ಶರಣ ವಿಜಯೋತ್ಸವ ಹುತಾತ್ಮ ದಿನಾಚರಣೆ
ಬಸವಕಲ್ಯಾಣ
ಅಕ್ಕಮಹಾದೇವಿ ವಿಶ್ವ ಸ್ತ್ರೀ ಕುಲದ ಸ್ವಾತಂತ್ರ್ಯ, ಸ್ವಾಭಿಮಾನ, ಸದಾಚಾರ, ಸದ್ಭಕ್ತಿ ಇಂತಹ ಮಹೋನ್ನತ ಮೌಲ್ಯಗಳಿಗೆ ಪ್ರತಿನಿಧಿಯಾಗಿ ಕಾಣುತ್ತಾರೆ ಎಂದು ಬೆಂಗಳೂರು ಲೋಕಾಯುಕ್ತ ನ್ಯಾಯವಾದಿ ಸಂತೋಷ ನಾಗರಾಳೆ ಹೇಳಿದರು.
ಅವರು ಅಂತರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಏಳನೆ ದಿನದ ಕಾರ್ಯಕ್ರಮದ ಜಗತ್ತಿನ ಮೊದಲ ಸ್ತ್ರೀ ತತ್ವಜ್ಞಾನಿ ಮಹಾದೇವಿಯಕ್ಕ ಗೋಷ್ಠಿಯಲ್ಲಿ ಅನುಭಾವ ನೀಡಿದರು.

ಅಕ್ಕ ಅಸಾಧ್ಯವನ್ನು ಸಾಧ್ಯವಾಗಿ ತೋರಿಸಿದ ಜಗತ್ತಿನ ಪ್ರಪಥಮ ಸ್ತ್ರೀವಾದಿ ಚಿಂತಕಿ ಪ್ರಗತಿಪರ ವಿಚಾರವಾದಿಯಾಗಿದ್ದಾರೆ. ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. ನಾನು ನನ್ನದು ಎಂಬುದನ್ನು ಅರಗಿಸಿಕೊಂಡರೆ ಉತ್ತಮ ಮನುಷ್ಯ ಆಗಬಲ್ಲರು. ಭಗವಂತನನ್ನು ಕಾಣುವ ಮೂಲಗಳನ್ನು ಅಕ್ಕ ಚುಟವಟಿಕೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬನಲ್ಲಿ ಬೆರೆತುಕೊಂಡಾಗ ಪೂಜೆಯಾಗುತ್ತದೆ. ಅಕ್ಕನನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳಬೇಕು.
ಅರಿವು ಎಂದರೆ ಆನಂದ, ನಿರಹಂಕಾರ, ಜ್ಯೋತಿ. ನಿಜವಾದ ಜ್ಞಾನವೇ ದೇವರಿಗೆ ಆರತಿ, ಅಕ್ಕನ ವಚನಗಳನ್ನು ಓದಿ ಅರ್ಥೈಸಿಕೊಂಡು ನಿತ್ಯ ತೃಪ್ತಿ ಜೀವನ ಸಾಗಿಸಬೇಕು ಎಂದರು.
ಬಸವಕಲ್ಯಾಣದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯಶ್ವಂತ ತವಾರೆ ಉದ್ಘಾಟಿಸಿ, ಶರಣರ ವಚನಗಳಲ್ಲಿ ಕಾನೂನು, ನ್ಯಾಯ, ಸಮಾನತೆ, ಸತ್ಯ, ಧರ್ಮ ಮಾನವೀಯ ಮೌಲ್ಯಗಳಿಗೆ ಮಹತ್ವವಿದೆ. ಅನ್ಯಾಯವನ್ನು ತಡೆಯುವ, ದುರ್ಬಲರನ್ನು ರಕ್ಷಿಸುವ ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸುವ ನೈತಿಕ ಮಾರ್ಗವೂ ಇದೆ.

ದೇಶದ ಕಾನೂನುಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸಬೇಕು. ಹಣ ಮತ್ತು ಸಮಯದ ಉಳಿತಾಯಗೊಸ್ಕರ ಸಮಸ್ಯೆಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಭಕ್ತ ಕುಟುಂಬಗಳಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ, ಆದ್ದರಿಂದ ಎಲ್ಲರೂ ಕೂಡಿ ಬಾಳಬೇಕು. ಅರಿವಿನ ಕೊರತೆಯಿಂದ ವಿಚ್ಛೇದನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಹಿರಿಯರ ಮಾರ್ಗದರ್ಶನ ಮತ್ತು ಶರಣರ ತತ್ವ ಪಾಲನೆ ಕೊರತೆ ಕಾಣುತ್ತಿದೆ ಎಂದರು.
ಸಾನಿಧ್ಯ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಆಶೀರ್ವಚನ ನೀಡಿ, ಅಕ್ಕಮಹಾದೇವಿಯವರ ವಚನಗಳ ಮುಖ್ಯ ಸಂದೇಶವೆಂದರೆ ದೇಹ ಸಂಪತ್ತು ಮತ್ತು ಲೌಕಿಕ ಸುಖಗಳು ಶಾಶ್ವತವಲ್ಲ, ಆತ್ಮದ ಅರಿವೇ ಮುಖ್ಯ ಎಂದು ನುಡಿದರು.
ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ನಿರ್ದೇಶಕ ಭದ್ರಿನಾಥ ಪಾಟೀಲ, ಬಿಡಿವಿಸಿ ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟಿ, ಶರಣ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಗುರುನಾಥ ಗಡ್ಡೆ, ನಿವೃತ್ತ ಎಇಇ ಮಲ್ಲಿಕಾರ್ಜುನ ಮೊಳಕೇರಿ, ಯಶಸ್ವಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾದ ಕಾವೇರಿ ಪಾಟೀಲ, ಉದ್ಯಮಿ ಬಸವರಾಜ ಮುರುಡ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ, ಉಪನ್ಯಾಸಕ ನರಸಿಂಗರೆಡ್ಡಿ ಗದಲೇಗಾಂವ, ಜಗನ್ನಾಥ ಕುಶನೂರೆ, ಮಂಗಲಾ ಬಿರಾದಾರ, ಜಗದೀಶ ಮೂಲಗೆ ಉಪಸ್ಥಿತರಿದ್ದರು.
ಸಂಗಮೇಶ್ವರ ಭಜನಾ ಮಂಡಳಿ ವತಿಯಿಂದ ವಚನ ಭಜನೆ ನಡೆಯಿತು. ಮಮತಾ ಭೂಸೆ ಸ್ವಾಗತಿಸಿದರೆ, ಪೂಜಾ ನಾಗೇಶ ಗಂಗು ನಿರೂಪಿಸಿದರು. ಆಕಾಶ ಮೊಳಕೇರಿ ವಚನ ಗಾಯನ ಮಾಡಿದರು.
ವಚನ ನೃತ್ಯಗಳು:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಪ್ರಾಯೋಜಕತ್ವದಲ್ಲಿ ನೃತ್ಯಾಂಗನ ನಾಟ್ಯ ಕಲಾ ಕೇಂದ್ರ ಬೀದರ ಇವರಿಂದ ಪೂರ್ಣಚಂದ್ರ ಮೈನಾಳೆ ನಿರ್ದೇಶನದಲ್ಲಿ ವಚನ ನೃತ್ಯಗಳು ಆಕರ್ಷಕವಾಗಿ ಮೂಡಿ ಬಂದವು.
