ಇದು ಪರಿವರ್ತನೆ: ಕಲ್ಲು ದೇವರಿಗೆ ಹಾಲು ಸುರಿಯಲು ಬಂದ ಭಕ್ತರ ಮನ ಬದಲಿಸಿದ ರಾಷ್ಟ್ರೀಯ ಬಸವ ದಳದ ಶರಣೆಯರು

ಕಲಬುರ್ಗಿ

ಕಲಬುರ್ಗಿಯ ಪ್ರತಿಷ್ಠಿತ ಶಕ್ತಿನಗರ, ಗೋದುತಾಯಿ ಬಡಾವಣೆಗಳಲ್ಲಿ ಶುಕ್ರವಾರ ನಾಗರಕಲ್ಲಿನ ಮೂರ್ತಿಗೆ ಹಾಲೆರೆಯಲು ಹೋದ ಮಹಿಳಾ ಆರಾಧಕರಿಗೆ ಒಂದು ಅಚ್ಚರಿ ಕಾದಿತ್ತು.

ಅಲ್ಲಿ ಅವರಿಗಾಗಿ ಕಾಯುತ್ತಿದ್ದ ರಾಷ್ಟ್ರೀಯ ಬಸವ ದಳದ ಅಕ್ಕನಾಗಲಾಂಬಿಕೆ ಮಹಿಳಾ ಗಣದ ತಂಡದವರು ಅವರಿಂದ ಸ್ವಲ್ಪ ಸಮಯ ಕೇಳಿ ಮಾತನಾಡಿದರು. ಬಂದ ಮಹಿಳೆಯರಿಗೆ ಹಾಲು, ಆಹಾರವನ್ನು ಕಲ್ಲು ಮೂರ್ತಿಗಳಿಗೆ ಸುರಿದು ಹಾಳು ಮಾಡುವ ಬದಲು ಹಸಿದ ಮಕ್ಕಳಿಗೆ ಕೊಟ್ಟರೆ ಅದೇ ದೇವರನ್ನು ಮೆಚ್ಚಿಸುವ ಸರಿಯಾದ ಮಾರ್ಗವೆಂದು ಅರಿವು ಮೂಡಿಸಿದರು.

ಅದರ ಜೊತೆಗೆ ಅವರಿಗೆ ಬಸವಾದಿ ಶರಣರ ವೈಚಾರಿಕ ವಿಚಾರಗಳನ್ನು ತಿಳಿಸಿ ಬಸವ ಪಂಚಮಿಯ ಮಹತ್ವವನ್ನೂ ತಿಳಿಸಿದರು.

ಮೈಕ್ ಹಿಡಿದುಕೊಂಡು ನೆರೆದವರನ್ನು ಉದ್ದೇಶಿಸಿ ಅಕ್ಕನಾಗಲಾಂಬಿಕೆ ಮಹಿಳಾ ಗಣದ ಜಗದೇವಿ ಚಟ್ಟಿ ಮಾತನಾಡುತ್ತಾ, “ಇಂದು ಗುರು ಬಸವಣ್ಣನವರ ಲಿಂಗೈಕ್ಯ ದಿನ, ಆದ್ದರಿಂದ ಅವರ ಸ್ಮರಣೆಯಲ್ಲಿ ನಾಗಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಬೇಕು. ಆದರೆ ಅದನ್ನು ತಿಳಿಯದೆ ನಾಗಪಂಚಮಿಯ ಹೆಸರಿನಲ್ಲಿ ಪೌಷ್ಟಿಕ ಆಹಾರ ಪೋಲು ಮಾಡುತ್ತಾ ಬರುತ್ತಿದ್ದೇವೆ,” ಎಂದರು.

ಅವರ ಮಾತು ಕೇಳಿ ಅಲ್ಲಿ ಬಂದಿದ್ದ ಮಹಿಳೆಯರು ಸ್ವಲ್ಪ ಸಮಯ ಗೊಂದಲಕ್ಕೊಳಗಾಗಿ ನಿಂತರು.

ಆಗ ಅವರ ಬಳಿ ತಂಡದವರು ವೈಯಕ್ತಿಕವಾಗಿ ಮಾತನಾಡಿ “ಪ್ರಸಾದವನ್ನು ಕಲಬೆರಕಿ ಮಾಡಬೇಡಿ, ಹಾಳುಮಾಡಬೇಡಿ. ಬೇಕಾದ್ರೆ ಎಡೆ ಮಾಡಿ ಮನೆಗೆ ಒಯ್ದು ನೀವೆ ತಿನ್ನಿ. ಇಲ್ಲವೆಂದರೆ ನಮ್ಮ ಕೈಗೆ ಕೊಡಿ, ನಾವು ತಿಂತೀವಿ, ಎಂದು ಅಲ್ಲಿಗೆ ಬಂದ ಪ್ರತಿಯೊಬ್ಬರಿಗೆ ವಿನಯಪೂರಕವಾಗಿ ವಿನಂತಿ ಮಾಡಿಕೊಂಡರು.

ಅವರ ಮಾತು ಒಪ್ಪಿಕೊಂಡ ಬಹಳಷ್ಟು ಮಹಿಳೆಯರು ಅವರು ತಂದಿದ್ದ ಫ್ಲಾಸ್ಕ್ ಗಳಿಗೆ ಹಾಲು ಹಾಕಿದರು. ಆ ಅಪರೂಪದ ಫೋಟೋ ವಿಡಿಯೋಗಳು ಈಗ ವೈರಲ್ ಆಗಿವೆ.

“ಕೆಲವರು ಮೂರ್ತಿಗೆ ಪ್ರಸಾದ ಎಡೆ ಹಿಡಿದು, ಅಲ್ಲೇ ಸುರಿಯದೆ ಮನೆಗೆ ಒಯ್ದರು, ಕೆಲವರು ನಮಗೆ ಕೊಟ್ಟ ನೈವೇದ್ಯ ಸಂಗ್ರಹಿಸಿ ಸ್ಥಳದಲ್ಲೇ ಕುಳಿತು ತಿಂದೆವು. ಅಲ್ಲಿಯೇ ಕುಳಿತಿದ್ದ ಪೂಜಾರಿ ರೂಪದ ಅಜ್ಜಿಗೆ ಸಹ ಕೊಟ್ಟೆವು. ಶೇಖರಿಸಿದ ಹಾಲು ಮನೆಗೆ ತಂದು ಚಹಾ ಮಾಡಿಕೊಂಡು ಕುಡಿದೆವು,” ಎಂದು ಜಗದೇವಿ ಚಟ್ಟಿ ಹೇಳಿದರು.

ಕೆಲವರಿಂದ ಪ್ರತಿರೋಧವೂ ಬಂದಿತು. ಕಲ್ಲು ದೇವರ ಮೇಲೆ ಹಾಕಲು ಹಾಲು, ಆಹಾರ ತಂದಿದ್ದ ಒಬ್ಬ ವ್ಯಕ್ತಿ ಅವನ ಪೂಜೆಗೆ ಅಡ್ಡಿಪಡಿಸಲು ನಾವು ಯಾರು ಎಂದು ಪ್ರಶ್ನಿಸಿದ. “ನಾಯಿ, ದನಗಳು ತಿನ್ನುವುದರಿಂದ ಆಹಾರ ಪೋಲಾಗುವುದಿಲ್ಲ,” ಎಂದು ವಾದಿಸಲು ನಿಂತ.

“ನಾವು ಅವನಿಗೆ ಆಹಾರ ರಾಷ್ಟ್ರದ ಸಂಪತ್ತಿದು, ಅದನ್ನು ಹಾಳು ಮಾಡಲು ನಾವು ಬಿಡುವುದಿಲ್ಲ. ನಿಮ್ಮ ಮನೆಯಲ್ಲಿ ಏನಾದರು ಮಾಡಿಕೊಳ್ಳಿ, ಆದರೆ ಸಾರ್ವಜನಿಕವಾಗಿ ಬಂದು ಆಹಾರ ಹಾಳು ಮಾಡಿದರೆ ನಾವು ಸುಮ್ಮನಿರೋಲ್ಲ ಎಂದು ತಿಳಿಸಿದೆವು,” ಜಗದೇವಿ ಚಟ್ಟಿ ಹೇಳಿದರು. .

ಅಕ್ಕನಾಗಲಾಂಬಿಕೆ ಮಹಿಳಾ ಗಣದ ಶರಣೆ ಜಗದೇವಿ ಚಟ್ಟಿ

“ಇಲ್ಲಿ ಪ್ರಸಾದವನ್ನು ಗುಡ್ಡೆ ಹಾಕಿ ಅದರ ಮೆಲೆ ನೀರು, ಹಾಲು, ಎಣ್ಣೆ, ಅಗರಬತ್ತಿ ಹಾಕಿದರೆ ದೇವರು ತಿನ್ನಲು ಬರುತ್ತಾನೆಯೆ? ಇಂಥ ಕಲಬೆರಕೆಯನ್ನು ನಮ್ಮಂತೆ ಜೀವವಿರುವ ಪ್ರಾಣಿಗಳು ತಿಂದರೆ ಅವಕ್ಕೆ ತೊಂದರೆ ಆಗುವುದಿಲ್ಲವೆ,” RBD ತಂಡದವರು ಪ್ರಶ್ನೆ ಮಾಡಿದಾಗ ಅವರು ಸುಮ್ಮನಾದರು.

“ಈ ಪ್ರತಿಷ್ಠಿತ ಬಡಾವಣೆಗಳಲ್ಲಿ ಕಲ್ಲನಾಗರ ಮೂರ್ತಿಗೆ ಗುಡ್ಡೆಗುಡ್ಡೆ ಪ್ರಸಾದ, ಹಾಲು, ನೀರು, ಎಣ್ಣೆ, ಹಣ್ಣು, ತೆಂಗಿನಕಾಯಿ ಅರ್ಪಿಸುವುದು ಸ್ವಲ್ಪ ಮಟ್ಟಿಗೆ ತಡದಿದ್ದೇವೆ. ಆದರೆ ದೇವರ ಹೆಸರಿನಲ್ಲಿ ಮೌಡ್ಯ ಕಂದಾಚಾರ ಮಾಡುವ ಜನರನ್ನು, ವೈಚಾರಿಕತೆಯ ಶರಣರ ದಾರಿಗೆ ತರುವ ಕೆಲಸ ಇನ್ನೂ ಬಹಳಷ್ಟು ಆಗಬೇಕು,” ಎಂದು ತಂಡದವರು ಹೇಳಿದರು.

ಈ ಕಾರ್ಯಕ್ಕೆ ರಾಷ್ಟ್ರೀಯ ಬಸವದಳ ಅಕ್ಕನಾಗಲಾಂಬಿಕ ಮಹಿಳಾಗಣ ಸದಸ್ಯರಾದ ದೀಪಾಲಿ ಬಿರಾದಾರ, ಜ್ಯೋತಿ ಕಟಾಳೆ, ಸಂಗೀತಾ ಚೀಲಾ, ಸಾವಿತ್ರಿ ಹೊಸಮನಿ, ಬಸವಶ್ರೀ ಕಟಾಳೆ, ಲಕ್ಷ್ಮೀ ಕಣಜಿ, ವಾಣಿ ಕಟಾಳೆ, ಶಾಂತಾ ವಾಲಿ,ಪುತಳಾಬಾಯಿ ಕಟಾಳೆ ಅವರುಗಳು ಕೈಗೂಡಿಸಿ, ಸೇವೆಯಲ್ಲಿ ಪಾಲ್ಗೊಂಡರು.

Share This Article
Leave a comment

Leave a Reply

Your email address will not be published. Required fields are marked *