ಎಂದೂ ಜೀವನೋತ್ಸಾಹ ಕಳೆದುಕೊಳ್ಳದ ಸಿದ್ದರಾಮಣ್ಣ ಶರಣರು: ನಿಜಗುಣಪ್ರಭು ಶ್ರೀಗಳು

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಹೈದರಾಬಾದ:

ದಾವಣಗೆರೆ ಬಸವ ಬಳಗದ ಲಿಂಗೈಕ ಸಿದ್ದರಾಮಣ್ಣ ಶರಣರು ಶರಣತತ್ವವನ್ನು ಚಾಚೂತಪ್ಪದೇ ಪರಿಪಾಲಿಸಿದ ಶಿವಯೋಗಿ. ೧೦೪ ವರ್ಷ ಶತಾಯುಷಿಗಳಾಗಿ ಬದುಕಿ, ಅಂತ್ಯದವರೆಗೂ ಜೀವನೋತ್ಸಾಹ ಕಳೆದುಕೊಳ್ಳದ ಜೀವನಪ್ರೇಮಿ ಶರಣರು ಅವರಾಗಿದ್ದರೆಂದು ಬೈಲೂರು, ಮುಂಡರಗಿ ಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಹೈದರಾಬಾದ್ ನ ಅತ್ತಾಪುರದಲ್ಲಿ ನಡೆಯುತ್ತಿರುವ ತಮ್ಮ ಪ್ರವಚನ ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮ ಶರಣರ ನಿಧನಕ್ಕೆ ಕಂಬನಿ ಸೂಚಿಸಿ, ಅವರ ಗೌರವಾರ್ಥ ಶೃದ್ಧಾಂಜಲಿ ಸಲ್ಲಿಸುವ ಕಾರ್ಯದಲ್ಲಿ ಮಾತನಾಡುತ್ತಿದ್ದರು.

ಸಿದ್ಧರಾಮಣ್ಣರು ಲಿಂಗಾನಂದ ಸ್ವಾಮಿಗಳ ಶಿಷ್ಯಪರಂಪರೆಯವರು. ಭಾಲ್ಕಿ ಚನ್ನಬಸವ ಪಟ್ಟದೇವರ ಜೊತೆ ಅನುಭವ ಮಂಟಪದ ಸಂಚಾಲಕರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಬಸವತತ್ವದ ಅನುಭಾವಿಗಳು, ಸಂಗೀತಗಾರ, ಸಾಹಿತಿಗಳಾಗಿದ್ದ ಅವರು ಸಣ್ಣ ಸಣ್ಣ ನಾಟಕಗಳನ್ನು ಬರೆದಿದ್ದರು. ಸಾರ್ಥಕ ಜೀವನ ಸಾಗಿಸಿದ ಅವರು ಸಮಾಜದಲ್ಲಿ ಸದಾ ನೆನಪಿನಲ್ಲಿ ಉಳಿದಿರುತ್ತಾರೆಂದು ಸ್ವಾಮೀಜಿ ಸ್ಮರಿಸಿದರು.

ಸಭೆಯಲ್ಲಿ ಎಲ್ಲರೂ ಎದ್ದುನಿಂತು ಅವರ ಗೌರವಾರ್ಥ ನಿಮಿಷದ ಶ್ರದ್ಧಾಂಜಲಿ ಸಲ್ಲಿಸಿದರು.

ಅತ್ತಾಪುರ ಬಸವದಳ ಹಾಗೂ ಪ್ರವಚನ ಸಮಿತಿ ಪ್ರಮುಖರಾದ ವಿಜಯಕುಮಾರ ಪಾಟ್ನೆ, ಸಂಜಯಕುಮಾರ ಪಾಟೀಲ, ಪ್ರದೀಪ ಬಿರಾದಾರ ಮತ್ತೀತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ನೂರಾರು ಜನ ಶರಣ, ಶರಣೆಯರು ಕಾರ್ಯಕ್ರಮದಲ್ಲಿ ಸೇರಿದ್ದರು.

Share This Article
Leave a comment

Leave a Reply

Your email address will not be published. Required fields are marked *