಸನ್ಮಾನ ಸ್ವೀಕರಿಸಿದ ಜಯದೇವ ಮೆಣಸಗಿ ಮಾತನಾಡಿ, ವಾಣಿಜ್ಯವಿಲ್ಲದೆ ದೇಶದ ಪ್ರಗತಿಯಿಲ್ಲ. ವಾಣಿಜ್ಯ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರ್ಪಣಾ ಮನೋಭಾವದ ಕೆಲಸ ಕೈಗೊಳ್ಳಬೇಕಾಗಿದೆ ಎಂದರು. ಉದ್ಯೋಗದಲ್ಲಿ ಪ್ರಾಮಾಣಿಕತೆ ಕೊರತೆ ಆಗುತ್ತಿದೆ. ವಾಣಿಜ್ಯೋದ್ಯಮ ಸಂಸ್ಥೆಗಳು ಸಕ್ರಿಯವಾಗಿ ಕೆಲಸ ಕಾರ್ಯ ಮಾಡಬೇಕು ಎಂದರು.

ಪಾವನಿ ಮುನವಳ್ಳಿ ಮತ್ತು ಚೇತನ ವಚನ ಸಂಗೀತ ಹಾಡಿದರು. ಸೃಷ್ಟಿ ಪೂಜಾರ ಧರ್ಮಗ್ರಂಥ, ಶಾಂತಾ ಪೂಜಾರ ವಚನಚಿಂತನ ಮಾಡಿದರು. ದಾಸೋಹ ಸೇವೆಯನ್ನು ಎಚ್.ಎಸ್. ಕಿಂದ್ರಿ, ಚನ್ನಬಸಪ್ಪ ಅಂಗಡಿ ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತ ಮಾಡಿದರು. ಸುನಂದ ಪಿಳ್ಳೆ ಕಾರ್ಯಕ್ರಮ ನಿರೂಪಣೆ ಮಾಡಿದರು.

ಶಿವಾನುಭವದಲ್ಲಿ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *