ಸಿದ್ದಗಂಗಾ ಸ್ವಾಮೀಜಿ ಲಿಂಗಾಯತ ಧರ್ಮದ ಪರವಾಗಿದ್ದಾರೆ: ಆಪ್ತರ ಮಾತು (ವಿಡಿಯೋ)

ಎಂ. ಎ. ಅರುಣ್
ಎಂ. ಎ. ಅರುಣ್

ವಚನ ದರ್ಶನ ಪುಸ್ತಕಕ್ಕೆ ಯಾರೋ ಮುನ್ನುಡಿ ಬರೆದು, ಬಹಳಷ್ಟು ಜನರಿದ್ದಾಗ ಅವಸರದಲ್ಲಿ ಸಹಿ ಹಾಕಿಸಿಕೊಂಡರು….

ಸಿದ್ದಗಂಗಾ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಲಿಂಗಾಯತ ಧರ್ಮದ ಪರವಾಗಿದ್ದಾರೆ, ಅವರ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಬಹಳ ವರ್ಷಗಳಿಂದ ಶ್ರೀಗಳ ಒಡನಾಟದಲ್ಲಿರುವ ಒಬ್ಬ ಆಪ್ತರ ಮಾತಿದು.

ಇದಕ್ಕೆ ಪೂರಕವಾಗಿ ಮಠದಲ್ಲಿ ನಡೆದ ಇತ್ತೀಚಿನ ಹುಣ್ಣಿಮೆಯ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡರು. ಅದರಲ್ಲಿ ಶ್ರೀಗಳು ‘ಲಿಂಗವಂತ ಧರ್ಮದಲ್ಲಿ’ ಸ್ತ್ರೀ ಪುರುಷರೆಲ್ಲರಿಗೂ ಸಮಾನ ಸ್ಥಾನವಿದೆ ಎಂದು ಭಾಷಣ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಲಿಂಗಾಯತ ಧರ್ಮದ ಹೋರಾಟ ನಡೆದಾಗಲೂ ಶ್ರೀಗಳು ಅದನ್ನು ಬೆಂಬಲಿಸಿದ್ದರು ಎಂದು ಹೇಳುತ್ತಾ ಹಳೆಯ ಪೇಪರ್ ಕಟಿಂಗ್ ಕೂಡ ಕೊಟ್ಟರು. ಅದರಲ್ಲಿ ಸ್ವಾಮೀಜಿ ಲಿಂಗಾಯತ ಧರ್ಮ ಹಿಂದೆಯೂ ಪ್ರತ್ಯೇಕವಾಗಿತ್ತು, ಈಗ ಮಾನ್ಯತೆ ಕೇಳಲಾಗುತ್ತಿದೆ ಅಷ್ಟೇ ಎಂದು ಪತ್ರಿಕಾ ಹೇಳಿಕೆ ಕೊಟ್ಟಿದ್ದರು.

ಹೀಗಿದ್ದರೆ ಸ್ವಾಮೀಜಿ ಲಿಂಗಾಯತ ಧರ್ಮದ ಹೋರಾಟದಲ್ಲಿ ಕಾಣಿಸಿಕೊಳ್ಳುವುದಿಲ್ಲಾ ಅಂತ ಕೇಳಿದೆ.

ಮಠದ್ದು ಘರ್ಷಣೆ ಮಾಡಿಕೊಳ್ಳದ ಸಂಪ್ರದಾಯ. ಸ್ವಾಮೀಜಿ ವಿಶ್ವ ಮಾನವ ತತ್ವದಲ್ಲಿ ನಂಬಿಕೆಯಿಟ್ಟು, ಅದರಂತೆ ನಡೆಯುತ್ತಾರೆ. ಎಲ್ಲಾ ಧರ್ಮಗಳೂ ಸಹಬಾಳ್ವೆ ನಡೆಸಬೇಕೆನ್ನುವುದು ಅವರ ಆಶಯ. ಇದರ ಬಗ್ಗೆ ಯಾರಾದರೂ ಪ್ರಶ್ನೆ ಕೇಳಿದರೆ ತಕ್ಕ ಉತ್ತರ ಕೊಡುತ್ತಾರೆ. ಇಲ್ಲಿಯವರೆಗೆ ಯಾರೂ ಕೇಳಿಲ್ಲ.

ಸಿದ್ದಗಂಗಾ ಮಠದ್ದು ಅಪ್ಪಟ್ಟ ಬಸವ ಪರಂಪರೆಯ ಸಂಪ್ರದಾಯ. ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ತಮ್ಮ 111 ವರ್ಷಗಳ ಜೀವನದಲ್ಲಿ ಬೆಳಗ್ಗೆ ಮೂರು ಗಂಟೆಗೆ ಎದ್ದು ಲಿಂಗ ಪೂಜೆ ಮಾಡುವುದನ್ನು ಒಂದು ದಿನವೂ ತಪ್ಪಿಸಲಿಲ್ಲ. ಮಠದಲ್ಲಿ ಬೇರೆ ಪೂಜೆ ಆಚರಣೆಗಳಿಗೆ ಅವಕಾಶವಿಲ್ಲ.

ಸ್ವಾಮೀಜಿ ಕೂಡ ಅದೇ ಬಸವ ನಿಷ್ಠೆಯುಳ್ಳವರು. ಶ್ರೀ ಮಠದಲ್ಲಿ ಮಾನವೀಯ ಮೌಲ್ಯಗಳಿಗೆ ಮಾತ್ರ ಮನ್ನಣೆ. ಸರ್ವರಿಗೂ ಸಮಪಾಲು, ಸಮಬಾಳು ದೊರಕಬೇಕೆಂಬ ಆಶಯದೊಂದಿಗೆ ಬಸವಾದಿ ಶರಣರ ಕಾಯಕ, ದಾಸೋಹ ತತ್ವಗಳನ್ನು ವಿದ್ಯಾರ್ಥಿಗಳಿಗೆ ಬೋದಿಸಲಾಗುತ್ತದೆ. ಇದು ಬಸವ ತತ್ವದ ಜಾತ್ಯತೀತ ಮಠ. ಮಕ್ಕಳನ್ನು ಸೇರಿಸಿಕೊಳ್ಳುವ ಸಮಯದಲ್ಲಿ ಬಡತನವೇ ಇಲ್ಲಿನ ಅರ್ಹತೆ. ಅನ್ನ. ಅರಿವು, ಆಸರೆಗಷ್ಟೇ ಆದ್ಯತೆ.

ಮತ್ತೆ ಸಿದ್ದಗಂಗಾ ಮಠ ಸಂಸ್ಕೃತ ಶಾಲೆಗಳನ್ನು ನಡೆಸುತ್ತದೆಯಲ್ಲಾ?

ಒಂದು ಕಾಲದಲ್ಲಿ ಸಂಸ್ಕೃತ ಓದಲು ಶೂದ್ರರಿಗೆ ಅವಕಾಶವಿರಲಿಲ್ಲ. ಅದಕ್ಕೆ ಹಿಂದಿನ ಗುರುಗಳು ಸಂಸ್ಕೃತ ಶಾಲೆಗಳನ್ನು ತೆರೆದರು. ಎಲ್ಲಾ ವರ್ಗದ ಮಕ್ಕಳಿಗೂ ಸಂಸ್ಕೃತ ಜ್ಞಾನ ದೊರಕಬೇಕೆಂಬ ಆಶಯ ಪೂಜ್ಯರದ್ದು. ಅದೇ ಪದ್ಧತಿ ಮುಂದುವರೆದುಕೊಂಡು ಬಂದಿದೆ.

ಶ್ರೀಗಳು ವಚನ ದರ್ಶನಕ್ಕೆ ಮುನ್ನುಡಿ ಬರೆದದ್ದು ಬಹಳಷ್ಟು ಲಿಂಗಯತರಿಗೆ ನೋವನುಂಟು ಮಾಡಿದೆ. ಅದರಲ್ಲಿ ವಚನಗಳನ್ನು ವಿಪರೀತವಾಗಿ ಅರ್ಥೈಸಬಾರದು, ವೇದ, ಉಪನಿಷತ್ತುಗಳ ಜೊತೆ ಓದಬೇಕು ಅಂತೆಲ್ಲಾ ಹೇಳಿದ್ದಾರಲ್ಲ.

ಈ ಪುಸ್ತಕಕ್ಕೆ ಮುನ್ನುಡಿ ಯಾರೋ ಬರೆದು, ಬಹಳಷ್ಟು ಜನರಿದ್ದಾಗ ಅವಸರದಲ್ಲಿ ಸಹಿ ಹಾಕಿಸಿಕೊಂಡರು. ವಚನಗಳ ಪುಸ್ತಕ ಎಂದು ಕೇಳಿ ಸ್ವಾಮೀಜಿ ಅಭಿಮಾನದಿಂದ ಮುನ್ನುಡಿಗೆ ಸಹಿ ಮಾಡಿದ್ದಾರೆಯೆ ಹೊರತು ವೇದ, ಶಾಸ್ತ್ರ, ಪುರಾಣಗಳ ಪ್ರಭಾವದಿಂದಲ್ಲ.

3 months agoAugust 24, 2024 2:03 pm

ಇತ್ತೀಚಿನ ಭಾಷಣದಲ್ಲಿ ಸಿದ್ದಲಿಂಗ ಸ್ವಾಮೀಜಿ ‘ಲಿಂಗವಂತ ಧರ್ಮದ’ ಬಗ್ಗೆ ಹೇಳಿರುವ ಸ್ಪಷ್ಟ ಮಾತು .

3 months agoAugust 24, 2024 2:04 pm

ಬಸವ ನಿಷ್ಠ ಸಿದ್ದಗಂಗಾ ಮಠದಲ್ಲಿ ಬೇರೆ ಪೂಜೆ ಆಚರಣೆಗಳಿಗೆ ಅವಕಾಶವಿಲ್ಲ.

Share This Article
Leave a comment

Leave a Reply

Your email address will not be published. Required fields are marked *