ಬೇರೆ ಕಾರ್ಯಕ್ರಮ ಇದೆ, ವಚನ ದರ್ಶನ ಪುಸ್ತಕ ಬಿಡುಗಡೆಗೆ ಹೋಗುತ್ತಿಲ್ಲ: ಬೇಲಿ ಮಠ ಶ್ರೀಗಳು

ಎಂ. ಎ. ಅರುಣ್
ಎಂ. ಎ. ಅರುಣ್

“ಬೇರೆ ಕಾರ್ಯಕ್ರಮ ಇರುವುದರಿಂದ ವಚನ ದರ್ಶನ ಪುಸ್ತಕದ ಬಿಡುಗಡೆಗೆ ಹೋಗುತ್ತಿಲ್ಲ,” ಎಂದು ಬೇಲಿ ಮಠದ ಶ್ರೀ ಶಿವರುದ್ರ ಮಹಾ ಸ್ವಾಮೀಜಿಯವರು ಬುಧವಾರ ಹೇಳಿದರು.

ಬಸವ ಮೀಡಿಯಾದ ಜೊತೆ ಮಾತನಾಡುತ್ತ ಶ್ರೀಗಳು, “ಯಾರ ಒತ್ತಡಕ್ಕೂ ಸಿಲುಕಿ ಈ ನಿರ್ಧಾರ ತೆಗೆದುಕೊಂಡಿಲ್ಲ, ಪುಸ್ತಕ ಓದಿ ಸೂಕ್ತವಾದ ನಿರ್ಧಾರ ತೆಗೆದುಕೊಂಡಿದ್ದೇನೆ. ಮನಸ್ಸಿಗೆ ಒಪ್ಪಿಗೆ ಯಾಗಿದ್ದರೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ,” ಎಂದರು.

ಆಗಸ್ಟ್ 20 ಬೆಂಗಳೂರಿನಲ್ಲಿ ವಿವಾದಿತ ವಚನ ದರ್ಶನ ಪುಸ್ತಕವನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದ ಬೇಲಿ ಮಠದ ಶ್ರೀ ಶಿವರುದ್ರ ಮಹಾ ಸ್ವಾಮೀಜಿಯವರ ನಿರ್ಧಾರಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾಗಿತ್ತು.

ಪ್ರಶ್ನೆ) ಸ್ವಾಮೀಜಿ, ವಚನ ದರ್ಶನ ಪುಸ್ತಕದ ಬಿಡುಗಡೆಗೆ ಹೋಗುತ್ತಿದೀರಾ?

ಉತ್ತರ) ಆಗಸ್ಟ್ 20 ಬೇರೆ ಕಾರ್ಯಕ್ರಮ ಇರುವುದರಿಂದ ವಚನ ದರ್ಶನ ಪುಸ್ತಕದ ಬಿಡುಗಡೆಗೆ ಹೋಗುತ್ತಿಲ್ಲ.

ಪ್ರಶ್ನೆ) ಈ ಕಾರ್ಯಕ್ರಮಕ್ಕೆ ಹೋಗಲು ಮುಂಚೆ ಒಪ್ಪಿಕೊಂಡಿದ್ರಿ, ಇದರ ಬಗ್ಗೆ ಭಾರಿ ವಿರೋಧ ಬಂದಿತ್ತಲ್ಲಾ…

ಉತ್ತರ) ಕಾರ್ಯಕ್ರಮಕ್ಕೆ ಕರೆದಾಗ “ವಚನ ದರ್ಶನ” ಪುಸ್ತಕದ ಹೆಸರಿನಲ್ಲಿ ಏನೂ ಸಮಸ್ಯೆ ಕಾಣಲಿಲ್ಲ. ಅದಕ್ಕೆ ಒಪ್ಪಿಕೊಂಡೆ. ಆಮೇಲೆ ಒಳಗಿನ ಹೂರಣದಲ್ಲಿ ಸಮಸ್ಯೆಯಿದೆ ಎಂದು ಅನಿಸಿತು.

ಪ್ರಶ್ನೆ) ಪುಸ್ತಕದಲ್ಲಿ ಇರುವ ಸಮಸ್ಯೆಗಳೇನು?

ಉತ್ತರ) ಕೆಲವು ಲೇಖನಗಳಲ್ಲಿ, ಸಾಲುಗಳಲ್ಲಿ ವಚನಗಳಿಗೆ, ಶರಣ ತತ್ವದ ಮೂಲ ಆಶಯಗಳಿಗೆ ಸರಿ ಹೊಂದದ ಕೆಲವು ವಿಷಯಗಳಿವೆ ಅನಿಸಿತು.

(ಅವು ಯಾವುವು ಎಂದು ಮತ್ತೆ ಕೇಳಿದಾಗ, ವಿವರವಾಗಿ ಹೇಳಲು ನಿರಾಕರಿಸಿದರು)

ಪ್ರಶ್ನೆ) ಪುಸ್ತಕ ಓದದೇ ಕಾರ್ಯಕ್ರಮಕ್ಕೆ ಹೋಗಲು ಹೇಗೆ ಒಪ್ಪಿಕೊಂಡಿದ್ರಿ

ಉತ್ತರ) ಇಂತಹ ಕಾರ್ಯಕ್ರಮಗಳಿಗೆ ಒಪ್ಪಿಗೆ ಕೊಟ್ಟಾಗ ಪುಸ್ತಕಗಳನ್ನು ಮುಂಚೆ ನೋಡಲು ಸಾಧ್ಯವಾಗುವುದಿಲ್ಲ. ಆಹ್ವಾನ ಬಂದಾಗ ಅನೇಕ ಪುಸ್ತಕಗಳು ಪ್ರಕಟಣೆಯೇ ಆಗಿರುವುದಿಲ್ಲ. ಆದರೆ ಕಾರ್ಯಕ್ರಮಕ್ಕೆ ಮುಂಚೆ ಪುಸ್ತಕ ಪಡೆದು glance ಮಾಡುತ್ತೇನೆ. ಈ ವಿಷಯದಲ್ಲಿಈ ಮಾಡಿದ್ದೂ ಅದನ್ನೇ.

ಪ್ರಶ್ನೆ) ಪುಸ್ತಕ ಓದಿದ ಮೇಲೂ ಹೋಗುತ್ತೇನೆ ಅಂತ ಕೆಲವರಿಗೆ ಹೇಳಿದ್ದಿರಿ ಅಂತ ಕೇಳಿದೆ

ಉತ್ತರ) ಹೌದು. ಕಾರ್ಯಕ್ರಮಕ್ಕೆ ಹೋಗಿ ಅಲ್ಲಿ ವೇದಿಕೆಯ ಮೇಲೆ ಪುಸ್ತಕದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡಬೇಕೆಂಬ ಆಲೋಚನೆಯಿತ್ತು. ಈಗ ಅದನ್ನು ಬದಲಾಯಿಸಿದ್ದೇನೆ.

ಪ್ರಶ್ನೆ) ಬಿಡುಗಡೆ ಕಾರ್ಯಕ್ರಮಕ್ಕೆ ಹೋಗದಿರಲು ನಿಮ್ಮ ಮೇಲೆ ತುಂಬಾ ಒತ್ತಡವಿತ್ತು. ಅದರಿಂದ ನಿರ್ಧಾರ ಬದಲಾಯಿಸಿದರಾ?

ಉತ್ತರ) ನಮ್ಮ ಮೇಲೆ ಯಾವ ಒತ್ತಡವೂ ಇರಲಿಲ್ಲ. ನಮ್ಮ ಮನಸ್ಸಿಗೆ ಒಪ್ಪಿಗೆಯಾಗಿದ್ದರೆ ಹೋಗುತ್ತಿದ್ದೆವು. ನಾವಾಗಿಯೇ ನಿರ್ಧಾರ ಬದಲಾಯಿಸಿದ್ದೇವೆ.

ಪ್ರಶ್ನೆ) ವಚನ ದರ್ಶನ ಹಲವಾರು ಕಡೆ ಬಿಡುಗಡೆಯಾಗುತ್ತಿದೆಯಲ್ಲ…ಏಕೆ?

ನೂರಾರು ಪುಸ್ತಕಗಳು ಇದೇ ರೀತಿ ಬಿಡುಗಡೆಯಾಗುತ್ತವೆ. ಅದರಲ್ಲಿ ಏನೂ ಸಮಸ್ಯೆಯಿಲ್ಲ.

ಪ್ರಶ್ನೆ) ಈ ಪುಸ್ತಕಕ್ಕೆ ಇಷ್ಟೊಂದು ವಿರೋಧ ಬರಲು ಕಾರಣವೇನು?

ಉತ್ತರ) ಈ ಪುಸ್ತಕದಲ್ಲಿ ಹೊಸದೇನೂ ಇಲ್ಲ. ಪ್ರಾಚೀನ ಕಾಲದಿಂದಲೂ ವಚನಗಳನ್ನು, ಶರಣ ತತ್ವವನ್ನು ವೈದಿಕ ಪರಂಪರೆಯೊಳಗೆ ಸೇರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಾ ಬಂದಿವೆ. ಬಿಡಿ ಬಿಡಿಯಾಗಿ ಅಲ್ಲೊಂದು ಇಲ್ಲೊಂದು ನಡೆಯುವ ಇಂತಹ ಪ್ರಯತ್ನಗಳನ್ನು ಈಗ ಒಂದು ಪುಸ್ತಕದ ರೂಪದಲ್ಲಿ ಒಗ್ಗೊಡಿಸಿದ್ದಾರೆ.

ಅವರೇ ಮುಂದುವರೆದು….

ವಿಪರೀತ ವಿರೋಧ ಮಾಡಿದರೆ ಈ ಪುಸ್ತಕಕ್ಕೆ ಪ್ರಚಾರ ಕೊಟ್ಟು ಹೆಚ್ಚಿಗೆ ಜನ ಓದುವ ಹಾಗೆ ಮಾಡಿದ ಹಾಗೆ ಆಗುತ್ತದೆ. ಕೆಲವು ಭಾರಿ ಪುಸ್ತಕ ಪ್ರಕಟ ಮಾಡುವವರೇ ಇಂತಹ ವಿರೋಧ ಬಂದು ಪ್ರಚಾರ ಸಿಗಲಿ ಅಂತ ಕೆಲವು ನೆಗೆಟಿವ್ ಅಂಶಗಳನ್ನು ಹಾಕಿರುತ್ತಾರೆ.

Share This Article
2 Comments
  • ಒಳ್ಳೆಯ ಕಾರ್ಯವನ್ನು ಮಾಡಿದ್ದೀರಿ, ಸ್ವಾಮಿಜಿ.
    ಶರಣು ಶರಣಾರ್ಥಿಗಳು.

  • ಸ್ವಾಮೀಜಿಯವರು ವಿಶ್ವಹಿಂದೂ ಪರಿಷತ್ ನಲ್ಲಿ ಹೊಂದಿದ ತಮ್ಮ ಸ್ಥಾನ ಬಿಟ್ಟು, ಅದರಿಂದ ಹೊರಬರಬೇಕು.

Leave a Reply

Your email address will not be published. Required fields are marked *