ವಚನ ದರ್ಶನವೆಂಬ ಕಸದ ರಾಶಿಯ ಪುಸ್ತಕದ ಬಿಡುಗಡೆಯ ನೆಪದಲ್ಲಿ ರಾಜಾದ್ಯಂತ ಸನಾತನಿಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆ. ಎಂದಿಗೂ ಬಸವಣ್ಣನವರನ್ನು ಸ್ವೀಕರಿಸಿ ಗೌರವಿಸದ ಹಿಂದುತ್ವವಾದಿಗಳುˌ ತಮ್ಮ ಮಠಗಳಲ್ಲಿ ಬಸವಣ್ಣನವರ ಭಾವಚಿತ್ರ ಇರಿಸದವರುˌ ಬಸವಣ್ಣನವರ ಸಮಾನತೆ ತತ್ವವನ್ನು ಒಪ್ಪದವರುˌ ತಮ್ಮ ಸಂಘಟನೆಗಳಲ್ಲಿ ವಚನ ಪಠಣ ಮಾಡದವರು ದಿಡೀರ್ ಎಂದು ಶರಣರ ವಚನಗಳ ಬಗ್ಗೆ ಪ್ರೀತಿ ತೋರುತ್ತಿರುವುದೇಕೆ?
ಕೇವಲ 40-50 ಸಾವಿರ ರೂಪಾಯಿ ಖರ್ಚಿನಲ್ಲಿ ವಚನ ದರ್ಶನವೆಂಬ ಪುಸ್ತಕ ಪ್ರಕಟಿಸಿ ಅದನ್ನು ಪ್ರತಿ ಜಿಲ್ಲೆಯಲ್ಲಿ ತಲಾ 3-5 ಲಕ್ಷ ಖರ್ಚುವೆಚ್ಚ ಮಾಡಿ ಬಿಡುಗಡೆ ಮಾಡುತ್ತಿರುವುದರ ಹಿಂದಿನ ಕುಟಿಲ ಹುನ್ನಾರವೇನು?
೧೨ ನೇ ಶತಮಾಮಾನದಲ್ಲಿ ಶರಣರು ಬರೆದ ವಚನಗಳ ಕಟ್ಟುಗಳಿಗೆ ಸಾಮೂಹಿಕವಾಗಿ ಬೆಂಕಿ ಹಚ್ಚಿ ಸುಟ್ಟು ಅಸಂಖ್ಯಾತ ಲಿಂಗಾಯತ ಶರಣರ ಹತ್ಯೆ ಮಾಡಿದವರ ಪರಂಪರೆಯವರು ರಚಿಸಿರುವ ವಚನ ದರ್ಶನ ಪುಸ್ತಕದಲ್ಲಿ ಇಡೀ ವಚನ ಚಳುವಳಿಯನ್ನು ಸನಾತನವಾದದ ಹಿನ್ನೆಲೆಯ ಒಂದು ಭಕ್ತಿ ಚಳುವಳಿ ಎಂದು ಬಿಂಬಿಸುವ ವ್ಯರ್ಥ ಸಾಹಸ ಮಾಡಲಾಗಿದೆ.
ಪುಸ್ತಕದಲ್ಲಿ ಒಬ್ಬ ಲೇಖಕ ವಚನ ಚಳುವಳಿಯನ್ನು ಸಮಾಜವಾದದˌ ಮಾರ್ಕ್ಸ್ ವಾದದ ಹಾಗು ಪಾಶ್ಚಾತ್ಯ ಸಿದ್ಧಾಂತದ ಹಿನ್ನೆಲೆಯಲ್ಲಿ ಅರ್ಥೈಸಬಾರದೆಂದು ಫರ್ಮಾನು ಹೊರಡಿಸಿದ್ದಾನೆ. ಇಲ್ಲಿ ಸ್ಪಷ್ಟವಾಗಿ ಗೋಚರಿಸುದೇನೆಂದರೆ ಜೀವವಿರೋಧಿ ಬಲಪಂಥೀಯ ವೈದಿಕ ಶಕ್ತಿಗಳಿಗೆ ಸಮಾಜವಾದˌ ಪಾಶ್ಚಾತ್ಯರ ಅಧುನಿಕತೆಯ ಸಿದ್ಧಾಂತಗಳು ಹಾಗು ಜನಪರವಾಗಿರುವ ಮಾರ್ಕ್ಸ್ ವಾದಗಳ ಕುರಿತು ಇರುವ ಆಳವಾದ ಮತ್ಸರˌ ಭಯ ಹಾಗು ಅಸಹನೆ.
ವಚನ ದರ್ಶನ ಪುಸ್ತಕವನ್ನು ರೂಪಿಸಿದ ಮನಸ್ಸುಗಳಿಗೆ ವಚನ ಚಳುವಳಿಯು ಈ ಜೀವನ್ಮುಖಿ ವಾದಗಳ ಹಿನ್ನೆಲೆಯಿಂದ ರೂಪುಗೊಂಡಿದೆ ಎನ್ನುವ ಭ್ರಮೆ ಇರುವುದು. ಇವರಿಗೆ ಬಸವವಾದವು ಒಂದು ಸಂಪೂರ್ಣ ಸ್ವತಂತ್ರ ಸಿದ್ಧಾಂತವಾಗಿದ್ದು ಅದು ಮೇಲಿನ ಮೂರು ವಾದಗಳಿಗೆ ಪ್ರೇರಣೆಯಾಗಿದೆ ಎನ್ನುವ ಪ್ರಜ್ಞೆ ಇಲ್ಲದಿರುವುದು ದುರಂತದ ಸಂಗತಿ. ಇಡೀ ವಚನ ಚಳುವಳಿಯನ್ನು ಭಕ್ತಿ ಚಳುವಳಿ ಎಂದು ನಿರೂಪಿಸುವ ಭರದಲ್ಲಿ ಇದರ ರೂವಾರಿಗಳು ಮಾಡಿದ ಅಜ್ಞಾನದ ಪ್ರದರ್ಶನ ಉದ್ದಕ್ಕೂ ಕಾಣಸಿಗುತ್ತದೆ.
ವಚನ ಚಳುವಳಿಯನ್ನು ಸಮಾಜವಾದದ ಹಿನ್ನೆಲೆಯಲ್ಲಿ ಓದಲೆಬಾರದೆಂದು ವಚನ ದರ್ಶನದ ಖಾವಂದರು ಭಯಭೀತರಾಗಿ ಬಡಬಡಿಸಿದ್ದು ನಗೆತರಿಸುತ್ತದೆ. ಸಮಾಜವಾದವು ಸ್ಥಾಪಿತ ವೈದಿಕ ವಿಕೃತಿಗಳ ವಿರುದ್ಧ ಮಾತನಾಡುತ್ತದೆ ಮತ್ತು ಅದು ಸನಾತನ ವೈದಿಕತೆಯ ಶೋಷಣೆಯಿಂದ ಜನರನ್ನು ವಿಮೋಚನೆಗೊಳಿಸುವ ಉದಾತ್ ಉದ್ದೇಶ ಹೊಂದಿದೆ ಎನ್ನುವ ಆತಂಕ ಈ ಬಲಪಂಥೀಯ ಲೇಖಕರಲ್ಲಿ ಹೆಪ್ಪುಗಟ್ಟಿದನ್ನು ನಾವು ಗುರುತಿಸಬಹುದು.
ಸಾಮಾನ್ಯವಾಗಿ ಸಮಾಜವಾದವೆಂದರೆ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯು ಸಂಪನ್ಮೂಲಗಳ ಉತ್ಪಾದನೆ ಮತ್ತು ವಿತರಣೆಯಲ್ಲಿ ಸಮಾನ ಪಾಲು ಹೊಂದಿರಬೇಕು ಎನ್ನುವುದು. ಸಮಾಜವಾದವು ಸಮಾಜದಲ್ಲಿ ಸಮಾನತೆಯನ್ನು ಸೃಷ್ಟಿಸುತ್ತದೆ ಮತ್ತು ಭದ್ರತೆಯ ಭಾವವನ್ನು ನೀಡುತ್ತದೆ.
ಸನಾತನ ವೈದಿಕತೆಯು ಈ ಉದಾತ್ ಸಿದ್ಧಾಂತದ ವಿರುದ್ಧವಾಗಿರುವುದರಿಂದ ಸಮಾಜವಾದದ ಕುರಿತು ಅದಕ್ಕಿರುವ ಅಸಹನೆಯು ಸಹಜವಾದದ್ದೆ. ವಿಶೇಷವೆಂದರೆ ಭಾರತದಲ್ಲಿ ಸಮಾಜವಾದ ಹುಟ್ಟಿದ್ದೆ ಬಸವಣ್ಣನವರ ವಚನ ಚಳುವಳಿಯ ಮುಖೇನ ಎನ್ನುವ ಸಂಗತಿ ವಚನ ದರ್ಶನದ ರೂವಾರಿಗಳಿಗೆ ಇಲ್ಲದಿರುವುದು.
ಹಾಗಾಗಿ ಬಸವವಾದವೆ ನೈಜ ಸಮಾಜವಾದವಾಗಿರುವುದರಿಂದ ಸಮಾಜವಾದದ ವೈರಿಗಳಾಗಿರುವ ವಚನ ದರ್ಶನದ ರೂವಾರಿಗಳು ವಚನ ಚಳುವಳಿಯನ್ನು ಸಮಾಜವಾದದಿಂದ ಪ್ರತ್ಯೇಕಿಸಲು ಹವಣಿಸುತ್ತಿರುವುದು ಕುಚೋದ್ಯದ ಸಂಗತಿಯಾಗಿದೆ.
ಇನ್ನು ವಚನ ಚಳುವಳಿಯನ್ನು ಮಾರ್ಕ್ಸ್ ವಾದದ ಹಿನ್ನೆಲೆಯಲ್ಲಿ ಅರ್ಥೈಸಬಾರದು ಎಂದು ವಚನ ದರ್ಶನದ ಖಾವಂದರು ಫರ್ಮಾನು ಹೊರಡಿಸಿರುವುದು ಇನ್ನೂ ನಗೆಗೇಡಿನ ಸಂಗತಿ. ಈ ಖಾವಂದರಿಗೆ ವಚನ ಚಳುವಳಿ ಮತ್ತು ಮಾರ್ಕ್ಸ್ ವಾದದ ಕಾಲಘಟ್ಟಗಳ ಕುರಿತು ಅರಿವು ಇಲ್ಲವೆನ್ನುವುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಭಾರತೀಯ ಸಂದರ್ಭದಲ್ಲಿ ಹಾಗು ಜಾಗತಿಕ ಮಟ್ಟದಲ್ಲೂ ಕೂಡ ಮಾರ್ಕ್ಸ್ ವಾದವನ್ನು ವಚನ ಚಳುವಳಿ ಹಾಗು ಬಸವವಾದದ ಹಿನ್ನೆಲೆಯಲ್ಲಿ ಅರ್ಥಸಬೇಕೆ ಹೊರತು ಮಾರ್ಕ್ಸ್ ವಾದದ ಹಿನ್ನೆಲೆಯಲ್ಲಿ ವಚನ ಚಳುವಳಿಯನ್ನಲ್ಲ ಎನ್ನುವ ಕನಿಷ್ಠ ತಿಳುವಳಿಕೆ ವಚನ ದರ್ಶನದ ರೂವಾರಿಗಳಲ್ಲಿ ಕಾಣಸಿಗುವುದಿಲ್ಲ. ಜೀವಪರವಾಗಿರುವ ಮಾರ್ಕ್ಸ್ ವಾದದ ಬಗ್ಗೆ ಈ ಬಲಪಂಥೀಯರಿಗೆ ಇರುವ ಭಯವನ್ನು ನಾವು ಈ ವಚನದರ್ಶನದಲ್ಲಿ ಗುರುತಿಸಬಹುದು. ಒಟ್ಟಾರೆ ಬಲಪಂಥೀಯರಿಗೆ ಜೀವಪರ ಇರುವುದೆಲ್ಲದರ ಕುರಿತು ಭಯ ಹಾಗು ಮತ್ಸರವಿದೆ ಎನ್ನುವುದಂತೂ ಸ್ಪಷ್ಟವಾಗುತ್ತದೆ.
ಇನ್ನು ವಚನ ಚಳುವಳಿಯನ್ನು ಪಾಶ್ಚಾತ್ಯ ಸಿದ್ಧಾಂತದ ಹಿನ್ನೆಲೆಯಲ್ಲಿ ಅರ್ಥೈಸಬಾರದು ಎನ್ನುವ ಖಾವಂದರ ವಿತಂಡವಾದ ನೋಡಿ ನಗೆಬರದಿರಲಾರದು. ಸಾಗರೋಲಂಘನ ಮಾಡಬಾರದೆಂಬ ತಮ್ಮ ಸನಾತನ ಧರ್ಮದ ಕಟ್ಟಳೆಯನ್ನು ಮುರಿದುˌ ಗುರುಕುಲ ಶಿಕ್ಷಣವನ್ನು ತೊರೆದು ಹತ್ತೊಂಬತ್ತು ಹಾಗು ಇಪ್ಪತ್ತನೆ ಶತಮಾನದಲ್ಲಿ ವಿದೇಶಕ್ಕೆ ಹೋಗಿ ಪಾಶ್ಚಾತ್ಯ ಶಿಕ್ಷಣ ಪಡೆದ ಮೊದಲಿಗರೆಂದರೆ ಸಾವರಕರ್ ಮುಂತಾದ ಬಲಪಂಥಿಯರು ಎನ್ನುವುದು ವಿಶೇಷ.
ಭಾರತದಲ್ಲಿ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದ ಮೆಖಾಲೆ ಶಿಕ್ಷಣ ನೀತಿಯನ್ನು ವಿರೋಧಿಸುತ್ತಲೆ ಭಾರತದಲ್ಲಿ ಮೊಟ್ಟಮೊದಲು ಇಂಗ್ಲೀಷ್ ಶಿಕ್ಷಣ ಪಡೆದವರಲ್ಲಿ ಮುಂಚೂಣಿಯಲ್ಲಿ ನಿಂತಿದ್ದು ಕೂಡ ಇದೆ ಬಲಪಂಥೀಯರು. ಇಂದಿಗೂ ಕೂಡ ಪಾಶ್ಚಾತ್ಯ ಸಿದ್ಧಾಂತˌ ಸಂಸ್ಕೃತಿಯನ್ನು ವಿರೋಧಿಸುತ್ತ ˌ ಶೂದ್ರರಿಗೆ ಅವುಗಳಿಂದ ದೂರವಿರುವಂತೆ ಪ್ರೇರೇಪಿಸುತ್ತ ಅಧುನಿಕ ಸೌಲಭ್ಯಗಳನ್ನು ಪಡೆಯಲು ಶಿಕ್ಷಣಾರ್ಥಿಗಳಾಗಿ ಹಾಗು ಉದ್ಯೋಗ ಅರಸಿ ವಿದೇಶಕ್ಕೆ ಹಾರುವವರಲ್ಲಿ ಈ ಬಲಪಂಥೀಯರೆ ಅಧಿಕ ಸಂಖ್ಯೆಯಲ್ಲಿದ್ದಾರೆ ಎನ್ನುವುದನ್ನು ನಾವು ಗಮನಿಸಬೇಕಿದೆ. ಪಾಶ್ಚಿಮಾತ್ಯರಲ್ಲಿ ಇಂಗ್ಲೀಷ್ ಭಾಷೆ ವಿಕಸನ ಹೊಂದುವ ಮೊದಲೆˌ ಹಾಗು ಜನತಂತ್ರದ ಪರಿಕಲ್ಪನೆ ಕುಡಿಯೊಡೆಯುವ ಮೊದಲೆ ಇವುಗಳ ಸ್ಥಾಪನೆಗಾಗಿ ವಚನ ಚಳುವಳಿ ನಡೆದಿದೆ ಎಂದು ತಿಳಿಯದಷ್ಟು ಈ ಖಾವಂದರು ಅಜ್ಞಾನಿಗಳಾಗಿರುವುದು ದುರಂತದ ಸಂಗತಿ.
ಎಂದಿಗೂ ಬಸವಣ್ಣನವರನ್ನು ಸ್ವೀಕರಿಸಿ ಗೌರವಿಸದ ಹಿಂದುತ್ವವಾದಿಗಳುˌ ತಮ್ಮ ಮಠ ಹಾಗು ಮನೆಗಳಲ್ಲಿ ಬಸವಣ್ಣನವರ ಭಾವಚಿತ್ರ ಇರಿಸದವರುˌ ತಮ್ಮ ಮಕ್ಕಳಿಗೆ ಬಸವಣ್ಣನವರ ಹೆಸರಿಡದವರುˌ ಬಸವಣ್ಣನವರ ಸಮಾನತೆ ತತ್ವವನ್ನು ವಿರೋಧಿಸುವವರುˌ ತಮ್ಮ ಸಂಘಟನೆಗಳಲ್ಲಿ ಬಸವಸ್ತುತಿಯಾಗಲಿ ವಚನ ಪಠಣವಾಗಲಿ ಮಾಡದವರು ಪ್ರತಿ ಜಿಲ್ಲೆಯಲ್ಲಿ ವಚನ ದರ್ಶನವನ್ನು ಖರ್ಚುವೆಚ್ಚ ಮಾಡಿ ಬಿಡುಗಡೆ ಮಾಡುತ್ತಿರುವುದರ ಹಿಂದಿನ ಕುಟಿಲ ಹುನ್ನಾರವನ್ನು ಅರಿಯದಷ್ಟು ಲಿಂಗಾಯತರು ಮುಗ್ಧರು ಅಥವಾ ದಡ್ಡರಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.
ಹೌದು ದಡ್ಡ ಲಿಂಗಾಯತರು ಯಾರೆಂದರೆ ವಚನ ದರ್ಶನದಲ್ಲಿ ಲೇಖನಗಳನ್ನು ಬರೆದ ಸ್ವಾರ್ಥಿ ವಿದ್ವಂಸಕ ಶಿಖಾಮಣಿಗಳುˌˌ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುತ್ತಿರುವ ಮೂರ್ಖ ಮಠಾಧೀಶರು ಹಾಗು ವೀರಶೈವ ಮಹಾಸಭೆಯ ಸ್ವಾರ್ಥಿ ರಾಜಕೀಯ ಪುಢಾರಿಗಳು ಎನ್ನುವುದು ನೈಜ ಲಿಂಗಾಯತರಿಗೆ ತಿಳಿದಿದೆ.
ಅಂತಹ ಧರ್ಮದ್ರೋಹಿಗಳಲ್ಲಿ ಲಿಂಗಾಯತ ಸಿದ್ಧಾಂತಗಳ ಅರಿವು ಹಾಗು ಬಸವ ಪ್ರಜ್ಞೆ ಜಾಗೃತಿಗೊಳಿಸುವ ಪ್ರಕ್ರಿಯೆಗಳ ಕುರಿತು ಲಿಂಗಾಯತ ಪ್ರಜ್ಞಾವಂತರು ಈಗ ಗಂಭೀರವಾಗಿ ಯೋಚಿಸುತ್ತಿದ್ದಾರೆ. ಹಾಗಾಗಿˌ ಬಲಪಂಥೀಯ ವಿದ್ವಂಸಕರು ಪ್ರಸ್ತುತ ಕರ್ನಾಟಕದಲ್ಲಿ ವಚನ ದರ್ಶನ ಎನ್ನುವ ವಿಕೃತ ಪುಸ್ತಕವನ್ನು ರಚಿಸಿ ಅದನ್ನು ಒಂದು ಅಭಿಯಾನದ ರೂಪದಲ್ಲಿ ಪ್ರಚಾರ ಮಾಡುತ್ತಿರುವುದು ಅವರ ಪ್ರಕ್ಷುಬ್ಧ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆ ಪುಸ್ತಕ ಬಿಡುಗಡೆಯ ರಾದ್ದಾಂತವು ನಾಡಿನಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕದಡುತ್ತಿದೆ. ಸಾಮರಸ್ಯ ಹಾಗು ಶಾಂತಿಯ ಬೀಡಾಗಿರುವ ಕನ್ನಡನಾಡನ್ನು ಸನಾತನಿಗಳು ಉತ್ತರಭಾರತದ ರಾಜ್ಯಗಳಂತೆ ಪ್ರಕ್ಷುಬ್ಧ ಹಾಗು ಜಂಗಲ್ ರಾಜ್ಯವನ್ನಾಗಿ ಮಾಡಲು ಹವಣಿಸುತ್ತಿವೆ. ನಾಡಿನ ಪ್ರಜ್ಞಾವಂತರೆಲ್ಲ ಸೇರಿ ಸನಾತನಿಗಳ ಈ ದಂಗೆಕೋರತನವನ್ನು ವಿರೋಧಿಸಬೇಕಿದೆ.
ಅತ್ಯಂತ ಸೂಕ್ತವಾದ ಪ್ರತಿಭಟನಾತ್ಮಕ ಲೇಖನ ಇದಾಗಿದೆ ಶರಣರೆ.
ಶರಣು ಶರಣಾರ್ತಿ ಶರಣರೆ.👌👌🙏🙏