‘ಬಸವಣ್ಣ ನಂದಿಯಲ್ಲ, ಐತಿಹಾಸಿಕ ವ್ಯಕ್ತಿ ಎಂದು ಜನಮಾನಸಕ್ಕೆ ಮುಟ್ಟಿಸಿದ ಹರ್ಡೇಕರ ಮಂಜಪ್ಪ’

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಬಸವಾದಿ ಶಿವಶರಣರ ತತ್ವ, ಆದರ್ಶ, ಮೌಲ್ಯಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಪ್ರಸಾರ ಮಾಡಿದವರು ಹರ್ಡೇಕರ ಮಂಜಪ್ಪನವರು. ಲಿಂಗಾಯತ ಪುಣ್ಯಪುರುಷರಲ್ಲಿ ಹರ್ಡೇಕರ ಮಂಜಪ್ಪನವರು ಅಗ್ರಮಾನ್ಯರು ಎಂದು ಗದುಗಿನ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೨೦ನೇ ಶಿವಾನುಭವದ ಸಾನಿದ್ಯ ವಹಿಸಿ ಮಾತನಾಡಿದ ಶ್ರೀಗಳು, ಬಸವಣ್ಣ ಎಂದರೆ ನಂದಿಯಲ್ಲ ಅವರೊಬ್ಬ ಐತಿಹಾಸಿಕ ವ್ಯಕ್ತಿ. ಮಹಾತ್ಮ ಬಸವಣ್ಣನವರ ತತ್ವ ಮತ್ತು ಸಂದೇಶಗಳನ್ನು  ಜನಮಾನಸಕ್ಕೆ ಮುಟ್ಟಿಸಿದ ವ್ಯಕ್ತಿ ಹರ್ಡೇಕರ ಮಂಜಪ್ಪನವರು. ೧೯೧೩ರಲ್ಲಿ ಮೊಟ್ಟಮೊದಲ ಬಾರಿಗೆ ದಾವಣಗೆರೆಯಲ್ಲಿ ಬಸವ ಜಯಂತಿಯನ್ನು ಆರಂಭಿಸಿದ ಕೀರ್ತಿ ಹರ್ಡೇಕರ ಮಂಜಪ್ಪನವರಿಗೆ ಸಲ್ಲುತ್ತದೆ ಎಂದರು.

ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಅಪ್ಪಟ ಅನುಯಾಯಿಯಾಗಿ ನಡೆದುಕೊಂಡವರು. ಖಾದಿಯ ಉಡುಪುಗಳನ್ನೇ ಧರಿಸಿ, ಖಾದಿ ದೀಕ್ಷೆ ಮಾಡುತ್ತಿದ್ದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಮೇಲುಸ್ತುವಾರಿಯನ್ನು ಬಹಳ ಶಿಸ್ತು ಮತ್ತು ಅಚ್ಚುಕಟ್ಟಿನಿಂದ ನೆರವೇರಿಸುವಲ್ಲಿ ಹರ್ಡೇಕರ್ ಅವರು ಪ್ರಮುಖ ಪಾತ್ರವಹಿಸಿದ್ದರು.

ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಇಂದಿನ ಮಕ್ಕಳೇ ನಾಳಿನ ಭವಿಷ್ಯ ಎಂದು ತಿಳಿದು ಮೊದಲ ಬಾರಿಗೆ ಮಕ್ಕಳ ಸಾಹಿತ್ಯ ರಚನೆಯ ನೈತಿಕ ಮೌಲ್ಯಗಳನ್ನು, ಸಾಹಿತ್ಯ ಪ್ರಸಾರವನ್ನ ಮಾಡಿದ ಶ್ರೇಯಸ್ಸು ಅವರದ್ದು.

ಆಲಮಟ್ಟಿಯಲ್ಲಿ ಗುರುಕುಲ ಆರಂಭಿಸಿ ಸಮಾಜದಲ್ಲಿ ದುರಾಚಾರ, ದುರ್ವ್ಯಸನಗಳಿಂದ ದಾರಿತಪ್ಪಿದ ಮಕ್ಕಳನ್ನು ತಮ್ಮ ಆಶ್ರಮದಲ್ಲಿ ಇಟ್ಟುಕೊಂಡು ಅವರಿಗೆ ಸನ್ನಡತೆ, ಸಂಸ್ಕಾರ ನೀಡಿ ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದ ಸಮಾಜ ಚಿಂತಕರಾಗಿದ್ದರು.

ನಮ್ಮ ಗುರುಗಳಾದ ಡಾ. ತೋಂಟದ ಸಿದ್ಧಲಿಂಗ ಮಾಹಾಸ್ವಾಮಿಗಳವರು ಗುರುಕುಲದ ಸ್ಥಳದಲ್ಲಿ ಹರ್ಡೇಕರ ಮಂಜಪ್ಪನವರ ಹೆಸರಿನಿಂದ ಹೈಸ್ಕೂಲ್, ಪಿಯು, ಪದವಿ ಕಾಲೇಜು ಅಲ್ಲದೆ ಫ. ಗು. ಹಳಕಟ್ಟಿ ಅವರ ಹೆಸರಿನಿಂದಲೂ ಕೂಡ ಹೈಸ್ಕೂಲ್ ಆರಂಭಿಸಿದ್ದಾರೆ ಎಂದು ಹೇಳಿದರು. ಉತ್ತಂಗಿ ಚನ್ನಪ್ಪನವರು ಹಾಗೂ ಹರ್ಡೇಕರ ಮಂಜಪ್ಪನವರು, ಫ. ಗು. ಹಳಕಟ್ಟಿಯವರು ಲಿಂಗಾಯತ ಧರ್ಮದ ಆಧಾರ ಸ್ತಂಭವಿದ್ದಂತೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಸವ ಕೇಂದ್ರದ ಜಿ. ಬಿ. ಹಳ್ಯಾಳ ಅವರು, ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಹರ್ಡೇಕರ ಮಂಜಪ್ಪನವರು ಬಸವತತ್ವ ಚಿಂತಕ ಮತ್ತು ಪ್ರಸಾರಕ. ಧೀರ, ದಿಟ್ಟ ಚಿಂತನೆಯ ಶಕ್ತಿಯಾಗಿದ್ದರು ಎಂದರು.

ಜೊತೆಗೆ ಕರ್ನಾಟಕ ಏಕೀಕರಣ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತವರು. ಉದಾತ್ತ ವಿಚಾರಗಳ ಪ್ರತಿಪಾದಕರಾಗಿದ್ದರು. ಬಸವತತ್ವ ಪ್ರಚಾರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರಾಗಿದ್ದರು ಎಂದರು.

ಗದಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಬಣ್ಣ ಹುಣಸಿಕಟ್ಟಿ ಮತ್ತು ಶ್ರೀಮತಿ ನೀಲಮ್ಮ ಹುಣಸಿಕಟ್ಟಿ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿದರು. ಪ್ರಬಣ್ಣ ಯಲ್ಲಪ್ಪ ಹುಣಸಿಕಟ್ಟಿ ಇವರು ಕೃಷಿಕರಾಗಿ ಸಮಾಜಸೇವಕರಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಮಾಡಿದ ಸೇವೆ ಅನುಪಮವಾದದು. ಗುರುಲಿಂಗ ಜಂಗಮರಲ್ಲಿ ಭಕ್ತಿ ಸಂಪನ್ನರಾದ ಇವರು ಸಮಾಜ ಸಂಘಟಕರಾಗಿದ್ದಾರೆ.

ಶ್ರೀಮತಿ ನೀಲಮ್ಮನವರು ಅನೇಕ ಬಡ ಜನರಿಗೆ ಸಹಾಯ ಮಾಡಿದವರು. ಇವರದು ಆದರ್ಶ ದಾಂಪತ್ಯ ಎಂದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಅವರು ಸ್ವಾಗತ ಕೋರಿದರು. ಧರ್ಮಗ್ರಂಥ ಪಠಣ ವಚನ ಹಳ್ಯಾಳ, ವಚನ ಚಿಂತನ ಮಹಾಂತೇಶ ಏಳಲ್ಲಿ, ಪ್ರೊ. ಶಿವಬಸವ ಗಡ್ಡದಮಠ ಮತ್ತು ಡಾ. ಹನಮಂತ ಹೂಗಾರ ಅವರಿಂದ ವಚನಸಂಗೀತ ಸೇವೆ ನಡೆಯಿತು. ದಾಸೋಹ ರವೀಂದ್ರ ಏಳಲ್ಲಿ ಮತ್ತು ಸಹೋದರರು ಹಾಗೂ ಡಾ. ಪ್ರಸಾದ ರೂಡಗಿ, ಪ್ರಭಣ್ಣ ಯಲ್ಲಪ್ಪ ಹುಣಸಿಕಟ್ಟಿ ಅವರುಗಳು ನೆರವೇರಿಸಿದರು.

ಈಶಣ್ಣ ಮುನವಳ್ಳಿ, ಬಾಲಚಂದ್ರ ಭರಮಗೌಡರ, ದಾನಯ್ಯ ಗಣಾಚಾರಿ, ವಿರೂಪಾಕ್ಷಪ್ಪ ಬಳ್ಳೊಳ್ಳಿ, ಉಮೇಶ ನಾಲ್ವಾಡ, ಡಾ. ಪ್ರಭು ಗಂಜೀಹಾಳ, ಡಾ. ಆದೇಶ ಅಂಗಡಿ,  ಸೋಮು ಪುರಾಣಿಕ, ಎಸ್.ಐ. ಪಟ್ಟೇದ, ಕೆ.ಎಸ್. ಕೋರಿಮಠ ಮೊದಲಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *