ಬಸವ ಸಂಘಟನೆಗಳ ಆಕ್ರೋಶ: ‘ವಚನ ದರ್ಶನ’ ಕಾರ್ಯಕ್ರಮಕ್ಕೆ ಹೋಗದ ಬೇಲಿ ಮಠ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು :

ನಗರದ ಭಾರತೀಯ ವಿದ್ಯಾಭವನದಲ್ಲಿ ಮಂಗಳವಾರ ಸಂಜೆ ನಡೆದ ‘ವಚನ ದರ್ಶನ’ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬೇಲಿಮಠ ಮಹಾಸಂಸ್ಥಾನದ ಶಿವಾನುಭನ ಶಿವರುದ್ರ ಸ್ವಾಮೀಜಿ ಗೈರಾಗಿದ್ದಾರೆ.

ಅವರ ಅನುಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೆಪುರಮ ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಆರೆಸ್ಸೆಸ್ ಸಹ ಕಾರ್ಯವಾಹಕ ಸಿ.ಆರ್. ಮುಕುಂದ ಭಾಷಣ ಮಾಡಿದರು.

ವಚನ ಸಾಹಿತ್ಯವನ್ನು, ಬಸವಣ್ಣನವರನ್ನು ವಿರೂಪಗೊಳಿಸಿರುವ ‘ವಚನ ದರ್ಶನ’ ಪುಸ್ತಕದ ವಿರುದ್ಧ ಪುಸ್ತಕ ಬಿಡುಗಡೆ ಯಾಗುತ್ತಿರುವಲ್ಲೆಲ್ಲಾ ಬಸವ ಪರ ಸಂಘಟನೆಗಳು ಪ್ರತಿಭಟಿಸುತ್ತಿವೆ.

ನಗರದ ಫ್ರೀಡಂ ಪಾರ್ಕಿನಲ್ಲಿ ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು.

ಈ ಮೊದಲು ಸಂಘ ಪರಿವಾರ ಆಯೋಜಿಸಿದ ಕಾರ್ಯಕ್ರಮದ ದಿವಸಾನಿಧ್ಯ ವಹಿಸಲು ಶ್ರೀಗಳು ಒಪ್ಪಿಗೆ ನೀಡಿದ್ದರು. ಅವರ ನಿರ್ಧಾರಕ್ಕೆ ಬಸವ ಅಭಿಮಾನಿಗಳಿಂದ ವ್ಯಾಪಕ ವಿರೋಧ ಪ್ರಕಟವಾಗಿತ್ತು. ಶರಣ ಸಮಾಜದ ಅನೇಕ ಮುಖಂಡರು ಶ್ರೀಗಳಿಗೆ ಕರೆ ಮಾಡಿ ಕಾರ್ಯಕ್ರಮಕ್ಕೆ ಹೋಗದಿರಲು ಒತ್ತಾಯಿಸಿದ್ದರು.

ಮೊದಲಿನಿಂದಲೂ ಸಂಘ ಪರಿವಾರದ ಜೊತೆ ಗುರುತಿಸಿಕೊಂಡಿರುವ ಶ್ರೀಗಳು ತಮ್ಮ ನಿರ್ಧಾರ ಬದಲಿಸಿದರು. ಆಗಸ್ಟ್ 14ರಂದು ಬಸವ ಮೀಡಿಯಾದ ಜೊತೆ ಮಾತನಾಡುತ್ತ ಮಂಗಳವಾರ ಬೇರೆ ಕಾರ್ಯಕ್ರಮ ಇರುವುದರಿಂದ ವಚನ ದರ್ಶನ ಪುಸ್ತಕ ಬಿಡುಗಡೆಗೆ ಹೋಗುತ್ತಿಲ್ಲವೆಂದು ಹೇಳಿದ್ದರು.

ಆಗಸ್ಟ್ 19ರಂದು ಕಾರ್ಯಕ್ರಮದ ಆಯೋಜಕರಿಂದ ಮಾಧ್ಯಮಗಳಿಗೆ ಹೋದ ಆಹ್ವಾನ ಪತ್ರಿಕೆಯಲೂ ಶ್ರೀಗಳ ಹೆಸರು ಮುದ್ರಣವಾಗಿತ್ತು. ಇದರಿಂದ ಶ್ರೀಗಳು ಮತ್ತೆ ತಮ್ಮ ಮನಸ್ಸು ಬದಲಿಸಿದ್ದಾರೆಂಬ ಗೊಂದಲವುಂಟಾಗಿತ್ತು. ಆದರೆ ಕಾರ್ಯಕ್ರಮದಿಂದ ಕೊನೆಗೂ ಅಂತರ ಕಾಯ್ದುಕೊಂಡು ಶ್ರೀಗಳು ತಮ್ಮ ಮಾತು ಉಳಿಸಿಕೊಂಡಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *