ಮಹಾಲಿಂಗಪುರ:
ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ಬಸವೇಶ್ವರ ವೃತ್ತದಲ್ಲಿಯ ಅಶ್ವಾರೂಢ ಶ್ರೀ ಬಸವೇಶ್ವರ ಕಂಚಿನ ಪುತ್ಥಳಿಯನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ರವಿವಾರ ಅನಾವರಣಗೊಳಿಸಿದರು.

ಪಟ್ಟಣದಲ್ಲಿ ನಡೆಯುವ ಹಿಂದೂ ಮುಸ್ಲಿಂ ಹಬ್ಬಗಳಲ್ಲಿ ಪರಸ್ಪರರು ಪಾಲ್ಗೊಂಡು ಸಂತಸ, ನೆಮ್ಮದಿಯನ್ನು ಹಂಚಿಕ್ಕೊಳ್ಳುತ್ತಾರೆ. ಈ ಕಾರಣದಿಂದ ಈದ್ ಹಬ್ಬದಂದೇ ಜಗತ್ತಿಗೆ ಸಮಾನತೆಯನ್ನು ಸಾರಿದ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆ ಸಮಯೋಚಿತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ ಕಾರ್ಯಕ್ರಮಕ್ಕೆ ಸಮಯ ಕೊಡದೆ ಅವಸರದಲ್ಲಿ ಪುತ್ಥಳಿಯನ್ನು ಅನಾವರಣಗೊಳಿಸಿದ ಸಚಿವರ ವರ್ತನೆ ನೆರೆದಿದ್ದ ಭಕ್ತಾದಿಗಳನ್ನು ಕೆರಳಿಸಿತು.
ತಿಮ್ಮಾಪುರ ವೇದಿಕೆಗೆ ಆಗಮಿಸುತ್ತಲೇ ನಿರೂಪಕರಿಗೆ ಸ್ವಾಗತ ಭಾಷಣವನ್ನು ಕೂಡ ಮಾಡಲು ಕೊಡದೆ ನೇರವಾಗಿ ಭಾಷಣ ಮಾಡಲು ಧಾವಿಸಿದರು. ಕೇವಲ ಎರಡು ನಿಮಿಷಗಳಲ್ಲಿ ಭಾಷಣ ಮುಗಿಸಿ ವೇದಿಕೆಯಿಂದ ಸಚಿವರು ನಿರ್ಗಮಿಸಿದರೆ, ಇವರ ಹಿಂದೆಯೇ ಸಂಸದ ಪಿ ಸಿ. ಗದ್ದಿಗೌಡರ್ ಮತ್ತು ಶಾಸಕ ಸಿದ್ದು ಸವದಿ ಕೂಡ ಯಾವುದೇ ಭಾಷಣ ಮಾಡದೆ ತೆರಳಿದರು.
ಕಾರ್ಯಕ್ರಮದ ಆರಂಭದಲ್ಲಿಯೂ ಬಸವ ಧ್ವಜಾರೋಹಣಕ್ಕೆ ಸಚಿವರನ್ನು ಆಹ್ವಾನಿಸಿದರೂ ಅವರು ಬಾರದ ಹಿನ್ನೆಲೆಯಲ್ಲಿ ಸಂಸದರು ಹಾಗೂ ಶಾಸಕರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಬಹಳ ಉತ್ಸುಕತೆಯಿಂದ ಸೇರಿದ ಸಾವಿರಾರು ಜನರು ಬಸವಣ್ಣನವರ ಕುರಿತು ಹಿತವಚನ ಆಲಿಸಲು ಕಾತುರರಾಗಿದ್ದು, ಕೇವಲ ಐದು ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಇದು ಶ್ರೀ ಬಸವೇಶ್ವರರಿಗೆ ಮಾಡಿದ ಅವಮಾನವೆಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ಶಾಸಕ ಸಿದ್ದು ಸವದಿ, ಸಂಸದ ಪಿ ಸಿ. ಗದ್ದಿಗೌಡರ್ ಮತ್ತು ಬಸವ ತಂಡದ ಸದಸ್ಯರು ವಚನ ಸಾಹಿತ್ಯವನ್ನು ತಲೆ ಮೇಲೆ ಹೊತ್ತು ಮಂಗಳವಾದ್ಯಗಳೊಂದಿಗೆ ವೇದಿಕೆಗೆ ಆಗಮಿಸಿ ಗೌರವ ಸೂಚಿಸಿದರು.
ಸುಮಾರು ೭೦ ಲಕ್ಷ ರೂಗಳ ಅಶ್ವಾರೂಢ ಶ್ರೀ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ರಂಗು ರಂಗಿನ ಸ್ವಾಗತ ಬ್ಯಾನರ್ ಗಳು, ಅದ್ದೂರಿಯ ಪೆಂಡಾಲ್, ಧ್ವನಿವರ್ಧಕ, ಆಸನ ಮತ್ತು ಉಪಹಾರದ ವ್ಯವಸ್ಥೆ ಸಹ ಮಾಡಲಾಗಿ, ಕನಿಷ್ಠ ಒಂದು ಗಂಟೆಯಾದರೂ ವೇದಿಕೆ ಕಾರ್ಯಕ್ರಮ ನಡೆದಿದ್ದರೆ ಬಸವಣ್ಣನವರಿಗೆ ಇವರು ನೀಡುವ ಗೌರವ ಸೂಚಕವಾಗಿರುತ್ತಿತ್ತು, ಲಕ್ಷಾಂತರ ಖರ್ಚು ಮಾಡಿ ಸಮಾರಂಭದ ತಯಾರಿ ಹೊಳೆಯಲ್ಲಿ ಹುಣಸೆ ತೊಳದಂತಾಗಿದೆ ಎಂದು ಜನ ಅಲ್ಲಲ್ಲಿ ಮಾತನಾಡುತ್ತಿದ್ದುದ್ದು ಕಂಡು ಬಂತು.

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ, ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿ, ಸಂಸದ ಪಿ.ಸಿ.ಗದ್ದಿಗೌಡರ,ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಬಾವಿಕಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲರಜಾ ಬಾಗವಾನ, ಮುಖಂಡರಾದ ಸಿದ್ದು ಕೊಣ್ಣೂರ, ರವಿಗೌಡ ಪಾಟೀಲ, ಬಲವಂತಗೌಡ ಪಾಟೀಲ, ಬಾಳಕೃಷ್ಣ ಮಾಳವಾದೆ, ಮಹಾಲಿಂಗಪ್ಪ ತಟ್ಟಿಮನಿ, ನಿಂಗಪ್ಪ ಬಾಳಿಕಾಯಿ, ಪ್ರಕಾಶ ಮಮದಾಪುರ, ಕೃಷ್ಣಗೌಡ ಪಾಟೀಲ, ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ನೀರಾವರಿ ಇಲಾಖೆಯ ಸ.ಕಾ.ನಿ.ಅಧಿಕಾರಿ ಮಹಾಂತೇಶ ಯಡಪ್ಪನವರ ಸೇರಿದಂತೆ ಇತರರಿದ್ದರು.
ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿ, ಪುರಸಭೆ ಸದಸ್ಯ ಶೇಖರ ಅಂಗಡಿ ಸ್ವಾಗತಿಸಿ ವಂದಿಸಿದರು.

