ಮಾಟೊಳ್ಳಿಯಲ್ಲಿ ‘ಶಾಂತಬಸವ ನಿಲಯ’ದ ನಿಜಾಚರಣೆ ಗುರುಪ್ರವೇಶ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಸವದತ್ತಿ

ತಾಲೂಕಿನ ಮಾಟೊಳ್ಳಿ ಗ್ರಾಮದ ಶರಣೆ ಶ್ರೀದೇವಿ ಶರಣ ದೇವೇಂದ್ರಕುಮಾರ ಯತ್ತಿನಗುಡ್ಡ ದಂಪತಿ ನೂತನವಾಗಿ ನಿರ್ಮಿಸಿದ ‘ಶಾಂತಬಸವ ನಿಲಯ’ದ ಗುರುಪ್ರವೇಶ ಮತ್ತು ಅನುಭಾವಗೋಷ್ಠಿ ಸಮಾರಂಭ ಈಚೆಗೆ ಮಾಟೊಳ್ಳಿಯಲ್ಲಿ ಲಿಂಗಾಯತ ಧರ್ಮ ನಿಜಾಚರಣೆಯಂತೆ ನಡೆಯಿತು.

ಮೊದಲಿಗೆ ಶರಣರಾದ ಎನ್.ಎ. ಪ್ಯಾಟಿ ಬಿಇಓ ಬೈಲಹೊಂಗಲ ಹಾಗೂ ಶರಣ ರವೀಂದ್ರ ಬಳಿಗಾರ ಬಿಇಓ ರಾಮದುರ್ಗ ಅವರುಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

ನಂತರದಲ್ಲಿ ಕುಟುಂಬ ಸದಸ್ಯರು ಬಸವಣ್ಣನವರ ಭಾವಚಿತ್ರ ಹಿಡಿದುಕೊಂಡು, ವಚನ ಸಾಹಿತ್ಯವನ್ನು ತಲೆಯ ಮೇಲೆ ಹೊತ್ತುಕೊಂಡು 108 ಶರಣರ ನಾಮಾವಳಿ ಹೇಳುತ್ತಾ, ಹೊಸಮನೆಯ ಪ್ರವೇಶ ಮಾಡಿದರು. ಮನೆಯ ಪ್ರತಿ ಕೋಣೆಗಳಲ್ಲಿ ಪ್ರವೇಶ ಮಾಡಿ, ತದನಂತರ ಮನೆಯ ಪರುಷ ಕಟ್ಟೆಯ ಮೇಲೆ ಬಸವ ಮೂರ್ತಿ, ಬಸವ ಭಾವಚಿತ್ರ ಹಾಗೂ ವಚನ ಸಾಹಿತ್ಯವನ್ನು ಪ್ರತಿಷ್ಠಾಪನೆ ಮಾಡಲಾಯಿತು.

ನಂತರ ಮನೆಯಲ್ಲಿ ಶಿವಯೋಗ (ಇಷ್ಟಲಿಂಗ ಪೂಜೆ)ದೊಂದಿಗೆ ಮನೆಯನ್ನು ಪ್ರಸಾದೀಕರಣಗೊಳಿಸಲಾಯಿತು. ಶಿವಯೋಗದಲ್ಲಿ ಮನೆಯ ಸದಸ್ಯರು, ಬಂಧುಗಳು ಸೇರಿದಂತೆ 50 ಜನ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ 12 ಜನರಿಗೆ ಇಷ್ಟಲಿಂಗ ದೀಕ್ಷೆ ಸಹ ಕೊಡಲಾಯಿತು. ಶಿವಯೋಗದ ಪ್ರಾತ್ಯಕ್ಷಿಕೆ ಸಹ ನಡೆಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಮುಂಡರಗಿ-ಬೈಲೂರು ನಿಷ್ಕಲ ಮಂಟಪದ ಪೂಜ್ಯರಾದ ನಿಜಗುಣಪ್ರಭು ಮಹಾಸ್ವಾಮಿಗಳು ಹಾಗೂ ಮುರಗೋಡ ನೀಲಕಂಠ ಮಹಾಸ್ವಾಮಿಗಳಿಂದ ಅನುಭಾವ ನಡೆಯಿತು.

ದೇಹವೇ ದೇವಾಲಯವೆಂದರು ಶರಣರು. ಮನೆಯನ್ನೇ ಗ್ರಂಥಾಲಯ ಮಾಡಿದರು ಶಿಕ್ಷಕ ದೇವೇಂದ್ರ ಅವರು. ಹೊಸ ಮನೆಯ ಮೇಲ್ಗಡೆ ಅವರು ನಿರ್ಮಿಸಿದ ಗ್ರಂಥಾಲಯವನ್ನು ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನಿವೃತ್ತ ಸಹನಿರ್ದೇಶಕ, ಸಿಟಿಸಿ ಬೆಳಗಾವಿಯ ಎಂ.ಎಂ. ಸಿಂಧೂರ ಅವರು ನೆರವೇರಿಸಿದರು. ಶರಣ ರಾಜೇಂದ್ರ ತೇರದಾಳ ಶಿಕ್ಷಣಾಧಿಕಾರಿ ಹಾಜರಿದ್ದರು.

ಗುರುಪ್ರವೇಶದ ವಚನ ಕ್ರಿಯಾಮೂರ್ತಿಗಳಾಗಿ ಮಡಿವಾಳಪ್ಪ ಎಂ. ಸಂಗೊಳ್ಳಿ, ಮಹಾಂತೇಶ ತೋರಣಗಟ್ಟಿ, ರಾಯಪ್ಪ ಸಣ್ಣಮನಿ, ಈರಣ್ಣ ಬಾನಿ, ಬಸವರಾಜ ಹುಬ್ಬಳ್ಳಿ, ಶಿವಾನಂದ ಮೆಟ್ಯಾಲ ಇದ್ದರು.

ಸಮಾರಂಭಕ್ಕೆ ಬಂದ ಶರಣ ಶರಣೆಯರಿಗೆ ಯತ್ತಿನಗುಡ್ಡ ಕುಟುಂಬಸ್ಥರು ಡಾ. ಫ.ಗು. ಹಳಕಟ್ಟಿ ಸಂಪಾದಕತ್ವದ ‘ವಿಶ್ವಗುರು ಬಸವಣ್ಣನವರ ವಚನಗಳು’ ಎಂಬ ಪುಸ್ತಕದ ಸಾವಿರ ಪ್ರತಿಗಳು ಹಾಗೂ ವಿಭೂತಿ ಗಟ್ಟಿ ದಾಸೋಹವಾಗಿ ನೀಡಿದರು. ಅತಿಥಿಗಳು, ಪ್ರಮುಖರಿಗೆ ಬಸವಣ್ಣನವರ ಮೂರ್ತಿಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.

ಶರಣರ ಸಮಾವೇಶದಂತೆ ನಡೆದ ಈ ಕಾರ್ಯಕ್ರಮದಲ್ಲಿ ಬಸವ ಕೇಂದ್ರ, ಸಂಚಾರಿ ಗುರುಬಸವ ಬಳಗ, ಮಲ್ಲೂರು ಅನುಭವ ಮಂಟಪದ ಮುಖ್ಯಸ್ಥರು, ಸದಸ್ಯರು, ಶರಣೆ ಶಾಂತವ್ವ ಶರಣ ಬಸವಂತಪ್ಪ ಯತ್ತಿನಗುಡ್ಡ ಅವರು, ಬಂಧು-ಮಿತ್ರರು, ಶಿಕ್ಷಣ ಇಲಾಖೆಯ ಉದ್ಯೋಗಿಗಳು, ಮಾಟೊಳ್ಳಿ ಗ್ರಾಮದ ಗುರು ಹಿರಿಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು. ಸರ್ವರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
6 Comments
  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲ್ಲೆ ಬೀದರ says:

    ಇದು ಪರಿಪೂರ್ಣವಾದ ಶರಣ ಸಂಸ್ಕೃತಿ.ಈ ನಿಜಾಚರಣೆಯು ನಮ್ಮೆಲ್ಲರಿಗೂ ಮಾಡುವಂತಾಗಬೇಕು. ಶರಣು ಶರಣಾರ್ಥಿಗಳೊಂದಿಗೆ.

    • ನಿಜಾಚರಣೆ ತುಂಬಾ ಒಳ್ಳೆಯ ಕಾರ್ಯಕ್ರಮ, ಎಲ್ಲರೂ ಅಳವಡಿಸಿಕೊಳ್ಳಬೇಕು

Leave a Reply

Your email address will not be published. Required fields are marked *