ಶರಣ ವಿಜಯೋತ್ಸವ ಹುತಾತ್ಮ ದಿನಾಚರಣೆ ; ಎಳೆಹೂಟೆ ಮೆರವಣಿಗೆ
ಬಸವಕಲ್ಯಾಣ :
ಸಮಾಜಕ್ಕೆ ಸಮಾನತೆಯ ಮಹಾಬೆಳಕು ನೀಡಿದವರು ಶರಣರು. ಕಾಯಕವೇ ಕೈಲಾಸ, ದಾಸೋಹವೇ ದೇವಧಾಮ ಎಂಬ ತತ್ವಗಳ ಮೂಲಕ ಶರಣರು ಮಾನವ ಬದುಕಿಗೆ ಹೊಸ ದಿಕ್ಕು ತೋರಿಸಿದ್ದಾರೆ ಎಂದು ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಪೂಜ್ಯ ಡಾ.ದಾಕ್ಷಾಯಿಣಿ ಎಸ್. ಅಪ್ಪ ನುಡಿದರು.

ಅಂತರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯಲ್ಲಿ ೨೦೨೬ನೇ ಸಾಲಿನ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
೧೨ನೇ ಶತಮಾನದಲ್ಲಿ ಶರಣರು ಜಾತಿ, ವರ್ಗ, ವರ್ಣ ಬೇಧಗಳನ್ನು ಮೀರಿ ಸಮಾನತೆಯ ಆದರ್ಶಗಳನ್ನು ಎತ್ತಿ ಹಿಡಿದಿದ್ದಾರೆ. ಅವರ ಆದರ್ಶಗಳು ಎಂದು ನಾಶವಾಗಿಲ್ಲ, ೨೧ನೇ ಶತಮಾನದಲ್ಲಿ ಶರಣ ವಿಜಯೋತ್ಸವದ ಮೂಲಕ ಆ ಜ್ಞಾನ ಜ್ಯೋತಿ ಮತ್ತೇ ಬೆಳಗುತ್ತಿದೆ. ಶರಣರ ತ್ಯಾಗಗಳನ್ನು ಸ್ಮ,ರಿಸೋಣ, ಅವರ ಆದರ್ಶಗಳನ್ನು ಅನುಸರಿಸೋಣ.
ಸಮಾನತೆ, ಕಾಯಕ, ದಾಸೋಹ ಸಮಾಜ ನಿರ್ಮಿಸಲು ನಾವೆಲ್ಲ ಕಂಕಣ ಬದ್ಧರಾಗೋಣ, ನಮ್ಮೇಲ್ಲರ ಜ್ಯೋತಿ ಬೆಳಗಲಿ ಎಂದು ನುಡಿದರು.

ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣ ಸಂಸ್ಕೃತಿಯ ಮಾರ್ಗವೇ ವಿಜಯದ ಮಾರ್ಗ ಎಂದು ಮುಂದಿನ ಪೀಳಿಗೆಗೆ ತಿಳಿಸಬೇಕು. ಧರ್ಮದ ಕ್ಷೇತ್ರದಲ್ಲಿ ಕೈಜೋಡಿಸಿದವರು ಆಕಾಶದ ಎತ್ತರಕ್ಕೆ ಬೆಳೆಯುತ್ತಾರೆ. ಶರಣರ ವಚನಗಳು ಕೇವಲ ಪಠಿಸುವ ಸಾಹಿತ್ಯವಲ್ಲ ಅವು ಬದುಕನ್ನು ಪರಿವರ್ತಿಸುವ ಜೀವನ ದರ್ಶನಗಳಾಗಿವೆ. ನಾವು ಇತಿಹಾಸವನ್ನು ಅರಿಯಬೇಕು ಅದೇ ಸಮಯದಲ್ಲಿ ಭವಿಷ್ಯವನ್ನು ನಿರ್ಮಿಸಲು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಸಾನಿಧ್ಯ ವಹಿಸಿದ ಪೂಜ್ಯ ಡಾ. ಗಂಗಾ ಮಾತಾಜಿ ಮಾತನಾಡಿ, ಕಲ್ಯಾಣ ಕ್ರಾಂತಿ ಹೆಣ್ಣು-ಹೊನ್ನು-ಮಣ್ಣಿಗಾಗಿ ನಡೆದ ಕ್ರಾಂತಿಯಲ್ಲ. ಮಾನವೀಯ ತತ್ವಗಳಿಗಾಗಿ ನಡೆದ ಕ್ರಾಂತಿಯಾಗಿದೆ. ಶರಣರ ಬಲಿದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಾಧನೆ ಮಾಡಿದರೆ ಸಾವಿಗೆ ಬೆಲೆ ಬರುತ್ತದೆ. ಕಲ್ಯಾಣ ಶರಣರು ಮೆಟ್ಟಿದ ಧರೆ ಪಾವನವಾಗಿದೆ, ಶರಣ ವಿಜಯೋತ್ಸವ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಸಮಾಜದಲ್ಲಿ ವೈಚಾರಿಕ ಜಾಗೃತಿಯನ್ನು ಮೂಡಿಸುವ ಒಂದು ಮಹತ್ವದ ಪ್ರಯತ್ನವಾಗಿದೆ ಎಂದು ನುಡಿದರು.

ನೂತನ ಅನುಭವ ಮಂಟಪ
ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಶರಣರ ತ್ಯಾಗ, ಬಲಿದಾನದಿಂದ ಹೊರಹೊಮ್ಮಿದ ತತ್ವಗಳು ಹುಸಿ ಹೋಗುವುದಿಲ್ಲ. ಅವರ ತ್ಯಾಗ ಬಲಿದಾನದ ಮಹತ್ವ ತಿಳಿಸಿಕೊಡಬೇಕು.
ಈಗಾಗಲೇ ಅನುಭವ ಮಂಟಪ ಕಾಮಗಾರಿ ಪೂರ್ಣಗೊಂಡ ನಂತರ ದೇಶ ವಿದೇಶದ ಜನರು ಇಲ್ಲಿಗೆ ಬರುತ್ತಾರೆ. ಅವರು ಬರುವ ಮುಂಚೆ ಮನೆ-ಮನೆಯಲ್ಲಿ ಬಸವ ತತ್ವ, ಬಸವ ಸಂಸ್ಕೃತಿ ಎದ್ದು ಕಾಣಬೇಕು. ವಚನಗಳ ಅಧ್ಯಯನ, ಓದು, ಪಾರಾಯಣ ನಿರಂತರವಾಗಿ ನಡೆಯಬೇಕು. ಅದರಂತೆ ಆಚರಣೆ ಇರಬೇಕು. ಕಲ್ಯಾಣದ ಬಸವತತ್ವ ವಿಶ್ವಮಾನ್ಯ ತತ್ವವಾಗಿವೆ. ಬಸವಭೂಮಿ ಬಸವಾದಿ ಪ್ರಮಥರಿಂದ ಬೆಳಗಲಿ ಎಂದು ನುಡಿದರು.
ಶಿರಹಟ್ಟಿಯ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಹಿರಿಯರ ಸಂಸ್ಕೃತಿಯಲ್ಲಿ ನಾವೆಲ್ಲರೂ ನಡೆಯಬೇಕು. ಅನುಭಾವಿಗಳ ಮಾತು ಕೇಳುತ್ತಾ, ಸತ್ಸಂಗದಿಂದ ಬದಲಾವಣೆ ತರಬೇಕು. ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಸಮಾಧಾನಿಯಾಗಿರಬೇಕು. ನಾವೆಲ್ಲ ಮನುಷ್ಯರಾಗಿ ಬದುಕಬೇಕು. ಸಮ ಸಮಾಜ ನಿರ್ಮಾಣಕ್ಕಾಗಿ ಶರಣರ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಅಕ್ಕನವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯ ಐತಿಹಾಸಿಕವಾಗಿದೆ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಬಸವರಾಜ ದೇಶಮುಖ, ಬೆಂಗಳೂರು ಮಾರಿಷಸ್ ಕಾಲೇಜಿನ ನಿವೃತ್ತ ಡೀನ್ ಡಾ. ಮೋಹನ ಉಳ್ಳಿಕಾಶಿ, ರಾಜ್ಯ ಸಮಗಾರ/ಚಮ್ಮಾರ ಹರಳಯ್ಯ ಮಹಾಸಭಾ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ, ಕಾರವಾರ ಕಿಮ್ಸ್ ನಿವೃತ್ತ ನಿರ್ದೇಶಕ ಡಾ. ಶಿವಾನಂದ ದೊಡ್ಡಮನಿ, ಬ್ರಿಮ್ಸ್ ನಿರ್ದೇಶಕಿ ಡಾ. ಉಮಾ ದೇಶಮುಖ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ನಿರ್ದೇಶಕರಾದ ವೀರಣ್ಣ ಹಲಶೆಟ್ಟಿ, ಬೀದರ ಬಸವ ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷ ಉಷಾ ಮಿರ್ಚೆ, ಅಖಿಲ ಕರ್ನಾಟಕ ಚಮ್ಮಾರ ಸಂಘದ ಅಧ್ಯಕ್ಷ ಭೀಮರಾವ ಪವಾರ, ತಾಂತ್ರಿಕ ಶಿಕ್ಷಣ ಇಲಾಖೆಯ ಅಧ್ಯಕ್ಷ ಮಹಾದೇವ ಬಿಜಾಪೂರೆ, ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ, ಹನುಮಂತ ಕದಂಬ, ಹರಳಯ್ಯ ಸಮಾಜದ ರಾಜ್ಯ ಖಜಾಂಜಿ ರಾಜೇಂದ್ರ ಕಾಂಬಳೆ, ಬೀದರ ಹರಳಯ್ಯ ಸಮಾಜದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟಿಳ್ಳೆಕರ್, ಮಹಿಳಾ ಕದಳಿ ವೇದಿಕೆ ಅಧ್ಯಕ್ಷ ನಿರ್ಮಲಾ ಶಿವಣಕರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಾರ್ತಂಡ ಜೋಷಿ, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ, ಮುಖಂಡ ಶಿವರಾಜ ನರಶೆಟ್ಟಿ ಇತರರಿದ್ದರು.
ಬಸವರಾಜ ಬಾಲಿಕಿಲೆ ಸ್ವಾಗತಿಸಿದರೆ, ಜ್ಯೋತಿ ತೂಗಾಂವೆ ನಿರೂಪಿಸಿದರು. ಶಿವಕುಮಾರ ಪಂಚಾಳ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು.

ಎಳೆಹೂಟೆಯ ಮೆರವಣಿಗೆ:
ನಗರದ ಐತಿಹಾಸಿಕ ಕೋಟೆಯ ಹತ್ತಿರ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ದಿವ್ಯ ಸಾನಿಧ್ಯದಲ್ಲಿ ಬೀದರ ಸರಕಾರಿ / ಅರೆಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ವಚನ ಪಠಣ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ರಾಯಚೂರ ಕೃಷಿ ವಿಶ್ವವಿದಾಯಲಯ ನಿವೃತ್ತ ಕುಲಪತಿ ವಿಠಲ ಬೆಣಗಿ ಮಾತನಾಡಿ, ಹುತಾತ್ಮ ಶರಣರು ಬಿಟ್ಟು ಹೋದ ತತ್ವಗಳನ್ನು ನಮ್ಮ ಚೇತನದಲ್ಲಿ ಮೂಡಿಸಲು ಎಲ್ಲರೂ ಮುಂದೆ ಬರಬೇಕು. ಜಗವೆಲ್ಲ ಶರಣ ತತ್ವಗಳು ಹರಡಿ ಸಮ ಸಮಾಜ ನಿರ್ಮಿಸಬೇಕು ಎಂದರು.
ಡಾ. ವಿಠಲ ದೊಡ್ಡಮನಿ, ಡಾ. ಮೊಹನ ಉಳ್ಳಿಕಾಶಿ, ಗುರುನಾಥ ಉಳ್ಳಿಕಾಶಿ ಮಾತನಾಡಿದರು. ಎಳೆಯ ಹೂಟೆಯ ಚಿತ್ರಗಳು, ಎತ್ತಿನ ಬಂಡಿಯಲ್ಲಿ ಶರಣರ ಚಿತ್ರಗಳು, ಬಿಜ್ಜನಳ್ಳಿಯಲ್ಲಿರುವ ಹರಳಯ್ಯ ದಂಪತಿಗಳ ಪಾದುಕೆಗಳ ಹತ್ತಿರದಲ್ಲಿ ನಿರಂತವಾಗಿ ಬೆಳಗುತ್ತಿರುವ ಜ್ಯೋತಿಯನ್ನು ಮುಟ್ಟಿದ ಜ್ಯೋತಿ, ಬಸವ ರಥ, ಕುದುರೆ ಒಂಟೆಗಳ ಮೇಲೆ ಶರಣ ವೇಷಧಾರಿಗಳು, ವಚನ ಭಜನೆ ತಂಡಗಳು, ಕೋಲಾಟ, ಡೊಳ್ಳು, ವಚನಗಳಿಗೆ ನೃತ್ಯ, ಮೆರವಣಿಗೆಯ ಮೆರಗನ್ನು ಹೆಚ್ಚಿಸಿದ್ದವು.

ಮೆರವಣಿಗೆಯಲ್ಲಿ ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ ,ನಿರ್ದೇಶಕ ಬಸವರಾಜ ತೊಂಡಾರೆ, ಜಿಲ್ಲಾ ಕಸಾಪ ಕೊಶ್ಯಾಧ್ಯಕ್ಷ ಡಾ. ಶಿವಶಂಕರ ಟೋಕರೆ, ಸಾಹಿತಿ ಡಾ. ಸೋಮನಾಥ ಯಾಳವಾರ, ವಿಶ್ವನಾಥ ಕಾಜಿ, ರೇವಣಪ್ಪಾ ರಾಯವಾಡೆ, ಶಂಕರ ಕರಣೆ, ವಚನ ಸಮೂಹ ಸಂಸ್ಥೆ ಅಧ್ಯಕ್ಷ ಅಲ್ಲಮಪ್ರಭು ನಾವದಗೇರೆ, ರಾಷ್ಟ್ರೀಯ ಬಸವದಳದ ತಾಲೂಕಾಧ್ಯಕ್ಷ ರವೀಂದ್ರ ಕೋಳಕುರ, ಹರಳಯ್ಯ ಸಮಾಜದ ಅಧ್ಯಕ್ಷ ಶಿವಾಜಿ ಕಾಂಬಳೆ, ಉಪಾಧ್ಯಕ್ಷ ಗೌತಮ ಜಾಧವ, ಜಗನ್ನಾಥ ರಾಚೋಟಿ, ಮಲ್ಲಿಕಾರ್ಜುನ ಸಂಗಮಕರ್, ಮಡಿವಾಳಯ್ಯ ಸ್ವಾಮಿ, ಶಿವಕುಮಾರ ಬಿರಾದಾರ, ರವಿ ಬೇಲೂರೆ, ಸುಭಾಷ ರಗಟೆ, ಮಾಜಿ ಸೈನಿಕರು, ಎಲ್ಲಾ ಸಮಾಜದ ಶರಣ-ಶರಣೆಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಬೆಳಗ್ಗೆ ೭೭೦ ಅಮರಗಣಂಗಳ ಸಾಂಕೇತಿಕವಾಗಿ ಸಾಮೂಹಿಕ ಇಷ್ಟಲಿಂಗ ಯೋಗ ನಡೆಯಿತು.

ಮುಂಜಾನೆ ೧೧ ಗಂಟೆಗೆ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪೂಜ್ಯ ಬಸವಪ್ರಭು ಸ್ವಾಮಿಗಳು ಜನಪದರ ನುಡಿಯಲ್ಲಿ ಹುತಾತ್ಮ ಶರಣ ಹರಳಯ್ಯ ಕಲ್ಯಾಣಮ್ಮನವರ ವೀರಗಾಥೆ ಕುರಿತು ಅನುಭಾವ ನೀಡಿದರು.
ಲೊಕೇಶ ಗುರೂಜಿ, ಬಸವರಾಜೇಂದ್ರ ಗುಂಡೆ ಮಲ್ಲಿಕಾರ್ಜುನ ಸೊರಡೆ, ಸುನೀಲ ಹೆಂಗಣೆ, ಗಿರಿಜಾ ಹಂಗರಗಿ, ರೇಖಾ ಹೂಗಾರ ಮನ್ನಮ್ಮಾ ಕೌಡಾಳೆ, ರಾಣಿ ವಡ್ಡೆ ಮತ್ತಿತರರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ