ಈ ವರ್ಷದ ಸಿದ್ಧಲಿಂಗ ಸ್ವಾಮೀಜಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು

ಎಸ್. ಕೆ. ಕಾಂತಾ, ಡಾ. ಆನಂದ ಪಾಂಡುರಂಗಿ, ಆಯ್. ಆರ್. ಮಠಪತಿ, ಚಂದ್ರಶೇಖರ ಭೀ. ಸೋಮಶೆಟ್ಟಿ, ಬಸವ ಮೀಡಿಯಾ

ಧಾರವಾಡ

ಇಂದು ಗದಗದಲ್ಲಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ಪ್ರತಿಷ್ಠಿತ ಪ್ರಶಸ್ತಿಯ ೨೦೨೬ನೇ ಸಾಲಿನ ಪುರಸ್ಕೃತರ ಕಿರು ಪರಿಚಯ ಇಲ್ಲಿದೆ:

ಶ್ರೀ ಎಸ್. ಕೆ. ಕಾಂತಾ
ಮಾಜಿ ಕಾರ್ಮಿಕ ಸಚಿವರು, ಕಲಬುರ್ಗಿ

ಕಲಬುರ್ಗಿ ಜಿಲ್ಲೆಯ ಹಾಗರಗುಂಡಗಿಯಲ್ಲಿ ಜನಿಸಿದ ತಾವು ಶೋಷಿತರು, ಕೂಲಿ ಕಾರ್ಮಿಕರು, ದಮನಿತರ ದನಿಯಾಗಿ ಅವಿರತವಾಗಿ ಹೋರಾಡುತ್ತಿದ್ದೀರಿ. ಶಿಕ್ಷಣಕ್ಕಾಗಿ ಕಲಬುರ್ಗಿಗೆ ಆಗಮಿಸಿದರೂ ಮನೆಯ ಆರ್ಥಿಕ ಪರಿಸ್ಥಿತಿ ಕಾರಣವಾಗಿ ಶಾಲೆ ಬಿಟ್ಟು ಎಂ.ಎಸ್.ಕೆ. ಮಿಲ್‌ನಲ್ಲಿ ಕಾರ್ಮಿಕರಾಗಿ ಸೇವೆಗೆ ಸೇರಿದಿರಿ. ಅಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸಿ ಸತ್ಯಾಗ್ರಹ ನಡೆಸುವ ಮೂಲಕ ಕಾರ್ಮಿಕ ಮುಖಂಡರಾಗಿ ಹೊರಹೊಮ್ಮಿದಿರಿ. ೧೯೮೩ರಲ್ಲಿ ಜನ ಸ್ವತಃ ತಮ್ಮ ಹಣವನ್ನು ಖರ್ಚುಮಾಡಿ ತಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದರು. ೧೯೮೬ರಲ್ಲಿ ನಿಮ್ಮ ಹೋರಾಟದ ಹಾದಿ ಶ್ರೀ ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಸಚಿವರಾಗುವವರೆಗೂ ನಿಮ್ಮನ್ನು ಕರೆತಂದಿತು. ಘಟಾನುಘಟಿಗಳಾದ ಶ್ರೀ ಸಿದ್ಧರಾಮಯ್ಯ, ಎಂ.ಪಿ. ಪ್ರಕಾಶ ಅವರೊಂದಿಗೆ ಸಂಪುಟದಲ್ಲಿ ತಾವು ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯ ನೆನಪಾಗಿದೆ.

ತತ್ವಗಳೊಂದಿಗೆ ಎಂದೂ ರಾಜಿಯಾಗದ ತಾವು ಕೇವಲ ೧೮ ತಿಂಗಳು ಅಧಿಕಾರದಲ್ಲಿದ್ದರೂ ಸದಾ ಕಾರ್ಮಿಕರ ಪರವಾಗಿಯೇ ನಿರ್ಧಾರ ಕೈಗೊಳ್ಳುತ್ತಿದ್ದಿರಿ. ಸಕ್ಕರೆ ಕಾರ್ಖಾನೆಯೊಂದರ ಅನ್ಯಾಯಗಳ ವಿರುದ್ಧ ಸತ್ಯಾಗ್ರಹ ನಡೆಸುವಾಗ ಜೈಲುವಾಸವನ್ನೂ ಅನುಭವಿಸಿದಿರಿ. ಕಾರ್ಮಿಕ ಸಮಸ್ಯೆಗಳ ಹೋರಾಟದ ಜೊತೆ ಜೊತೆಯಲ್ಲೆ, ಪರಿಶಿಷ್ಟ ವರ್ಗಗಳ ಸಮಸ್ಯೆಗಳ ಪರಿಹಾರ, ಕೆರೆಗಳ ಒತ್ತುವರಿ, ಸರಕಾರಿ ಭೂಮಿ ಅತಿಕ್ರಮಣ, ರೈತ ಚಳುವಳಿ, ಗೋಕಾಕ್ ಚಳುವಳಿ ಮುಂತಾದ ಹೋರಾಟಗಳಲ್ಲಿಯೂ ಸಕ್ರೀಯವಾಗಿದ್ದಿರಿ.

ಶಾಸಕರಾಗಿ, ಕಾರ್ಮಿಕ ಸಚಿವರಾಗಿ ಸಾರ್ವಜನಿಕ ಸೇವೆಯಲ್ಲಿದ್ದರೂ ಇಂದಿಗೂ ತಾವು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿರುವುದು ಇಂದಿನ ರಾಜಕಾರಣದ ಅಚ್ಚರಿಯಾಗಿದೆ. ಈ ೮೮ ರ ವಯಸ್ಸಿನಲ್ಲಿಯೂ ಸಾರ್ವಜನಿಕ ಸಮಸ್ಯೆಗಳಿಗೆ ದನಿ ಎತ್ತುವ ತಮ್ಮ ಚೈತನ್ಯ, ಹೋರಾಟದ ಬದ್ಧತೆಯನ್ನು, ನ್ಯಾಯನಿಷ್ಠುರತೆಯನ್ನು ತೋರಿಸುತ್ತದೆ. ‘ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ’ ಎಂಬ ಅಣ್ಣನವರ ವಚನಕ್ಕೆ ನಿಮ್ಮ ಬಾಳ್ವೆ ಪ್ರತ್ಯಕ್ಷ ಉದಾಹರಣೆಯಾಗಿದೆ. ನಿಮ್ಮ ಜೀವಮಾನದ ಸೇವೆ, ತ್ಯಾಗ, ಹೋರಾಟಗಳನ್ನು ಸ್ಮರಿಸುತ್ತಾ ಪರಮಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆಗೊಂಡ, ಪರಮಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರೇರಕರಾಗಿರುವ ಹಾಗೂ ಶ್ರೀ ಎಸ್. ಎಸ್. ಪಟ್ಟಣಶೆಟ್ಟಿ ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ ಸದಸ್ಯರು ಹಾಗೂ ನಿವೃತ್ತ ನೌಕರರ ಮೂಲಕ ಸ್ಥಾಪಿಸಿದ ‘ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಯನ್ನು ರೂ. ಒಂದು ಲಕ್ಷ ರೂಪಾಯಿಗಳ ಗೌರವಧನದೊಂದಿಗೆ ಶ್ರೀ ಜಗದ್ಗುರು ತೋಂಟದಾರ್ಯಮಠದ ಭಕ್ತ ಸಮುದಾಯದ ಸಮ್ಮುಖದಲ್ಲಿ ದಿನಾಂಕ: ೨೨-೧೦-೨೦೨೬ರ ಗುರುವಾರದಂದು ಪೂಜ್ಯರ ಎಂಟನೆಯ ಪುಣ್ಯಸ್ಮರಣೋತ್ಸವ ಹಾಗೂ ಅವರು ಸ್ಥಾಪಿಸಿದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪ್ರಶಸ್ತಿಯನ್ನು ತಮಗಕೊಡಮಾಡುತ್ತಿರುವುದು ಸಂತೋಷ ಮತ್ತು ಹೆಮ್ಮೆಯನ್ನುಂಟು ಮಾಡಿದೆ.

ಡಾ. ಆನಂದ ಪಾಂಡುರಂಗಿ
ಸುವಿಖ್ಯಾತ ಮನೋವೈದ್ಯರು, ಧಾರವಾಡ

ಕರ್ನಾಟಕದ ಖ್ಯಾತ ಮನೋವೈದ್ಯರಾಗಿ ಪ್ರೀತಿ, ಅಂತಃಕರಣ, ಆಪ್ತತೆಯಿಂದ ಅಸಂಖ್ಯಾತ ಮನೋರೋಗಿಗಳಿಗೆ ಅಲ್ಪ ಔಷಧಿಯನ್ನಿತ್ತು ಅಪಾರ ಆತ್ಮವಿಶ್ವಾಸವನ್ನು ತುಂಬಿ ಅವರನ್ನು ಮಖ್ಯವಾಹಿನಿಗೆ ತರುವಲ್ಲಿ ವಿಶೇಷವಾದ ಸೇವೆಯನ್ನು ಮಾಡಿದವರು, ಹಾದಿ ತಪ್ಪುತ್ತಿರುವ ಮಕ್ಕಳು, ತೊಳಲಾಟದಲ್ಲಿರುವ ಯುವಕರು, ವಿಚ್ಛೇದನಕ್ಕೆ ಅಣಿಯಾದ ನವದಂಪತಿಗಳು, ವೃದ್ಧಾಪ್ಯ ಹಾಗೂ ಮರೆವಿನಿಂದ ಬಸವಳಿದ ಹಿರಿಯಜೀವಗಳು, ವಿಶೇಷವಾಗಿ ಸಮಾಜದಲ್ಲಿರುವ ಬಡವರ ಮೇಲೆ ಅನನ್ಯ ಕಾಳಜಿಯಿಂದ ಅವರವರಿಗೆ ಅಗತ್ಯವಿರುವ ಮಾರ್ಗದರ್ಶನ, ಜೀವನಶೈಲಿಯ ಮಾರ್ಪಾಟು ಮತ್ತು ಅಗತ್ಯ ಔಷಧಿಗಳನ್ನು ಸಕಾಲಕ್ಕೆ ನೀಡಿ ಸಾವಿರಾರು ಕುಟುಂಬಗಳ ಮಾನ ಮತ್ತು ಅಸಂಖ್ಯ ಜನರ ಪ್ರಾಣವನ್ನು ಉಳಿಸಿದ ಶ್ರೇಯಸ್ಸು ಅವರದಾಗಿದೆ.

ನಮ್ಮ ತೋಂಟದಾರ್ಯಮಠಕ್ಕೂ ಡಾ. ಆನಂದ ಪಾಂಡುರಂಗಿಯವರಿಗೂ ಅವಿನಾಭಾವ ಸಂಬಂಧ. ಕಳೆದ ನಾಲ್ಕು ದಶಕಗಳಿಂದ ನಮ್ಮ ಜಾತ್ರಾಮಹೊತ್ಸವದಲ್ಲಿ ‘ಮನೋಚಿಕಿತ್ಸೆಯ ಶಿಬಿರ’ ಏರ್ಪಡಿಸುವ ಮೂಲಕ ಜಾತ್ರೆಯ ಅರ್ಥವನ್ನು ವಿಸ್ತರಿಸುವಲ್ಲಿ ಅವರು ಶ್ರಮಿಸಿದ್ದಾರೆ. ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಡಾ. ಆನಂದ ಪಾಂಡುರಂಗಿಯವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಮನೋವಿಜ್ಞಾನ ಲೋಕದ ‘ದಿ ಲೆಜೆಂಡ್’ ಎಂದೆ ಅವರನ್ನು ಪ್ರಶಂಸಿಸುತ್ತಿದ್ದರು.

ಶ್ರೀಯುತರು ಪೂಜ್ಯರಲ್ಲಿ ಹಾಗೂ ನಮ್ಮ ಶ್ರೀಮಠದ ಮೇಲೆ ಅಪಾರ ಭಕ್ತಿಭಾವವನ್ನು ಹೊಂದಿದ್ದರು.
ತಮ್ಮ ವೈದ್ಯಕೀಯ ವೃತ್ತಿಯನ್ನು ಕ್ಲಿನಿಕ್ಕಿಗೆ ಮಾತ್ರ ಸೀಮಿತಗೊಳಿಸದೆ ಅದನ್ನು ಸಮುದಾಯ ಸೇವೆಯಾಗಿ ವಿಸ್ತರಿಸಿದ ಅವರ ಸಾಮಾಜಿಕ ಬದ್ಧತೆ ವೈದ್ಯಲೋಕಕ್ಕೆ ಬಹುದೊಡ್ಡ ಆದರ್ಶ. ಅವರ ಸೇವೆ ಈ ಸಮಾಜಕ್ಕೆ ಇನ್ನೂ ಅಗತ್ಯವಿರುವಾಗಲೇ ಅವರು ದೈಹಿಕವಾಗಿ ಹಠಾತ್ತನೆ ನಮ್ಮನೆಲ್ಲ ಅಗಲಿದ್ದು ತುಂಬಲಾರದ ನಷ್ಟ. ಅವರ ಜೀವಮಾನದ ನಿಸ್ವಾರ್ಥ ವೈದ್ಯಕೀಯ ಸೇವೆಯನ್ನು ಸ್ಮರಿಸಿ ಪರಮಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆಗೊಂಡ, ಪರಮಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರೇರಕರಾಗಿರುವ ಹಾಗೂ ಶ್ರೀ ಎಸ್. ಎಸ್. ಪಟ್ಟಣಶೆಟ್ಟಿ ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ ಸದಸ್ಯರು ಹಾಗೂ ನಿವೃತ್ತ ನೌಕರರ ಮೂಲಕ ಸ್ಥಾಪಿಸಿದ ‘ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಯನ್ನು ರೂ. ಒಂದು ಲಕ್ಷ ರೂಪಾಯಿಗಳ ಗೌರವಧನದೊಂದಿಗೆ ಶ್ರೀ ಜಗದ್ಗುರು ತೋಂಟದಾರ್ಯಮಠದ ಭಕ್ತ ಸಮುದಾಯದ ಸಮ್ಮುಖದಲ್ಲಿ ದಿನಾಂಕ: ೨೨-೧೦-೨೦೨೬ರ ಗುರುವಾರದಂದು ಪೂಜ್ಯರ ಎಂಟನೆಯ ಪುಣ್ಯಸ್ಮರಣೋತ್ಸವ ಹಾಗೂ ಅವರು ಸ್ಥಾಪಿಸಿದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಡಾ. ಅನಂದ ಪಾಂಡುರಂಗಿಯವರ ಚಿರಂಜೀವಿ ಡಾ. ಆದಿತ್ಯ ಪಾಂಡುರಂಗಿಯವರಿಗೆ ಬಸವಾದಿ ಶಿವಶರಣರು, ಎಡೆಯೂರು ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅವರ ಸಮಸ್ತ ಕುಟಂಬಕ್ಕೆ ಆಯುರಾರೋಗ್ಯ ಸುಖಸಂಪದಗಳನ್ನು ದಯಪಾಲಿಸಲೆಂದು ಹಾರೈಸುತ್ತ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಶ್ರೀ ಆಯ್. ಆರ್. ಮಠಪತಿ
ಅಧ್ಯಕ್ಷರು, ಶರಣ ವಿಚಾರ ವಾಹಿನಿ, ಹಾರೂಗೇರಿ, ಜಿ. ಬೆಳಗಾವಿ

ಮೂಲತಃ ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದವರಾದ ತಾವು ವೃತ್ತಿಯಿಂದ ಪ್ರೌಢಶಾಲೆಯ ಶಿಕ್ಷಕರಾಗಿ ನಾಲ್ಕು ದಶಕಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದವರು. ಬಾಲ್ಯದಿಂದಲೂ ಶರಣ ಸಾಹಿತ್ಯದೆಡೆಗೆ ಆಕರ್ಷಿತರಾಗಿ ಶರಣ ಸಾಹಿತ್ಯದ ಓದು, ಪ್ರವಚನ, ಸಂಘಟನೆ, ವಚನ ಸಂಗೀತ, ನಾಟಕ, ಪುಸ್ತಕ ಪ್ರಕಟಣೆ, ಶರಣ ಕ್ಷೇತ್ರ ಪ್ರವಾಸ ಹೀಗೆ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಸಮಾಜದಲ್ಲಿ ಶರಣ ಚಿಂತನೆ ಪಸರಿಸುವಲ್ಲಿ ಅಪಾರವಾಗಿ ಶ್ರಮಿಸಿದ್ದೀರಿ.
೧೯೮೯ ರ ಡಿಸೆಂಬರ್ ೨೯ ರಂದು ಶರಣ ವಿಚಾರ ವಾಹಿನೆಯೆಂಬ ಸಂಸ್ಥೆಯನ್ನು ಹಾರೂಗೇರಿಯಲ್ಲಿ ಸಂಸ್ಥಾಪಿಸುವ ಮೂಲಕ ೨೫ ಯುವ ಪುನಶ್ಚೇತನ ಶಿಬಿರಗಳನ್ನು ಆಯೋಜಿಸಿದ್ದು ಹಾಗೂ ಕಳೆದ ಮೂರು ದಶಕಗಳಿಂದ ‘ಬಸವ ಭೂಮಿ ಯಾತ್ರೆ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಈ ಯಾತ್ರೆಯನ್ನು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಗೊಂಡು ಅನೇಕ ಜನರನ್ನು ಶರಣ ಸಂಸ್ಕೃತಿಯತ್ತ ಆಕರ್ಷಿಸಿದ್ದೀರಿ. ಬಸವ ಸಂಸ್ಕೃತಿಯಂತೆ ಮಕ್ಕಳ ಹುಟ್ಟುಹಬ್ಬ, ಕಲ್ಯಾಣ ಮಹೋತ್ಸವ, ಗರ್ಭಸಂಸ್ಕಾರ, ಗೃಹಪ್ರವೇಶ, ಹೊಸ ಮೊದಲಗಿತ್ತಿಯನ್ನು ಬರಮಾಡಿಕೊಳ್ಳುವುದು ಮುಂತಾದ ನಿಜಾಚರಣೆಗಳನ್ನು ಮನೆಮನೆಗೂ ತಲುಪಿಸಿದ್ದೀರಿ.
ಮನೆಮನೆಯಿಂದ-ಮನಮನಕ್ಕೆ ವಚನ ವೈಭವ, ವಚನ ಸಂಕ್ರಾಂತಿ, ವಚನ ಶಿವರಾತ್ರಿ, ವಚನ ಚೈತ್ರ, ವಚನ ವೈಶಾಖ, ವಚನ ಶ್ರಾವಣ, ಆಷಾಡದ ಅನುಭಾವ ಮುಂತಾದವು ತಮ್ಮ ಕ್ರೀಯಾಶೀಲ ಸೃಜನ ಅಭಿವ್ಯಕ್ತಿಗಳಾಗಿವೆ. ೨೦ಕ್ಕೂ ಹೆಚ್ಚು ಪುಸ್ತಕಗಳ ಪ್ರಕಟಣೆ, ನೂರಾರು ಕುಟುಂಬಗಳಲ್ಲಿ ವ್ಯಸನಮುಕ್ತಿಯ ಜಾಗ್ರತಿ, ಬಸವಣ್ಣನವರ ಜಯಂತಿಯ ಶತಮಾನೋತ್ಸವ ಸ್ಮರಣೆಯಲ್ಲಿ ೧೦೮ ದಿನಗಳವರೆಗೆ ಸುಮಾರು ೧೦,೦೦೦ಕ್ಕೂ ಹೆಚ್ಚು ಮಕ್ಕಳಿಗೆ ವಚನ ಗ್ರಂಥಗಳ ಉಚಿತ ವಿತರಣೆ, ಸಮಾಜ ಸೇವೆಯಲ್ಲಿ, ಜಾಗ್ರತಿಯಲ್ಲಿ ತಮಗಿರುವ ಬದ್ಧತೆಯ ದಾಖಲೆಗಳಾಗಿವೆ.

ತಮ್ಮ ಜೀವಮಾನದ ಈ ಸೇವೆಯನ್ನು ಗೌರವಿಸುತ್ತಾ ಪರಮಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆಗೊಂಡ, ಪರಮಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರೇರಕರಾಗಿರುವ ಹಾಗೂ ಶ್ರೀ ಎಸ್. ಎಸ್. ಪಟ್ಟಣಶೆಟ್ಟಿ ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ ಸದಸ್ಯರು ಹಾಗೂ ನಿವೃತ್ತ ನೌಕರರ ಮೂಲಕ ಸ್ಥಾಪಿಸಿದ ‘ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಯನ್ನು ರೂ. ಒಂದು ಲಕ್ಷ ರೂಪಾಯಿಗಳ ಗೌರವಧನದೊಂದಿಗೆ ಶ್ರೀ ಜಗದ್ಗುರು ತೋಂಟದಾರ್ಯಮಠದ ಭಕ್ತ ಸಮುದಾಯದ ಸಮ್ಮುಖದಲ್ಲಿ ದಿನಾಂಕ: ೨೨-೧೦-೨೦೨೬ರ ಗುರುವಾರದಂದು ಪೂಜ್ಯರ ಎಂಟನೆಯ ಪುಣ್ಯಸ್ಮರಣೋತ್ಸವ ಹಾಗೂ ಅವರು ಸ್ಥಾಪಿಸಿದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ತಮಗೆ ಕೊಡಮಾಡುತ್ತಿರುವುದು ಸಂತೋಷ ಮತ್ತು ಹೆಮ್ಮೆಯನ್ನುಂಟು ಮಾಡಿದೆ.

ಶ್ರೀ ಚಂದ್ರಶೇಖರ ಭೀ. ಸೋಮಶೆಟ್ಟಿ
ಕಲಾವಿದರು, ಬೀದರ

‘ಕಲೆ ಜೀವನದ ಬೆಳಕು’ ಎಂಬುದು ನಿಮ್ಮ ಧ್ಯೇಯವಾಕ್ಯವಾಗಿದೆ. ಈ ಧ್ಯೇಯವಾಕ್ಯದಂತೆ ತಮ್ಮ ನಾಲ್ಕನೆಯ ತರಗತಿಯಿಂದಲೇ ಚಿತ್ರಕಲೆಯತ್ತ ಆಕರ್ಷಿತರಾದ ತಾವು ಇಂದು ಕಲಾ ಜಗತ್ತಿನ ಉನ್ನತ ಸಾಧಕರಾಗಿದ್ದೀರಿ. ಕಲಾ ಜಗತ್ತಿನ ದಂತಕಥೆ ಎಂದೇ ಪ್ರಸಿದ್ಧರಾದ ನಾಡೋಜ ಡಾ. ಜೆ. ಎಸ್. ಖಂಡೇರಾವ್ ತಮ್ಮ ಗುರುಗಳಾದುದು ಹಾಗೂ ಅದೇ ಎತ್ತರದ ಹುಬ್ಬಳ್ಳಿಯ ಶ್ರೀ ದಂಡಾವತಿಮಠರು ತಮ್ಮ ಮಾರ್ಗದರ್ಶಕರಾದುದು ತಮ್ಮ ಬಾಳಿನ ಭಾಗ್ಯವಿಶೇಷ.
‘ಯಥಾ ಗುರು ತಥಾ ಶಿಷ್ಯ’ ಎನ್ನುವಂತೆ ಗುರುತೋರಿದ ಮಾರ್ಗದಲ್ಲಿ ನಡೆದು ಸುಮಾರು ನಾಲ್ಕು ದಶಕಗಳ ಕಾಲ ಕರ್ನಾಟಕ ಪ್ರೌಢಶಾಲೆ, ಬೀದರ್‌ನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ್ದೀರಿ.

ಈ ಅವಧಿಯುದ್ದಕ್ಕೂ ಕಲ್ಯಾಣ ಕನಾಟಕ, ಕರ್ನಾಟಕದ ವಿವಿಧ ಊರುಗಳು ಹಾಗೂ ಪಾಂಡಿಚೇರಿಯಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿ ಅನೇಕ ಕಲಾರಸಿಕರ, ಕಲಾತಜ್ಞರ ಮೆಚ್ಚುಗೆಗೆ ಪಾತ್ರರಾಗಿದ್ದೀರಿ. ಜಲವರ್ಣ, ತೈಲವರ್ಣ, ಹಾಗೂ ಅಕ್ರ್ಯಾಲಿಕ್ ವರ್ಣಗಳಲ್ಲಿ ರಚಿತವಾದ ತಮ್ಮ ಕಲಾಕೃತಿಗಳನ್ನು ಮೆಚ್ಚಿ ನಾಡಿನ ಅನೇಕ ಸಂಘ-ಸಂಸ್ಥೆಗಳು, ಶ್ರೀಮಠಗಳು, ಸಂಘಟನೆಗಳು ತಮಗೆ ಹಲವಾರು ಪ್ರಶಸ್ತಿ ಗೌರವಗಳನ್ನಿತ್ತು ಸಂಮಾನಿಸಿವೆ.
ಮೂಲತಃ ಶರಣ ನಾಡಿನವರಾದ ತಾವು ತಮ್ಮ ನಿವೃತ್ತಿಯ ನಂತರ ಬಂದ ಬಹುದೊಡ್ಡ ಮೊತ್ತವನ್ನು ಮಹಾತ್ಮ ಬಸವಣ್ಣನವರು ಬಾಲ್ಯದಿಂದ ಲಿಂಗೈಕ್ಯರಾಗುವವರೆಗೆ ಮಾಡಿದ ಸಾಮಾಜಿಕ, ಅರ್ಥಿಕ, ಧಾರ್ಮಿಕ ಕ್ರಾಂತಿಯ ದೃಶ್ಯಗಳನ್ನು ಸುಮಾರು ೧೨೪ ಚಿತ್ರಗಳ ಮೂಲಕ ಜಲವರ್ಣದಲ್ಲಿ ಚಿತ್ರಿಸಿ ಆ ಚಿತ್ರಗಳೇ ಅಪ್ಪನವರ ಚರಿತ್ರೆಯನ್ನು ಹೇಳುವಂತೆ ಅತ್ಯಾಕರ್ಷಕವಾದ ಕಲಾ ಗ್ಯಾಲರಿಯನ್ನು ನಿರ್ಮಿಸಲು ವಿನಿಯೋಗಿಸಿದ್ದು ತಮ್ಮ ಬಸವ ಭಕ್ತಿಯ ಪ್ರತೀಕವಾಗಿದೆ. ಈ ೧೨೪ ಚಿತ್ರಗಳೊಂದಿಗೆ ಇದಕ್ಕೆ ಪೂರಕವಾದ ಸಾಹಿತ್ಯವನ್ನು ರಚಿಸಿ ‘ಶ್ರೀಗುರು ಬಸವ ಚರಿತ್ರೆ’ ಎಂಬ ಮಹಾಗ್ರಂಥವನ್ನು ರಚಿಸಿದ್ದು ಅಸಾಧಾರಣ ಕಾರ್ಯವಾಗಿದೆ.

ಕಲಾವಿದನಲ್ಲಿ ಲೇಖಕ, ಲೇಖಕನಲ್ಲಿ ಕಲಾವಿದನಿರುವುದು ಅಪರೂಪ. ತಾವು ಎರಡರ ಸಂಗಮವಾಗಿದ್ದೀರಿ. ತಮ್ಮ ಈ ಕಲಾ ಸಾಹಸವನ್ನು ಮೆಚ್ಚಿ ಪರಮಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆಗೊಂಡ, ಪರಮಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರೇರಕರಾಗಿರುವ ಹಾಗೂ ಶ್ರೀ ಎಸ್. ಎಸ್. ಪಟ್ಟಣಶೆಟ್ಟಿ ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ ಸದಸ್ಯರು ಹಾಗೂ ನಿವೃತ್ತ ನೌಕರರ ಮೂಲಕ ಸ್ಥಾಪಿಸಿದ ‘ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಯನ್ನು ರೂ. ಒಂದು ಲಕ್ಷ ರೂಪಾಯಿಗಳ ಗೌರವಧನದೊಂದಿಗೆ ಶ್ರೀ ಜಗದ್ಗುರು ತೋಂಟದಾರ್ಯಮಠದ ಭಕ್ತ ಸಮುದಾಯದ ಸಮ್ಮುಖದಲ್ಲಿ ದಿನಾಂಕ: ೨೨-೧೦-೨೦೨೬ರ ಗುರುವಾರದಂದು ಪೂಜ್ಯರ ಎಂಟನೆಯ ಪುಣ್ಯಸ್ಮರಣೋತ್ಸವ ಹಾಗೂ ಅವರು ಸ್ಥಾಪಿಸಿದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಬಸವಾದಿ ಶಿವಶರಣರು, ಎಡೆಯೂರು ತೋಂಟದ ಸಿದ್ಧಲಿಂಗ ಶಿವಯೋಗಿಗಳು ತಮಗೂ ಹಾಗೂ ಸಮಸ್ತ ಕುಟಂಬಕ್ಕೆ ಆಯುರಾರೋಗ್ಯ, ಸುಖಸಂಪದಗಳನ್ನು ದಯಪಾಲಿಸಲೆಂದು ಹಾರೈಸುತ್ತ ಈ ಪ್ರಶಸ್ತಿಯನ್ನು ಸಂತೋಷದಿಂದ ಪ್ರದಾನ ಮಾಡಲಾಗಿದೆ.

ಬಸವ ಮೀಡಿಯಾ, ಬೆಂಗಳೂರು

ಈ ಸಮಾಜದಲ್ಲಿ ಜೀವಿಸುವ ಜೀವಿಗಳು ಅಸಮಾನರಾಗಿ ಬದುಕದೆ ಸರಿಸಮಾನರಾಗಿ ಬದುಕುವುದು ಮತ್ತು ಬೆಳೆಯುವುದು ಶರಣರ ಪ್ರಧಾನವಾದ ಆಶಯವಾಗಿದೆ. ಹನ್ನೆರಡನೆಯ ಶತಮಾನ, ಕನ್ನಡ ನಾಡಿನಲ್ಲಿ ಕತ್ತಲೆಯ ಯುಗವಾಗಿತ್ತು. ಅಸಂಖ್ಯಾತ ದೀನ, ದಲಿತ, ಬಡವರ ಬಾಳು ಅಸಹನೀಯವಾಗಿತ್ತು. ಅಂಥ ಕತ್ತಲೆಯ ಜಗತ್ತಿಗೆ ಸೂರ್ಯನಂತೆ ಉದಯಿಸಿ ಬಂದವರು ಮಹಾತ್ಮಾ ಬಸವಣ್ಣನವರು. ಅವರು ಈ ದೇಶ ಕಂಡ ಸಾಮಾಜಿಕ, ಆರ್ಥಿಕ, ಧಾರ್ಮಿಕ ಬದಲಾವಣೆಯ ಕ್ರಾಂತಿಪುರುಷರು. ಪಟ್ಟಭದ್ರ ಹಿತಾಸಕ್ತಿಗಳ ಚಿಂತನೆಯ ಕೆಸರಿಗೆ ಪ್ರಗತಿಪರ ವಿಚಾರಧಾರೆಯ ನೀರು ಹರಿಸಿ ಆ ಕೆಸರಿನಲ್ಲಿ ಹೂತುಹೊಗಿದ್ದ ಅಸಂಖ್ಯಾತ ತಳ ಸಮುದಾಯಗಳಿಗೆ ಜೀವನದ ಸ್ವಾರಸ್ಯ, ಜಗತ್ತಿನ ವಿಸ್ತಾರ, ಪರಮಾತ್ಮನ ಚೈತನ್ಯದ ಕುರಿತಾಗಿ ತಿಳಿಹೇಳಿ ‘ನಿಮ್ಮ ಅರಿವೇ ನಿಮಗೆ ಗುರು’, ಜಗತ್ತಿನ ಪ್ರತಿಯೊಬ್ಬ ಜೀವಿಯೂ ತನ್ನ ಅಂತರಂಗದ ಬೆಳಕಿನಲ್ಲಿಯೇ ಜೀವಿಸಬೇಕು ಎಂಬ ಅನುಭಾವವನ್ನು ನೀಡಿದರು.

ತಾವಲ್ಲದೇ ತಮ್ಮ ಸುತ್ತ ಅಸಂಖ್ಯೆ ಶರಣ ಗಣವನ್ನು ರೂಪಿಸಿ ವಿನೂತನ ಸಮಾಜದ ಸಂರಚನೆಗೆ ಕಾರಣರಾದರು. ಇಂಥ ಕಾರಣಿಕ ಪುರುಷರಾದ ಬಸವಾದಿ ಶಿವಶರಣ-ಶರಣೆಯರ ಚಿಂತನೆಗಳು ಇಂದು ಜಗತ್ತಿನಾದ್ಯಂತ ಪಸರಿಸಬೇಕು, ಅವರ ಆಶಯದ ಶರಣ ಸಮಾಜ ರೂಪಗೊಳ್ಳಬೇಕೆಂಬ ಸದಾಶಯದಿಂದ ಬಸವ ಮೀಡಿಯಾ ಈ ಕೆಳಕಂಡ ಧ್ಯೇಯಗಳನ್ನು ಅಳವಡಿಸಿಕೊಂಡಿದೆ.

ಎಲ್ಲಾ ರೀತಿಯ ಮಾಧ್ಯಮ, ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಪರಿಣಾಮಕಾರಿಯಾಗಿ ಬಸವಾದಿ ಶರಣರ ಚಿಂತನೆ ಮುಟ್ಟಿಸುವುದು, ಸಮಾಜದಲ್ಲಿ ಬಸವಾದಿ ಶರಣರ ಮನಸ್ಥಿತಿಯನ್ನು ಬಿತ್ತುವುದು. ಈ ಕೆಲಸಕ್ಕೆ ಡಿಜಿಟಲ್, ವಿಡಿಯೋ, ಅನಿಮೇಷನ್, ಆಡಿಯೋ, ಕಲೆ, ಸಂಗೀತ, ಮುದ್ರಣ ಮಾಧ್ಯಮ ಮುಂತಾದವುಗಳನ್ನು ಬಳಸಿಕೊಳ್ಳುವುದು. ಬಸವತತ್ವ, ವಚನಗಳು ಒಂದು ಪ್ರಾಂತ್ಯಕ್ಕೆ, ಭಾಷೆಗೆ ಸೀಮಿತವಾಗದೆ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುವಂತೆ ವಿವಿಧ ರೀತಿಗಳಲ್ಲಿ ಪ್ರಚಾರ ಮಾಡುವುದು.

ಬಸವತತ್ವ ಪ್ರಚಾರಕ್ಕೆ ಸೂಕ್ತವಾದ ಜನಸಂಪರ್ಕ ಕಾರ್ಯಕ್ರಮಗಳನ್ನು ರೂಪಿಸುವುದು, ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು. ಲಿಂಗಾಯತ ಧರ್ಮ ಮಾನ್ಯತೆಯ ಚಳುವಳಿಯ ಗಟ್ಟಿ ಧ್ವನಿಯಾಗುವುದು.
ಲಿಂಗಾಯತ ಧರ್ಮ ಮತ್ತು ಇತಿಹಾಸದ ಸಂಶೋಧನೆಗೆ ಸಾಂಸ್ಥಿಕವಾಗಿ ಬೆಂಬಲ ಗಟ್ಟಿಗೊಳಿಸುವುದು. ಮುಖ್ಯವಾಗಿ ಡಾ. ಎಂ.ಎಂ. ಕಲಬುರ್ಗಿಯವರ ಅವರ ಕಾರ್ಯ ಮುಂದುವರೆಸುವುದು ಮತ್ತು ಅವರ ಚಿಂತನೆಯನ್ನು ಜನಮಾನಸಕ್ಕೆ ಮುಟ್ಟಿಸುವುದು.

ಬಸವತತ್ವದ ಸಾಕಾರ ರೂಪವಾಗಿರುವ ಭಾರತ ಸಂವಿಧಾನದ ಆಶಯಗಳು ಸಾಕಾರವಾಗುವಂತೆ ಶ್ರಮಿಸುವುದು. ಹಿಂದುಳಿದ, ಶೋಷಿತ ಸಮುದಾಯಗಳ ಉನ್ನತಿಗೆ, ಬಹುತ್ವ, ಸಮಾನ, ಸೌಹಾರ್ದಯುತ ಸಮಾಜದ ನಿರ್ಮಾಣಕ್ಕೆ ಶ್ರಮಿಸುವುದು. ಕಳೆದ ಎರಡು ವರ್ಷಗಳಿಂದ ಈ ಚಿಂತನೆಗಳು ಸಮಾಜದಲ್ಲಿ ಬಿತ್ತಬೇಕು ಮತ್ತು ಬೆಳೆಯಬೇಕು ಎಂಬ ಛಲತೊಟ್ಟು ಬಸವ ಮೀಡಿಯಾ ಶ್ರಮಿಸುತ್ತಿದೆ.

ಈ ಸಂಸ್ಥೆಯನ್ನು ಬೆಳೆಸುವುದು ಮತ್ತು ಉಳಿಸುವುದು ಸಮಸಮಾಜವನ್ನು ಬಯಸುವ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಸಂಸ್ಥೆಯ ಧ್ಯೇಯೋದ್ದೇಶಗಳು ನಮ್ಮ ಶ್ರೀಮಠದ ಧ್ಯೇಯೋದ್ದೇಶಗಳು ಸಮಾನವಾಗಿರುವುದರಿಂದ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲೆಂದು ಬಸವಾದಿ ಶಿವಶರಣರು, ಎಡೆಯೂರು ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶ್ರೀರಕ್ಷೆ ಈ ಸಂಸ್ಥೆಗೆ ಸದಾ ಇರಲೆಂದು ಹಾರೈಸುತ್ತಾ ಪರಮಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆಗೊಂಡ, ಪರಮಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರೇರಕರಾಗಿರುವ ಹಾಗೂ ಶ್ರೀ ಎಸ್. ಎಸ್. ಪಟ್ಟಣಶೆಟ್ಟಿ ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ ಸದಸ್ಯರು ಹಾಗೂ ನಿವೃತ್ತ ನೌಕರರ ಮೂಲಕ ಸ್ಥಾಪಿಸಿದ ‘ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಯನ್ನು ರೂ. ಒಂದು ಲಕ್ಷ ರೂಪಾಯಿಗಳ ಗೌರವಧನದೊಂದಿಗೆ ಶ್ರೀ ಜಗದ್ಗುರು ತೋಂಟದಾರ್ಯಮಠದ ಭಕ್ತ ಸಮುದಾಯದ ಸಮ್ಮುಖದಲ್ಲಿ ದಿನಾಂಕ: ೨೨-೧೦-೨೦೨೬ರ ಗುರುವಾರದಂದು ಪೂಜ್ಯರ ಎಂಟನೆಯ ಪುಣ್ಯಸ್ಮರಣೋತ್ಸವ ಹಾಗೂ ಅವರು ಸ್ಥಾಪಿಸಿದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಸಂತೋಷದಿಂದ ಪ್ರದಾನ ಮಾಡಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *

ಪ್ರಾಚಾರ್ಯರು, ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಧಾರವಾಡ