ಇತ್ತೀಚಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲಕೆರೆಯಲ್ಲಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಪುಣ್ಯತಿಥಿಯಂದು ಸಾಣೇಹಳ್ಳಿಯ ಡಾ ಪಂಡಿತಾರಾಧ್ಯ ಶ್ರೀಗಳು ಲಿಂಗಾಯತ ಒಂದು ಅವೈದಿಕ ಹಿಂದುಯೇತರ ಧರ್ಮ ಎಂದು ಹೇಳಿರುವುದು ಸಂಪೂರ್ಣ ಸತ್ಯ. ಹಿಂದೂ ಧರ್ಮದಲ್ಲಿ ಇರುವ ಅನೇಕ ಅಂಧಶೃದ್ಧೆ, ಕಂದಾಚಾರಗಳನ್ನು ಅವರು ಅನಾಚಾರ ಎಂದಿದ್ದಾರೆ.
ಲಿಂಗಾಯತ ಧರ್ಮವು ತನ್ನ ಆಚರಣೆ, ಸಂಸ್ಕೃತಿ, ಜೀವನ ಪದ್ಧತಿ, ನಂಬಿಕೆಗಳಲ್ಲಿ ಸಂಪೂರ್ಣವಾಗಿ ಹಿಂದೂ ಧರ್ಮಕ್ಕೆ ತದ್ವಿರುದ್ಧವಾಗಿದೆ. ಸತ್ಯ, ಸಮತೆ, ಶಾಂತಿ, ಪ್ರೀತಿ ಸಾರುವ ಧರ್ಮ ಲಿಂಗಾಯತ.
ಸಂಘ ಪರಿವಾರದ ಪ್ರಭಾವದಿಂದ ಕರ್ನಾಟಕದ ಅನೇಕ ಲಿಂಗಾಯತ ಸ್ವಾಮಿಗಳಿಗೆ ಇತ್ತೀಚಿಗೆ ವೈದಿಕ ಪರಂಪರೆಯ ಆಸಕ್ತಿ ಹೆಚ್ಚಾಗಿದೆ. ಅದರಲ್ಲೂ ಲಿಂಗಾಯತ ಸಮುದಾಯದವರನ್ನು ಹಿಂದೂ ಧರ್ಮದ ಭಾಗವೆಂದು ಅಧ್ಯಯನ ಕೊರತೆಯುಳ್ಳ ವಚನಾನಂದ ಶ್ರೀಗಳು ಮನಸ್ಸಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ.
ನ್ಯೂಸ್ 1 ಚಾನೆಲ್ ಟಿವಿಗೆ ಶ್ರೀ ವಚನಾನಂದ ಶ್ರೀಗಳು ಫೋನ್ ಮುಖಾಂತರ ಮಾತನಾಡುವಾಗ ಬಸವಣ್ಣನವರಿಗೂ ಮುಂಚೆ ಮಹಾರಾಷ್ಟ್ರದಲ್ಲಿ ವೀರಶೈವ ಸಂಸ್ಕೃತಿ ಇತ್ತು, ಅಲ್ಲಿ ಜ್ಞಾನೇಶ್ವರ ಮತ್ತು ಸೋಪಾನರು ವೀರಶೈವ ಸಂಸ್ಕೃತಿ ಪ್ರತಿಪಾದನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಜ್ಞಾನೇಶ್ವರ ಮತ್ತು ಸೋಪಾನರು ಬಂದಿದ್ದು ಬಸವೋತ್ತರ ಕಾಲದಲ್ಲಿ ಮತ್ತು ಅವರು ವಿಠ್ಠಲ ವೈದಿಕ ಧರ್ಮದ ಸಮಾಜ ಸುಧಾರಕರು ಎನ್ನುವುದು ಮೊದಲು ಶ್ರೀ ವಚನಾನಂದ ಶ್ರೀಗಳು ತಿಳಿದುಕೊಳ್ಳಲಿ. ಅಧ್ಯಯನ ಕೊರತೆಯಿರುವ ಶ್ರೀ ವಚನಾನಂದ ಶ್ರೀಗಳ ಹೇಳಿಕೆಗಳು ಲಿಂಗಾಯತ ಸ್ವತಂತ್ರ ಹೋರಾಟದ ಮೇಲೆ ಯಾವುದೇ ಪರಿಣಾಮ ಬಿರುವದಿಲ್ಲ.