ಇಳಕಲ್ಲಿನ ಶರಣ ಸಂಸ್ಕೃತಿ ಮಹೋತ್ಸವದ ಕೊನೆಯ ಮೂರು ದಿನಗಳು

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಇಳಕಲ್ಲ

ಅನ್ನ, ಪ್ರಾಣ, ಮಾನ ಹಾನಿಯ ಯಾವುದೇ ಮೌಢ್ಯಾಚರಣೆ ಲಿಂಗಾಯತ ಧರ್ಮದಲ್ಲಿಲ್ಲ ಎಂದು ಇಳಕಲ್ಲ ವಿಜಯ ಮಹಾಂತೇಶ ಮಠದ ಗುರುಮಹಾಂತ ಸ್ವಾಮಿಗಳವರು ಹೇಳಿದರು.

ಅವರು ರವಿವಾರ ತಮ್ಮ ಸಂಸ್ಥಾನಮಠದ ೨೦೨೪ರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ವಿಶ್ವ ಬಸವಧರ್ಮ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಆಗಸ್ಟ್ 5 ರಂದು ಶುರುವಾದ ಶರಣ ಸಂಸ್ಕೃತಿ ಮಹೋತ್ಸವ ಸೆಪ್ಟೆಂಬರ್ 3 ರಂದು ಮುಗಿಯಲಿದೆ. ಮಹೋತ್ಸವ ಕೊನೆಯ ಮೂರು ದಿನಗಳು ಅಂಗವಾಗಿ ಮಠದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ರವಿವಾರ ವಿಶ್ವ ಬಸವಧರ್ಮ ಸಮಾವೇಶ, ಸೋಮವಾರ ಮುಂಜಾನೆ ೦೭ ಗಂಟೆಗೆ ವಚನ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮತ್ತು ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆಯವರೆಗೆ ವಚನ ಯಾತ್ರೆ, ೧೦ ಗಂಟೆಗೆ ವಿಜಯ ಮಹಾಂತೇಶ್ವರ ತಪೋವನದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ಸಂಜೆ 5:00 ಗಂಟೆಗೆ ಧರ್ಮಗ್ರಂಥ ಬಸವಾದಿ ಶರಣರ ವಚನ ಸಾಹಿತ್ಯದ ಮಹಾ ರಥೋತ್ಸವ ನಡೆಯಲಿವೆ.

ಮಂಗಳವಾರ ಮಧ್ಯಾಹ್ನ ಧರ್ಮಗ್ರಂಥ ವಚನ ಸಾಹಿತ್ಯದ ತಾಡೋಲೆ ಕಟ್ಟಿನ ಪಲ್ಲಕ್ಕಿ ಮಹೋತ್ಸವ ಜರುಗುವುದು.

ವಿಶ್ವ ಬಸವಧರ್ಮ ಸಮಾವೇಶದಲ್ಲಿ ಮಾತನಾಡುತ್ತ ಗುರುಮಹಾಂತ ಸ್ವಾಮಿಗಳವರು ಮೌಢ್ಯಾಚರಣೆ ಮಾಡಿದರೆ ಶರಣರ ಆಶಯಕ್ಕೆ ಧಕ್ಕೆ ಬರುತ್ತದೆ. ಬಸವ ಧರ್ಮದಲ್ಲಿ ಪ್ರಾಣಕ್ಕೆ ಧಕ್ಕೆ ತರುವಂತ ಯಾವುದೇ ಮೌಢ್ಯಾಚರಣೆಗಳಿಗೆ ಅವಕಾಶವಿಲ್ಲ. ಮನುಷ್ಯನ ಪ್ರಾಣಕ್ಕಿಂತ ಶ್ರೇಷ್ಠವಾದದ್ದು ಮಾನ. ಅದಕ್ಕಾಗಿ ಮಾನಕ್ಕೆ ಧಕ್ಕೆ ತರುವ ಯಾವುದೇ ಆಚರಣೆ ಸಲ್ಲದು. ಧರ್ಮದ ಹೆಸರಿನಲ್ಲಿ ದಲಿತ ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡಿ, ಬೇವಿನ ತಪ್ಪಲು ಉಡಿಸಿ ಓಡಿಸುವುದು ಸರಿಯೇ ಎಂದು ಪ್ರಶ್ನಿಸಿದರು.

ಹಾಗೆ ಅನ್ನಕ್ಕೆ ಧಕ್ಕೆ ತರುವಂಥ ಹಲವಾರು ಆಚರಣೆಗಳನ್ನು ಸಮಾಜದಲ್ಲಿ ಮಾಡಲಾಗುತ್ತಿದೆ, ಅದನ್ನು ಮಾಡುವುದು ಮಾನವೀಯತೆ ಅಲ್ಲ.

ಮಾನವೀಯತೆ ಆಧಾರದ ಮೇಲೆ ಬಸವಣ್ಣನವರು ಲಿಂಗಾಯತ ಧರ್ಮ ಕಟ್ಟಿದರು. ಸಂಪೂರ್ಣ ಮಾನವೀಯತೆ ಆಧಾರಿತ ಧರ್ಮ ಬಸವ ಧರ್ಮವಾಗಿದೆ. ಮನುಷ್ಯನನ್ನು ಜಾತಿಯಿಂದ ಕೀಳು ಎಂದು ಹೇಳುವುದು, ಮಾಡುವ ಕೆಲಸದಿಂದ ಕೀಳು ಎಂದು ಗುರುತಿಸುವುದು ಮಾನವೀಯತೆ ಅಲ್ಲ.

ಅದಕ್ಕಾಗಿ ಚಪ್ಪಲಿ ಹೊಲಿಯುವುದು, ಪಾಯಖಾನೆ ಸ್ವಚ್ಛಗೊಳಿಸುವುದು ಅವರವರ ಕಾಯಕವಾಗಿದೆ. ಎಲ್ಲ ಕಾಯಕಗಳು ಸಮಾನ ಎಂಬ ತತ್ವದ ಮೇಲೆ ಬಸವಣ್ಣ ಈ ಧರ್ಮ ಕಟ್ಟಿದರು ಎಂದು ಮಹಾಂತ ಶ್ರೀಗಳು ಪ್ರತಿಪಾದಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇಸ್ರೋದ ನಿಕಟಪೂರ್ವ ಚೇರ್ಮನ್ ಎ.ಎಸ್. ಕಿರಣಕುಮಾರ ಅವರಿಗೆ ಮಠದ ವತಿಯಿಂದ ಬಸವಗುರು ಕಾರುಣ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಕಿರಣಕುಮಾರ, ಭಾರತದ ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನದ ಸಾಧನೆ ಕುರಿತು ಮಾತನಾಡಿದರು.

ವಿಶ್ವ ಬಸವಧರ್ಮ ಕುರಿತು ಜೆ.ಎಲ್.ಎಂ.ಬಾಗಲಕೋಟೆ ಜಿಲ್ಲಾಧ್ಯಕ್ಷ, ಚಿಂತಕ ಅಶೋಕ ಬರಗುಂಡಿ ಅವರು ಅನುಭಾವಗೈದರು.

ಮಾಜಿ ಸಚಿವ ಎಸ್.ಆರ್.ಪಾಟೀಲ, ಹುಲಸೂರು ಶಿವಾನಂದ ಸ್ವಾಮಿಗಳು, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ನೂತನ ಪುರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಮತ್ತೀತರರು ಮಾತನಾಡಿದರು.

ನಾಗರತ್ನ ಹಡಗಲಿ ಕಲಾನೃತ್ಯ ನಿಕೇತನ ಧಾರವಾಡ ಶಾಲೆಯ ಮಕ್ಕಳಿಂದ ಗಮನ ಸೆಳೆಯುವ ವಚನ ನೃತ್ಯಗಳು ಜರುಗಿದವು.

ಶಿರೂರು ಬಸವಲಿಂಗ ಸ್ವಾಮಿಗಳು, ತಿಪ್ಪೇರುದ್ರಸ್ವಾಮಿಗಳು, ಸಂಗನಬಸವಸ್ವಾಮಿಗಳು,
ವೀರಭದ್ರಸ್ವಾಮಿಗಳು, ರಾಮನಗೌಡ ಸಂದಿಮನಿ, ಕಾಳಮ್ಮ ಜಕ್ಕಾ, ಪ್ರಕಾಶ ಕಡಪಟ್ಟಿ, ಸಿದ್ಧಲಿಂಗೇಶ ಹಡಗಲಿ ಮತ್ತು ಇತರರು ವೇದಿಕೆ ಮೇಲಿದ್ದರು.

ಜನವಾಡ, ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳಿಂದ ಶ್ರಾವಣ ಮಾಸದ ಅಂಗವಾಗಿ
ಬಸವಧರ್ಮ ಪ್ರವಚನ ಜರುಗಿತು.

ಬಸವ ಕೇಂದ್ರ ಹಾಗೂ ವಿಜಯ ಮಹಾಂತೇಶ ತರುಣ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Share This Article
1 Comment

Leave a Reply

Your email address will not be published. Required fields are marked *