ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ವಚನಸಾಹಿತ್ಯದ ಇತಿಹಾಸದ ಬಗ್ಗೆ ಶನಿವಾರ ಉಪನ್ಯಾಸ ನೀಡಿದರು.
ವಚನ ಸಾಹಿತ್ಯವು ಗದ್ಯ, ಪದ್ಯ, ಹಾಡುಗಳ ರೂಪದಲ್ಲಿ ಆತ್ಮನಿವೇದನೆಯ ಕುರುಹಾಗಿ ಹೊರಹೊಮ್ಮಿದವು ಮತ್ತು ಇದು ತಾನು ಒಳಗೆ ಕಂಡoಥ ಸತ್ಯವನ್ನು ಹೇಳಿದ ಭವ್ಯವಾದ ಕ್ರಿಯೆ ಎಂದು ಹೇಳಿದರು.
ಎರಡನೆಯ ಪ್ರೌಢದೇವರಾಯನ ಕಾಲದಲ್ಲಿ ಲಕ್ಕಣ್ಣ ದಂಡೇಶ, ಭೀಮಕವಿ, ಚಾಮರಸ, ಸಿಂಗಿರಾಜರು ಮುಂತಾದವರು ಬರೆಯುವಾಗ ವೀರಶೈವ ಪದ ಬಳಕೆಯಾಯಿತು ಎಂದು ಹೇಳಿದರು.
ಶೂನ್ಯ ಸಂಪಾದನೆಯು ಹಲವು ಶರಣರ ಸಂವಾದವಾಗಿದ್ದು, ಸುಂದರವಾದ ಹೆಣಿಕೆಯೊಂದಿಗೆ ಅನುಭವ ಮಂಟಪದ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ಪುಸ್ತಕ. ಇದು ಹಲಗೆ ಆರ್ಯ ಸಂಪಾದಿಸಿ ರಚಿಸಿದ ಕೃತಿ ಸಂಪೂರ್ಣವಾಗಿ ವೈಭವೀಕರಣಗೊಂಡು ವಿರೂಪಗೊಂಡಿತು ಎಂದು ಹೇಳಿದರು.
1924 ರಲ್ಲಿ ಫ. ಗು. ಹಳಕಟ್ಟಿ ಅವರು ವಚನ ಶಾಸ್ತ್ರ 1 ಮತ್ತು 2 ಪ್ರಕಟಮಾಡಿದ್ದು, ಇದಕ್ಕೆ ಕಳಶ ಇಟ್ಟ ಹಾಗೆ ಶಿ. ಶಿ ಬಸವನಾಳ ಅವರು ಐವತ್ತು ಪರಿಭಾಷೆ, ಅಡಿಟಿಪ್ಪಣಿ, ಆಕರ ಗ್ರಂಥ, ಅರ್ಥದೊಂದಿಗೆ ಅದರ ಆಳಕ್ಕಿಳಿದು ತಿಳಿದುಕೊಂಡು ಬರೆದರು, ತಪೋವನದ ಶ್ರೀ ಕುಮಾರ ಸ್ವಾಮಿಗಳ ಕಾರ್ಯವನ್ನು, ಅರ್. ಸಿ. ಹಿರೇಮಠ ಅವರ ಸಂಕಲನ, ಸಂಪಾದನೆ, ಪರಿಷ್ಕರಣೆ ಕಾರ್ಯ, ಅಥಣಿ ಮಹಾಂತ ಶಿವಯೋಗಿಗಳು ಇದರ ಸಲುವಾಗಿ ದುಡಿದದ್ದು, ಎಂ. ಎಂ. ಕಲ್ಬುರ್ಗಿ ಅವರ ಹೆಚ್ಚಿನ ಸಂಶೋಧನಾ ಕಾರ್ಯಗಳು, ಎನ್ . ಜಿ. ಮಹಾದೇವಪ್ಪ, ಮಲ್ಲಾಪುರ ಸರ್, ಎಂ. ಎಸ್. ಸುಂಕಾಪುರ, ಚೆನ್ನಕ್ಕ ಎಲಿಗಾರ, ಹನುಮಾಕ್ಷಿ ಗೋಗಿ ..ಹೀಗೆ ಪ್ರತಿಯೊಬ್ಬರ ಕೆಲಸ ಕಾರ್ಯಗಳನ್ನು ತುಂಬು ಹೃದಯದಿಂದ ನೆನೆದರು.
ಸಂವಾದದಲ್ಲಿ ಶರಣ ಶಿವಾನಂದ ಅರಭಾವಿ, ಶರಣ ಶಿವಾನಂದ ಕಲಕೇರಿ, ಶರಣ ವಿಜಯಕುಮಾರ ತೇಲಿ, ಶರಣ ಕೆ. ಬಿ. ಮಹಾದೇವಪ್ಪ ಅವರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಶರಣ ಮೃತ್ಯುಂಜಯ ಶೆಟ್ಟರ ಅವರ ವಚನ ಪ್ರಾರ್ಥನೆ,ಶರಣ ಮಂಜು ಮಡಿವಾಳ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಶರಣ ರುದ್ರಮೂರ್ತಿ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ ನಡೆಸಿಕೊಟ್ಟರು.
(ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿಉಪನ್ಯಾಸದ 15 ನೆಯ ದಿವಸದ ವರದಿ – ಆಗಸ್ಟ್ 18)