ಚನ್ನಬಸವಣ್ಣ ಚರಿತ್ರೆ 13: ಘಟಚಕ್ರ ಭಾಗ 2

(ನಿನ್ನೆಯಿಂದ ಮುಂದುವರಿದ ಭಾಗ….)

[ನಿನ್ನೆ ಇದರಲ್ಲಿ ಪ್ರಕಟಿಸಿದ ಘಟಚಕ್ರ ಕುರಿತು ನಾಡಿನ ತುಂಬ ಸಾಮಾಜಿಕ ಜಾಲತಾಣದಲ್ಲಿ ಓದಿದ ಅನೇಕರು ಸಂತೋಷಪಟ್ಟರು. ಇನ್ನೂ ಆಶ್ಚರ್ಯದ ಸಂಗತಿಯೆಂದರೆ, ಬೆಂಗಳೂರಿನ ಉಮಾಶಂಕರ ಎಂಬ ಶರಣರೊಬ್ಬರು ಖ್ಯಾತ ವೈದ್ಯರೆಲ್ಲ ಇರುವ ವ್ಯಾಟ್ಸಪ್ ಗ್ರೂಫಿಗೆ ಇದನ್ನು ಹಾಕಿದರು. ನಾಲ್ಕಾರು ಜನ ವೈದ್ಯರು ನನಗೆ ಫೋನ್ ಮಾಡಿ, ಈ ಕೃತಿ ಇಂಗ್ಲಿಷ್ ಭಾಷೆಯಲ್ಲಿ ಇರುವುದೇ, ಅನುವಾದವಾಗಿದೆಯೇ? ಎಂದು ಕೇಳಿದರು. ಕನ್ನಡ ಕೃತಿಯನ್ನೇ ಯಾರೂ ಗಮನಿಸದೇ ಇರುವಾಗ ಇಂಗ್ಲಿಷ್ ಅನುವಾದವಾಗುವುದು ದೂರದ ಮಾತು. ಇನ್ನೂ ಕೆಲವರು ಇಂತಹ ಒಂದು ವೈಜ್ಞಾನಿಕ ಪ್ರಾಚೀನ ಸಾಹಿತ್ಯ ಕನ್ನಡದಲ್ಲಿದೆ ಎಂಬುದು ನಮಗೆ ಗೊತ್ತಿರಲಿಲ್ಲ, ಮೊದಲ ಬಾರಿಗೆ ಇಲ್ಲಿ ಓದುತ್ತಿದ್ದೇವೆ ಎಂದು ಸಂತಸವನ್ನು ಹಂಚಿಕೊಂಡರು.

ಇನ್ನೂ ಆಶ್ಚರ್ಯವೆಂದರೆ, ಕೆಲವು ಸ್ವಾಮೀಜಿಯವರು ಈ ಕೃತಿಯು ಎಲ್ಲಿ ದೊರೆಯುತ್ತದೆ ಎಂಬುದರ ಮಾಹಿತಿ ಕೇಳಿದರು. ಡಾ. ರಾಮಕೃಷ್ಣ ಮರಾಠೆ, ಮೃತ್ಯುಂಜಯಸ್ವಾಮಿಗಳು ಗಂದಿಗವಾಡ, ರಾಯನಗೌಡ ಪಾಟೀಲ, ಡಾ. ಎ.ಬಿ.ಘಾಟಗೆ ಮೊದಲಾದ ಕೆಲವು ಹಿರಿಯರು ಇದಕ್ಕೆ ಸಂಪೂರ್ಣ ವ್ಯಾಖ್ಯಾನ ಬರೆದು, ಪ್ರತ್ಯೇಕ ಪುಸ್ತಕ ರೂಪದಲ್ಲಿ ಪ್ರಕಟಿಸಿ ಎಂದು ಸಲಹೆ ನೀಡಿದರು. ನನಗಂತೂ ಇಷ್ಟು ದಿನ ಚಿಂತನೆ ಬರೆದದ್ದು ಸಾರ್ಥಕವೆನಿಸಿತು. ನಾಡಿನಾದ್ಯಂತ ಈ ಚಿಂತನೆಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡುತ್ತಿರುವ ಶ್ರೀ ಶಂಕರ ಗುಡಸ ಅವರಿಗೆ ಶರಣುಗಳು. ]

ಷಟ್ ಚಕ್ರಗಳು

ಷಟ್ ಚಕ್ರಗಳಿಗೆ ನಾಮ ರೂಪ ಕ್ರಿಯ ವಿವರಿಸುತ್ತಿದ್ದೇವೆ. ಮೂಲಾಧಾರ, ಸ್ವಾದಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ- ಈ ಆರು ಚಕ್ರಗಳು ಬೆನ್ನೆಲಬುಗಳನ್ನು, ಕುದುರು ಎಲುಬುಗಳನ್ನು ಕೂಡಿಕೊಂಡು ಇರುವ ದಿಕ್ಕಿನಲ್ಲಿ ಶಿಶ್ನ ಇರುವುದು. ಶಿಶ್ನಕ್ಕೆ ಗುದಸ್ಥಾನಕ್ಕೆ ನಡುಮಧ್ಯೆ ನೆಲಚದರವಾಗಿರುವದು. ಅಲ್ಲಿ ಒಂದು ಪದ್ಮಾಕಾರ ಇರುವದು. ಅದಕ್ಕೆ ನಡುಮಧ್ಯೆ ತ್ರಿಕೋಣ ರೂಪದಿಂದ ಇರುವದು. ಅದು ಆಧಾರ ಚಕ್ರ ನಾಲ್ಕುದಳ ಪದ್ಮಾಕಾರ ಇರುವದು. ಅದಕ್ಕೆ ಅಕ್ಷರಗಳು, ವ, ಶ, ಷ, ಸ, ಈ ಚಕ್ರದ ವರ್ಣ ಅರಿಶಿನ, ಭೂಮಿಮುದ್ರೆ, ಇದಕ್ಕೆ ಆದಿದೈವ ವಿಘ್ನೇಶ್ವರ, ಈ ಚಕ್ರಕ್ಕೆ ಎರಡು ಅಂಗುಲದ ಮೇಲೆ ಸ್ವಾಧಿಷ್ಠಾನ ಚಕ್ರ, ಆರುದಳ ಪದ್ಮಾಕಾರ ಇರುವದು. ಅದಕ್ಕೆ ಅಕ್ಷರಗಳು ಬ-ಭ-ಮ-ಯ-ರ-ಲ. ಈ ಚಕ್ರಗಳ ವರ್ಣ ಶ್ವೇತ, ಪಕ್ಷಿ ಮುದ್ರೆ, ಇದಕ್ಕೆ ಆದಿದೈವ ಬ್ರಹ್ಮ, ಇದಕ್ಕೆ ಎಂಟು ಅಂಗುಲದ ಮೇಲೆ ಮಣಿಪೂರಕ ಚಕ್ರ, ಇದು ಕೋಳಿತತ್ತಿಯೋಪಾದಿಯಲ್ಲಿರುವದು. ಇದರ ಮೇಲೆ ಎಪ್ಪತ್ತೆರಡು ಸಾವಿರ ನಾಡಿಗಳು ಇರುವವು. ಆ ಚಕ್ರ ಹತ್ತು ದಳ ಪದ್ಮಾಕಾರವಿರುವದು.

ಅದಕ್ಕೆ ಅಕ್ಷರಗಳು ಡ-ಢ-ಣ-ತ-ಥ-ದ-ಧ-ನ-ಪ-ಫ. ಈ ಚಕ್ರದ ವರ್ಣ ರಕ್ತಕಾಂತಿಯಲ್ಲಿರುವದು. ಪೀಠಮುದ್ರೆ. ಇದಕ್ಕೆ ಆದಿ ದೈವತ ವಿಷ್ಣು. ಇನ್ನು ಅನಾಹತ ಚಕ್ರ ಹೃದಯ ಕಮಲದಲ್ಲಿ ದ್ವಾದಶ ದಳದೋಪಾದಿಯಲ್ಲಿ ಇರುವದು. ಇದಕ್ಕೆ ಅಕ್ಷರಗಳು ಕ-ಖ-ಗ-ಘ-ಜ-ಚ-ಛ-ಜ–ಇ-ಟ-ಠ ಈ ಚಕ್ರದಳಗಳ ವರ್ಣ ಮಾಂಜಿಷ್ಟ ವರ್ಣ. ಲಿಂಗಮುದ್ರೆ. ಇದಕ್ಕೆ ಆದಿದೈವತ ರುದ್ರ, ಇದು ವಾಯುಚಕ್ರ. ಇದರ ಮೇಲೆ ವಿಶುದ್ಧಿ ಚಕ್ರ ಕೊರಳ ಗುಂಡಿಗೆಯಲ್ಲಿರುವದು. ೧೬ ದಳದ ಪದ್ಮಾಕಾರವಾಗಿರುವದು. ಅಕ್ಷರಗಳು ಅಕಾರದಿಂದ ವಿಸರ್ಗದವರೆಗೆ ೧೬. ಕಪೋತವರ್ಣ, ಮತ್ಸ್ಯಮುದ್ರೆ – ಇದಕ್ಕೆ ಆದಿದೈವತ ಈಶ್ವರ. ಇನ್ನು ಆಜ್ಞಾಚಕ್ರ ಹತ್ತು ಅಂಗುಲದ ಮೇಲೆ ಅಗ್ನಿ-ಭ್ರೂಯುಗ ಮಧ್ಯದಲ್ಲಿರುವದು. ಎರಡುದಳ ಪದ್ಮಾಕಾರವಾಗಿಹುದು. ಅದಕ್ಕೆ ಅಕ್ಷರಗಳು ಹಂ ಕಂ. ಈ ಚಕ್ರದ ವರ್ಣ ಮಾಣಿಕ್ಯ ಕಾಂತಿಯೋಪಾದಿಯಲ್ಲಿರುವುದು. ಇದು ಪ್ರಕಾಶಮುದ್ರೆ, ಇದಕ್ಕೆ ಆದಿದೈವತಾ ಸದಾಶಿವ.

ಮಂಡಲತ್ರಯ

ಇನ್ನು ಮಂಡಲಗಳು ಮೂರಕ್ಕೆ ವಿವರವು. ಸೂರ್ಯಮಂಡಲ, ಚಂದ್ರಮಂಡಲ, ಅಗ್ನಿಮಂಡಲ – ಇವು ಮಂಡಲತ್ರಯಗಳು. ಆಗಿ ಮಂಡಲಕ್ಕೆ ವಿವರ: ನೆಲ ಚದರವಾಗಿರುವದು. ನಡುವೆ ತ್ರಿಕೋಣ ಭೂಮಿ ಉದಕವನ್ನು ಕೂಡಿದ ದಿಕ್ಕಿನಲ್ಲಿ ನಾಲ್ಕುದಳ ಪದ್ಮಾಕಾರದಿಂದ ಇರುವದು. ಅದರ ಮೇಲೆ ಪಂಚಾಕ್ಷರಿ ಉಂಟು. ಓಂ, ಹಾಂ, ಕ್ರೀಂ, ವಾಂ, ಸಾಂ ಇವು ಉಂಟು. ಇನ್ನು ಸೂರ್ಯಮಂಡಲಕ್ಕೆ ವಿವರ: ಎಂಟುದಳ ಪದ್ಮಾಕಾರವಾಗಿರುವದು, ಇದು ಬಾಳೆಮೊಗ್ಗೆಯೋಪಾದಿ ಇರುವದು. ಅಧೋಮುಖವಾಗಿರುವುದು. ಇದಕ್ಕೆ ಅಕ್ಷರಗಳು ಯ-ರ-ಲ-ವ-ಶ-ಷ-ಸ-ಹ. ಇದು ಬಂಗಾರ ಬಣ್ಣದೋಪಾದಿಯಲ್ಲಿರುವದು. ಇದರ ಮಧ್ಯೆ ಮನೋನ್ಮನಿ ಶಿವ ಶಕ್ತಿ ವಾಸವಾಗಿರುವದು. ಇನ್ನು ಚಂದ್ರಮಂಡಲಕ್ಕೆ ವಿವರ: ರವಿ, ಚಂದ್ರ ಅಗ್ನಿ ಪ್ರಭೆಗಳು ಹುಟ್ಟಿ, ಶಿರಸ್ಸಿನ ನಡುವೆ ಇರುವದು. ಅದು ಅಮೃತಕಲಶ ಅಗ್ನಿ ಮಂಡಲದ ಮೇಲೆ ಸಂತತೋದ್ಧಾರವಾಗಿ ಅಮೃತ ಸುರಿವುತ್ತಿರುವದು.

ದಶನಾಡಿಗಳು

ಈ ಶರೀರದಲ್ಲಿ ೭೨ ಸಾವಿರ ನಾಡಿಗಳುಂಟು. ಅವುಗಳಲ್ಲಿ ಈಡಾ, ಪಿಂಗಳ, ಸುಷುಮ್ನ, ಗಾಂಧಾರಿ, ಹಸ್ತಜಿಹ್ವೆ., ಪೂಷಾ, ಪಯಸ್ವಿನಿ, ಲಕುಹ, ಅಲಂಬು, ಶಂಕಿನಿ – ದಶಪ್ರಮುಖ ನಾಡಿಗಳು. ಇವುಗಳಲ್ಲಿ ಪ್ರಸಿದ್ಧವಾದಂಥ ಸುಷುಮ್ನ ನಾಡಿಯು ಶರೀರದಲ್ಲಿರುವಂಥ ವಿವರವನ್ನು ಹೇಳುತ್ತಿದ್ದೇವೆ.

ಈ ಶರೀರದಲ್ಲಿ ಮುಂದೆ ಹೇಳಿದ ಕಮಲಗಳು ಗುದಸ್ಥಾನದಿಂದ ಕಪಾಲ ಪರಿಯಂತರಕ್ಕೆ ವೀಣೆ, ದಂಡಿಗೆ, ಕುಂಬಳಕಾಯಿ ಪೋಣಿಸಿದ ಹಾಗೆ ಒಂದರಮೇಲೊಂದು ಅಡಕಲ ಗಡಿಗೆಯೋಪಾದಿಯ ಲ್ಲಿರುವವು. ಈ ಪ್ರಕಾರ ಎಲ್ಲಾ ದಿಕ್ಕಿನಿಂದ ಹತ್ತಿಕೊಂಡು ಗುದಸ್ಥಾನ ದಿಂದ ಕಪಾಲ ಪರಿಯಂತರಕ್ಕೂ ವೀಣೆ, ದಂಡಿಗೆಯೋಪಾದಿಯಲ್ಲಿ ಬೆನ್ನು ಹಿಂದೆ ಎಲುಬಿಗೆ ಹತ್ತಿಕೊಂಡು ಇರುವವು. ಅದರ ನಡುವೆ ವೀಣೆ ಉಕ್ಕಿನ ತಂತಿಯೋಪಾದಿ ಸುಷಮ್ಮ ನಾಡಿ ಬೆನ್ನು ಎಲುಬಿನ ಉದ್ದವಾಗಿರುವದು. ಇದಕ್ಕೆ ಬಲಗಡೆ ಪಿಂಗಳ ನಾಡಿ ಇರುವದು. ಈ ಪಿಂಗಳ ನಾಡಿಗೆ ಮೂಲಾಧಾರದಲ್ಲಿಂದ ಕಪಾಲ ಪರಿಯಂತರಕ್ಕೆ ಬಂದು ತಾಕಿ ಅಲ್ಲಿರುವಂಥ ಸೂರ್ಯಮಂಡಲವನ್ನು ವ್ಯಾಪಿಸಿ ಕೊಂಡು ಅಲ್ಲಿಂದ ತಿರುಗಿ, ಬಲಮೂಗಿನಲ್ಲಿ ಉಸಿರು ಹೊರಟುಹೋಗುವದು. ಸುಷುಮ್ಮ ನಾಡಿಗೆ ಎಡಗಡೆಯಿಂದ ಈಡಾನಾಡಿ ಮೂಲಾಧಾರದಿಂದ ಕಪಾಲ ಪರಿಯಂತರಕ್ಕೂ ಬಂದು ತಾಕಿ ಅಲ್ಲಿರುವ ಚಂದ್ರಮಂಡಲವನ್ನೇ ವ್ಯಾಪಿಸಿಕೊಂಡು ಅಲ್ಲಿಂದ ತಿರುಗಿ ಎಡಮೂಗಿನಿಂದ ಉಸಿರು ಹೊರಟುಹೋಗುವದು ಇಲ್ಲಿ ಯೋಗಮಾರ್ಗ ವಿಚಾರ ಪ್ರಯುಕ್ತವಾಗಿ ತಿಳಿಸುತ್ತಲಿದ್ದೇವೆ. ಮುಂದೆ ಸುಷುಮ್ಮ ನಾಡಿಗೆ ಮೂಲಾಧಾರದಿಂದ ಕಪಾಲ ಪರಿಯಂತರಕ್ಕೂ ಬಂದು ಇದ್ದಿಲ್ಲವೆಂದು ಹೇಳಿದ್ದೇ ವಷ್ಟೆ. ಈ ಪ್ರಕಾರ ಅಸಹ್ಯವಳಿದ ಬೆಳ್ಳಿಯೋಪಾದಿ, ಕಾಸಿದ ಬಂಗಾರದೋಪಾದಿ ಕೋಟಿ ಸೂರ್ಯ ಪ್ರಕಾಶವಾಗಿ ಹೊಳೆಯುತ್ತ ಇರುವದು. ಇದೇ ಬ್ರಹ್ಮನಾಡಿ, ಇದೇ ಮೂಲವಿದ್ಯಾ; ಇದೇ ಸಕಲ ಲೋಕಂಗಳಿಗೆ ಆಧಾರವಾಗಿ ತ್ರಿಪೂರ್ವ ಸ್ವರೂಪವನ್ನು ಹೊಂದಿರುವದು. ಈ ಸುಷುಮ್ನ ನಾಡಿ ಅಗ್ನಿ ಮಂಡಲದವರೆಗೆ ಬಂದಿರುವುದು. ಅಲ್ಲಿ ಸೂಕ್ಷ್ಮವಾದ ರಂಧ್ರ ಇರುವದು. ಅದೇ ದಶಮ ರಂಧ್ರ.

ಈ ಪ್ರಕಾರ ಬ್ರಹ್ಮನಾಡಿಯಲ್ಲಿ ಬ್ರಹ್ಮಾಂಡವೆಲ್ಲ ವ್ಯಾಪಿಸಿಕೊಂಡು ಇದ್ದಿತೆಂದು ವೇದಗಳೆಲ್ಲ ಹೇಳುತ್ತ ಇರುವದನ್ನು ವಿವರಿಸುತ್ತ ಇದ್ದೇವೆ. ಸೂರ್ಯನು, ಚಂದ್ರನು, ಅಗ್ನಿಹೋತ್ರನು, ಪರಮೇಶ್ವರನು, ಪಂಚ ಮಹಾಭೂತಂಗಳು, ಚತುರ್ದಶ ಭುವನಂಗಳು, ಕಾಶಿ ಮೊದಲ್ಗೊಂಡು ಪುಣ್ಯ ಕ್ಷೇತ್ರಗಳು, ಚತುರ್ವೇದಗಳು, ಸಪ್ತ ಸಮುದ್ರಗಳು, ಮೀಮಾಂಸಾದಿ ಶಾಸ್ತ್ರಗಳು, ಚೌಷಷ್ಠಿ ಕಲೆಗಳು, ಪಂಚ ಸದ್ವರ್ಣಗಳು, ಷೋಡಶ ಸ್ವರಗಳು, ಸತ್ವ ರಜಸ್ತಮೋಗುಣ ತ್ರಿವಿಧಂಗಳು, ಮೂಲ ಪ್ರಕೃತಿ, ಚತುರ್ವಿಂಶತಿ ತತ್ತ್ವಂಗಳು, ದಶಪ್ರಾಣ ವಾಯುಗಳು, ಜೀವನ ಈ ಸುಷುಮ್ಮ ನಾಡಿ ಗ್ರಂಥದಲ್ಲಿ ಹೇಳಲ್ಪಟ್ಟಿವೆ. ಇದೇ ಕುಂಡಲಿ ಶಕ್ತಿ. ಇದು ಸರ್ವತೋಮುಖವಾಗಿರುವದು.

ಈ ಬ್ರಹ್ಮರಂಧ್ರಾ ಸ್ಥಳವು ವಹಾ ಗೋಪ್ಯವಾದುದು. ಇದನ್ನು ವಿವರಿಸುತ್ತಿದ್ದೇವೆ. ಯಮುನಾ ನಾಡಿ, ಈಡಾನಾಡಿ, ಚಂದ್ರನಾಡಿ ಈ ಮೂರು ಹೆಸರುಗಳು ಎಡಮೂಗಿಗೆ ಒಪ್ಪುವಂಥವು. ಗಂಗಾನಾಡಿ, ಪಿಂಗಳನಾಡಿ, ಸೂರ್ಯನಾಡಿ ಈ ಮೂರು ಹೆಸರು ಬಲಮೂಗಿನ ಉಸಿರಿಗೆ ಒಪ್ಪುವಂಥಹವು. ಸರಸ್ವತಿ ನಾಡಿ, ಸುಷುಮ್ಮ ನಾಡಿ, ಅಗ್ನಿನಾಡಿ ಈ ಮೂರು ಹೆಸರು ಬ್ರಹ್ಮನಾಡಿಗೆ ಒಪ್ಪುವಂತಹವು. ಈ ಮೂರು ನಾಡಿಗಳು ನಾಸಿಕಾಗ್ರದಲ್ಲಿ ಕೂಡಿಕೊಂಡಿರುವವು. ಕಿವಿ ರಂಧ್ರಗಳು ಎರಡು ಅಲ್ಲೇ ಕೂಡಿ, ಮೂಗಿನ ರಂಧ್ರ ಗಳು ಸಹ ಎರಡು ಅಲ್ಲಿಯೇ ಕೂಡುವವು. ಆದಕಾರಣ ಸಕಲ ಶಾಸ್ತ್ರಗಳಲ್ಲಿ ಕುಂಡಲಿ ಸ್ಥಾನ, ದ್ವಾದಶಾಂತ, ಚತುಷಷ್ಠಿ, ತ್ರಿಕೂಟ, ತ್ರಿವೇಣಿ ಸಂಗಮ, ಮುಕ್ತಿದ್ವಾರ, ನಾದಬಿಂದು ಕಳಾವಾಸ, ಪೂರ್ಣ ಸ್ಮಶಾನ್ಯ ಶೃಂಗಾಟ ಮಂಡಲ, ದ್ವಿದಳ ಚಕ್ರದಲ್ಲಿ ಇರುವಂಥ ಹಂಸರೂಪ ಪರಮಾತ್ಮನಿದ್ದಾನೆಷ್ಟೆ. ಹಂಸಸ್ಥಲವೆಂದು ಶೃಂಗಾಟವೆಂದು ಸಕಲವಾದ ವೇದ ಶಾಸ್ತ್ರಂಗಳಲ್ಲಿ ಹೇಳಲ್ಪಟ್ಟಿದೆ. ಇಷ್ಟು ಹೆಸರುಗಳು ಉಂಟಾದ ಕಾರಣ ಕಣ್ಣಿನ ಬೊಂಬೆಗಳ ನಡುವೆ ಮುಂಚೆ ಹೇಳಿದ ಬ್ರಹ್ಮರಂಧ್ರ ಇದ್ದೀತು.

ಈ ಬ್ರಹ್ಮರಂಧ್ರದಲ್ಲಿ ಹಂಸರೂಪದಿಂದ ಪರಬ್ರಹ್ಮ ಇದ್ದಾನೆ. ಆ ಹಂಸವು ತನ್ನ ನಂಬಿದಂಥವರ ಸಂಸಾರ ಹರಿಸಿ ಮೋಕ್ಷ ಕೊಡವುದು. ಕಾರಣ ಹಂಸ ಎಂಬುವ ನಾಮಾಂಕಿತವಾಯಿತು. ಶರೀರದಲ್ಲಿ ಪರಮಾತ್ಮನಿರುವಂಥ ಸ್ಥಳಗಳು. ಅವು ಯಾವುವೆಂದರೆ – ಮುಂಚೆ ಹೇಳಿದ ಸುಷುಮ್ಮ ನಾಡಿಯು ಹೊಕ್ಕಳದ ಬದಿಯಲ್ಲಿ ಬಾಳೆಯ ಮೊಗ್ಗೆಯೋಪಾದಿಯಾಗಿ, ಅಧೋಮುಖವಾಗಿ ಒಂದು ಕಮಲವಿದ್ದಿತು. ಕಮಲ ಮಧ್ಯದಲ್ಲಿ ಜ್ಯೋತಿರೂಪದಿಂದ ಇದ್ದೀತು; ಆ ಕಮಲ ಮಧ್ಯದಲ್ಲಿ ಸೂರ್ಯಬಿಂಬದ ಹಾಗೆ ಇದ್ದೀತು. ಭ್ರೂಯುಗ ಮಧ್ಯದಲ್ಲಿ ಎರಡುದಳದ ಪದ್ಮಾಕಾರದಿಂದ ಇದ್ದೀತು. ಆ ಕಮಲ ಮಧ್ಯದಲ್ಲಿ ಹಂಸರೂಪದಿಂದ ಇದ್ದೀತು. ಶಿರಸ್ಸಿನ ನಡುವೆ ಸಾವಿರ ದಳಗಳ ಪದ್ಮಾಕಾರದಿಂದ ಇದ್ದೀತು. ಆ ಕಮಲ ಮಧ್ಯದಲ್ಲಿ ಬ್ರಹ್ಮರೂಪದಿಂದ ಇದ್ದೀತು. ಇಂಥ ಪರಶಿವನ ಸ್ವರೂಪವಾದಂಥ ಪರಬ್ರಹ್ಮ ಧ್ಯಾನದಿಂದ ದರ್ಶನವಂ ಮಾಡಿದರೆ ಸಂಸಾರ ಹರಿದು ಮುಕ್ತನಾಗುವನು. ಆ ದರ್ಶನ ಮಾಡುವಂಥ ವಿಧಾನ ವಿವರಿಸುತ್ತೇವೆ.

ಮುಕ್ತಿಮಾರ್ಗ ನಿರೂಪಣ

ಯೋಗೀಶ್ವರರಿಗೆ ಬ್ರಹ್ಮದರ್ಶನ ಮಾಡುವ ಉದ್ದೇಶಕ್ಕೆ ನಾಲ್ಕು ಯೋಗಗಳು, ನಾಲ್ಕು ಮುದ್ರೆಗಳುಂಟು. ಅವು ಯಾವುವೆಂದರೆ ಧ್ಯಾನ ಮುದ್ರೆ, ಷಣ್ಮುಖಮುದ್ರೆ, ಶಾಂಭವಿ ಮುದ್ರೆ, ಖೇಚರಿ ಮುದ್ರೆ – ಇವು ನಾಲ್ಕು ಮುದ್ರೆಗಳು, ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ – ಈ ನಾಲ್ಕು ಯೋಗಗಳು.
ಮಂತ್ರಯೋಗ ಸಾಧಿಸುವ ಕ್ರಮವು
ಪಾದದ್ವಯದಿಂದ ಕೂಡಿದ ಮನುಷ್ಯ ಕಿಂಚಿತ್ ತತ್ತ್ವಜ್ಞಾನ ಹುಟ್ಟಿ ಶುಚಿಯಾಗಿ, ಒಂದು ಸ್ಥಳದಲ್ಲಿ ಪದ್ಮಾಸನಸ್ಥನಾಗಿ ಕುಳಿತು ಕಣ್ಣಿನ ಎರಡೂ ನೋಟಗಳನ್ನೂ ನಾಸಿಕಾಗ್ರದಲ್ಲಿಟ್ಟು ಕಣ್ಣುಗಳ ಮುಚ್ಚಿಕೊಂಡು ತನಗೆ ಹಿತವಾದ ದೇವರನ್ನು ಧ್ಯಾನ ಮಾಡುತ್ತ ಪಂಚಾಕ್ಷರಿ ಮಂತ್ರಗಳು ಮೊದಲಾದ ಮಂತ್ರಗಳ ಜಪವ ಮಾಡುವದು, ಆ ಫಲ ಶಿವಾರ್ಪಣ ಮಾಡುವುದೇ ಮಂತ್ರಯೋಗ, ಅದೇ ಧ್ಯಾನ ಮುದ್ರೆ, ಅಧಮನು, ಶುದ್ಧನು, ಉತ್ತಮನು – ಇವರು ಈ ಯೋಗಕ್ಕೆ ಅಧಿಕಾರಿಗಳು. ಇನ್ನು

ಲಯಯೋಗ ಸಾಧಿಸುವ ಕ್ರಮವು

ಲಯಯೋಗ ಸಾಧಿಸುವ ಕ್ರಮವು. ಇದಕ್ಕೆ ವಿವರಣವು: ಕೆಳಗೆ ನಾಸಿಕಾಗ್ರದಲ್ಲಿ ನೋಡುತ್ತ ಕೆಳಗೆ ಇರುವದನ್ನು ಶೋಧಿಸುವದು. ತರ್ಜನೆಯ ಎರಡು ಬೆರಳಿಂದ ಎರಡು ಕಿವಿ ಮುಚ್ಚಿದರೆ ಅಲ್ಲಿ ಮಹಾ ಧ್ವನಿ ಕೇಳುವದು. ಆ ಧ್ವನಿ ಕೇಳ ಕೇಳುತ್ತ ಮುಂದೆ ಗೆಜ್ಜೆ ಶಬ್ದ ಕೇಳು ವುದು. ಆ ಮೇಲೆ ಹಿರೇ ಗೆಜ್ಜೆಗಳ ಧ್ವನಿ ಕೇಳುವುದು, ಮತ್ತೆ ಕೇಳುತ್ತ ಕೇಳುತ್ತ ಘಂಟೆ, ಶಂಖ, ವೇಣು, ತಾಳ, ಪಿಳ್ಳಂಗೋವಿ, ಮದ್ದಳೆ, ಭೇರಿ, ಮೇಘ – ಇವು ಮೊದಲಾದ ದಶವಿಧ ನಾದಗಳು ಕೇಳುವವು. ಆದರಲ್ಲಿ ಒಂಬತ್ತು ನಾದಗಳನ್ನು ಪರಿತ್ಯಾಗ ಮಾಡಿ ಹತ್ತನೇ ನಾದ ಆಭ್ಯಾಸ ಮಾಡಿಕೊಳ್ಳುತ್ತ ಅಲ್ಲಿ ಮನಸ್ಸು ಲೀನವಾಗುವುದು. ಇದೇ ಮೋಕ್ಷಕ್ಕೆ ದಾರಿ. ಈ ನಾದವೇ ಪ್ರಣವನಾದ. ಅಕಾರ, ಉಕಾರ, ಮಕಾರಗಳು ಇವು ಮೂರು ಕಲಿತು ಪ್ರಣವ ರೂಪವಾಗಿ ಅನಾಹತ ಚಕ್ರದಲ್ಲಿ ಹುಟ್ಟಿ, ಅಲ್ಲಿಂದ ಪ್ರಜ್ವಲವಾಗಿ ಕಮಲದಲ್ಲಿ ಮಹಾಧ್ವನಿ ಆಗುತ್ತಿರುವುದು. ಇದಕ್ಕೆ ಸಂದೇಹವಿಲ್ಲ. ಇದೇ ಖೇಚರಿ ಮುದ್ರೆ. ಇದೇ ಲಯಯೋಗ, ಮಂತ್ರಯೋಗ ಗಳಿಗಿಂತ ಉತ್ತಮ. ಶುದ್ಧ ಯೋಗಗಳಿಗಿಂತ ಮಧ್ಯಮ.

ಹಠಯೋಗ ಸಾಧಿಸುವ ಕ್ರಮವು

ಎಡಗಾಲು, ಹಿಮ್ಮಡ, ಎರಡು ಪಕ್ಕೆಗಳ ನಡುವೆ ಇಟ್ಟು, ಬಲ ಹಿಮ್ಮಡದ ಹೊಕ್ಕುಳದ ಬದಿಯಲ್ಲಿಟ್ಟು ಗಟ್ಟಿಯಾಗಿ ಎದೆಯ ಮೇಲ ಕೈ ಹೆಬ್ಬೆರಳಲ್ಲಿ ಎರಡು ಕಣ್ಣು ಮುಚ್ಚಿ ವಾಯವೆಂಬ ರೇಚಕ, ಪೂರಕ, ಕುಂಭಕ, ಉಪಾದಿ ಮೂಲಕ ಜಾಲಂಧರವೆಂಬುವದು ಮೂರು ಗ್ರಂಥಗಳನ್ನು ಶೋಧಿಸಿ, ಸುಷುಮ್ಮಾ ನಾಡಿಯ ಸಂಗಡ ಸಹಸ್ರಾರು ಪರ್ಯಂತರ ತಂದಿಟ್ಟು, ಅಲ್ಲಿದ್ದ ಜ್ಯೋತಿ ಸ್ವರೂಪದಲ್ಲಿ, ಜೀವನವನ್ನು ಇಡುವುದೇ ಹಠಯೋಗ, ಇದೇ ಷಣ್ಮುಖ, ಮದ್ರೆ, ಇದೇ ಕೇವಲ ಕುಂಭಕ, ಇದೇ ಸಿದ್ಧಾಸನ. ಈ ಯೋಗ ಸಾಧಿಸುವವರು ರಾಜಯೋಗಿಗಿಂತ ಮಧ್ಯಮ. ಇದಕ್ಕೆ ಸಂದೇಹವಿಲ್ಲ.

ರಾಜಯೋಗ ಸಾಧಿಸುವ ಕ್ರಮವು

ಸಕಲ ಯೋಗಗಳಿಗೆ ಅರಸಾದದ್ದು. ಅದಕ್ಕೆ ರಾಜಯೋಗವೆಂಬ ಹೆಸರುಂಟಾಯಿತು. ಈ ರಾಜಯೋಗಕ್ಕೆ ಏಳು ಹೆಸರುಗಳುಂಟು. ಅವು ಯಾವುದೆಂದರೆ – ಉನ್ಮನಿ, ಮನೋನ್ಮನಿ, ಸಹಜ, ಅಮನಸ್ಕ, ಜಡ, ನಿದ್ರೆ – ಈ ಏಳು ಹೆಸರುಗಳು. ರಾಜಯೋಗ ಮೂರು ವಿಧಗಳು ಸಾಂಖ್ಯ, ತಾರಕ, ಅಮನಸ್ಕ – ಈ ಮೂರು ವಿಧಗಳು. ಇದರಲ್ಲಿ ತಾರಕಯೋಗ ಪೂರ್ಣವಾದದ್ದು. ಅಮನಸ್ಕ ಅಪರಯೋಗ, ಇವಕ್ಕೆ ಪೂರ್ವ ಅಪರಗಳೆಂಬುವ ಹೆಸರುಂಟಾಯಿತು. ತಾರಕ ಅಮನಸ್ಕಗಳಲ್ಲಿ ಕಿಂಚಿತ್ತು ಭೇದವಿದೆ. ವಿಶೇಷ ಕಾಣಲಿಕ್ಕೆ ಇಲ್ಲವು. ಈ ಯೋಗ ಸಾಧಿಸುವ ಕ್ರಮವನ್ನು ಇಲ್ಲಿ ವಿವರಿಸುವೆವು.

ಈ ಶರೀರದಲ್ಲಿ ಮೊದಲು ಹೇಳಲ್ಪಟ್ಟ ಪಂಚವಿಂಶತಿ ತತ್ತ್ವಗಳನ್ನು ಕ್ರಮವಾಗಿ ವಿಂಗಡಿಸಿ ಈ ತತ್ತ್ವಗಳಿಗೆ ಪ್ರಧಾನ ತತ್ತ್ವವಾದ ಪರಬ್ರಹ್ಮವು ಸೂರ್ಯ, ಚಂದ್ರ, ಅಗ್ನಿ ಮಂಡಲಗಳನ್ನು ವ್ಯಾಪಿಸಿ, ನೇತ್ರರೂಪವಾಗಿ ಇರುವುದೆಂದು ತಿಳಿದು ಪರಬ್ರಹ್ಮ ಸ್ವರೂಪ ಸದಾಶಿವನ ಭಕ್ತಿ ಹುಟ್ಟುವುದೇ ಸಾಂಖ್ಯವೆನಿಸುವುದು. ಇದೇ ಶಿವಭಕ್ತರಿಗೆ ಮುಖ್ಯವಾದದ್ದು. ಇನ್ನು ತಾರಕಯೋಗವೆಂದರೆ, ಈ ಶರೀರದ ಒಳಹೊರಗೆ ಪರಬ್ರಹ್ಮನು ಎಲ್ಲರಲ್ಲಿ ಇರುವನು ಎಂದು ತಿಳಿಯುವುದು ತಾರಕಯೋಗ,

ತಾರಕ ಅಮನಸ್ಕಗಳ ವಿವರ:

ಶುಚಿಯಾದ ಸ್ಥಳದಲ್ಲಿ ಕುಳಿತು ಆಚಾರದ ಕಟ್ಟು ಕಟ್ಟಿಕೊಂಡು ಎರಡು ಕಣ್ಣಿನ ನೋಟಗಳು ಹೊರಗೆ ನಾಸಿಕಾಗ್ರದಲ್ಲಿ ಕಣ್ಣು ಬೊಂಬೆಗಳ ನಡುಮಧ್ಯದಲ್ಲಿ ಇಟ್ಟು ದಿನಾಲು ಕ್ರಮವಾಗಿ ನೋಡುತ್ತ ನೋಡು ಈ ಚಂದ್ರಮಂಡಲ, ಇಂದ್ರ ಧನಸ್ಸು, ದೀವಿಗೆ, ಮಾಣಿಕ್ಯ, ಅಗ್ನಿ ರಭಸಗಳು, ಧೂಮಕಿಂಚಿತ್ಕಾರಗಳ ಹಾಗೆ ನಾನಾ ವಿಧಗಳು ಕಾಣುವವು. ಈ ಅಷ್ಟರೂಪಗಳು ನಷ್ಟವಾಗಿ ಮತ್ತು ಮತ್ತು ನೋಡುತ್ತ ನೋಡುತ್ತ ಬೆಳದಿಂಗಳು ಕಾಣುವುದು. ಆ ಬೆಳದಿಂಗಳದೊಳಗೆ ಒಂದು ಚಿನ್ಮಯ ರೂಪು ಕಾಣುವುದು. ಇದೇ ಬ್ರಹ್ಮವೆಂದು ಶಾಸ್ತ್ರ ಪ್ರಮಾಣ. ಇದೇ ತಾರಕಯೋಗ, ಇದೇ ಬಾಹ್ಯ ಖೇಚರಿ. ಇದೇ ಪೂರ್ವಯೋಗ, ಇನ್ನು ರಾಜಯೋಗದಿಂದ ಪರಮಾತ್ಮನ ದರ್ಶನ ಮಾಡಿಕೊಳ್ಳುವ ಉದ್ದೇಶಕ್ಕೆ ಶಾಂಭವಿ ಮುದ್ರೆ. ಇದು ಪಾರ್ವತಿಗೆ ಪ್ರಿಯವಾದ ಮುದ್ರೆ. ಆದಕಾರಣ ಶಾಂಭವಿ ಮುದ್ರೆಯಾಯಿತು. ಇದು ಧ್ಯಾನ ಮಾಡಲಾಗಿ ಹುಟ್ಟಿದ ಚಿದಗ್ನಿಯಿಂದ ಪುರುಷರು ಅನೇಕ ಕೋಟಿ ಜನ್ಮಂಗಳಲ್ಲಿ ಮಾಡಿದ ಬ್ರಹ್ಮಹತ್ಯಾದಿ ಪಾಪಗಳನ್ನು ದಹಿಸುವ ಕಾರಣ ಶಾಂಭವಿ ಮುದ್ರೆ ಸಕಲ ಮುದ್ರೆಗಳಲ್ಲಿ ಪ್ರಸಿದ್ಧವಾಯಿತು. ಈ ಶಾಂಭವಿ ಮುದ್ರೆಯ ಲಕ್ಷಣವು ಮೂರುವಿಧ.

ಪೂರ್ಣ ದೃಷ್ಟಿಯನ್ನು ಶುಚಿಯಾದ ಸ್ಥಳದಲ್ಲಿ ಕುಳಿತುಕೊಂಡು ಆಚಾರದ ಕಟ್ಟನ್ನು ಕಟ್ಟಿಕೊಂಡು ಸದ್ಗುರುವಿನ ಸ್ಮರಣೆ ಮಾಡಿ ಮುಖವನ್ನು ಸ್ವಲ್ಪ ಕೆಳಗೆ ಇಟ್ಟು ಬಿಳಿಯ ಗುಡ್ಡಿಯು ಬಯಲಿಗೆ ಕಾಣುವಂತೆ ಸ್ಥಿರ ಮನಸ್ಸಿನಿಂದ ದಿನಾಲು ಅಭ್ಯಾಸ ಮಾಡಲು ಎರಡು ಘಳಿಗೆಯಾದರೂ ಆ ದೃಷ್ಟಿಗಳು ಸ್ಥಿರವಾಗಿ ನಿಂತಿರೆ, ಗಾಢಾಂಧಕಾರವು ತೋರುವುದು. ಆ ಕತ್ತಲ್ಲಲ್ಲಿ ನೋಡುತ್ತ ಹೋದರೆ ಮೊದಲು ಹೇಳಿದ ತಾರಕ ಚಿಹ್ನೆಗಳು ಕಾಣಬರುವವು. ಅವು ನಷ್ಟವಾದರೆ ಮುಂದೆ ಬೆಳದಿಂಗಳಲ್ಲಿ ಸಕಲ ಭೂತಗಳು ಕಾಣುವವು. ಅಲ್ಲಿ ಪರಮಾತ್ಮ ಸ್ವರೂಪ ಪರಬ್ರಹ್ಮವು ಕೋಟಿ ಸೂರ್ಯ ಪ್ರಕಾಶವಾಗಿ ತಾಲು ಮೂಲದಲ್ಲಿ ಕಲೆತು ದ್ವಾದಶಾಂತರದ ನಡುವೆ ಕಣ್ಣು ಬೊಂಬೆಯ ಮಧ್ಯದಲ್ಲಿ ಇರುವ ಪರಮಾತ್ಮನನ್ನು ಸದ್ಗುರುವು ಒಂದು ಅರೆಕ್ಷಣದಲ್ಲಿ ತೋರಿಸುವನು. ಇದಕ್ಕೆ ಸಂದೇಹವೇ ಇಲ್ಲ. ಅನೇಕ ವರ್ಷ ಪ್ರಯಾಸ ಪಟ್ಟರೂ, ಕಾಣಿಸದಂಥಾದ್ದು ಆಕ್ಷಣ ದಲ್ಲಿ ಕಾಣಿಸುವದೆಂತೆನೆ. ಶಾಸ್ತ್ರ ಓದಿದ ಜ್ಞಾನವು ಆತ್ಮದರ್ಶನದ ಮೇಲೆ ಫಲಿಸುವ ಕಾರಣ, ಗುರು ಸೇವೆ ಮಾಡಿದ ಕಾರಣ ಗುರುಕೃಪಾವಿಶೇಷದಿಂದಲೇ ಶೀಘ್ರವಾಗಿ ಪರಮಾತ್ಮ ದರ್ಶನವಾಗುವದು.

ಷಡಂಗಯೋಗ, ಅಷ್ಟಾಂಗಯೋಗ ಮಾರ್ಗದಿಂದಾಚರಿಸಿ, ಮನೋಲಯವಿಲ್ಲದಿದ್ದರೂ ಪರಮಾತ್ಮನು ಕಾಣಿಸುವ ಬಗೆಯೆಂದರೆ, ಗುರುರಾಯನು ಕೃಪಾಭರಿತನಾಗಿ ಆತ್ಮೋಪದೇಶ ಮಾಡುವಲ್ಲಿ ಕಿವಿಯ ಬದಿಯಲ್ಲಿರುವ ಕಣ್ಣು ಬೊಂಬೆಗಳ ಮಲಕಿನಲ್ಲಿ ಎರಡು ಜ್ಯೋತಿಗಳು ಕಾಣಿಸುವವು. ಆಗಲೇ ಮೋಕ್ಷವಾಯಿತೆಂದು ತಿಳಿಯಬಹುದು. ಇನ್ನು ಮನುಷ್ಯನ ಮರಣ ಕಾಲ ವಿಧಾನವೆಂತೆನೆ :

ಹಂಸ ಸ್ವರೂಪ ಬ್ರಹ್ಮಯಜ್ಞ ಮೊದಲಾದ ಸತ್ಕರ್ಮಗಳನೆಲ್ಲ ಶಿವಾರ್ಪಣ ಮಾಡಿದ ಪುಣ್ಯ ಪುರುಷ ಬಲಮೂಗಿನ ಪಿಂಗಳ ಮಾರ್ಗ ದಿಂದ ಹೊರಬಿದ್ದ ಜೀವವು ಬ್ರಹ್ಮಲೋಕವನ್ನು ಸೇರಿ ಬ್ರಹ್ಮನೊಡನೆ ಮುಕ್ತನಾಗುವನು. ಈ ಪ್ರಕಾರ ದೇವಮಾರ್ಗ, ಮುಕ್ತಿ ಮಾರ್ಗ, ಅರ್ಚಿರಾದಿ ಮಾರ್ಗದ ದಿವಸಗಳ ವಿವರ – ಉತ್ತರಾಯಣ, ಶುಕ್ಲಪಕ್ಷ, ಹಗಲು ಹುಣ್ಣಿಮೆ ಮೊದಲಾದ ದಿವಸಗಳು. ಇನ್ನು ಯೋಗಾದಿಗಳನ್ನು ಡಂಭಾರ್ಥವಾಗಿ ಫಲಾಸೆಯಿಂದ ಮಾಡಿದವರಿಗೆ ಎಡಮೂಗಿನ ಈಡಾನಾಡೀ ಮಾರ್ಗವಾಗಿ ಹೊರಬಿದ್ದ ಜೀವನು ಸ್ವರ್ಗ ನರಕಾದಿಗಳನನುಭವಿಸಿ ಮತ್ತೆ ಪುನರ್ಜನ್ಮ ಹೊಂದುವನು. ಇದಕ್ಕೆ ಪಿತೃಯಾನವೆಂಬುವರು. ಈ ಮಾರ್ಗದ ದಿವಸಗಳ ವಿವರ ದಕ್ಷಿಣಾಯನ ಕೃಷ್ಣಪಕ್ಷ ರಾತ್ರಿ ಅಮಾವಾಸ್ಯೆ – ಇವೇ ಪಿತೃಯಾನದ ದಿವಸಗಳು. ಇನ್ನು –

ಮಹಾದೇವರನ್ನೇ ಸಗುಣ ನಿರ್ಗುಣ ರೂಪಾರ್ಚನೆಯನ್ನು ವಿಶೇಷವಾದ ಭಕ್ತಿಯಿಂದಾಚರಿಸಿದ ಕಾರಣ ಆ ಮಹಿಮನು ಅಂತ್ಯಕಾಲದಲ್ಲಿ ಸುಷುಮ್ಮ ನಾಡೀ ಮಾರ್ಗವಾಗಿ ಹೊರಬಿದ್ದು ಬ್ರಹ್ಮರಂಧ್ರಂ ಗೊಂಡು ಅಜಾತ ಮರಣ ಪರಬ್ರಹ್ಮಾಕಾರಿಯಾಗುವನು.

(ಮುಂದುವರಿಯುವುದು……)

Share This Article
Leave a comment

Leave a Reply

Your email address will not be published. Required fields are marked *