ಬೆಂಗಳೂರು:
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ವಿಶ್ವಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನ ಸ್ವಾತಂತ್ರö್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರಸಿಂಹರಾಜಪುರದ ಬಸವಕೇಂದ್ರದ ಬಸವಯೋಗಿ ಪ್ರಭುಸ್ವಾಮೀಜಿ ಮಾತನಾಡಿ, ವಚನಗಳ ಬಗ್ಗೆ ೯೦೦ ವರ್ಷಗಳಿಂದ ಇಲ್ಲದ ಪ್ರೀತಿ ಕೆಲವರಿಗೆ ಲೋಕಸಭೆ ಚುನಾವಣೆ ಮುಗಿದ ಬಳಿಕ ಉದಯವಾಗಿರುವುದರ ಹಿಂದೆ ಯಾವ ರಾಜಕೀಯ ಷಡ್ಯಂತ್ರ ಅಡಗಿದೆ ಎಂಬುದನ್ನು ಜನ ಅರಿತಿದ್ದಾರೆ ಎಂದರು.
ಹನ್ನೆರಡನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಸಮ ಸಮಾಜವನ್ನು ನಿರ್ಮಾಣ ಮಾಡಲು ದಲಿತರು, ಹಿಂದುಳಿದವರು, ದಮನಿತರು, ಶೋಷಿತರಿಗೆಲ್ಲಾ ಇಷ್ಟಲಿಂಗ ದೀಕ್ಷೆ ನೀಡಿ ಸಾಮಾಜಿಕ ಕ್ರಾಂತಿಗೆ ಭದ್ರಬುನಾದಿ ಹಾಕಿದ ವಿಶ್ವಗುರು ಬಸವಣ್ಣನವರ ವಚನಗಳನ್ನು ಶಾಸ್ತçಗಳೆಂದು ತಿರುಚಿರುವ ಹುನ್ನಾರ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಶರಣಶ್ರೀ ಓಂಕಾರ ಚೊಂಡಿ ಮಾತನಾಡಿ,
`ವಚನದರ್ಶನ’ ಎಂಬ ಬಸವತತ್ವ ವಿರೋಧಿ ಪುಸ್ತಕವೊಂದನ್ನು ಪ್ರಕಟಿಸಿ ನಾಡಿನಾದ್ಯಂತ ಬಿಡುಗಡೆ ಮಾಡುವ ಮೂಲಕ ಲಿಂಗಾಯತರ ಮತಗಳನ್ನು ಬಿಜೆಪಿಯತ್ತ ಸೆಳೆಯುವ ಹುನ್ನಾರ ನಡೆಸುತ್ತಿದ್ದಾರೆ. ಮುಖಪುಟದಲ್ಲಿ ವಿಶ್ವಗುರು ಬಸವಣ್ಣನವರ ಚಿತ್ರವನ್ನು ವೈದಿಕತೆಯ ಮನಸ್ಥಿತಿಯಲ್ಲಿ ಮುದ್ರಿಸಿದ್ದಾರೆ.
ಸಂಘಪರಿವಾರದ ಪ್ರಭಾವಕ್ಕೆ ಒಳಗಾಗಿರುವ ವಚನಾನಂದ ಸ್ವಾಮೀಜಿಯವರು ಪುಸ್ತಕ ಬಿಡುಗಡೆ ಮಾಡಿ ಲಿಂಗಾಯತರು ಹಿಂದೂಗಳೆAದು ಹೇಳಿಕೆ ನೀಡುವ ಮೂಲಕ ಬಸವತತ್ವಕ್ಕೆ ಅಪಮಾನ ಮಾಡಿದ್ದಾರೆ. ಈ ಕೂಡಲೇ ಅವರು ಬೇಷರತ್ ಕ್ಷಮೆಯಾಚಿಸಬೇಕೆಂದು ಈ ಮೂಲಕ ಆಗ್ರಹಿಸಿದರು.
ಕೆಚ್ಚೆದೆಯ ಕನ್ನಡಿಗರ ರಾಜ್ಯಾಧ್ಯಕ್ಷ ಶ್ರೀನಿವಾಸ್ ಭದ್ರಣ್ಣನವರ್ ಮಾತನಾಡಿ, ಸಮಾನತೆಯನ್ನು ಎಂದಿಗೂ ಒಪ್ಪದ ಮನುವಾದಿಗಳು ಜಾತಿ, ಧರ್ಮದ ಹೆಸರಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಬಂದಿದ್ದಾರೆ. ಜನರ ದಿಕ್ಕುತಪ್ಪಿಸುವ `ವಚನದರ್ಶನ’ ಮೂಲಕ ಲಿಂಗಾಯತರ ಓಟ್ ಬ್ಯಾಂಕ್‌ನತ್ತ ಚಿತ್ತ ಹರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶರಣರ ವಚನಗಳ ಮೇಲೆ ಹಿಂದೆಂದೂ ಇಲ್ಲದ ಅಕ್ಕರೆ, ವ್ಯಾಮೋಹ, ಪ್ರಚಾರದ ಗೀಳು ಇದೀಗ ಉಕ್ಕಿ ಹರಿಯಲು ಕಾರಣವೇನು ಎಂಬುದರ ಅರಿವು ಜನರಿಗಿದೆ. ವಚನಗಳು ಸಮಾನತೆಯನ್ನು ಸಾರುತ್ತವೆ, ಗಂಡು ಹೆಣ್ಣು ಶರಣಧರ್ಮದಲ್ಲಿ ಸಮಾನರು. ಶರಣತತ್ವ ಜಾತಿ, ವರ್ಗ, ವರ್ಣರಹಿತವಾಗಿದೆ. ಕಾಯಕದಲ್ಲಿ ಸಮಾನತೆ ಇದೆ. ವಚನ ದರ್ಶನ ಪುಸ್ತಕ ಬಿಡುಗಡೆ ಮಾಡಿದವರು, ಈ ಸಮಾನತೆಯನ್ನು ಒಪ್ಪುತ್ತಾರಾ? ಎಂದು ಪ್ರಶ್ನಿಸಿದರು.
ಮುಟ್ಟುಗೋಲು ಹಾಕಲಿ:
ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ವಚನ ದರ್ಶನ ಪುಸ್ತಕವನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ರಾಜ್ಯದ ಯಾವುದೇ ಭಾಗದಲ್ಲೂ ಈ ಪುಸ್ತಕ ಬಿಡುಗಡೆಗೊಳಿಸದಂತೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಚನಗಳು ಪುರಾಣಗಳಲ್ಲ. ಶಿವಶರಣರ ವಚನಗಳು ಅನುಭಾವದ ಸಾಹಿತ್ಯ. ದೀನ ದಲಿತರು, ಬಂಡಾಯಗಾರರ ಭಾವನೆಗಳೆ ವಚನಗಳಾಗಿವೆ. ಸಂಘಪರಿವಾರದವರು ವಚನದರ್ಶನ ಪುಸ್ತಕದ ಮೂಲಕ ಇಲ್ಲದ ಶಬ್ದಗಳನ್ನು ವಚನಗಳಿಗೆ ಹೋಲಿಸಿ ಬರೆಯುವುದು ವಚನಗಳಿಗೆ ಮಾಡುವ ಅಪಮಾನವಾಗಿದ್ದು ಈ ಪುಸ್ತಕ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಳವಳ್ಳಿ ತಾಲ್ಲೂಕು ಲಿಂಗಪಟ್ಟಣ ಮಠದ ಶ್ರೀ ಓಂಕಾರೇಶ್ವರಸ್ವಾಮೀಜಿ, ಶರಣರಾದ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಯ್ಯ, ಶಿವಕುಮಾರ್ ಸಿಎ, ಸಂಜೀವ್ ಕಡಗದ್, ಶರಣಶ್ರೀ ಪ್ರಕಾಶ್ ಹೆಬ್ಬಳ್ಳಿ, ಯೋಗಶಿಕ್ಷಕ ಶಿವರುದ್ರಪ್ಪ, ಮೆಣಸಗೆರೆ ಶಿವಲಿಂಗಪ್ಪ ಮತ್ತಿತರರಿದ್ದರು.